Saturday, August 29, 2009

ಭಾಗ - ೨ - ನನ್ನ ಮಾದರಿ ಪ್ರೈಮರಿ ಶಾಲೆಯ ಬಗ್ಗೆ ...

ಕಳೆದ article ನಲ್ಲಿ ನಾನು ಶಾಲೆಗೆ ಸೇರಿದ "ಮಿಸ್ಟರಿ" ಬಿಡಿಸಿ ತಿಳಿಸಿದ್ದೆ, ಇವತ್ತು ನನ್ನ ಶಾಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮದು ಒಂದೇ ಒಂದು ಕೂಣೆಯ ಶಾಲೆ. ಸುತ್ತ ಮುತ್ತ ಶಾಲೆಯೇ ಕಾಣದ ಹಾಗೆ ಬೆಳೆದಿದ್ದ ದೊಡ್ಡ ಕಳ್ಳಿ ಬೇಲಿ, ಆ ಬೇಲಿಯ ಸುತ್ತ ಊರಿನ ಎಮ್ಮೆಗಳೆನ್ನೆಲ್ಲ ಕಟ್ಟಿ ಹಾಕಿರುತಿದ್ದರು. ಯಾರಾದರು ಊರಿಗೆ ಹೊಸದಾಗಿ ಮೇಸ್ಟ್ರು ಬಂದರೆ ಅವರಿಗೆ ಶಾಲೆಗೆ ಹೋಗಲಿಕ್ಕೆ ದಾರಿ ಹುಡುಕೋದೇ ದೊಡ್ಡ ಕೆಲಸ. ದಾರಿಯಲ್ಲೆನಾದ್ರು ಎಮ್ಮೆ ನಿಂತಿದ್ದರಂತೂ ಹೊಳಗೆ ಹೋಗೋದು ಆಸಾದ್ಯ.

ಶಾಲೆಯ ಬಲ ಭಾಗಕ್ಕೆ ದೇವಿ ಮಂದಿರ (ಕಳ್ಳಬಟ್ಟಿ ಮಾರುವವರ ಮನೆ, ಆ ಸಮಯದಲ್ಲಿ ನಮ್ಮೂರಿನಲ್ಲಿ ಕಳ್ಳಬಟ್ಟಿ ಮಾರುವುದು "ಲೀಗಲ್ ಬಿಸಿನೆಸ್"), ಕುಡುಕರು ದೇವಿ ಪರವಶವಾಗಿ ಹೇಳುತಿದ್ದ ದೇವರ ಕೀರ್ತನೆಗಳೆಲ್ಲ ನಮಗೆ ಸರಿಯಾಗಿ ಕೆಳಿಸುತಿದ್ದವು. ಇನ್ನು ಎಡ ಭಾಗಕ್ಕೆ ಸ್ವಲ್ಪ ಬಯಲು ಮತ್ತು ಒಂದು ಕೆರೆ ಇತ್ತು, ಆದರೆ ಆ ಬಯಲು ನಮ್ಮೊರಿನ "ಪಬ್ಲಿಕ್ ಓಪನ್ ಟಾಯ್ಲೆಟ್" ಆಗಿತ್ತು. ಶಾಲೆಯ ಸುತ್ತ ಕಳ್ಳಿ ಬೇಲಿ ಇದ್ದುದರಿಂದ ಆ "ಓಪನ್ ವ್ಯೂ "ನಿಂದ ನಾವುಗಳು ವಂಚಿತರಾಗುತಿದ್ದೆವು. ಇನ್ನು ಶಾಲೆಯ ಎದುರುಗಡೆ ಒಂದು ಗುಡಿಸಲು ಮನೆ ಇತ್ತು, ಆದೂ ನಮ್ಮೊರಿನ ಪ್ರಸಿದ್ದ "ಕ್ಲಬ್", ಅಲ್ಲಿ ನಮ್ಮೊರಿನ ಶ್ರಮ ಜೀವಿಗಳೆಲ್ಲ ಕೂತು "ಇಸ್ಪೀಟು" ಆಟವಾದುತಿದ್ದರು, ಅವರುಗಳು ಒಂದರಿಂದ ಸಾವಿರಗಳ ತನಕ ಬೀಡಿಗಳನ್ನು ಬೆಟ್ಟಿಂಗ್ ಮಾಡಿ ಆಡುತ್ತಾ ಇದ್ದರು, ನಾವುಗಳು ಸಮಯ ಸಿಕ್ಕಾಗ ಆ ಶ್ರಮ ಜೀವಿಗಳಿಗೆ ಬೀಡಿ ತಂದುಕೊಡುವ ರೂಪದಲ್ಲಿ ಆ ಕ್ಲಬ್ ಗೇ ಅಳಿಲು ಸೇವೆ ಸಲ್ಲಿಸುತಿದ್ದೆವು. ನಮ್ಮ ಶಾಲೆ ಹಿಂದುಗಡೆ ತಿಪ್ಪೆ ಗಳ (ಹಳ್ಳಿಗಳಲ್ಲಿ ರೈತರು ದನಗಳ ಸಗಣಿ ಮತ್ತು ಕಸವನ್ನು ಹಾಕುವ ಗುಂಡಿಗಳು - ರಸ ಗೊಬ್ಬರ ತಯಾರು ಮಾಡುವ ಕೇಂದ್ರಗಳು)ಸಾಲು. ನಮ್ಮ ಶಾಲೆಯಲ್ಲಿ ಯಾವಾಗಲು ಸುವಾಸನೆ ಹರಿದಾದುತಿರುತಿತ್ತು, ಎಡಭಾಗದಿಂದ ಗಾಳಿ ಬೀಸಿದರೆ ಆ ಬಯಲಿನ (ಪಬ್ಲಿಕ್ ಓಪನ್ ಟಾಯ್ಲೆಟ್) ಸುವಾಸನೆ, ಬಲಗಡೆಯಿಂದ ಬೀಸಿದರೆ ದೇವಿ ಬಕ್ತರ ತೀರ್ಥದ ಸುವಾಸನೆ, ಹಿಂದುಗಡೆಯಿಂದ ಬೀಸಿದರೆ ತಿಪ್ಪೆಗಳಲ್ಲಿ ಕರಗಿ ಗೊಬ್ಬರವಾಗುತ್ತಿರುವ ಸಗಣಿಯ ಸುವಾಸನೆ. ಇದು ಸಾಲದೆಂಬಂತೆ ಶಾಲೆಯ ಸುತ್ತ ಕಟ್ಟಿದ ಎಮ್ಮೆಗಳು ಹಾಕುವ ತಾಜಾ ಗಂಜಲು ಮತ್ತು ಸಗಣಿಯ ಸುವಾಸನೆ.

ಇನ್ನು ಒಂದು ಕುತೂಹಲಕಾರಿ ವಿಚಾರ ಅಂದ್ರೆ, ನಮ್ಮೂರಿನಲ್ಲಿ ಯಾವುದೇ ಮದುವೇ ಅದರೂ ಅಂದು ನಮಗೆ ರಜಾ. ನಾವೆಲ್ಲ ಮದುವೆ ನೋಡಲಿ ಅಂಥ ಏನು ರಜಾ ಕೊಡ್ತಾ ಇರಲಿಲ್ಲಾ, ನಮ್ಮೂರಿನಲ್ಲಿ ಮದುವೆ ಗಂಡನ್ನು "ಬಿಡದಿ" (ಮದುವೆಯ ಹಿಂದನ ರಾತ್ರಿಯೇ ಮದುವೆಯ ಗಂಡು ಊರಿಗೆ ಬಂದು ಮದುವೆ ಮುಗಿಯುವವರೆಗೂ ಒಂದು ಬೇರೆ ಮನೆಯಲ್ಲಿ ಉಳಿದುಕೊಳ್ಳಬೇಕು, ಇದು ಒಂದು ಶಾಸ್ತ್ರ) ಬಿಡಲಿಕ್ಕೆ ನಮ್ಮ ಶಾಲೆಯನ್ನೇ ಉಪಯೋಗಿಸುತಿದ್ದರು, ಅದ್ದರಿಂದ ನಮಗೆ ಆ ದಿನ ಶಾಲೆಗೆ ರಜಾ. ಆದರೆ ಮದುವೆಯ ಮರು ದಿನ ನಾವುಗಳು ಬಂದು ಶಾಲೆಯನ್ನು ಸ್ವಚ್ಛ ಮಾಡಬೇಕಿತ್ತು, ಮದುವೆಯ ಬಿಟ್ಟಿ ಊಟಕ್ಕೆ ತೆರಬೇಕಾದ ದಂಡ.

ಇಸ್ಟೆಲ್ಲಾ ಅಲ್ಲದೆ ನಮ್ಮ ಶಾಲೆ ಒಂದು ಥರಾ ನಿರಾಶ್ರಿತರ ಶಿಬಿರ ಕೂಡ. ಆ ಸಮಯದಲ್ಲಿ ನಮ್ಮೋರಿಗೆ "ಹಕ್ಕಿಸಿಕ್ಕಾರು" ಬರುತಿದ್ದರು. ಹಕ್ಕಿಸಿಕ್ಕಾರು ಅಂದ್ರೆ ಆ ಸಮಯದಲ್ಲಿ ತೊಗಲುಗೊಂಬೆ ಆಟ ತೋರಿಸಲಿಕ್ಕೆ ಬರುತಿದ್ದವರು. ಇವರುಗಳು ತಿಂಗಳುಗಟ್ಟಲೆ ಊರಿನಲ್ಲಿ ಉಳಿದುಕೊಂಡು ಬಿಕ್ಷೆ ಮಾಡಿ ಜೀವನ ಮಾಡುತಿದ್ದರು, ಒಂದು ದಿನ ಊರಿನವರಿಗೆಲ್ಲ ತೊಗಲುಗೊಂಬೆ ಆಟ ತೋರಿಸುತಿದ್ದರು. ಇವರುಗಳ ವಾಸ್ತವ್ಯ ನಮ್ಮ ಶಾಲೆಯ ಜಗಲಿ ಮೇಲೆ, ಇವರುಗಳು ಎಲ್ಲಾ ಪಕ್ಷಿಗಳನ್ನು ಬೇಟೆ ಮಾಡಿ ತಂದು ತಿನ್ನುತಿದ್ದರು, ಅದಕ್ಕೋಸ್ಕರ ಇವರಿಗೆ ಹಕ್ಕಿಸಿಕ್ಕಾರು ಎಂದು ಕರೆಯುತಿದ್ದರು. ಇವರುಗಳ ಜೊತೆಗೆ ಊರಿಗೆ ಬರಿತಿದ್ದ ಎಲ್ಲಾ ಬಿಕ್ಶುಕರಿಗೂ ಇದೆ ವಾಸ ಸ್ತಳ.

ಇದೆಲ್ಲಾ ಶಾಲೆಯ ಹೊರಗಡೆಯ ವಾತಾವರಣದ ವಿವರಗಳಾದರೆ, ಇನ್ನು ಶಾಲೆಯ ಹೊಳಗಡೆ, ನಮ್ದು "ನಾವೆಲ್ಲರೂ ಒಂದೇ" ಎಂಬ ವಾಕ್ಯವನ್ನು ಚಾಚು ತಪ್ಪದೆ ಪಾಲಿಸುತಿದ್ದ ಶಾಲೆ. ಒಂದರಿನ ನಾಲ್ಕನೇ ತರಗತಿಯವರೆಗೂ ಸರಿ ಸುಮಾರು ೪೦-೫೦ ವಿಧ್ಯಾಥಿಗಳು ಇರುತಿದ್ದೆವು, ನಮಗೆಲ್ಲಾ ಒಬ್ಬರೇ ಮೇಸ್ಟ್ರು (ನಮ್ಮೂರಿನ ಶಾಲೆಯ ಇತಿಹಾಸದಲ್ಲಿ ಒಬ್ಬ ಮೇಡಂ ಕೂಡ ಬಂದಿಲ್ಲಾ!!!, ಯಾಕೆ ಅಂಥ ನಂತರ ಹೇಳ್ತೇನೆ), ನಾವೆಲ್ಲ ಒಂದೇ ಕೋಣೆಯಲ್ಲಿ ಕುಳಿತು ಕುಳಿತುಕೊಳ್ಳುತಿದ್ದೆವು, ನಮಗೆಲ್ಲಾ ಒಂದೇ ಪಾಠ. ಸರಳ ಜೀವನವನ್ನು ಚಿಕ್ಕ ವಯಸ್ಸಿನಲ್ಲೇ ಪಾಲಿಸುವಂತೆ ಮಾಡಿದ್ದರು, ಯಾವುದೇ ಕುರ್ಚಿ ಮೇಜಿನ ಆಡಂಬರ ಇರಲಿಲ್ಲಾ, ಮೇಸ್ಟ್ರಿಗೆ ಒಂದು ಕುರ್ಚಿ ಮತ್ತು ಒಂದು ಮೇಜು, ಜೊತೆ ಬಂದ ಅಥಿತಿಗಳಿಗೆ ಒಂದು ಮೇಜು ಇತ್ತು ಅಸ್ಟೆ, ನಾವುಗಳೆಲ್ಲ ನೆಲದ ಮೇಲೆ ಕೂರಬೇಕಿತ್ತು (ಸ್ವಲ್ಪ ಸಮಯದ ನಂತರ ಕೂರಲಿಕ್ಕೆ ಮಣೆಗಳನ್ನು ತರಿಸಿದರು ನಮ್ಮ ಮೇಸ್ಟ್ರು). ಜೊತೆಗೆ ಸರ್ವ ಧರ್ಮ ಪರಿ ಪಾಲಿಸಲೆಂದು ಯಾವುದೇ ಸಮವಸ್ತ್ರದ ಅಗತ್ಯ ಇರಲಿಲ್ಲಾ, ಜೈನ ಧರ್ಮ ಪಾಲಿಸುವವರಿಗೆ ಸಹಾಯ ಆಗಲೆಂದು ಚಡ್ಡಿ ಹಾಕುವ ಅಗತ್ಯ ಕೂಡ ಇರಲಿಲ್ಲಾ.

ಇನ್ನು ಶಾಲೆ ಬರುತಿದ್ದವರೆಲ್ಲ "ಪಾರ್ಟ್ ಟೈಮ್ ಜಾಬ್" ಮಾಡುತಿದ್ದವರೇ, ದನ, ಎಮ್ಮೆ ಕಾಯೋದು, ಮನೆಗೆ ಕೆರೆಯಿಂದ ನೀರು ತರುವುದು, ಅಪ್ಪಂಗೆ ಬೀಡಿ ತಂದು ಕೊಡೋದು, ಅವ್ವಂಗೆ ಎಲೆ-ಅಡಿಕೆ-ಕಡ್ಡಿಪುಡಿ ತಂದು ಕೊಡೋದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ತಗೊಂಡು ಹೋಗೋದು, ದನಗಳಿಗೆ ನೀರು ಕುಡಿಸಿ, ಮೇವು ಹಾಕೋದು, ಕುಡುಕ ಅಪ್ಪಂದಿರಿಗೆ ದೇವಿ ಮಂದಿರದಿಂದ ದೇವಿ ತೀರ್ಥ ತಂದು ಕೊಡೋದು, "ಕ್ಲಬ್"ನಲ್ಲಿದ್ದ ಶ್ರಮ ಜೀವಿಗಳಿಗೆ ಬೆಟ್ಟಿಂಗ್ ಮಾಡಲಿಕ್ಕೆ, ಬೀಡಿ ತಂದು ಕೊಡೋದು, ದಾರಿಯಲ್ಲಿ ಬಿದ್ದಿದ್ದ ಸಗಣಿಯನ್ನು ತೆಗೆದು ತಿಪ್ಪೆಗೆ ಹಾಕೋದು, ಅಡುಗೆ ಮಾಡಲಿಕ್ಕೆ ಗುಡ್ಡಕ್ಕೆ ಹೋಗಿ ಸೌದೆ ತರುವುದು, ಇನ್ನು ಇತರೆ ಚಿಲ್ಲರೆ ಕೆಲಸಗಳನ್ನು ಮಾಡಲೇ ಬೇಕಿತ್ತು. ಹಾಗಾಗಿ ನಮ್ಮ ಶಾಲೆಯಲ್ಲಿ "flexible timing" ವ್ಯವಸ್ಥೆ ಇತ್ತು , ಯಾರು ಯಾವಾಗ ಬೇಕಾದರು ಬರಬಹುದಿತ್ತು, ಯಾವಾಗ ಬೇಕಾದ್ರೂ ಹೋಗಬಹುದಿತ್ತು, ಯಾರನ್ನು (ಮೇಸ್ಟ್ರನ್ನು ಕೂಡ) ಕೇಳುವ ಅಗತ್ಯ ಕೂಡ ಇರಲಿಲ್ಲಾ. ಹಾಗೂ ನಮ್ಮ ಅಪ್ಪ ಅವ್ವಂದಿರೆಲ್ಲ ಬೇಕಾದಾಗ ಬಂದು ನಮ್ಮನ್ನ ಕರೆದುಕೊಂಡು ಹೋಗುವ ಸೌಲಬ್ಯ ಕೂಡ ಇತ್ತು. ಹಾಗಾಗಿ ನಮ್ಮ ಶಾಲೆ ಶುರು ಆಗ್ತಾ ಇದ್ದದ್ದು ೧೧ ಅಥವಾ ೧೨ಕ್ಕೆ, ಊಟಕ್ಕೆ ೧ ಗಂಟೆಗೆ ಬಿಡುತಿದ್ದರು, ಮತ್ತೆ ಮಧ್ಯಾನದ ತರಗತಿಗಳು ಶುರು ಆಗ್ತಾ ಇದ್ದದ್ದು ೨.೩೦ - ೩ ಗಂಟೆಗೇ, ಕೊನೆಗೆ ೪ ಗಂಟೆಗೆ ತರಗತಿಗಳು ಮುಗಿಯುತ್ತ ಇದ್ದವು.

ನಮ್ಮೂರು ಹಳೆಬೀಡಿನಿಂದ ೫ ಕಿಮಿ, ಆ ಸಮಯದಲ್ಲಿ ಒಂದು ಬಂಡಿ ಗಾಡಿಯ ರಸ್ತೆ ಬಿಟ್ಟರೆ ಯಾವುದೇ ರಸ್ತೆ ಇರಲಿಲ್ಲ. ಎತ್ತಿನ ಬಂಡಿ ಬಿಟ್ಟು ಬೇರೆ ಯಾವುದೇ ವಾಹನ ಬರಲಿಕ್ಕೆ ಸಾಧ್ಯನೇ ಇರಲಿಲ್ಲ, ವಿಮಾನ ಹೊರೆತುಪಡಿಸಿ!. ನಮ್ಮೋರಿಗೆ ಮೇಸ್ಟ್ರು ನಡೆದುಕೊಂಡು ಅಥವಾ ಸೈಕಲ್ ಮೇಲೆ ಬರಬೇಕಿತ್ತು. ಅದಕ್ಕೆ ಯಾರಾದರು ಮೇಡಂಗೆ ನಮ್ಮೋರಿಗೆ ವರ್ಗಾವಣೆ ಆದರೆ ಅವರುಗಳು ಕೆಲಸ ಬಿಟ್ಟು ಹೋಗುತಿದ್ದರು ಅಥವಾ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡು ಹೋಗುತಿದ್ದಾರೆ ಹೊರೆತು ನಮ್ಮೋರಿಗೆ ಬರುತ್ತಿರಲಿಲ್ಲ. ಶಿಕ್ಷಕರು ಬೆಳಗ್ಗೆ ಎಷ್ಟು ಬೇಗ ಮನೆ ಬಿಟ್ಟರು ಶಾಲೆ ತಲುಪುತಿದ್ದದ್ದು ೧೧-೧೨ರ ಸುಮಾರು, ಜೊತೆಗೆ ಕತ್ತಲೆಯಲ್ಲಿ ಕಾಡಿನೊಳಗೆ ನಡೆದುಕೊಂಡು ಹೋಗಲು ಹೆದರಿ ೪ ಗಂಟೆಗೆ ಶಾಲೆ ಮುಗಿಸಿ ಹೋಗುತಿದ್ದರು.

ಇವತ್ತಿಗೆ ಇಷ್ಟು ಸಾಕು, ಮುಂದಿನ article ನಲ್ಲಿ ಮೇಸ್ಟ್ರು ಏನೇನು ಕಲಿಸುತಿದ್ದರು ಹಾಗೂ ನಾವುಗಳು ಹೇಗೆ ಉತೀರ್ಣರಾಗುತಿದ್ದೆವು ಎಂಬುದರ ಬಗ್ಗೆ ತಿಳಿಸಿ ಹೇಳುತ್ತೇನೆ.

ಪ್ರೀತಿಯಿಂದಾ
ಗೌಡ

No comments:

Post a Comment