Saturday, September 19, 2009

ಮಸ್ತ್ ಮಜಾ ಮಾಡು!

ನೆನ್ನೆಯ ಹಾಗು ನಾಳೆಯ ಜಂಜಾಟಗಳ ಬಗ್ಗೆ ವ್ಯರ್ತವಾಗಿ ಯೋಚನೆ ಮಾಡಿ ಕಾಲಹರಣ ಮಾಡೋದು ಬಿಟ್ಟು , ಇಂದಿನ ದಿನವನ್ನು ಮಸ್ತ್ ಮಜಾ ಮಾಡಿ, ಕಳೆದು ಹೋದ ಕ್ಷಣಗಳು ಮತ್ತೆ ಸಿಗುವುದಿಲ್ಲ. ಇದು ತುಂಬ ಬುದ್ದಿ ಜೀವಿಗಳು ಹೇಳುವ ಬುದ್ದಿ ಮಾತು. ನನಗೂ ತುಂಬ ಬುದ್ದಿ ಜೀವಿಗಳು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಈ "ಮಜಾ" ಮಾಡೋದು ಅಂದ್ರೆ ಏನು ಅಂಥ ಮಾತ್ರ ಯಾರು ಹೇಳಿಲ್ಲ, ನನಗೂ ಕೂಡ ಇನ್ನು ಅರ್ಥ ಹಾಗಿಲ್ಲ. ಮಜಾ ಎಂಬ ಪದಕ್ಕೆ ಯಾವುದೇ ಸ್ಥಿರವಾದ ಅರ್ಥ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ ಹಾಗು ಒಳ್ಳೇದು-ಕೆಟ್ಟದ್ದು ಎಂಬ ವ್ಯತ್ಯಾಸಕ್ಕೂ , ಈ ಪದಕ್ಕೆ ಯಾವುದೇ ಸಂಭಂದ ಇಲ್ಲಾ.

ತುಂಬ ಸಲ ನಮಗೆ ಏನು ಮಾಡಿದರೆ ಮಜಾ ಸಿಗುತ್ತದೆ ಎಂದು ತಿಳಿದಿರುವುದಿಲ್ಲ. ಅದನ್ನು ತಿಳಿದುಕೊಳ್ಳುವುದಕ್ಕೆ ಯಾವುದೇ ಪುಸ್ತಕಗಳು ಸಿಗುವುದಿಲ್ಲ, ಯಾರು ಹೇಳಿಕೊಡುವುದಿಲ್ಲ, ಹೇಳಿಕೊಟ್ಟರು ಯಾರು ಕೇಳುವುದಿಲ್ಲ. ಕೇವಲ ನಾವುಗಳು ಅದು ಮಾಡಿದರೆ ಸಿಗುತ್ತದೆ ಅಥವಾ ಇದನ್ನು ಮಾಡಿದರೆ ಸಿಗುತ್ತದೆ ಎಂದು ನಮ್ಮ ಮನಸ್ಸಿನಲ್ಲಿ ತುಂಬಿಕೊಂಡು ಅದನ್ನೇ ಮಾಡುತ್ತಿರುತ್ತೇವೆ, ಜೊತೆಗೆ ಮಜಾ ಮಾಡುತಿದ್ದೀವೆ ಎಂದು ನಮಗೆ ನಾವೇ ನಂಬಿಸಿಕೊಂಡು ಖುಷಿ ಪಡುತ್ತಿರುತ್ತೇವೆ. ನಮ್ಮ ಈ "ನಂಬಿಸಿಕೊಳ್ಳುವುದು" ವಯಸ್ಸಿಗೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ, ಹಾಗೆ ನಾವು ಅವುಗಳನ್ನು ಮಾಡಿಕೊಂಡು ನಾವು ಮಜಾ ಮಾಡುತಿದ್ದೆವೆ ಎಂದು ನಂಬಿಕೊಂಡೇ ಜೀವನ ಮಾಡುತಿರುತ್ತೇವೆ. ಆದರೆ ಅದು ಸರಿಯೇ? ತಪ್ಪೇ? ಅದರ ಅವಶ್ಯಕತೆ ಇದೆಯಾ? ಇದಕ್ಕಿಂತ ಉತ್ತಮವಾಗಿ ಮಜಾ ಮಾಡಬಹುದಾ? ಎಂದೆಲ್ಲಾ ಯೋಚನೆ ಮಾಡೋದೇ ಇಲ್ಲ, ನಮಗೆ ನಾವು ಪ್ರಶ್ನೆ ಕೇಳಿ ಕೊಳ್ಳೋದೇ ಇಲ್ಲ. ಅಕಸ್ಮಾತ್ ಯೋಚನೆ ಮಾಡಿದರು ಅದಕ್ಕೆ ಉತ್ತರ ಸಿಗೋದೆ ಇಲ್ಲ, ಯಾಕಂದರೆ ಅದಕ್ಕೆ ಒಂದು ಜನರಲ್ ಅರ್ಥ ಕೊಡೋದು ಕಷ್ಟ, ಸಂದರ್ಭಗಳಿಗನುಗುಣವಾಗಿ ಅದು ಬದಲಾಗುತ್ತಾ ಹೋಗುತ್ತದೆ. ಕುಡುಕನಿಗೆ ಕುದಿಯೋದ್ರಿಂದ ಸಿಗುತ್ತಾ, ಋಷಿಗೆ ದ್ಯಾನ ಮಾಡುವುದರಲ್ಲಿ ಸಿಗುತ್ತದೆ, ಪ್ರೇಮಿಗೆ ಪ್ರೀತಿಸುವುದರಲ್ಲಿ ಸಿಗುತ್ತೆ, ಮೇಲ್ಜಾತಿಯವರಿಗೆ ಕೆಲ ವರ್ಗದವರನ್ನು ತುಳಿಯುವುದರಲ್ಲಿ ಸಿಗುತ್ತೆ, ರಾಜಕಾರಣಿಗಳಿಗೆ ಮೋಸ ಮಾಡೋದ್ರಲ್ಲಿ ಸಿಗುತ್ತೆ, ಸಿನಿಮ ತಾರೆಯರಿಗೆ ಗಾಸಿಪ್ ಮಾಡೋದ್ರಲ್ಲಿ ಸಿಗುತ್ತೆ, ಕೊಲೆಗಾರನಿಗೆ ಕೊಲೆ ಮಾಡೋದ್ರಿಂದ ಸಿಗ್ತದೆ, ನಿರಾಶಾವಾದಿಗಳಿಗೆ ಬೇರೆಯವರನ್ನು ಹೀಯಾಳಿಸುವುದರಿಂದ ಸಿಗುತ್ತೆ, ಮತ್ತೆ ಕೆಲವರಿಗೆ ಸಮಾಜ ಸೇವೆ ಮಾಡೋದ್ರಲ್ಲಿ ಸಿಗುತ್ತೆ, ಕೆಲವರಿಗೆ ಕಳ್ಳತನ ಮಾಡೋದರಲ್ಲಿ ಸಿಗುತ್ತೆ, ಕೆಲವರಿಗೆ ಕೆಲವರಿಗೆ ಕೆಲಸ ಮಾಡೋದ್ರಿಂದ ಸಿಗುತ್ತೆ, ಕೆಲವರಿಗೆ ಆಟ ಅದೊದ್ರಿಂದ ಸಿಗುತ್ತೆ, ಕೆಲವರಿಗೆ ಒಂಟಿಯಾಗಿ ಇರೋದ್ರಲ್ಲಿ ಸಿಗುತ್ತೆ, ಕೆಲವರಿಗೆ ಪ್ರವಾಸ ಮಾಡೋದ್ರಲ್ಲಿ ಸಿಗುತ್ತೆ, ಕೆಲವರಿಗೆ ಪುಸ್ತಕಗಳನ್ನು ಓದುವುದರಿಂದ ಸಿಗುತ್ತದೆ. ಈಗೆ ಈ ಪಟ್ಟಿ ದೊಡ್ಡದಾಗುತ್ತ ಹೋಗುತ್ತದೆ, ಆದರೆ ಇದರಲ್ಲಿ ಯಾವುದು ಸರಿ, ಯಾವುದು ತಪ್ಪು, ಯಾವುದು ಉತ್ತಮ? ಯಾವುದು ಅವಶ್ಯಕ? ಇದಕ್ಕೆಲ್ಲ ಉತ್ತರ ಎಲ್ಲಿ ಸಿಗುತ್ತದೆ, ಉತ್ತರಿಸುವವರಾರು. ಯಾರನ್ನಾದರು ಕೇಳಿದರೆ, ಅವರುಗಳಿಗೆ ಅವರದು ಉತ್ತಮವಾಗಿ ತೋರುತ್ತದೆ.

ಈತ್ತಿಚಿಗೆ ಒಮ್ಮೆ ಸ್ನೇಹಿರೊಂದಿಗೆ ಕೂತಿದ್ದಾಗ ಅವನಿಗೆ ಕೇಳಿದೆ, ಯಾಕೆ ಕುಡಿಯುತ್ತಿರ ಏನು ಸಿಗುತ್ತದೆ ಅದರಿಂದ(ಇದರ ಅರ್ಥ ನಾನು ಕುಡಿಯುವುದಿಲ್ಲ! - ನಂಬಿದರೆ ನಂಬಿ, ಬಿಟ್ಟರೆ ಬಿಡಿ), ಸುಮ್ಮನೆ ಆರೋಗ್ಯ ಹಾಳು ಮಾಡಿಕೊಂಡು ಬೇಗ ಸಾಯ್ತಾರೆ ಅಂತ ಗೊತ್ತಿದ್ದರೂ ಕುಡಿಯುತ್ತಿರಲ್ಲ, ಇದು ಸರೀನಾ?. ಅದಕ್ಕೆ ಅವನ ಉತ್ತರ "ನೀವು ಕುಡಿಯದೆ ಇರೋ ಸಭ್ಯರು ಏನು ಚಿರಂಜೀವಿಗಳಾಗ್ತಿರಾ? ನೀವುಗಳು ಸಾಯೋದೆ ಇಲ್ವಾ? ನೀವುಗಳು ಅಷ್ಟು ವರ್ಷ ಬದುಕಿ ಮಜಾ ಮಾಡೋದನ್ನ ನಾವು ಕೆಲವೇ ವರ್ಷಗಲ್ಲಿ ಅನುಭವಿಸಿ, ನಿಮಗಿಂತ ಸ್ವಲ್ಪ ಬೇಗ ಹೋಗ್ತಿವಿ. ಸಿಗೋದು ಒಂದೇ ಜೀವನ ಅದರಲ್ಲಿ ಎಲ್ಲದನ್ನು ಅನುಭವಿಸಬೇಕು, ಮತ್ತೆ ಕೊನೆಗೆ ಮಜಾ ಮಾಡಲಿಲ್ಲ ಎಂದು ಕೊರಗಬಾರದು. ಅದಕ್ಕೆ ದೊಡ್ಡೋರು ಹೇಳಿರೋದು - ಇಲಿಯಾಗಿ ನೂರು ವರುಷ ಬಾಳುವುದಕ್ಕಿಂತ, ಹುಲಿಯಾಗಿ ಮೂರು ವರುಷ ಬಾಳು". ಇನ್ನೊಬ್ಬ ಹೇಳಿದ "ಯಾವ ವಯಸ್ಸಿನಲ್ಲಿ ಯಾವದು ಮಾಡಬೇಕು ಅದನ್ನೇ ಮಾಡೋದೇ ಮಜಾ, ಉದಾಹರಣೆಗೆ ಈ ವಯಸ್ಸಿನಲ್ಲಿ ಯಾವುದಾದರು ಹುಡುಗಿಯನ್ನ ಮನಾಸರೆ ಲವ್ ಮಾಡಬೇಕು, ಮಜಾ ಮಾಡಬೇಕು, ಒಮ್ಮೆ ಈ ವಯಸ್ಸು ಕಳೆದರೆ ನಿನಗೆ ಮಾಡಬೇಕು ಅಂಥ ಅನ್ನಿಸೋದಿಲ್ಲ, ಅನ್ನಿಸಿದರೂ ಮಾಡಲಾಗುವುದಿಲ್ಲ - ಸೊ ಜಸ್ಟ್ ಡೂ ಇಟ್!". ಮತ್ತೊಬ್ಬ ಹೇಳಿದ " ನಾವ್ಯಾರು ಕೇಳಿಕೊಂಡ ಇಲ್ಲಿಗೆ ಮಾನವರಾಗಿ ಬಂದಿಲ್ಲಾ, ಹಾಗೆ ನಾವ್ಯಾರು ಕೇಳಿಕೊಂಡರು ಇಲ್ಲೇ ಉಳಿಕೊಳ್ಳಲಾಗುವುದಿಲ್ಲ, ಅಂದ ಮೇಲೆ ಯಾಕೆ ಸರಿ- ತಪ್ಪಿನ ಪ್ರಶ್ನೆ. ಬಂದದ್ದಾಯಿತು, ಏನಾದರು ಮಾಡಲೇ ಬೇಕು, ನಿನಗಾವುದೇ ಇಷ್ಟವೋ ಅದನ್ನೇ ಮಾಡು, ಆದರೆ ನಾಲ್ಕು ಜನಕ್ಕೆ ಉಪಯೋಗ ಆಗುವಂತಹ ಕೆಲಸ ಮಾಡಿ ಹೋಗು" ಮಗದೊಬ್ಬ ಹೇಳಿದ "ಮನುಷ್ಯನಾಗಿ ಜನುಮ ಪಡೆಯೋದು ತುಂಬ ಕಷ್ಟ, ಈ ಜನ್ಮದಲ್ಲಿ ಮಾಡಿದ ಕರ್ಮಗಳ ಆಧಾರದ ಮೇಲೆ ನಿನ್ನ ಮುಂದಿನ ಜನ್ಮದ ನಿರ್ಧಾರ ಆಗ್ತದೆ. ಮತ್ತೆ ಮನುಷ್ಯನಾಗಿ ಹುಟ್ಟಬೇಕು ಅಂಥ ಆಸೆ ಇದ್ರೆ ಒಳ್ಳೆ ಕೆಲಸಗಳನ್ನು ಮಾಡು, ಇಲ್ಲಾ ಅಂದ್ರೆ ಯಾವುದೊ ಕ್ರಿಮಿಯೋ, ಕೀಟವೂ, ಪ್ರಾಣಿಯೋ ಆಗಿ ಹುಟ್ಟುತ್ತೀಯ". ಅವರುಗಳು ಹೇಳಿದ್ದು ಎಲ್ಲ ಸರಿ ಇಲ್ಲದಿದ್ದರೂ, ಎಲ್ಲ ಅರ್ಥಹೀನ ಕೂಡ ಅಲ್ಲ. ನನಗೆ ಆಗ ಯೋಚನೆ ಶುರು ಆಯಿತು, ನಾನು ಮಾಡುತ್ತಿರುವುದನ್ನೇ ಸರಿ ಅಂದುಕೊಂಡು ನಾನೇನಾದರು ಜೀವನ ವ್ಯರ್ತ ಮಾಡುತಿದ್ದೇನಾ? ಈಗೆ ನಾನು ಸರಿ ಅಂದು ಕೊಂಡದ್ದನ್ನು ಮಾಡಿ ಒಮ್ಮೆ ಸಾಯುವುದೇ ಜೀವನಾನ? ನಾನು ಏನು ಮಾಡಬೇಕು? ಜೀವನದ ಗುರಿ ಏನು?. ನಾನು ಮಾಡುತ್ತಿರುವದು ಸರಿಯೇ? ಅವರು ಮಾಡುತ್ತಿರುವದು ಸರಿಯೇ?, ಇಬ್ಬರದು ಸರಿಯೇ?, ಇಬ್ಬರದು ತಪ್ಪೆ?. ಈ ಪ್ರಶ್ನೆಗಳಿಗೆ ನನ್ನ ತಲೆಯಲ್ಲಿ ಯಾವುದೇ ರೆಡಿ ಮೇಡ್ ಉತ್ತರಗಳು ಕೂಡ ಸಿಗಲಿಲ್ಲ.

ಚಿಕ್ಕ ವಯಸ್ಸಿನಲ್ಲಿ ಬೇರೆ ಮಕ್ಕಳೊಂದಿಗೆ ಮನಸ್ಪೂರ್ತಿ ಆಟ ಆಡೋದನ್ನೇ ಮಜಾ ಅಂದುಕೊಂಡಿದ್ದೆ. ಸ್ವಲ್ಪ ದೊಡ್ಡವನಾಗಿ ಕಾಲೇಜಿಗೆ ಬಂದ ಮೇಲೆ ಹುಡುಗರೊಂದಿಗೆ ಸುತ್ತಾಡೋದು, ಫಿಲಂ ನೋಡೋದು, ಸ್ನೇಹಿತರೊಂದಿಗೆ ಹರಟೋದು ಮಜಾ ಅನ್ನಿಸುತಿತ್ತು. ಕೆಲಸಕ್ಕೆ ಸೇರಿದ ಮೇಲೆ ಪ್ರವಾಸ ಹೋಗೋದು, ಪಾರ್ಟಿ ಮಾಡೋದು, ನಾಲಿಗೆಯ ರುಚಿ ತಣಿಯುವಷ್ಟು ರುಚಿ ರುಚಿಯಾದ ಊಟ ಮಾಡೋದು, ಬ್ರಾಂಡೆಡ್ ಬಟ್ಟೆ ಹಾಕೋದು, ಸ್ವಲ್ಪ ಫ್ಯಾಷನ್ ಕಡೆಗೆ ಗಮನ ಕೊಡೋದು, ಹಾಗು ಬೈಕ್ ನಲ್ಲಿ ಸುತ್ತಾಡೋದರಿಂದ ಮಜಾ ಸಿಗುತ್ತಿತ್ತು. ಅದನ್ನೇ ಇಷ್ಟು ದಿನ ಮಾಡಿಕೊಂಡು ಬಂದೆ, ಆದರೆ ಇತ್ತೀಚಿಗೆ ಇದಾವುದು ಮನಸ್ಸಿಗೆ ಮಜಾ ಕೊಡುತ್ತಿಲ್ಲ, ಮಾಡುತ್ತಿರುವುದು ಸರಿಯೋ, ತಪ್ಪೋ ತಿಳಿಯುತ್ತಿಲ್ಲ. ಜೊತೆಗೆ ತುಂಬ ಜನರ ಹಾಗೆ ತುಂಬ ಹಣ ಮಾಡೋದು, ಮಾಡುವೆ ಹಾಗೋದು, ಮಕ್ಕಳು ಮಾಡೋದು, ಮನೆ ಕಟ್ಟೊದು, ಕಾರು ಖರೀದಿ ಮಾಡೋದು, ಕುಡಿಯೋದು, ಸಿಗರೇಟು ಸೇದೋದು, ಫ್ಯಾಷನ್ ಮಾಡೋದು ಜೀವನದಲ್ಲಿ ಮಜಾ ಕೊಡುತ್ತದೆ ಅಂತ ನನಗೆ ಅನ್ನಿಸುತ್ತಿಲ್ಲ. ಏನು ಮಾಡಿದರೆ ಮಜಾ ಸಿಗುತ್ತೆ ಅನ್ನೋದು ಅನ್ನುವುದು ಕೂಡ ಮನಸ್ಸಿನಲ್ಲಿ ಸರಿಯಾದ ರೂಪ ತೆಗೆದುಕೊಳ್ಳುತ್ತಿಲ್ಲ. ತುಂಬ ಯೋಚನೆಗಳು ತಲೆಯಲ್ಲಿ ಸುಳಿದಾಡುತ್ತಿವೆ ಆದರೆ ಯಾವುದು ಸರಿ, ಯಾವುದು ತಪ್ಪು, ಯಾವುದು ಉತ್ತಮ ಎಂಬುದನ್ನು ನಿರ್ಧಾರ ಮಾಡಲು ಆಗ್ತಾ ಇಲ್ಲ.

ನಿಮಗೆ ಏನು ಅನ್ನಿಸುತ್ತದೆ ಅನ್ನುವುದನ್ನು ಈ ಕೆಳಗಿನ "comments"ನಲ್ಲಿ ದಯಮಾಡಿ ತಿಳಿಸಿ.

ಪ್ರೀತಿಯಿಂದ
ಗೌಡ.

Wednesday, September 16, 2009

ಆಟ-ಹುಡುಗಾಟ

ಇತ್ತೀಚಿಗೆ ಒಮ್ಮೆ ಮಂಗಳೂರಿಗೆ ಯಾವುದೋ ಕಾರ್ಯದ ಮೇಲೆ ಹೋಗಿದ್ದಾಗ, ಸ್ನೇಹಿತರು "ಭರತ್ ಮಾಲ್" ಸುತ್ತಾಡುವ ಎಂದು ಕರೆದು ಕೊಂಡು ಹೋದರು. ಉಡುಪಿಗೆ ಬಂದು ೩+ ವರ್ಷಗಳಲ್ಲಿ ಪ್ರಥಮ ಬಾರಿಗೆ ಆ ಮಾಲ್ (ಮಾಲುಗಳ!!!) ವೀಕ್ಷಣೆಗೆಂದು ಅಲ್ಲಿಗೆ ಹೋಗಿದ್ದೆ. ಹೊಳಗೆ ಹೋದ ಸ್ವಲ್ಪ ಹೊತ್ತಿಗೆ, ನಾನು normal ಇದ್ದೇನಾ ಅನ್ನುವ ಸಂದೇಹಗಳು ನನ್ನಲ್ಲಿ ಮೂಡಲು ಶುರು ಮಾಡಿದವು. ಅಲ್ಲಿ ಬರುವವರ ಜೀವನ ವ್ಯವಸ್ಥೆ, ಅವರ ವೇಷ-ಭೂಷಣ, ಅವರ ಇಂಗ್ಲಿಷ್, ಎಳೆಯದೆ ಬೀಳಲಿಕ್ಕೆ ರೆಡಿ ಇರುವ ಪ್ಯಾಂಟುಗಳು, ಕರೆಂಟ್ ಹೊಡೆದ ಕಾಗೆ ಪುಕ್ಕದ ಹಾಗೆ ಇರೋ ತಲೆ ಕೂದಲು, ಉಬ್ಬು-ತಗ್ಗುಗಳೆನ್ನೇ ತೋರಿಸಲೆಂದು ಹಾಕಿದ್ದಾರೆ ಅನಿಸುವಂತಿರುವ ಹುಡುಗಿಯರ ವೇಷ, ಆ ಹುಡುಗಿಯರ ಬೆಕ್ಕಿನ ನಡಿಗೆ, ಅವರ iphone-iPod ಗಳು, ಆ ಸೇಲ್ಸ್ ಹುಡುಗಿಯರ ಯಾಂತ್ರಿಕ ನಗು, ಆ ವಸ್ತುಗಳ ಬೆಲೆ ನೋಡಿದರೆ ನೂರು ಪಟ್ಟು ದುಬಾರಿ. ಆಬ್ಭಾ, ನನಗೆ ಇದು ನಿಜವಾಗಿಯು ನಮ್ಮ ಕರ್ನಾಟಕವೇ ಎಂಬುವ ಅನುಮಾನ ಶುರುವಾಗಿತ್ತು. ನನಗೆ ಅಲ್ಲಿಂದ ಯಾವಾಗ ಹೊರಗೆ ಹೋಗುತ್ತೇನೆ ಅನ್ನಿಸುತಿತ್ತು. ಆದರೆ ಆ ವಿಷಯವನ್ನು ಸ್ನೇಹಿತರಿಗೆ ಹೇಳಿದರೆ ನನ್ನನ್ನು "not normal" ಅಂತಾ ನಿರ್ದರಿಸುತ್ತಾರೆ ಎಂದು ಸುಮ್ಮನೆ ಅವರೊಡನೆ ಸುತ್ತಾಡುತಿದ್ದೆ.

ಕೊನೆಗೆ ೩ನೆ ಹಂತಸ್ತಿಗೆ ತಲುಪಿದೆವು, ಅದು ಮಕ್ಕಳು ಆಟ ಆಡುವ ಜಾಗ - ಸ್ವಲ್ಪ normal ಅನ್ನಿಸುತಿತ್ತು. ಅಲ್ಲಿ ತುಂಬ ಜನ ಅಪ್ಪ ಅಮ್ಮಂದಿರು ಅವರ ಮಕ್ಕಳಿಗೆ ಆಟ ಆಡಿಸುತಿದ್ದರು. ಸ್ವಲ್ಪ ಸುತ್ತು ಹಾಕಿ ನೋಡಿದೆ, ಎಲ್ಲಾ ಕಂಪ್ಯೂಟರ್ ಆಟಗಳು. ಅವರ ಅಪ್ಪ ಅಮ್ಮಂದಿರು ಮಕ್ಕಳ ಖುಷಿಗಾಗಿ ಅಸ್ಟೊಂದು ಹಣ ಕರ್ಚು ಮಾಡುತಿರುವುದನ್ನು ನೋಡಿ ತುಂಬ ಖುಶಿ ಆಯಿತು. ಮತ್ತೆ ಕೆಳೆಗೆ ಬಂದು ಇನ್ನೊಮ್ಮೆ ಮಾಲ್ ಗಳ ವೀಕ್ಷಣೆ ಮಾಡಿಕೊಂಡು, ಕಣ್ಣನ್ನೆಲ್ಲಾ ಸ್ವಲ್ಪ ತಂಪು ಮಾಡಿಕೊಂಡು ಹೊರಗಡೆ ಬಂದೆವು. ಅಲ್ಲಿ ಏನಾದರು ವ್ಯಾಪಾರ ಮಾಡುವಸ್ಟು ಹಣ ನಮ್ಮ ಬಳಿ ಇರಲಿಲ್ಲ. ಹೊರಗಡೆ ಬಂದು ನನ್ನ ಸುತ್ತ ಮುತ್ತ ಇರುವ ಜನರನ್ನು ನೋಡಿ ತುಂಬ ಮನಸ್ಸಿಗೆ ಸಮಾಧಾನ ಆಯಿತು, ಜೊತೆಗೆ ಒಂದು KSRTC ಬಸ್ ನೋಡಿ ಇದು ಕರ್ನಾಟಕವೇ ಎಂದು ಮನದಟ್ಟಾಯಿತು.

ಅಲ್ಲಿಂದ ಬಂದು ಉಡುಪಿ ಬಸ್ ಹತ್ತಿ ಪ್ರಯಾಣ ಶುರು ಮಾಡಿದೆವು, ಆಗ ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಕೊರೆಯಲಿಕ್ಕೆ ಶುರು ಮಾಡಿತು - ನಾನು ಚಿಕ್ಕವನಾಗಿದ್ದಾಗ ಯಾವ ಯಾವ ಆಟಗಳನ್ನು ಆಡುತಿದ್ದೆ?, ನನ್ನ ಅಪ್ಪ-ಅಮ್ಮ ಎಷ್ಟು ಹಣ ಖರ್ಚು ಮಾಡುತಿದ್ದರು? ನಾವು ಕೂಡ ಈ ಮಕ್ಕಳ ಹಾಗೆ ನನ್ನ ಬಾಲ್ಯವನ್ನು ಎಂಜಾಯ್ ಮಾಡಿದ್ದೇನಾ?

ನನಗೆ ತಿಳಿದಿರುವ ಹಾಗೆ ನನ್ನ ಅಪ್ಪ-ಅಮ್ಮ ನನ್ನ ಆಟಕ್ಕಾಗಿ ಒಂದು ಬಿಡಿಗಾಸು ಕೂಡ ಖರ್ಚು ಮಾಡಿಲ್ಲ. ನಾವು ಆಡುತಿದ್ದ ಆಟಗಳಿಗೆ ಯಾವುದೇ ಹಣದ ಅವಶ್ಯಕತೆ ಇರಲಿಲ್ಲ. ಯಾವುದೇ ಯಂತ್ರದ ಮೇಲೆ ಅವಲಂಬಿತವಾಗಿರಲಿಲ್ಲ. ನಮ್ಮ ಅಪ್ಪ ಅಮ್ಮ ಯಾವತ್ತು ನಮಗೆ ಆಟ ಅಡಿಸಲಿಕ್ಕೆ ಬರುತ್ತಿರಲಿಲ್ಲ, ರೈತರಾದ ಅವರಿಗೆ ಸಮಯವೇ ಇರುತ್ತಿರಲಿಲ್ಲ. ನಮ್ಮೂರಿನ ಸ್ಥಿತಿ ಈಗಲೂ ಹಾಗೆ ಇದೆ. ನಾವುಗಳು ಆಡುತಿದ್ದ ಆಟಗಳೆಂದರೆ ಬುಗರಿ (ಬಗರಿ), ಗಿಲ್ಲಿ-ದಾಂಡು, ಟಿಕ್ಕಿ, ಕೋಲಾಟ, ಕಳ್ಳ-ಪೋಲಿಸ್, ಕಣ್ಣಾ-ಮುಚ್ಚಾಲೆ, ಚೌಕಾಬರೆ, ಕುಂಟೆ-ಬಿಲ್ಲೆ, ಕಬಡ್ಡಿ, ಮರಕೋತಿ, ಈಜು, ಹಾಗು ಇತರೆ ಸಣ್ಣ ಪುಟ್ಟ ಆಟಗಳು. ನಮಗೆ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಅಂತೆಲ್ಲಾ ಆಟಗಳು ಇದೆ ಅಂಥ ಕೂಡ ಗೊತ್ತಿರಲಿಲ್ಲ, ನನ್ನ ಜೀವನದಲ್ಲಿ ಕ್ರಿಕೆಟ್ ಅಂಥ ಆಟ ಇದೆ ಅಂಥ ತಿಳಿದದ್ದು ಎಂಟನೆ ತರಗತಿಯಲ್ಲಿ ಹಾಗು ಪುಟ್ಬಾಲ್, ಟೆನ್ನಿಸ್ ಬಗ್ಗೆ ತಿಳಿದದ್ದು puc ಯಲ್ಲಿ. ಎತ್ತಿನ ಗಾಡಿಯಲ್ಲಿ ಕೂತು (ಎಮ್ಮೆಯ ಮೇಲೆ ಕೂತು) ರಿಯಲ್ ರೇಸ್ ಮಾಡಿ ಅಭ್ಯಾಸ ಇತ್ತೇ ಹೊರೆತು, ಯಾವುದೇ ಕಂಪ್ಯೂಟರ್ ಕಾರ್ ರೇಸ್ ಬಗ್ಗೆ ಗೊತ್ತಿರಲಿಲ್ಲ. ಯಾವುದೇ ಬೋಟಿಂಗ್ ಮಾಡಿ ಗೊತ್ತಿಲ್ಲದಿದ್ದರೂ ಎಮ್ಮೆ ಅಥವಾ ಎತ್ತಿನ ಮೇಲೆ ಕೂತು (ಈಜು ಬಾರದೆ ಇದ್ದರು, ಕೆಲವೊಮ್ಮೆ ಎಮ್ಮೆಯ ಬಾಲ ಹಿಡಿದುಕೊಂಡು) ಆಳವಾದ ಕೆರೆಯಲ್ಲೆಲ್ಲಾ ಸವಾರಿ ಮಾಡಿದ ಅನುಭವ ಇದೆ.

ಮೇಲಿನ ಯಾವುದೇ ಆಟಗಳಿಗೆ ಹಣದ ಅವಶ್ಯಕತೆ ಇರಲಿಲ್ಲ. ಬುಗರಿ ಹಾಗು ಗಿಲ್ಲಿ-ದಾಂಡು ಆಟದಲ್ಲಿ ನಾನು ನಮ್ಮೂರಿನ ಚಾಂಪಿಯನ್. ನಮ್ಮೂರಿನ ಪ್ರತಿಯೊಬ್ಬ ಹೆಂಗಸರು ಹಾಗು ಅಜ್ಜಂದಿರು ನನಗೆ ಬೈದಿದ್ದಾರೆ ಏಕೆಂದರೆ ಪ್ರತಿಯೊಬ್ಬರ ಮನೆ ಹೆಂಚಿಗು ಚಿನ್ನಿ (ಮರದ ತುಂಡು)ಯಿಂದ ಹೊಡೆದು ತೂತು ಮಾಡಿರುತಿದ್ದೆ. ಇನ್ನು ಟಿಕ್ಕಿ ಆಟ ಊರಿನ ಬೀದಿಯಲ್ಲಿ ಬಿದ್ದಿರುವ ಸಿಗರೇಟು ಪ್ಯಾಕೇಟು ಹಾಗು ಬೆಂಕಿ ಪೊಟ್ಟಣದ ತುಂಡುಗಳಿಂದ ಆಡುತಿದ್ದ ಆಟ. ಕಳ್ಳ-ಪೋಲಿಸ್ ಆಟ ಒಂದು ಭಯಾನಕ ಆಟ, ಏಕೆಂದರೆ ಈ ಆಟದಲ್ಲಿ ಕಳ್ಳ ಆದವರು ಊರಿನ ಯಾವುದೇ ಮನೆಗೆ ಹೋಗಿ ಅವಿತುಕೊಳ್ಳಬಹುದಿತ್ತು, ಪೋಲಿಸ್ ಆದವನು ಊರಿನ ಎಲ್ಲಾ ಮನೆಗಳನ್ನು ಹುಡುಕಬೇಕಿತ್ತು - ಕೆಲವೊಮ್ಮೆ ಒಂದೊಂದು ದಿನ ಹುಡುಕುವುದರಲ್ಲೇ ಕಳೆದು ಹೋಗುತಿತ್ತು. ಚೌಕಾಬರೆ ಆಟ, ಇದು ಚೆಸ್ ವಿಧವಾದ ಆಟ ಅಂಥ ಹೇಳಬಹುದು, ತುಂಬ ಚತುರತೆಯಿಂದ ಆಡಬೇಕಾದ ಆಟ - ಇದಕ್ಕೆ ಬೇಕಾದ ಕವಡೆಗಳನ್ನು ನಾವು ಹುಣಸೆ ಬೀಜದ ಒಂದು ಭಾಗವನ್ನು ತೆವೆದು ಬೆಳ್ಳಗೆ ಮಾಡಿಕೊಂಡು ಅವುಗಳಲ್ಲಿ ಆಡುತಿದ್ದೆವು. ಮರಕೋತಿ ಆಟವನ್ನು ಆಡಲಿಕ್ಕೆ ಹೋಗಿ ತುಂಬ ಸಲ ಕೈ ಕಾಲಿಗೆ ಪೆಟ್ಟು ಮಾಡಿಕೊಳ್ಳುತಿದ್ದೆವು. ಕಬಡ್ಡಿ ಹಾಗು ಈಜು ಸ್ವಲ್ಪ ದೊಡ್ಡವರಾದ ಮೇಲೆ ಆಡಲಿಕ್ಕೆ ಶುರು ಮಾಡಿದ ಆಟಗಳು, ಜೊತೆಗೆ ತುಂಬ ಎಂಜಾಯ್ ಮಾಡಿದ ಆಟಗಳು. ಇವತ್ತಿಗೂ ನಮ್ಮೂರಿನ ಕೆರೆಯ ಹತ್ತಿರ ಹೋದರೆ ಡೈವ್ ಹೊಡೆಯುವ ಅಂಥ ಅನ್ನಿಸುತ್ತದೆ.

ಈಗಿನ ಪಟ್ಟಣದಲ್ಲಿ ಜೀವನ ಮಾಡುವವರು ಎಷ್ಟೇ ಹಣ ಖರ್ಚು ಮಾಡಿದರು, ನಮ್ಮಂಥ ಹಳ್ಳಿ ಹುಡುಗರ ಹಾಗೆ ಜೀವನವನ್ನು ಸವಿಯಲು ಸಾಧ್ಯ ಇಲ್ಲಾ, ಅದು ಯಾವುದೇ ರೀತಿಯಲ್ಲೂ ಹಣ ವ್ಯಯ ಮಾಡದೆ. ಈ ಎಲ್ಲಾ ಆಟಗಳ ಜೊತೆಗೆ ಬೇರೆ ತುಂಟಾಟಗಳನ್ನೂ ಮಾಡುತಿದ್ದೆವು ಅವುಗಳ ಬಗ್ಗೆ ಮತ್ತೊಮ್ಮೆ ಸಮಯ ಸಿಕ್ಕಾಗ ಬರೆಯುತ್ತೇನೆ.

Friday, September 11, 2009

ಭಾಗ-೩:ನಾನೇ ನಮ್ಮೂರಿನ ಯುವಗೌಡ!

ನಾನು ಕೊನೆಯ ಅಂಕಣದಲ್ಲಿ ಹೇಳಿದ ಹಾಗೆ ನಮ್ಮೂರಿನ ಶಾಲೆಗೆ ಒಬ್ಬರೇ ಶಿಕ್ಷಕರು. ನಾನು ಶಾಲೆಗೆ ಸೇರಿದ ಸಮಯದಲ್ಲಿ ನಾಗರಾಜು ಎಂಬ ಶಿಕ್ಷಕರಿದ್ದರು, ಅವರಿಗೆ ಸರಿ ಸುಮಾರು ೪೫-೫೦ ವರ್ಷ ವಯಸ್ಸಾಗಿತ್ತು. ಜೀವನದಲ್ಲಿ ಕೇವಲ ಸಂಬಳಕ್ಕಾಗಿ ಕೆಲಸ ಮಾಡುತಿದ್ದ, ನನ್ನಂತ ಹಳ್ಳಿ ಹುಡುಗರ ಉದ್ದಾರ ಮಾಡುವ ಯಾವುದೇ ಹುಮ್ಮಸ್ಸು ಇಲ್ಲದ ಒಬ್ಬ ವ್ಯಕ್ತಿ. ಅವರು ನಮ್ಮ ಪಕ್ಕದ ಊರಿನವರು, ನಮ್ಮೂರಿನಿಂದ ಅವರ ಊರಿಗೆ ಹೆಚ್ಚು ಕಮ್ಮಿ ೮ ಕಿ ಮಿ. ಮೇಸ್ಟ್ರು ದಿನಾ ಸೈಕಲ್ ಮೇಲೆ ಬರುತಿದ್ದರು, ಬಂದು ನಮ್ಮೂರಿಗೆ ಬಂದು ತಲುಪುವಷ್ಟರಲ್ಲಿ ಪೂರ್ತಿ ಸುಸ್ತಾಗಿ ಹೋಗಿರುತಿದ್ದರು, ಹಾಗಾಗಿ ಬಂದು ಆರಾಮಾಗಿ ನಿದ್ದೆ ಮಾಡಿ ಹೋಗುತಿದ್ದರು.

ಮೇಸ್ಟ್ರಿಗೆ ನನ್ನ ಮೇಲೆ ತುಂಬ ಪ್ರೀತಿ ಹಾಗಾಗಿ ಶಾಲೆಗೆ ಹೋದ ತಕ್ಷಣ ಕೆರೆದು ನನ್ನ ಯೋಗಕ್ಷೇಮ ವಿಚಾರಿಸಿ, ಜೊತೆಗೆ ಅಂದು ನಮ್ಮನೇಲಿ ಉಟಕ್ಕೆ ಏನು ಮಾಡಿದ್ದರೆ ಎಂದು ಕೇಳುತಿದ್ದರು. ಏನಾದರು ಅವರಿಗೆ ಇಷ್ಟ ಇದ್ದ ಸಾಂಬಾರ್ ಏನಾದ್ರೂ ಮಾಡಿದ್ದರೆ (ಕೋಳಿ ಸಾರು ಅಂದ್ರೆ ಅವರಿಗೆ ತುಂಬ ಇಷ್ಟ ಇತ್ತು) ಅಂತ ಏನಾದ್ರು ಹೇಳಿದರೆ ಸಾಕು. ಏನಾದ್ರೂ ನೆಪ ಮಾಡಿಕೊಂಡು ನಮ್ಮ ಮನೆಗೆ ಹೋಗುತಿದ್ದರು. ನಮ್ಮ ಮನೆಗೆ ಬಂದವರಿಗೆ ಊಟ ಬಡಿಸದೆ ಕಳಿಸುತ್ತಿರಲಿಲ್ಲ, ಹಾಗಾಗಿ ಭರ್ಜರಿ ಸೇವೇ ಮಾಡಿಸಿಕೊಂಡು, ಜೊತೆಗೆ ತರಕಾರಿ, ಕಾಳು-ಕಡ್ಡಿ ಎಲ್ಲಾ ತುಂಬಿಕೊಂಡು ಬರುತಿದ್ದರು.

ನಾನು ಮೊದಲನೇ ತರಗತಿಗೆ ಸೇರಿದಾಗ, ನಮ್ಮ ಮೇಸ್ಟ್ರು ಶಾಲೆಗೆ ಬರೋದೇ ೧೧ ಅಥವಾ ೧೨ ಗಂಟೆ ಆಗಿರುತಿತ್ತು. ಬಂದು ಒಂದು ಗಂಟೆ ಅ ಆ ಇ ಈ ಕಲಿಸಿಕೊಡುತಿದ್ದರು, ನಂತರ ಊಟಕ್ಕೆ. ಮಧ್ಯಾನ ೧ ೨ ೩ ೪ ಹೇಳಿಕೊಟ್ಟು ೪ ಗಂಟೆಗೆ ಜಾಗ ಕಾಲಿ ಮಾಡಿ ಹೋಗುತಿದ್ದರು. ನನ್ನ ಮೊದಲಿನ ಎರಡು ವರ್ಷದಲ್ಲಿ ಅವರು ಹೇಳಿಕೊಟ್ಟಿದ್ದು, ನಾವು ಕಲಿತಿದ್ದು ಇದು ಎರಡೇ. ಈ ಎರಡು ವರ್ಷ ಕೂಡ ನಾನು ಯಾವುದೇ ಪುಸ್ತಕ, ನೋಟ್ ಬುಕ್, ಪೆನ್ ಏನು ತೆಗೆದು ಕೊಲ್ಲದೆ ಕೇವಲ ಸ್ಲೇಟ್ & ಚಾಪಿಸ್ ( ಸುಣ್ಣದ ಬಳಪ)ನಲ್ಲೆ ಮುಗಿಸಿದೆ. ಇತ್ತೀಚಿಗೆ ಮಕ್ಕಳಿಗೆ optional ಪರೀಕ್ಷೆ ಕೊಡಲು ಸರ್ಕಾರ ತೀರ್ಮಾನಿಸಿದೆ ಅಂಥಾ ಯಾವುದೊ ನಿಯತಕಾಲಿಕೆಯಲ್ಲಿ ಓದಿದೆ, ಆದರೆ ನಮಗೆ ಆ ಸಮಯದಲ್ಲೇ ಈ ವ್ಯವಸ್ಥೆ ಇತ್ತು. ನಮಗೆ ಯಾವುದೇ ಪರೀಕ್ಷೆ ಅಗಲಿ, ಕಿರು ಪರೀಕ್ಷೆ ಆಗಲೀ ಇರುತ್ತಿರಲಿಲ್ಲ. ಆದರೆ ಪಲಿತಾಂಶದ ದಿನ ಎಲ್ಲಾ ಹುಡುಗರು ಶಾಲೆಗೆ ಹೋಗುತಿದ್ದೆವು, ಅಂದು ಮೇಸ್ಟ್ರು ಎಲ್ಲರನ್ನು ಸಾಲಿನಲ್ಲಿ ಕೂರಿಸಿ, ಒಬ್ಬೊಬ್ಬರನ್ನಾಗಿ ಕರೆದು ಅವನ ಮುಖ ನೋಡಿ ಅವನು ಉತ್ತಿರ್ಣ ಅಥವಾ ಅನುತ್ತಿರ್ಣ ಎಂದು ನಿರ್ದರಿಸುತಿದ್ದರು. ಆ ದಿನ ಯಾರು ಶಾಲೆಗೇ ಬರೋದಿಲ್ಲ ಅವರುಗಳೆಲ್ಲ ಅನುತ್ತಿರ್ಣ. ನಾನು ಊರಿನ ಗೌಡರ ಮಗ ಆಗಿದ್ದರಿಂದ ನನ್ನನ್ನು ಅನುತ್ತಿರ್ಣ ಮಾಡುವ ದ್ಯೈರ್ಯ ಮೇಸ್ಟ್ರು ಮಾಡುತ್ತಿರಲಿಲ್ಲ!.

ರಾಜಕೀಯ ಪ್ರವೇಶ:
ನಾನು ಶಾಲೆಗೆ ಸೇರಿದ ವರ್ಷ ನನ್ನ ಅಣ್ಣ ಕೂಡ ಅದೇ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಓದುತಿದ್ದ, ಅವನು ಶಾಲೆಯ ಲೀಡರ್, ಮೇಸ್ಟ್ರು ನಿದ್ದೆ ಮಾಡುವಾಗಿ ಯಾರು ಗಲಾಟೆ ಮಾಡಿ ಹೆಚ್ಚರ ಮಾಡದಂತೆ ನೋಡಿಕೊಳ್ಳುವುದು ಅವನ ಕೆಲಸ. ನಮ್ಮೂರಿನಲ್ಲಿ ಕೇವಲ ನಾಲ್ಕನೆ ತರಗತಿಯವರೆಗೆ ಮಾತ್ರ ಇದ್ದುದದರಿಂದ, ಅವನು ನಾನು ಎರಡನೇ ತರಗತಿಗೆ ಬಂದಾಗ ಅವನು ಶಾಲೆಯಲ್ಲಿ ಇರಲಿಲ್ಲ. ಆಗ ಮೇಸ್ಟ್ರು ಲೀಡರ್ ಕೆಲಸಕ್ಕೆ ಒಬ್ಬ ಉತ್ತರಾದಿಕಾರಿಯನ್ನು ನೇಮಿಸ ಬೇಕಾಗಿ ಬಂತು. ಆಗ ಅವರಿಗೆ ಊರಿನ ಗೌಡರ ಮಗನಾದ ನನ್ನನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಲು ಮನಸಾಗದೆ ನನ್ನನ್ನೇ ಲೀಡರ್ ಮಾಡಿದರು. ರಾಜಕೀಯ ನನ್ನ ರಕ್ತದಲ್ಲೇ ಇತ್ತು ಅಂತ ಕಾಣುತ್ತೆ. ಯಾರಾದರು ನನ್ನ ಮಾತು ಕೇಳದೆ ಇದ್ದರೇ, ಯಾರಾದರು ನನಗೆ ಇಷ್ಟ ಇಲ್ಲದಿದ್ದರೆ, ನನಗೆ ಚಾಪಿಸು (ಸುಣ್ಣದ ಬಳಪ - chalk piece) ಲಂಚ ಕೊಡದೆ ಇದ್ದರೇ, ಅವರ ಹೆಸರುಗಳನ್ನು ಮೇಸ್ಟ್ರು ಒಂದು ಸುತ್ತು ನಿದ್ದೆ ಮಾಡಿ ಎದ್ದ ತಕ್ಷಣ ಹೇಳಿ ಒದೆ ಕೊಡಿಸುತಿದ್ದೆ. ಹಾಗಾಗಿ ಊರಿನ ಹುಡುಗರೆಲ್ಲ ನನಗೆ ಹೆದರುತಿದ್ದರು. ಆದರೆ ಮಂಜುಳಾ ಅನ್ನೋ ಹುಡುಗಿ ಅಂದ್ರೆ ಏನೋ ಒಂಥರಾ ಇಷ್ಟ (ಯಾಕೆ ಅಂತ ಇನ್ನು ಕೂಡ ಗೊತ್ತಿಲ್ಲ) ಆಗುತಿದ್ದಳು, ಅವಳು ಮತ್ತು ನನ್ನ ತಮ್ಮ (ಬಂಗಾರಿ) ಎಷ್ಟು ಗಲಾಟೆ ಮಾಡಿದ್ರು ಕೂಡ ಮೇಸ್ಟ್ರಿಗೆ ಹೇಳುತ್ತಿರಲಿಲ್ಲ.

ನಾನು ಮೂರನೇ ತರಗತಿಗೆ ಹೋದಾಗ ನಾಗರಾಜ ಮೇಸ್ಟ್ರಿಗೆ ವರ್ಗಾವಣೆ ಆಗಿತ್ತು. ಯಾದವರಾಜ್ ಎಂಬ ಯುವ ಮೇಸ್ಟ್ರು ನಮ್ಮೂರಿಗೆ ಬಂದಿದ್ದರು. ಆವರಿಗೆ ಬಡ ರೈತರ ಮಕ್ಕಳಿಗೆ ಕಲಿಸಬೇಕು, ಉದ್ದಾರ ಮಾಡಬೇಕು ಎಂದು ತುಂಬಾ ಆಸೆ ಮತ್ತು ಹುಮ್ಮಸ್ಸು ಇತ್ತು. ಬಂದ ಕೆಲವೇ ದಿನಗಳಲಿ, ನೆಲದ ಮೇಲೆ ಕೂರುತಿದ್ದ ನಮಗೆ ಮಣೆಗಳ ಮೇಲೆ ಕೂರುವ ವ್ಯವಸ್ಥೆ ಮಾಡಿಸಿದರು. ಕಾಗುಣಿತ, ಮಗ್ಗಿ, ಗಣಿತ (ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ) ಹೇಳಿ ಕೊಟ್ಟು. ಸ್ವಲ್ಪ ಓದು-ಬರೆಯುವುದನ್ನು ಅಭ್ಯಾಸ ಮಾಡಿಸುತಿದ್ದರು.

ಶಿಕ್ಷಕರ ಹುಮ್ಮಸ್ಸು ಕೂಡ ತುಂಬ ದಿನಾ ಉಳಿಯಲಿಲ್ಲ. ಅವರು ಕೆಳ ವರ್ಗಕ್ಕೆ ಸೇರಿದವರೆಂದು ತಿಳಿದ ಮೇಲೆ ನಮ್ಮೂರಿನ ಅನಕ್ಷರಸ್ಥ ದಡ್ಡ ಜನ ಅವರನ್ನು ಕೀಳಾಗಿ ಮಾತನಾಡಿಸಲು ಶುರು ಮಾಡಿದರು. ಒಬ್ಬ ಶಿಕ್ಷಕರಿಗೆ ಸಿಗಬೇಕಾದ ಮರ್ಯಾದೆಅವರಿಗೆ ಸಿಗುತ್ತಿರಲಿಲ್ಲ. ನಮಗೆಲ್ಲಾ ಅವರನ್ನು ಮುಟ್ಟದೆ ಇರೋ ಹಾಗೆ ಸೂಚನೆ ನೀಡುತಿದ್ದರು.

ಒಂದು ದಿನ ನಾನು ಹಾಗು ನನ್ನ ಸೋದರ ಅತ್ತೆಯ ಮಗ ತಮ್ಮಣ್ಣ (ಪ್ರೀತಿಯ ಹೆಸರು "ಡಬ್ಬಾ ") ಶಾಲೆಗೇ ಹೋಗಿದ್ದೆವು, ಮೇಸ್ಟ್ರು ಏನೋ ಹೇಳಿಕೊಡುತಿದ್ದಾಗ ನಾವಿಬ್ಬರೂ ಮಾತಾಡುತ್ತ ಕುಳಿತಿದ್ದೆವು, ಅವರಿಗೆ ಸಿಟ್ಟು ಬಂದು ನಮ್ಮಿಬ್ಬರನ್ನು ಕರೆದರು, ನಾನು ಮೊದಲು ಹೋದೆ. ನನಗೆ ಒಂದು ಒದೆ ಕೊಟ್ಟು ಕೂರಲಿಕ್ಕೆ ಹೇಳಿದರು, ಅವನನ್ನು ಕರೆದು ಒಂದು ಒದೆ ಕೊಟ್ಟರು. ಆದರೆ ಅವನಿಗೆ ತುಂಬ ಸಿಟ್ಟು ಬಂದು ಕೈಲಿದ್ದ ಸ್ಲೇಟ್ ನಿಂದ ಅವರ ಮುಖಕ್ಕೆ ಜೋರಾಗಿ ಹೊಡೆದು ಮನೆಗೆ ಹೊಡಿ ಹೋದ. ಮತ್ತೆಂದು ಅವನು ಶಾಲೆ ಕಡೆ ತಿರುಗಿ ನೋಡಲಿಲ್ಲ, ಮತ್ತು ನಮ್ಮ ತಂದೆ-ತಾಯಿಯರಿಗೆ ಮಕ್ಕಳನ್ನು ತಿದ್ದಿ, ಬುದ್ದಿ ಹೇಳಿಶಾಲೆಗೇ ಕಳಿಸುವಸ್ಟು ಬುದ್ದಿ ಹಾಗು ಸಮಯ ಇರಲಿಲ್ಲ. ಇವತ್ತು ಊರಲ್ಲಿ ಎಮ್ಮೆ ಮೇಯಿಸಿಕೊಂಡು ಜೀವನ ಮಾಡುತಿದ್ದಾನೆ. ನಾನೇನಾದರು ದಿನ ಅವನು ಮಾಡಿದ ಕೆಲಸ ಮಾಡಿದ್ದರೆ, ಇವತ್ತು ನಾನು ಕೂಡ ಅವನ ಜೊತೆ ಎಮ್ಮೆ ಮೇಯಿಸುತಿದ್ದೆ.

ಇನ್ನೊಂದು ದಿನ ಲೀಲಾವತಿ ಅನ್ನೋ ಹುಡುಗಿಗೆ ಅ ಆ ಇ ಈ ಹೇಳಲಿಕ್ಕೆ ಬರಲಿಲ್ಲ ಅಂಥ ಮೇಸ್ಟ್ರು ಶಿಕ್ಷಿಸುತಿದ್ದರು, ಆ ಹುಡುಗಿ ತಪ್ಪಿಸಿಕೊಳ್ಳಲು ಹೋಗಿ ಅವಳ ರಟ್ಟೆಯ ಮೇಲೆ ಒದೆ ಬಿದ್ದು ಬಾರುಸುಂಡೆ (swelling) ಬಂದು ಬಿಟ್ಟಿತು. ಅದೇ ಸಮಯದಲ್ಲಿ ಅವರ ಅಪ್ಪ ಹೊನ್ನಣ್ಣ, ಜಮೀನಿನ ಕೆಲಸ ಮುಗಿಸಿ ಮನೆಗೆ ಹೋಗುತಿದ್ದರು. ಆ ಹುಡುಗಿ ಹೊಡಿ ಹೋಗಿ ತಂದೆಗೆ ಆ ಬಾರುಸುಂಡೆ ತೋರಿಸಿದಳು. ಅವರಪ್ಪ ಸೀದಾ ಶಾಲೆಗೇ ಬಂದು, ಏನು ಕೇಳದೆ ಕೈಯಲ್ಲಿದ ಗೆಡ್ಡಗೊಲು (ದನಗಳಿಗೆ ಒಡೆಯಲು ರೈತರು ಬಳಸುವ ಬಿದಿರಿನ ತುಂಡು)ನಿಂದ ಮೇಸ್ಟ್ರಿಗೆ ಎರಡು ಕೊಟ್ಟರು. ಮೇಸ್ಟ್ರು ವಿಧಿ ಇಲ್ಲದೆ ಶಾಲೆಯಿಂದ ಹೊರಗಡೆ ಹೊಡಿ ಹೋದರು. ಆದರು ಬಿಡದೆ ಅವರನ್ನು ಹಿಂಬಾಲಿಸಿಕೊಂಡು ಹೋದರು ಹೊನ್ನಣ್ಣ, ಅವರಿಂದೆ ನಾವೆಲ್ಲ ನಗುತ್ತ ಹೊಡಿ ಹೋಗುತಿದ್ದೆವು. ಮೇಸ್ಟ್ರು ಸೀದಾ ನಮ್ಮ ಮನೆಯ ಹತ್ತಿರ ಹೊಡಿ ಹೋಗಿ ನನ್ನ ತಂದೆ ಹತ್ತಿರ ಕೇಳಿಕೊಂಡರು. ಆಗ ನಮ್ಮಪ್ಪ ಹೊನ್ನಣ್ಣನಿಗೆ ಸಮಾಧಾನ ಮಾಡಿ ಕಳುಯಿಸಿ ಕೊಟ್ಟರು. ಆ ಹುಡುಗಿಯ ವಿಧ್ಯಾಭ್ಯಾಸ ಕೂಡ ಅವತ್ತಿಗೆ ಕೊನೆಗೊಂಡಿತು.

ಮೇಸ್ಟ್ರಿಗೆ ಇದನ್ನೆಲ್ಲಾ ಸಹಿಸಿಕೊಳ್ಳಲು ಆಗದೆ ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೊರಟು ಹೋದರು. ನಮ್ಮೂರಿಗೆ ಮತ್ತೊಬ್ಬ ನಿದ್ದೆ ಗುರುಗಳು ಬಂದು ಸೇರಿಕೊಂಡರು.

ಪ್ರೀತಿಯಿಂದ
ಗೌಡ
Saturday, September 5, 2009

ಜೀವನವೆಂಬ ಇಸ್ಪೀಟು ಆಟ!


ಬುದ್ದಿ ಜೀವಿಗಳು ಜೀವನವನ್ನು ತುಂಬಾ ಆಟಗಳಿಗೆ ಹೋಲಿಸುತ್ತಾರೆ, ಅವುಗಳಲ್ಲಿ ಚಂದುರಂಗದಾಟ ಮುಖ್ಯವಾದದ್ದು. ನನಗೆ ಚದುರಂಗದಾಟದ ಬಗ್ಗೆ ಏನು ತಿಳಿಯದ ಕಾರಣ, ನನಗೆ ಆ ಹೋಲಿಕೆಗಳು ಅರ್ಥ ಆಗೋದು ಅಷ್ಟಕ್ಕೆ ಅಸ್ಟೆ. ಹಾಗಾಗಿ ನನಗೆ ತಿಳಿದಿರುವ, ನನಗೆ ಸರಿಯಾಗಿ ಅರ್ಥ ಆಗುವ "ಇಸ್ಪೀಟು" ಆಟಕ್ಕೆ ಜೀವನವನ್ನು ಹೋಲಿಕೆ ಮಾಡಿಕೊಂಡು ಅರ್ಥ ಮಾಡಿಕೊಳ್ಳೋದು ನನ್ನ ಅಭ್ಯಾಸ.

ನಾವುಗಳೆಲ್ಲಾ ಈ ಪ್ರಪಂಚಕ್ಕೆ ಕಾಲಿಟ್ಟಾಗ, ನಮ್ಮ ಜೀವನದ ಆಟಕ್ಕೆ ಬೇಕಾಗುವಸ್ಟು "ಇಸ್ಪೀಟು ಎಲೆ"ಗಳನ್ನೂ ದೇವರು (ಯಾರು ಅಂಥ ಇನ್ನು ಸರಿಯಾಗಿ ತಿಳಿದಿಲ್ಲಾ, ಹುಡುಕಾಟ ಇನ್ನು ನನ್ನೊಳಗೆ ನಡೆಯುತ್ತಿದೆ) ಕೊಟ್ಟು ಕಳಿಸಿರುತ್ತಾನೆ. ಅವುಗಳಲ್ಲಿ ತುಂಬಾ "ಜೋಕರ್"ಗಳು ಕೂಡ ಇರುತ್ತವೆ. ಜೊತೆಗೆ ಬೇಕಾದಾಗ ಒಂದೊಂದಾಗಿ ನಮ್ಮ ಸರತಿ ಬಂದಾಗ ತೆಗೆದು ಕೊಳ್ಳಲು ತುಂಬಾ ಎಲೆಗಳನ್ನು ಆಟಗಾರರ ನಡುವೆ ಈ ಪ್ರಪಂಚದಲ್ಲಿ ಇಟ್ಟಿರುತ್ತಾನೆ, ಇದರಲ್ಲಿ ಕೂಡ "ಜೋಕರ್"ಗಳು ಸಿಗಬಹುದು.

ಮಾನವನ ಜೀವನ ಕೇವಲ ಈ ಎಲೆಗಳನ್ನು ಸರಿಯಾಗಿ ಕೂಡಿಸಿಕೊಂಡು ಆಡುವ ಆಟ. ನಾವು ಚಿಕ್ಕವರಾಗಿದ್ದಾಗ ದೇವರು ನಮ್ಮ ಅಪ್ಪ-ಅಮ್ಮ-ಗುರುಗಳ ರೂಪದಲ್ಲಿ ನಮಗೋಸ್ಕರ ಆಟ ಆಡಿಸಿ ತೋರಿಸಿ ಕೊಡುತ್ತಾನೆ, ಒಮ್ಮೆ ನಮಗೆ ನಿರ್ಧಾರ ಮಾಡುವ ಶಕ್ತಿ ಬಂದ ತಕ್ಷಣ ಎಲ್ಲಾ ಎಲೆಗಳನ್ನು ನಮ್ಮ ಕೈಗೆ ಕೊಟ್ಟು ಆಟ ಮುಂದುವರಿಸಲು ಹೇಳಿ ಹೋಗ್ತಾನೆ. ತದ ನಂತರ ನಮ್ಮ ಜೀವನದಲ್ಲಿ ಏನೇ ಏರು-ಪೆರು ಆದರೂ ಅದಕ್ಕೆ ನಾವುಗಳೇ ನೇರ ಹೊಣೆ. ನಾವುಗಳು ಯಾವುದೂ ಜೋಕರ್, ಯಾವುದು ಸಾಮನ್ಯ ಎಲೆ ಅಂಥ ನಿರ್ಧಾರ ಮಾಡಿಕೊಂಡು ಅವುಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಬೇಕು, ಅದುವೇ ಜೀವನದಲ್ಲಿ ಸಂತೋಷವಾಗಿರಲು ಬೇಕಾಗಿರುವ ಮೂಲ ಮಂತ್ರ. ನಮ್ಮ ಜೀವನದಲ್ಲಿ ಜೊತೆಗೆ ಆಡುವವರು ಕೇವಲ ಅವರಿಗೆ ಬೇಕಿಲ್ಲದ ಎಲೆಗಳನ್ನು ನಿಮ್ಮತ್ತ ಎಸೆಯುತ್ತಿರುತ್ತಾರೆ. ಕೆಲವೋಮ್ಮೆ ನಿಮಗೆ ಬೇಕಾದ ಎಲೆ ಸಿಗಬಹುದು ಮತ್ತೆ ಕೆಲವೋಮ್ಮೆ ಸಿಗದೇ ಕೂಡ ಇರಬಹುದು, ಮತ್ತೆ ಕೆಲವರು ತಿಳಿಯದೆ ನಿಮಗೆ ಬೇಕಾದ ಎಲೆಗನ್ನೇ ಎಸೆಯಬಹುದು, ಅದೆಲ್ಲಾ ಕೇವಲ ನಿಮ್ಮ "ಲಕ್" ಮೇಲೆ ನಿರ್ಣಯ ಆಗ್ತದೆ. ಅವರುಗಳು ನಿಮಗೆ ಎಸೆದ ತಕ್ಷಣ ಆ ಎಳೆಯನ್ನು ನೀವು ತೆಗೆದುಕೊಳ್ಳಲೇಬೇಕು ಎಂದೆನಿಲ್ಲಾ. ನಿಮಗೆ ಆ ಎಲೆ ಬೇಕಿಲ್ಲದಿದ್ದಲ್ಲಿ, ಆಟಗಾರರ ಮಧ್ಯೆ ಇರುವ ಕಂತೆಯಿಂದ ಒಂದು ಎಲೆ ತೆಗೆದು ನಿಮ್ಮ ಹಣೆಬರಹ ಪರೀಕ್ಷೆ ಮಾಡಿಕೊಳ್ಳಬಹುದು. ಇದೆಲ್ಲಾದರ ಜೊತೆಗೆ ನೀವು ಕೂಡ ಸರಿಯಾಗಿ ಯೋಚನೆ ಮಾಡಿ ಯಾವುದು ಎಲೆ ನಿಮಗೆ ಸರಿಯಾಗಿ ಕೂಡಿ ಬರಲ್ಲ, ಆ ಎಲೆಯನ್ನು ಬೇರೆಯವರ ಕಡೆ ಎಸೆಯಲೇ ಬೇಕು, ಇಲ್ಲಿ ನಿಮ್ಮ ಬುದ್ದಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲೇ ಬೇಕು, ಇಲ್ಲದಿದ್ದರೆ ಆಟದಲ್ಲಿ ಗೆಲುವು ಸಿಗೋದು ಕಷ್ಟ.

ಯಾವ ಆಟವನ್ನು (ಇಸ್ಪೀಟ್ ಆಟದಲ್ಲೇ ತುಂಬಾ ವಿಧಗಳಿವೆ), ಯಾವ ರೀತಿಯಲ್ಲಿ, ಯಾವ ಎಲೆಗಳನ್ನು ಕೂಡಿಸಿ ಆಡುತ್ತಾರೆ ಅನ್ನೋದು ಅವರವರ ವಿವೇಕತೆಗೆ ಬಿಟ್ಟ ವಿಷಯ. ಕೆಲವರು ಎಲ್ಲಾ "ಜೋಕರ್" ಎಲೆಗಳನ್ನು ಜೀವನದ ಪ್ರಥಮ ಹಂತದಲ್ಲೇ ಉಪಯೋಗಿಸಿ ಕೊನೆಗೆ ಆಟ ಮುಗಿಯುವ ಮುನ್ನವೇ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಕೆಲವರು ಎಲ್ಲಾ "ಜೋಕರ್"ಗಳನ್ನೂ ಕೊನೆವರೆಗೆ ಉಳಿಸಿಕೊಳ್ಳುವುದರಲ್ಲೇ ಜೀವನ ವ್ಯರ್ಥ ಮಾಡುತ್ತಾರೆ ಹಾಗೂ ಕೊನೆಗೆ ಕೇವಲ "ಜೋಕರ್"ಗಳನ್ನೇ ಉಳಿಸಿಕೊಂಡು, ಒಟ್ಟಿಗೆ ಉಪಯೋಗಿಸಿ, ಆಟದ ನಿಜವಾದ ಮಜಲನ್ನೇ ಅನುಭವಿಸದೇ ಹೊರಟು ಹೋಗುತ್ತಾರೆ. ಇನ್ನೂ ಕೆಲವರು ಈ "ಜೋಕರ್"ಗಳ ಮಹತ್ವ ತಿಳಿಯದೆ ಬೇರೆ ಎಲೆಗಳ ತರಾನೆ ಉಪಯೋಗಿಸಿ, "ಜೋಕರ್"ಗಳನ್ನೂ ವ್ಯರ್ಥ ಮಾಡುತ್ತಾರೆ. ಯಾರು ಈ "ಜೋಕರ್"ಗಳ ಮಹತ್ವ ತಿಳಿದು, ಜೊತೆಗೆ ಸಾಮನ್ಯ ಎಲೆಗಳನ್ನು ಕೂಡ ಸರಿಯಾಗಿ ಕೂಡಿಸಿ ಆಡುತ್ತಾರೋ ಅವರುಗಳು ಮಾತ್ರ ಈ ಆಟದಲ್ಲಿ ಗೆಲ್ಲಲು ಸಾಧ್ಯ.

ಜೀವನದ ಈ ಆಟದಲ್ಲಿ ನಿಮಗೆ ಗೆಲ್ಲಲಾಗದಿದ್ದರೆ ಅದಕ್ಕೆ ನೀವೇ ನೇರ ಹೊಣೆ. ಬೇರೆ ಯಾರನ್ನು ದೂಷಿಸಲಾಗುವುದಿಲ್ಲ. ಏಕೆಂದರೆ ಎಲ್ಲಾರು ಅವರವರ ಆಟವನ್ನು ಆಡುವುದರಲ್ಲಿಯೇ ಮನಸ್ಸನ್ನು ಕೇಂದ್ರಿಕರಿಸಿರುತ್ತಾರೆ. ನನ್ನ ಜೀವನದಲ್ಲಿ ಅವನಿಂದ ಈಗೆ ಆಯಿತು ಮತ್ತೆ ಇವನಿಂದ ಈಗೆ ಆಯಿತು ಎಂದು ಸಬೂಬು ಕೊಡುವ ತುಂಬ ಜನರನ್ನು ನೋಡಿದ್ದೇನೆ, ಅವರುಗಳಿಗೆಲ್ಲ ನನ್ನ ಚಿಕ್ಕ ಪ್ರಶ್ನೆ : ಅವರು ಎಸೆದ ಎಲೆಗಳನ್ನು ಯೋಚನೆ ಮಾಡದೇ ತೆಗೆದುಕೊಂಡು ಮಾಡಿದ ತಪ್ಪು ನಿಮ್ಮದೇ ತಾನೆ?. ಹಾಗಾಗಿ ಜೀವನದಲ್ಲಿ ನಮ್ಮ ಸೋಲುಗಳಿಗೆ, ತಪ್ಪುಗಳಿಗೆ, ಬೇರೆಯವರ ಕಡೆ ಬೊಟ್ಟು ಮಾಡಿ ತೋರಿಸುವುದನ್ನು ಬಿಟ್ಟು, ನಮ್ಮ ಆಟವನ್ನು ಸರಿಯಾಗಿ ಚಾಣಾಕ್ಷತನದಿಂದ ಆಡುವುದನ್ನು ಕಲಿಯೋಣ. ಜೊತೆಗೆ ಒಮ್ಮೆ ಕೆಳಗೆ ಎಸೆದ ಎಲೆಯನ್ನು ಪುನಃ ತೆಗೆದು ಕೊಳ್ಳಲು ಈ ಆಟದಲ್ಲಿ ಸಾಧ್ಯ ಇಲ್ಲ, ಅದ್ದರಿಂದ ಎಸೆದ ಎಲೆಯ ಬಗ್ಗೆ ಯೋಚನೆ ಮಾಡಿ ಕೊರುಗೋ ಬದಲು, ಮುಂದಿನ ಎಲೆಯನ್ನು ಎಚ್ಚರದಿಂದ ನಡೆಸುವ ಬಗ್ಗೆ ಯೋಚನೆ ಮಾಡೋಣ.

ನಿಮ್ಮೆಲ್ಲರ ಜೀವನದ ಆಟಕ್ಕೆ ನನ್ನ ಶುಭಾಕಾಂಕ್ಷಿಗಳು.

ಪ್ರೀತಿಯಿಂದ
ಗೌಡ.