Friday, March 25, 2011

ಹೇಳಲೇಬೇಡ ಗೆಳತಿ

ನೀನೆಂದೂ ಹೇಳಲೆಬೇಡ ಗೆಳತಿ, ನಿನ್ನ ಹೆಸರ
ಯಾವ ಪದಬಂಧದ ಹಂಗಿಗೂ ಎಟುಕದ ಚೆಲುವು ನಿನ್ನದು!
ನಾನೆಂದೂ ಕೇಳುವುದೆ ಇಲ್ಲ ಒಡತಿ, ನಿನ್ನ ಕುಲ
ಯಾವ ಕುಲಕರ್ತೃವಿನ ನಿಲುವಿಗೂ ನಿಲುಕದ ಪ್ರೀತಿ ನಮ್ಮದು!

ನಿನ್ನ ಪೂರ್ವಾಪರದ ಹಾದಿ ಅರಿತು ಆಗಬೇಕಾಗಿರುವುದೆನಿಲ್ಲ
ಈ ಗೌಡಶಕದಿ ಎಂದೆಂದೂ ಹೂವಹಾದಿಯಲ್ಲೇ ನಿನ್ನ ಪಯಣ!
ನಿನ್ನ ಊರುಕೇರಿಯ ಕಥೆ ಕೇಳದೆ ಕಳೆದುಕೊಳ್ಳುವುದೆನಿಲ್ಲ
ಮುಂದೆ ನೀನೆಂದೆಂದು ನನ್ನೆದೆಯಂತಃಪುರದ ಖಾಯಂನಿವಾಸಿ!

ನಾ ಮೀಟಿದ ಭಾವಕೆ, ನೀ ಹಾಡದಿದ್ದರೂ ಬಯಕೆಗೀತೆ
ನಾ ಬಿಡದೆ ಆಲಿಸಬಲ್ಲೆ ನಿನ್ನೆದೆಬಡಿತದ ನಾದಸುಧೆಯೊಳಗೆ!
ನಾ ನುಡಿಸಿದ ತಾಳಕೆ, ನೀ ಕುಣಿಯದಿದ್ದರೂ ಲಜ್ಜೆಕುಣಿತ
ನಾ ನಿಂತಲ್ಲೇ ಕಾಣಬಲ್ಲೆ ನಿನ್ನ ಕಣ್ಣಂಚಿನ ಸ್ಫುಟಸಂಚಿನೊಳಗೆ!

ಕಣ್ ಮುಚ್ಚಿದ ಕತ್ತಲಲ್ಲೂ ಮಿಂಚಂತೆ ನೀನೆ ಕಾಡುವಾಗ
ದರುಶನಕೆ ಯಾಕೆ ನೀಡಲಿ ಅಂತೆಕಂತೆಯ ಕಪ್ಪಕಾಣಿಕೆ?
ಇರುವ ನಿಜಜನುಮದಲ್ಲೇ ನಮ್ಮೆಲ್ಲ ವ್ಯವಹಾರಗಳ ಮುಗಿಸದೆ
ಏಳೇಳು ಜನುಮಕ್ಕೂ ಕರುಣಿಸಲು ದೇವರಿಗೇಕೆ ಬಿಸಿಬೇಡಿಕೆ?

ದೃಷ್ಟಿಬಾಣಗಳ ಸುರಿಮಳೆಗೈದು ಕಾಡಬೇಡವೆ ಕನ್ನಿಕೆಯೇ  
ಮೊದಲ ಬಾಣಕೆ ಖುದ್ದಾಗಿ ಖುಷಿಯಿಂದಲೆ ಶರಣಾಗಿರುವೆ!
ನಿನ್ನ ನಾಜೂಕಿನ ನೀಳ ತೋಳ್ಗಳಿಂದ ಬಿಗಿಯಾಗಿ ಬಂಧಿಸಿ
ನಿನ್ನೆದೆಗೂಡಲಿ ಕೂಡಿಹಾಕು, ಹಾಯಾಗಿ ಸೆರೆಯಾಳಾಗಿರುವೆ!