Monday, November 8, 2010

ಗತವೈಭವವ ಪುನರ್ ಶಂಕುಸ್ಥಾಪಿಸಬಾರದೆ?

ದುಗುಡದ ಕಾರ್ಮೋಡಗಳು ಮನವ ಕವಿದಿರಲು
ಕಣ್ಣೀರಮಳೆ ಸುರಿಸಿ ಕರಗಿಸಬಾರದೆ?
ನೋವಿನ ಧಗೆಯಲಿ ಮೊಗವು ಬಳಲಿರಲು
ನಗೆಯಮೃತ ಬಡಿಸಿ ಅರಳಿಸಬಾರದೆ?

ಮೇಘಗಳ ಮರೆಯಲಿ ಚಂದಿರ ಚಣಕಾಲ ಮಾಯವಾದರೆ
ತನ್ನನಿನ್ನೆಂದೂ ಬೆಳಗಿಸನೆಂದು ಇಳೆಯು ಅಳುವುದೆ?
ಎಳೆಬಳ್ಳಿಯೊಂದು ಬಲಿತ ಗಿಡವನ್ನಾಶ್ರಯಿಸಿ ಮೇಲೇರಿದರೆ
ತನ್ನದ್ಯಾವ ಆಸರೆಯೂ ಬೇಕಿಲ್ಲವೆಂದು ಬೇರು ಬೆದರುವುದೆ?

ನವರಂಗಗಳನ್ನು ಬೆಳಕು ತನ್ನೊಳಗವಿಚಿಟ್ಟು ಮೆರೆದರೂ
ತುಂತುರುಹನಿಗಳು ಬೇಕಲ್ಲವೆ ತೋರಲು ಕಾಮನಬಿಲ್ಲು?
ಬಾಳವ್ಯೂಹದ ಪಥವ ಭೇದಿಸಿ ಮುಂದೆ ನಾ ಸಾಗುತಿದ್ದರೂ
ನಿನ್ನೋಲಿಮೆಯ ಬೆಳಕು ಬೇಕಲ್ಲವೆ ಕಾಣಲು ತೋರ್ಗಲ್ಲು?

ಸರಸದ ಸಿಹಿಬೆಲ್ಲ ಸವಿಯುವ ಹಂಬಲದಿ ಹಸಿದು ಬಂದರೆ
ವಿರಸದ ಕರಿಗಲ್ಲ ಎಡೆಯಿಟ್ಟು ಹಸಿದೆದೆಯನೇಕೆ ಕಾಡುವೆ?
ನಿನ್ನೋಲಿಮೆಮರದ ನೆರಳ ಬಯಸಿ ಬಸವಳಿದು ಬಂದರೆ
ನಲಿವಿನೆಲೆಗಳಿರದ ಬೋಳ್ಮರವಾಗಿ ಒಣಮನವನೇಕೆ ಸುಡುವೆ?

ತನ್ನೆಲ್ಲಾ ದುಮ್ಮಾನಗಳ ಗಂಟುಮೂಟೆಯ ಕ್ಷಣಕಾಲ ಕೆಳಗಿಳಿಸಿ
ಕುಪ್ಪಳಿಸಿ ಬಳಿಬಂದು ಲತೆಯಂತೆ ಬಿಗಿದಪ್ಪಿ, ಬೆರೆಯಬಾರದೆ?
ನೀನೆ ಕಲ್ಪಿಸಿ ಕಟ್ಟಿರುವ ಬೇಸರದ ಬೇಲಿಯ ಬುಡಕಡಿದುರುಳಿಸಿ
ಹಾರಿ ಬಂದು ಸೊಂಪಾದ ಎದೆಯೊಲವ ಹಸಿರ ಮೇಯಬಾರದೆ?

ಮಾತುಮಾತಿಗೂ ಮುತ್ತಿನ ಮುತ್ತಿಗೆಯಿಡುತಿದ್ದ ಆ ಗತವೈಭವವ
ಶಂಕೆಸಂಕೋಲೆಯ ಅಂಕೆಮುರಿದು ಪುನರ್ ಶಂಕುಸ್ಥಾಪಿಸಬಾರದೆ?
ನಿನಗೆಂದೇ ಮುಡಿಪಿರುವ ನನ್ನೆದೆಯಂತಃಪುರದ ಪೀಠವಾಕ್ರಮಿಸಲು
ಪ್ರೇಮರಥಕೆ ನಚ್ಚಿಕೆಯೆಂಬಶ್ವವವನೂಡಿ ಪ್ರಣಯದಾಳಿಗೈಯ್ಯಬಾರದೆ?