Wednesday, November 2, 2011

ಹೋಗು ಕವಿತೆಯೆ ಹೋಗು


ಹೋಗು ಕವಿತೆಯೆ ಹೋಗು
ನನ್ನವಳೆದೆಗೂಡಿಗೋಡೋಡಿ ಹೋಗು:
ಒಲವಿನ ಬರಿ ಮಾತಲಿ ಮಡಚಿಡಲಾಗದೆ ನರಳಿದ
ನಸು ನಾಚಿಕೆಯ ತಿಳಿನೀರಲಿ ತೇಲಿಬಿಟ್ಟು ಕೊರಗಿದ
ನನ್ನ ಗಂಡುಬುದ್ಧಿಯ ಗುಟ್ಟನ್ನೆಲ್ಲ ಅವಳಿಗೆ ರಟ್ಟು ಮಾಡಿ ಬಾ!
 ಹೋಗು ಕವಿತೆಯೆ ಹೋಗು!

ನನ್ನವಳ ಕಣ್ತುಂಬ ಕಂಡಾಗ ನನ್ನದೇ ಪ್ರತಿಬಿಂಬ
ಕ್ಷಣವೆ ಮೀನಾದ ಮನಸಿನ ತುಂಟಾಟದಾರಂಭ
ಜಿಗಿದು ಅವಳೊಡಲ ಜೇನ್ಗಡಲಿಗೆ ಹಾರಿ
ಗಾಳಿಗೆ ಲೋಕದ ಕಟ್ಟುಪಾಡುಗಳ ತೂರಿ
ಈಜಿದ ರಸಕ್ಷಣದ ಮಧುರಾನುಭವವ ಅವಳಿಗೆ ವಿವರಿಸಿ ಬಾ!
  ಹೋಗು ಕವಿತೆಯೆ ಹೋಗು!

ನನ್ನ ಬಿಗಿಯಪ್ಪುಗೆಯ ಬಂಧನದಲಿ ಬೆಂದು
ಪ್ರಥಮಚುಂಬನದ ಮಹಾಮತ್ತಿನಲಿ ಮಿಂದು
ಅವಳು ಮೈಮನ ಮರೆತು ಕರಗುತಿರುವಾಗ,
ಅವಳ ಹೂಮೈಗಂಟಿದೆನ್ನ ತುಂಟ ಕರಗಳು,
ಹಿಡಿದಾಡಿದ ಎಸಳುಗಳ ಪಟ್ಟಿಯನೊಮ್ಮೆ ಅವಳಿಗೆ ಕೊಟ್ಟು ಬಾ!
             ಹೋಗು ಕವಿತೆಯೆ ಹೋಗು!

ನಾ ಮಲಗಿದರೂ ಮಲಗದ ಮನಸು ಅಲೆಮಾರಿ
ರೂಢಿಯಂತೆ ಕನಸಿನ ಮಾಯಾಲೋಕಕೆ ಹಾರಿ
ಅವಳೊಡನೆ ನಟಿಸುವ ಸ್ವಪ್ನಮಂಟಪದಲಿ,
ಪ್ರತಿನಿತ್ಯ ಜರುಗುವ ಶೃಂಗಾರಲೀಲೆ ಪ್ರಸಂಗದ,
ಪ್ರತಿಯೊಂದು ಅಧ್ಯಾಯವ ಭಾವಾಭಿನಯ ಮಾಡಿ ತೋರಿಸಿ ಬಾ!
              ಹೋಗು ಕವಿತೆಯೆ ಹೋಗು!

ಅವಳ ವಿರಹದುರಿಗೆ ಜೇನ್ ತುಪ್ಪವ ಕುಡಿಸಿ
ತಿದ್ದಿರದ ಪ್ರಣಯದಾಹವ ಹದವಾಗಿ ಕುದಿಸಿ
ಹೆಣ್ ಸಹಜ ಲಜ್ಜೆಬಲೆಯಿಂದ ಮೆದುವಾಗಿ ಬಿಡಿಸಿ
ಈ ತಂಪಾದ ಬೆಳದಿಂಗಳಿರುಳ ಬೃಂದಾವನಕೆ,
ಬಿಂಕದಿ ಸಿಂಗರಿಸಿದೆನ್ನ ಮೈಡೊಂಕಿನ ವಯ್ಯಾರಿಯ ಕರೆದು ತಾ!
      ಹೋಗು ಕವಿತೆಯೆ ಹೋಗು!
   ನನ್ನವಳೆದೆಗೂಡಿಗೋಡೋಡಿ ಹೋಗು!