Thursday, August 27, 2009

ನಾನೇ ಬೇರೆ, ನನ್ನ ಇತಿಹಾಸವೇ ಬೇರೆ! ಭಾಗ-೧

ನನ್ನ ಪ್ರೈಮರಿ ವಿಧ್ಯಾಭ್ಯಾಸದ ಬಗ್ಗೆ ಒಂದಿಸ್ಟು ಮಾಹಿತಿ. ನಾನು ನನ್ನ ಪ್ರೈಮರಿ ವಿಧ್ಯಾಭ್ಯಾಸ ಮಾಡಿದ್ದೂ ನನ್ನ ಹುಟ್ಟುರಾದ ಗೌರಿಕೊಪ್ಪಲಿನಲ್ಲಿ, ಅದರ ಬಗ್ಗೆ ಈಗ ಕೂತು ಯೋಚನೆ ಮಾಡಿದ್ರೆ ನಗು ಬರ್ತದೆ ಹಾಗೂ ಆಶ್ಚರ್ಯ ಕೂಡ ಆಗ್ತದೆ. ನಾನು ಒಂದನೇ ತರಗತಿಯಿಂದ ನಾಲ್ಕನೆ ತರಗತಿಯಲ್ಲಿ ಮಾಡಿದ ಕೆಲವು ಗದ್ಲಗಳನ್ನು ಹೇಳ್ತೇನೆ ಕೇಳಿ.

ಒಂದು ದಿನ ನಾನು (೫ ವರ್ಷ) ಮತ್ತು ನನ್ನ ಅತ್ತೆಯ ಮಗ ಎತ್ತಿನ ಗಾಡಿಯ ಕೆಳಗೆ ಮಣ್ಣಿನಲ್ಲಿ ಮನೆ ಮಾಡಿಕೊಂಡು ಆಟವಾಡ್ತಾ ಇದ್ವಿ. ನಮ್ಮಪ್ಪ ಜಮೀನಿನಲ್ಲಿ ಕೆಲಸ ಮುಗ್ಸಿ, ನೇಗಿಲು ಒತ್ತ್ಕೊಂಡು ಬಂದ್ರು. ನಾನು ಮಣ್ಣಿನಲ್ಲಿ ಆಟವಾಡುತ್ತಿರುವುದನ್ನು ನೋಡಿ ತುಂಬ ಸಿಟ್ಟು ಬಂತು, ಏಕೆಂದರೆ ಅವಾಗ ನಂಗೆ ಕಾಲಿನಲ್ಲಿ ತುಂಬ ಗಾಯಗಳಿದ್ದವು, ಅವುಗಳು ಜೋರಗ್ತವೆ ಅಂಥ. ಹತ್ತಿರ ಬಂದು ಕೈಲಿದ್ದ ಗೆಡ್ಡಗೊಲಿನಿನ್ದ (ರೈತರು ಎತ್ತುಗಳಿಗೆ ಒಡೆಯಲು ಇಟ್ಟುಕೊಳ್ಳುವ ಬಿದಿರು ಮರದ ತುಂಡು) ಎರಡು ಕೊಟ್ಟು ಮನೆಗೆ ಕರೆದು ಕೊಂಡು ಹೋದರು.

ಮನೆಗೆ ಬಂದು ಅವ್ವಂಗೆ (ಅಮ್ಮ) ನನ್ನ ಮಣ್ಣಿನಲ್ಲಿ ಆಡಲಿಕ್ಕೆ ಬಿಟ್ಟಿದ್ದಕ್ಕೆ ಬೈಲಿಕ್ಕೆ ಶುರು ಮಾಡಿದರು. ಅವ್ವಂಗು ಸಿಟ್ಟು ಬಂದು "ನಾನು ಎಷ್ಟು ಹೇಳಿದ್ರು ಅವನು ಕೇಳಲ್ಲ, ಇಲ್ಲಿ ಕೆಲ್ಸ ಮಾಡೋದು ಬಿಟ್ಟು ಎಷ್ಟು ಹೊತ್ತು ಅಂಥ ಅವನ್ನ ನೋಡ್ತಾ ಕೂರಲಿ, ಅತ್ಲಾಗಿ ಇಸ್ಕೂಲಿಗದ್ರು (ಸ್ಕೂಲ್) ಸೇರಿಸಬಾರದ, ಅಲ್ಲಿ ಮೇಸ್ಟರಾದ್ರು ಮಣ್ಣಿಗೆ ಹೋಗದ ಹಾಗೆ ಸರಿಯಾಗಿ ನೋಡ್ಕೋತಾರೆ" ಅಂಥ ಹೇಳಿದ್ರು. ಆಗ ನಮ್ಮಪ್ಪಂಗೆ ನನ್ನ ಶಾಲೆಗೆ ಸೇರಿಸಬೇಕು ಎಂಬ ಜವಾಬ್ದಾರಿಯ ಅರಿವಾಯಿತು. ಈಗಾಗಿ ಮಣ್ಣಿನಲ್ಲಿ ಆಟವಾಡುವುದನ್ನು ತಡೆಯಲಿಕ್ಕೆ ನನ್ನ ಶಾಲೆಗೆ ಸೇರಿಸಿದರು. ಈ ನೆಪದಲ್ಲಿ ನನ್ನನ್ನು ಶಾಲೆಗೆ ಸೇರಿಸಲು ಪರೋಕ್ಷವಾಗಿ ನಾನೇ ಕಾರಣವಾಗಿದ್ದೆ - ನಾನು ನಾನೇ!.

ಆದೇ ಸಿಟ್ಟಲ್ಲಿ ನಮ್ಮಪ್ಪ, ತಕ್ಷಣ ನನ್ನ ಕರೆದು ಕೊಂಡು ಶಾಲೆಯ ಕಡೆ ಹೊರಟರು. ಆಗ ಅವರು ಜಮೀನಿನಲ್ಲಿ ಕೆಲಸ ಮಾಡಲಿಕ್ಕೆ ಹಾಕಿದ ಬಟ್ಟೆಯಲ್ಲೇ ಇದ್ದರು (ಬನಿಯನ್ ಅಂಡ್ ಪಟ್ಟೆ ಚಡ್ಡಿ ), ನಾನು ಒಂದು ಅಂಗಿ ಹಾಕಿಕೊಂಡಿದ್ದೆ, ಆದ್ರೆ ಚಡ್ಡಿ ಮಾತ್ರ ಇಲ್ಲಾ!. ಶಾಲೆಗೆ ಹೋದ ನಂತರದ ಸಂಭಾಷಣೆ
ಮೇಸ್ಟ್ರು : ಬನ್ನಿ ಗೌಡ್ರೆ, ಅಪರೂಪಕ್ಕೆ ಶಾಲೆ ಕಡೆ ಬಂದಿದ್ದಿರಿ, ಏನು ಸಮಾಚಾರ?
ಅಪ್ಪ: ಏನಿಲ್ಲ ಮೇಸ್ಟ್ರೆ, ಈಗೆ ನಮ್ಮ ಹುಡುಗನ್ನ ಶಾಲೆಗೆ ಸೇರಿಸುವ ಅಂಥ ಬಂದೆ.
ಮೇಸ್ಟ್ರು : ಯಾರು? ಇವನು, ಚಿಕ್ಕವನಲ್ಲಾ ಗೌಡ್ರೆ...?
ಅಪ್ಪ: ಇಲ್ಲಾ ಮೇಸ್ಟ್ರೆ, ಇವನಿಗೆ ಇಸ್ಕೂಲಿಗೆ ಸೇರುವ ವಯಸ್ಸಾಗಿದೇ, ಸ್ವಲ್ಪ ಕುಳ್ಳ, ನನ್ನ ಹಾಗೆ ಅಸ್ಟೇ.
ಮೇಸ್ಟ್ರು: ಬಾರೋ ಇಲ್ಲಿ, ನಿನ್ನ ಒಂದು ಕಡೆಯ ಕೈಯಿಂದ ಇನ್ನೊಂದು ಕಡೆಯ ಕಿವಿ ಇಡ್ಕೋ.
[ನಮ್ಮೂರಲ್ಲಿ ಒಬ್ಬ ಹುಡುಗ ಶಾಲೆಗೆ ಸೇರಲು eligible ಇದ್ದನೋ ಇಲ್ವೋ ಅಂಥ ತೀರ್ಮಾನ ಮಾಡಲು ಉಪಯೋಗಿಸುತಿದ್ದ ಮಾನದಂಡ, ಆದರೆ ನನ್ನ ಕಿವಿ ಮುಟ್ಟಲಿಕ್ಕೆ ನಂಗೆ ಆಗಲೇ ಇಲ್ಲಾ]
ಮೇಸ್ಟ್ರು: ನೋಡ್ರಿ ಗೌಡ್ರೆ, ಇವನಿಗೆ ಕಿವಿ ಮುಟ್ಟಲು ಆಗಲ್ಲ, ಇವನಿನ್ನೂ ಚಿಕ್ಕವನು ಗೌಡ್ರೆ
ಅಪ್ಪ: ಇಲ್ಲಾ ಮೇಸ್ಟ್ರೆ, ಹೇಳಿದನಲ್ಲಾ ಇವನು ಸ್ವಲ್ಪ ಕುಳ್ಳ ನನ್ನ ಹಾಗೆ, ವಯಸ್ಸಾಗಿದೆ ಇವನಿಗೆ
ಮೇಸ್ಟ್ರು: ಎಷ್ಟು ವಯಸ್ಸು ಇವನಿಗೆ?
ಅಪ್ಪ: ಒಂದು ಐದಾರು ವರ್ಷ ಆಗಿರಬೇಕು
ಮೇಸ್ಟ್ರು: ಹುಟ್ಟಿದ ದಿನಾಂಕ ಇಲ್ವಾ ಗೌಡ್ರೇ
ಅಪ್ಪ: ಯಾರಿಗೆ ಗೊತ್ತು ಮೇಸ್ಟ್ರೆ, ಅದೆಲ್ಲಾ ಯಾರು ನೆನಪಿನಲ್ಲಿ ಇಟ್ಕೋತಾರೆ
ಮೇಸ್ಟ್ರು: ರೂಲ್ಸ್ ಪ್ರಕಾರ ಇಷ್ಟು ಸಣ್ಣ ಹುಡುಗರನ್ನೆಲ್ಲಾ ಶಾಲೆಗೆ ಸೇರಿಸಿಕೊಂಡರೆ ನಮ್ಮನ್ನ ಜೈಲಿಗೆ ಹಾಕ್ತರೆ ಗೌಡ್ರೇ
ಅಪ್ಪ: ಅದೆಲ್ಲ ಗೊತ್ತಿಲ್ಲ ಮೇಸ್ಟ್ರೆ, ಸೇರಿಸಿಕೊಳ್ಳಲೇ ಬೇಕು, ಇವನನ್ನು ಮನೆಯಲ್ಲಿ ನೋಡ್ಕೊಳೋಕೆ ಕಷ್ಟ ಆಗ್ತಿದೆ
ಮೇಸ್ಟ್ರು: ಅದ್ರೂ
ಅಪ್ಪ (ಸಿಟ್ಟಲ್ಲಿ): ರೀ ಮೇಸ್ಟ್ರೆ ಸುಮ್ನೆ ಜಾಸ್ತಿ ಮಾತು ಬೇಡ, ಸುಮ್ನೆ ಸೇರಿಸ್ಕೊಳ್ಳಿ
[ನಮ್ಮಪ್ಪ ನಮ್ಮೊರಿನ ಗೌಡ್ರು, ಊರಲ್ಲಿ ಏನೇ ಜಗಳ ಅದರೂ ನಮ್ಮಪ್ಪನೆ ತೀರ್ಮಾನ ಮಾಡುತಿದ್ದುದು, ಹಾಗಾಗಿ ಯಾರು ತಿರುಗಿ ಹೇಳುತ್ತಿರಲಿಲ್ಲ]
ಮೇಸ್ಟ್ರು (ಹೆದರಿ): ಆಯಿತು ಗೌಡ್ರೇ, ಏನು ಹೆಸರು?
ಅಪ್ಪ: ತೋಟೆ ಗೌಡ
ಮೇಸ್ಟ್ರು: ಹುಟ್ಟಿದ ದಿನಾಂಕ?
ಅಪ್ಪ: ಗೊತ್ತಿಲ್ಲ ಅಂಥ ಹೇಳಿದನಲ್ಲ
ಮೇಸ್ಟ್ರು: ಇಲ್ಲಿ ಬರ್ಕೊಬೇಕು, ಒಂಚೂರು ಊಹೆ ಮಾಡಿ ಹೇಳಿ ಗೌಡ್ರೇ
ಅಪ್ಪ: ಇವನು ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬದ ನಡುವಿನ ದಿನಗಳಲ್ಲಿ ಹುಟ್ಟಿದ್ದು , ಅಲ್ಲಿ ಒಂದು ದಿನ ಗೊತ್ತು ಮಾಡಿ
ಮೇಸ್ಟ್ರು: ೪-೩-೮೩ ಅಂಥ ಬರೆಯಲಾ?
[ಈಗಾಗಿ ನನ್ನ ಹುಟ್ಟಿದ ದಿನಾಂಕವನ್ನು ನನ್ನ ಪ್ರೈಮರಿ ಶಾಲೆಯ ಮೇಸ್ಟ್ರು ತೀರ್ಮಾನಿಸಿದರು]
ಅಪ್ಪ: ಆಯಿತು ಬರೀರಿ
ಮೇಸ್ಟ್ರು: ಹೋಗೋ ತೋಟೆ ಗೌಡ, ಅಲ್ಲಿ ಮೊದಲನೆ ಮಣೆ ಮೇಲೆ ಕೂರು
ಅಪ್ಪ: ಏನಾದ್ರು ಹಣ ಕೊಡಬೇಕ ಮೇಸ್ಟ್ರೆ?
ಮೇಸ್ಟ್ರು: ಇಲ್ಲಾ ಗೌಡ್ರೇ, ನಿಮ್ಮ ಹತ್ರ ಹಣ ಹೇಗೆ ತಗೋಳೋದು.
[೧೨ರ ಸಮಯ ]
ಅಪ್ಪ: ಮತ್ತೆ ಊಟ ಮಾಡಲಿಕ್ಕೆ ಬರ್ತಿರಾ ಮೇಸ್ಟ್ರೆ, ಬಸ್ಸಾರು ಮತ್ತು ರಾಗಿ ಮುದ್ದೆ.
ಮೇಸ್ಟ್ರು: ಸರಿ ಗೌಡ್ರೇ, ಎಲ್ಲಾ ಊಟಕ್ಕೆ ಹೋಗಿ ಬನ್ನಿ ಮಕ್ಕಳೇ.
[ಕೂತು ಐದು ನಿಮಿಷ ಆಗಿಲ್ಲಾ, ಊಟದ ಸಮಯ. ತಂದೆ ಮತ್ತು ಮೇಸ್ಟ್ರು ಜೊತೆ ನಾನು ಕೂಡ ಊಟಕ್ಕೆ ಹೋದೆ]

ಮುಂದುವರೆಯುವುದು.....

4 comments:

 1. very true.. when you only are a unique character, your history has to be obviously different and interesting.. ;)

  ReplyDelete
 2. Great gowdre..... Hats Off to you.

  ReplyDelete
 3. Wow gowdre.. our next team trip should be to ur Place:) i would like to c ya school too:)

  ReplyDelete
 4. Thanks Anonymous and priya...
  And you are always welcome priya... I really want show my village to you all

  ReplyDelete