Saturday, August 29, 2009

ಭಾಗ - ೨ - ನನ್ನ ಮಾದರಿ ಪ್ರೈಮರಿ ಶಾಲೆಯ ಬಗ್ಗೆ ...

ಕಳೆದ article ನಲ್ಲಿ ನಾನು ಶಾಲೆಗೆ ಸೇರಿದ "ಮಿಸ್ಟರಿ" ಬಿಡಿಸಿ ತಿಳಿಸಿದ್ದೆ, ಇವತ್ತು ನನ್ನ ಶಾಲೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ನಮ್ಮದು ಒಂದೇ ಒಂದು ಕೂಣೆಯ ಶಾಲೆ. ಸುತ್ತ ಮುತ್ತ ಶಾಲೆಯೇ ಕಾಣದ ಹಾಗೆ ಬೆಳೆದಿದ್ದ ದೊಡ್ಡ ಕಳ್ಳಿ ಬೇಲಿ, ಆ ಬೇಲಿಯ ಸುತ್ತ ಊರಿನ ಎಮ್ಮೆಗಳೆನ್ನೆಲ್ಲ ಕಟ್ಟಿ ಹಾಕಿರುತಿದ್ದರು. ಯಾರಾದರು ಊರಿಗೆ ಹೊಸದಾಗಿ ಮೇಸ್ಟ್ರು ಬಂದರೆ ಅವರಿಗೆ ಶಾಲೆಗೆ ಹೋಗಲಿಕ್ಕೆ ದಾರಿ ಹುಡುಕೋದೇ ದೊಡ್ಡ ಕೆಲಸ. ದಾರಿಯಲ್ಲೆನಾದ್ರು ಎಮ್ಮೆ ನಿಂತಿದ್ದರಂತೂ ಹೊಳಗೆ ಹೋಗೋದು ಆಸಾದ್ಯ.

ಶಾಲೆಯ ಬಲ ಭಾಗಕ್ಕೆ ದೇವಿ ಮಂದಿರ (ಕಳ್ಳಬಟ್ಟಿ ಮಾರುವವರ ಮನೆ, ಆ ಸಮಯದಲ್ಲಿ ನಮ್ಮೂರಿನಲ್ಲಿ ಕಳ್ಳಬಟ್ಟಿ ಮಾರುವುದು "ಲೀಗಲ್ ಬಿಸಿನೆಸ್"), ಕುಡುಕರು ದೇವಿ ಪರವಶವಾಗಿ ಹೇಳುತಿದ್ದ ದೇವರ ಕೀರ್ತನೆಗಳೆಲ್ಲ ನಮಗೆ ಸರಿಯಾಗಿ ಕೆಳಿಸುತಿದ್ದವು. ಇನ್ನು ಎಡ ಭಾಗಕ್ಕೆ ಸ್ವಲ್ಪ ಬಯಲು ಮತ್ತು ಒಂದು ಕೆರೆ ಇತ್ತು, ಆದರೆ ಆ ಬಯಲು ನಮ್ಮೊರಿನ "ಪಬ್ಲಿಕ್ ಓಪನ್ ಟಾಯ್ಲೆಟ್" ಆಗಿತ್ತು. ಶಾಲೆಯ ಸುತ್ತ ಕಳ್ಳಿ ಬೇಲಿ ಇದ್ದುದರಿಂದ ಆ "ಓಪನ್ ವ್ಯೂ "ನಿಂದ ನಾವುಗಳು ವಂಚಿತರಾಗುತಿದ್ದೆವು. ಇನ್ನು ಶಾಲೆಯ ಎದುರುಗಡೆ ಒಂದು ಗುಡಿಸಲು ಮನೆ ಇತ್ತು, ಆದೂ ನಮ್ಮೊರಿನ ಪ್ರಸಿದ್ದ "ಕ್ಲಬ್", ಅಲ್ಲಿ ನಮ್ಮೊರಿನ ಶ್ರಮ ಜೀವಿಗಳೆಲ್ಲ ಕೂತು "ಇಸ್ಪೀಟು" ಆಟವಾದುತಿದ್ದರು, ಅವರುಗಳು ಒಂದರಿಂದ ಸಾವಿರಗಳ ತನಕ ಬೀಡಿಗಳನ್ನು ಬೆಟ್ಟಿಂಗ್ ಮಾಡಿ ಆಡುತ್ತಾ ಇದ್ದರು, ನಾವುಗಳು ಸಮಯ ಸಿಕ್ಕಾಗ ಆ ಶ್ರಮ ಜೀವಿಗಳಿಗೆ ಬೀಡಿ ತಂದುಕೊಡುವ ರೂಪದಲ್ಲಿ ಆ ಕ್ಲಬ್ ಗೇ ಅಳಿಲು ಸೇವೆ ಸಲ್ಲಿಸುತಿದ್ದೆವು. ನಮ್ಮ ಶಾಲೆ ಹಿಂದುಗಡೆ ತಿಪ್ಪೆ ಗಳ (ಹಳ್ಳಿಗಳಲ್ಲಿ ರೈತರು ದನಗಳ ಸಗಣಿ ಮತ್ತು ಕಸವನ್ನು ಹಾಕುವ ಗುಂಡಿಗಳು - ರಸ ಗೊಬ್ಬರ ತಯಾರು ಮಾಡುವ ಕೇಂದ್ರಗಳು)ಸಾಲು. ನಮ್ಮ ಶಾಲೆಯಲ್ಲಿ ಯಾವಾಗಲು ಸುವಾಸನೆ ಹರಿದಾದುತಿರುತಿತ್ತು, ಎಡಭಾಗದಿಂದ ಗಾಳಿ ಬೀಸಿದರೆ ಆ ಬಯಲಿನ (ಪಬ್ಲಿಕ್ ಓಪನ್ ಟಾಯ್ಲೆಟ್) ಸುವಾಸನೆ, ಬಲಗಡೆಯಿಂದ ಬೀಸಿದರೆ ದೇವಿ ಬಕ್ತರ ತೀರ್ಥದ ಸುವಾಸನೆ, ಹಿಂದುಗಡೆಯಿಂದ ಬೀಸಿದರೆ ತಿಪ್ಪೆಗಳಲ್ಲಿ ಕರಗಿ ಗೊಬ್ಬರವಾಗುತ್ತಿರುವ ಸಗಣಿಯ ಸುವಾಸನೆ. ಇದು ಸಾಲದೆಂಬಂತೆ ಶಾಲೆಯ ಸುತ್ತ ಕಟ್ಟಿದ ಎಮ್ಮೆಗಳು ಹಾಕುವ ತಾಜಾ ಗಂಜಲು ಮತ್ತು ಸಗಣಿಯ ಸುವಾಸನೆ.

ಇನ್ನು ಒಂದು ಕುತೂಹಲಕಾರಿ ವಿಚಾರ ಅಂದ್ರೆ, ನಮ್ಮೂರಿನಲ್ಲಿ ಯಾವುದೇ ಮದುವೇ ಅದರೂ ಅಂದು ನಮಗೆ ರಜಾ. ನಾವೆಲ್ಲ ಮದುವೆ ನೋಡಲಿ ಅಂಥ ಏನು ರಜಾ ಕೊಡ್ತಾ ಇರಲಿಲ್ಲಾ, ನಮ್ಮೂರಿನಲ್ಲಿ ಮದುವೆ ಗಂಡನ್ನು "ಬಿಡದಿ" (ಮದುವೆಯ ಹಿಂದನ ರಾತ್ರಿಯೇ ಮದುವೆಯ ಗಂಡು ಊರಿಗೆ ಬಂದು ಮದುವೆ ಮುಗಿಯುವವರೆಗೂ ಒಂದು ಬೇರೆ ಮನೆಯಲ್ಲಿ ಉಳಿದುಕೊಳ್ಳಬೇಕು, ಇದು ಒಂದು ಶಾಸ್ತ್ರ) ಬಿಡಲಿಕ್ಕೆ ನಮ್ಮ ಶಾಲೆಯನ್ನೇ ಉಪಯೋಗಿಸುತಿದ್ದರು, ಅದ್ದರಿಂದ ನಮಗೆ ಆ ದಿನ ಶಾಲೆಗೆ ರಜಾ. ಆದರೆ ಮದುವೆಯ ಮರು ದಿನ ನಾವುಗಳು ಬಂದು ಶಾಲೆಯನ್ನು ಸ್ವಚ್ಛ ಮಾಡಬೇಕಿತ್ತು, ಮದುವೆಯ ಬಿಟ್ಟಿ ಊಟಕ್ಕೆ ತೆರಬೇಕಾದ ದಂಡ.

ಇಸ್ಟೆಲ್ಲಾ ಅಲ್ಲದೆ ನಮ್ಮ ಶಾಲೆ ಒಂದು ಥರಾ ನಿರಾಶ್ರಿತರ ಶಿಬಿರ ಕೂಡ. ಆ ಸಮಯದಲ್ಲಿ ನಮ್ಮೋರಿಗೆ "ಹಕ್ಕಿಸಿಕ್ಕಾರು" ಬರುತಿದ್ದರು. ಹಕ್ಕಿಸಿಕ್ಕಾರು ಅಂದ್ರೆ ಆ ಸಮಯದಲ್ಲಿ ತೊಗಲುಗೊಂಬೆ ಆಟ ತೋರಿಸಲಿಕ್ಕೆ ಬರುತಿದ್ದವರು. ಇವರುಗಳು ತಿಂಗಳುಗಟ್ಟಲೆ ಊರಿನಲ್ಲಿ ಉಳಿದುಕೊಂಡು ಬಿಕ್ಷೆ ಮಾಡಿ ಜೀವನ ಮಾಡುತಿದ್ದರು, ಒಂದು ದಿನ ಊರಿನವರಿಗೆಲ್ಲ ತೊಗಲುಗೊಂಬೆ ಆಟ ತೋರಿಸುತಿದ್ದರು. ಇವರುಗಳ ವಾಸ್ತವ್ಯ ನಮ್ಮ ಶಾಲೆಯ ಜಗಲಿ ಮೇಲೆ, ಇವರುಗಳು ಎಲ್ಲಾ ಪಕ್ಷಿಗಳನ್ನು ಬೇಟೆ ಮಾಡಿ ತಂದು ತಿನ್ನುತಿದ್ದರು, ಅದಕ್ಕೋಸ್ಕರ ಇವರಿಗೆ ಹಕ್ಕಿಸಿಕ್ಕಾರು ಎಂದು ಕರೆಯುತಿದ್ದರು. ಇವರುಗಳ ಜೊತೆಗೆ ಊರಿಗೆ ಬರಿತಿದ್ದ ಎಲ್ಲಾ ಬಿಕ್ಶುಕರಿಗೂ ಇದೆ ವಾಸ ಸ್ತಳ.

ಇದೆಲ್ಲಾ ಶಾಲೆಯ ಹೊರಗಡೆಯ ವಾತಾವರಣದ ವಿವರಗಳಾದರೆ, ಇನ್ನು ಶಾಲೆಯ ಹೊಳಗಡೆ, ನಮ್ದು "ನಾವೆಲ್ಲರೂ ಒಂದೇ" ಎಂಬ ವಾಕ್ಯವನ್ನು ಚಾಚು ತಪ್ಪದೆ ಪಾಲಿಸುತಿದ್ದ ಶಾಲೆ. ಒಂದರಿನ ನಾಲ್ಕನೇ ತರಗತಿಯವರೆಗೂ ಸರಿ ಸುಮಾರು ೪೦-೫೦ ವಿಧ್ಯಾಥಿಗಳು ಇರುತಿದ್ದೆವು, ನಮಗೆಲ್ಲಾ ಒಬ್ಬರೇ ಮೇಸ್ಟ್ರು (ನಮ್ಮೂರಿನ ಶಾಲೆಯ ಇತಿಹಾಸದಲ್ಲಿ ಒಬ್ಬ ಮೇಡಂ ಕೂಡ ಬಂದಿಲ್ಲಾ!!!, ಯಾಕೆ ಅಂಥ ನಂತರ ಹೇಳ್ತೇನೆ), ನಾವೆಲ್ಲ ಒಂದೇ ಕೋಣೆಯಲ್ಲಿ ಕುಳಿತು ಕುಳಿತುಕೊಳ್ಳುತಿದ್ದೆವು, ನಮಗೆಲ್ಲಾ ಒಂದೇ ಪಾಠ. ಸರಳ ಜೀವನವನ್ನು ಚಿಕ್ಕ ವಯಸ್ಸಿನಲ್ಲೇ ಪಾಲಿಸುವಂತೆ ಮಾಡಿದ್ದರು, ಯಾವುದೇ ಕುರ್ಚಿ ಮೇಜಿನ ಆಡಂಬರ ಇರಲಿಲ್ಲಾ, ಮೇಸ್ಟ್ರಿಗೆ ಒಂದು ಕುರ್ಚಿ ಮತ್ತು ಒಂದು ಮೇಜು, ಜೊತೆ ಬಂದ ಅಥಿತಿಗಳಿಗೆ ಒಂದು ಮೇಜು ಇತ್ತು ಅಸ್ಟೆ, ನಾವುಗಳೆಲ್ಲ ನೆಲದ ಮೇಲೆ ಕೂರಬೇಕಿತ್ತು (ಸ್ವಲ್ಪ ಸಮಯದ ನಂತರ ಕೂರಲಿಕ್ಕೆ ಮಣೆಗಳನ್ನು ತರಿಸಿದರು ನಮ್ಮ ಮೇಸ್ಟ್ರು). ಜೊತೆಗೆ ಸರ್ವ ಧರ್ಮ ಪರಿ ಪಾಲಿಸಲೆಂದು ಯಾವುದೇ ಸಮವಸ್ತ್ರದ ಅಗತ್ಯ ಇರಲಿಲ್ಲಾ, ಜೈನ ಧರ್ಮ ಪಾಲಿಸುವವರಿಗೆ ಸಹಾಯ ಆಗಲೆಂದು ಚಡ್ಡಿ ಹಾಕುವ ಅಗತ್ಯ ಕೂಡ ಇರಲಿಲ್ಲಾ.

ಇನ್ನು ಶಾಲೆ ಬರುತಿದ್ದವರೆಲ್ಲ "ಪಾರ್ಟ್ ಟೈಮ್ ಜಾಬ್" ಮಾಡುತಿದ್ದವರೇ, ದನ, ಎಮ್ಮೆ ಕಾಯೋದು, ಮನೆಗೆ ಕೆರೆಯಿಂದ ನೀರು ತರುವುದು, ಅಪ್ಪಂಗೆ ಬೀಡಿ ತಂದು ಕೊಡೋದು, ಅವ್ವಂಗೆ ಎಲೆ-ಅಡಿಕೆ-ಕಡ್ಡಿಪುಡಿ ತಂದು ಕೊಡೋದು, ಜಮೀನಿನಲ್ಲಿ ಕೆಲಸ ಮಾಡುತ್ತಿರುವವರಿಗೆ ಊಟ ತಗೊಂಡು ಹೋಗೋದು, ದನಗಳಿಗೆ ನೀರು ಕುಡಿಸಿ, ಮೇವು ಹಾಕೋದು, ಕುಡುಕ ಅಪ್ಪಂದಿರಿಗೆ ದೇವಿ ಮಂದಿರದಿಂದ ದೇವಿ ತೀರ್ಥ ತಂದು ಕೊಡೋದು, "ಕ್ಲಬ್"ನಲ್ಲಿದ್ದ ಶ್ರಮ ಜೀವಿಗಳಿಗೆ ಬೆಟ್ಟಿಂಗ್ ಮಾಡಲಿಕ್ಕೆ, ಬೀಡಿ ತಂದು ಕೊಡೋದು, ದಾರಿಯಲ್ಲಿ ಬಿದ್ದಿದ್ದ ಸಗಣಿಯನ್ನು ತೆಗೆದು ತಿಪ್ಪೆಗೆ ಹಾಕೋದು, ಅಡುಗೆ ಮಾಡಲಿಕ್ಕೆ ಗುಡ್ಡಕ್ಕೆ ಹೋಗಿ ಸೌದೆ ತರುವುದು, ಇನ್ನು ಇತರೆ ಚಿಲ್ಲರೆ ಕೆಲಸಗಳನ್ನು ಮಾಡಲೇ ಬೇಕಿತ್ತು. ಹಾಗಾಗಿ ನಮ್ಮ ಶಾಲೆಯಲ್ಲಿ "flexible timing" ವ್ಯವಸ್ಥೆ ಇತ್ತು , ಯಾರು ಯಾವಾಗ ಬೇಕಾದರು ಬರಬಹುದಿತ್ತು, ಯಾವಾಗ ಬೇಕಾದ್ರೂ ಹೋಗಬಹುದಿತ್ತು, ಯಾರನ್ನು (ಮೇಸ್ಟ್ರನ್ನು ಕೂಡ) ಕೇಳುವ ಅಗತ್ಯ ಕೂಡ ಇರಲಿಲ್ಲಾ. ಹಾಗೂ ನಮ್ಮ ಅಪ್ಪ ಅವ್ವಂದಿರೆಲ್ಲ ಬೇಕಾದಾಗ ಬಂದು ನಮ್ಮನ್ನ ಕರೆದುಕೊಂಡು ಹೋಗುವ ಸೌಲಬ್ಯ ಕೂಡ ಇತ್ತು. ಹಾಗಾಗಿ ನಮ್ಮ ಶಾಲೆ ಶುರು ಆಗ್ತಾ ಇದ್ದದ್ದು ೧೧ ಅಥವಾ ೧೨ಕ್ಕೆ, ಊಟಕ್ಕೆ ೧ ಗಂಟೆಗೆ ಬಿಡುತಿದ್ದರು, ಮತ್ತೆ ಮಧ್ಯಾನದ ತರಗತಿಗಳು ಶುರು ಆಗ್ತಾ ಇದ್ದದ್ದು ೨.೩೦ - ೩ ಗಂಟೆಗೇ, ಕೊನೆಗೆ ೪ ಗಂಟೆಗೆ ತರಗತಿಗಳು ಮುಗಿಯುತ್ತ ಇದ್ದವು.

ನಮ್ಮೂರು ಹಳೆಬೀಡಿನಿಂದ ೫ ಕಿಮಿ, ಆ ಸಮಯದಲ್ಲಿ ಒಂದು ಬಂಡಿ ಗಾಡಿಯ ರಸ್ತೆ ಬಿಟ್ಟರೆ ಯಾವುದೇ ರಸ್ತೆ ಇರಲಿಲ್ಲ. ಎತ್ತಿನ ಬಂಡಿ ಬಿಟ್ಟು ಬೇರೆ ಯಾವುದೇ ವಾಹನ ಬರಲಿಕ್ಕೆ ಸಾಧ್ಯನೇ ಇರಲಿಲ್ಲ, ವಿಮಾನ ಹೊರೆತುಪಡಿಸಿ!. ನಮ್ಮೋರಿಗೆ ಮೇಸ್ಟ್ರು ನಡೆದುಕೊಂಡು ಅಥವಾ ಸೈಕಲ್ ಮೇಲೆ ಬರಬೇಕಿತ್ತು. ಅದಕ್ಕೆ ಯಾರಾದರು ಮೇಡಂಗೆ ನಮ್ಮೋರಿಗೆ ವರ್ಗಾವಣೆ ಆದರೆ ಅವರುಗಳು ಕೆಲಸ ಬಿಟ್ಟು ಹೋಗುತಿದ್ದರು ಅಥವಾ ಬೇರೆ ಕಡೆಗೆ ವರ್ಗಾವಣೆ ಮಾಡಿಕೊಂಡು ಹೋಗುತಿದ್ದಾರೆ ಹೊರೆತು ನಮ್ಮೋರಿಗೆ ಬರುತ್ತಿರಲಿಲ್ಲ. ಶಿಕ್ಷಕರು ಬೆಳಗ್ಗೆ ಎಷ್ಟು ಬೇಗ ಮನೆ ಬಿಟ್ಟರು ಶಾಲೆ ತಲುಪುತಿದ್ದದ್ದು ೧೧-೧೨ರ ಸುಮಾರು, ಜೊತೆಗೆ ಕತ್ತಲೆಯಲ್ಲಿ ಕಾಡಿನೊಳಗೆ ನಡೆದುಕೊಂಡು ಹೋಗಲು ಹೆದರಿ ೪ ಗಂಟೆಗೆ ಶಾಲೆ ಮುಗಿಸಿ ಹೋಗುತಿದ್ದರು.

ಇವತ್ತಿಗೆ ಇಷ್ಟು ಸಾಕು, ಮುಂದಿನ article ನಲ್ಲಿ ಮೇಸ್ಟ್ರು ಏನೇನು ಕಲಿಸುತಿದ್ದರು ಹಾಗೂ ನಾವುಗಳು ಹೇಗೆ ಉತೀರ್ಣರಾಗುತಿದ್ದೆವು ಎಂಬುದರ ಬಗ್ಗೆ ತಿಳಿಸಿ ಹೇಳುತ್ತೇನೆ.

ಪ್ರೀತಿಯಿಂದಾ
ಗೌಡ

Thursday, August 27, 2009

ನಾನೇ ಬೇರೆ, ನನ್ನ ಇತಿಹಾಸವೇ ಬೇರೆ! ಭಾಗ-೧

ನನ್ನ ಪ್ರೈಮರಿ ವಿಧ್ಯಾಭ್ಯಾಸದ ಬಗ್ಗೆ ಒಂದಿಸ್ಟು ಮಾಹಿತಿ. ನಾನು ನನ್ನ ಪ್ರೈಮರಿ ವಿಧ್ಯಾಭ್ಯಾಸ ಮಾಡಿದ್ದೂ ನನ್ನ ಹುಟ್ಟುರಾದ ಗೌರಿಕೊಪ್ಪಲಿನಲ್ಲಿ, ಅದರ ಬಗ್ಗೆ ಈಗ ಕೂತು ಯೋಚನೆ ಮಾಡಿದ್ರೆ ನಗು ಬರ್ತದೆ ಹಾಗೂ ಆಶ್ಚರ್ಯ ಕೂಡ ಆಗ್ತದೆ. ನಾನು ಒಂದನೇ ತರಗತಿಯಿಂದ ನಾಲ್ಕನೆ ತರಗತಿಯಲ್ಲಿ ಮಾಡಿದ ಕೆಲವು ಗದ್ಲಗಳನ್ನು ಹೇಳ್ತೇನೆ ಕೇಳಿ.

ಒಂದು ದಿನ ನಾನು (೫ ವರ್ಷ) ಮತ್ತು ನನ್ನ ಅತ್ತೆಯ ಮಗ ಎತ್ತಿನ ಗಾಡಿಯ ಕೆಳಗೆ ಮಣ್ಣಿನಲ್ಲಿ ಮನೆ ಮಾಡಿಕೊಂಡು ಆಟವಾಡ್ತಾ ಇದ್ವಿ. ನಮ್ಮಪ್ಪ ಜಮೀನಿನಲ್ಲಿ ಕೆಲಸ ಮುಗ್ಸಿ, ನೇಗಿಲು ಒತ್ತ್ಕೊಂಡು ಬಂದ್ರು. ನಾನು ಮಣ್ಣಿನಲ್ಲಿ ಆಟವಾಡುತ್ತಿರುವುದನ್ನು ನೋಡಿ ತುಂಬ ಸಿಟ್ಟು ಬಂತು, ಏಕೆಂದರೆ ಅವಾಗ ನಂಗೆ ಕಾಲಿನಲ್ಲಿ ತುಂಬ ಗಾಯಗಳಿದ್ದವು, ಅವುಗಳು ಜೋರಗ್ತವೆ ಅಂಥ. ಹತ್ತಿರ ಬಂದು ಕೈಲಿದ್ದ ಗೆಡ್ಡಗೊಲಿನಿನ್ದ (ರೈತರು ಎತ್ತುಗಳಿಗೆ ಒಡೆಯಲು ಇಟ್ಟುಕೊಳ್ಳುವ ಬಿದಿರು ಮರದ ತುಂಡು) ಎರಡು ಕೊಟ್ಟು ಮನೆಗೆ ಕರೆದು ಕೊಂಡು ಹೋದರು.

ಮನೆಗೆ ಬಂದು ಅವ್ವಂಗೆ (ಅಮ್ಮ) ನನ್ನ ಮಣ್ಣಿನಲ್ಲಿ ಆಡಲಿಕ್ಕೆ ಬಿಟ್ಟಿದ್ದಕ್ಕೆ ಬೈಲಿಕ್ಕೆ ಶುರು ಮಾಡಿದರು. ಅವ್ವಂಗು ಸಿಟ್ಟು ಬಂದು "ನಾನು ಎಷ್ಟು ಹೇಳಿದ್ರು ಅವನು ಕೇಳಲ್ಲ, ಇಲ್ಲಿ ಕೆಲ್ಸ ಮಾಡೋದು ಬಿಟ್ಟು ಎಷ್ಟು ಹೊತ್ತು ಅಂಥ ಅವನ್ನ ನೋಡ್ತಾ ಕೂರಲಿ, ಅತ್ಲಾಗಿ ಇಸ್ಕೂಲಿಗದ್ರು (ಸ್ಕೂಲ್) ಸೇರಿಸಬಾರದ, ಅಲ್ಲಿ ಮೇಸ್ಟರಾದ್ರು ಮಣ್ಣಿಗೆ ಹೋಗದ ಹಾಗೆ ಸರಿಯಾಗಿ ನೋಡ್ಕೋತಾರೆ" ಅಂಥ ಹೇಳಿದ್ರು. ಆಗ ನಮ್ಮಪ್ಪಂಗೆ ನನ್ನ ಶಾಲೆಗೆ ಸೇರಿಸಬೇಕು ಎಂಬ ಜವಾಬ್ದಾರಿಯ ಅರಿವಾಯಿತು. ಈಗಾಗಿ ಮಣ್ಣಿನಲ್ಲಿ ಆಟವಾಡುವುದನ್ನು ತಡೆಯಲಿಕ್ಕೆ ನನ್ನ ಶಾಲೆಗೆ ಸೇರಿಸಿದರು. ಈ ನೆಪದಲ್ಲಿ ನನ್ನನ್ನು ಶಾಲೆಗೆ ಸೇರಿಸಲು ಪರೋಕ್ಷವಾಗಿ ನಾನೇ ಕಾರಣವಾಗಿದ್ದೆ - ನಾನು ನಾನೇ!.

ಆದೇ ಸಿಟ್ಟಲ್ಲಿ ನಮ್ಮಪ್ಪ, ತಕ್ಷಣ ನನ್ನ ಕರೆದು ಕೊಂಡು ಶಾಲೆಯ ಕಡೆ ಹೊರಟರು. ಆಗ ಅವರು ಜಮೀನಿನಲ್ಲಿ ಕೆಲಸ ಮಾಡಲಿಕ್ಕೆ ಹಾಕಿದ ಬಟ್ಟೆಯಲ್ಲೇ ಇದ್ದರು (ಬನಿಯನ್ ಅಂಡ್ ಪಟ್ಟೆ ಚಡ್ಡಿ ), ನಾನು ಒಂದು ಅಂಗಿ ಹಾಕಿಕೊಂಡಿದ್ದೆ, ಆದ್ರೆ ಚಡ್ಡಿ ಮಾತ್ರ ಇಲ್ಲಾ!. ಶಾಲೆಗೆ ಹೋದ ನಂತರದ ಸಂಭಾಷಣೆ
ಮೇಸ್ಟ್ರು : ಬನ್ನಿ ಗೌಡ್ರೆ, ಅಪರೂಪಕ್ಕೆ ಶಾಲೆ ಕಡೆ ಬಂದಿದ್ದಿರಿ, ಏನು ಸಮಾಚಾರ?
ಅಪ್ಪ: ಏನಿಲ್ಲ ಮೇಸ್ಟ್ರೆ, ಈಗೆ ನಮ್ಮ ಹುಡುಗನ್ನ ಶಾಲೆಗೆ ಸೇರಿಸುವ ಅಂಥ ಬಂದೆ.
ಮೇಸ್ಟ್ರು : ಯಾರು? ಇವನು, ಚಿಕ್ಕವನಲ್ಲಾ ಗೌಡ್ರೆ...?
ಅಪ್ಪ: ಇಲ್ಲಾ ಮೇಸ್ಟ್ರೆ, ಇವನಿಗೆ ಇಸ್ಕೂಲಿಗೆ ಸೇರುವ ವಯಸ್ಸಾಗಿದೇ, ಸ್ವಲ್ಪ ಕುಳ್ಳ, ನನ್ನ ಹಾಗೆ ಅಸ್ಟೇ.
ಮೇಸ್ಟ್ರು: ಬಾರೋ ಇಲ್ಲಿ, ನಿನ್ನ ಒಂದು ಕಡೆಯ ಕೈಯಿಂದ ಇನ್ನೊಂದು ಕಡೆಯ ಕಿವಿ ಇಡ್ಕೋ.
[ನಮ್ಮೂರಲ್ಲಿ ಒಬ್ಬ ಹುಡುಗ ಶಾಲೆಗೆ ಸೇರಲು eligible ಇದ್ದನೋ ಇಲ್ವೋ ಅಂಥ ತೀರ್ಮಾನ ಮಾಡಲು ಉಪಯೋಗಿಸುತಿದ್ದ ಮಾನದಂಡ, ಆದರೆ ನನ್ನ ಕಿವಿ ಮುಟ್ಟಲಿಕ್ಕೆ ನಂಗೆ ಆಗಲೇ ಇಲ್ಲಾ]
ಮೇಸ್ಟ್ರು: ನೋಡ್ರಿ ಗೌಡ್ರೆ, ಇವನಿಗೆ ಕಿವಿ ಮುಟ್ಟಲು ಆಗಲ್ಲ, ಇವನಿನ್ನೂ ಚಿಕ್ಕವನು ಗೌಡ್ರೆ
ಅಪ್ಪ: ಇಲ್ಲಾ ಮೇಸ್ಟ್ರೆ, ಹೇಳಿದನಲ್ಲಾ ಇವನು ಸ್ವಲ್ಪ ಕುಳ್ಳ ನನ್ನ ಹಾಗೆ, ವಯಸ್ಸಾಗಿದೆ ಇವನಿಗೆ
ಮೇಸ್ಟ್ರು: ಎಷ್ಟು ವಯಸ್ಸು ಇವನಿಗೆ?
ಅಪ್ಪ: ಒಂದು ಐದಾರು ವರ್ಷ ಆಗಿರಬೇಕು
ಮೇಸ್ಟ್ರು: ಹುಟ್ಟಿದ ದಿನಾಂಕ ಇಲ್ವಾ ಗೌಡ್ರೇ
ಅಪ್ಪ: ಯಾರಿಗೆ ಗೊತ್ತು ಮೇಸ್ಟ್ರೆ, ಅದೆಲ್ಲಾ ಯಾರು ನೆನಪಿನಲ್ಲಿ ಇಟ್ಕೋತಾರೆ
ಮೇಸ್ಟ್ರು: ರೂಲ್ಸ್ ಪ್ರಕಾರ ಇಷ್ಟು ಸಣ್ಣ ಹುಡುಗರನ್ನೆಲ್ಲಾ ಶಾಲೆಗೆ ಸೇರಿಸಿಕೊಂಡರೆ ನಮ್ಮನ್ನ ಜೈಲಿಗೆ ಹಾಕ್ತರೆ ಗೌಡ್ರೇ
ಅಪ್ಪ: ಅದೆಲ್ಲ ಗೊತ್ತಿಲ್ಲ ಮೇಸ್ಟ್ರೆ, ಸೇರಿಸಿಕೊಳ್ಳಲೇ ಬೇಕು, ಇವನನ್ನು ಮನೆಯಲ್ಲಿ ನೋಡ್ಕೊಳೋಕೆ ಕಷ್ಟ ಆಗ್ತಿದೆ
ಮೇಸ್ಟ್ರು: ಅದ್ರೂ
ಅಪ್ಪ (ಸಿಟ್ಟಲ್ಲಿ): ರೀ ಮೇಸ್ಟ್ರೆ ಸುಮ್ನೆ ಜಾಸ್ತಿ ಮಾತು ಬೇಡ, ಸುಮ್ನೆ ಸೇರಿಸ್ಕೊಳ್ಳಿ
[ನಮ್ಮಪ್ಪ ನಮ್ಮೊರಿನ ಗೌಡ್ರು, ಊರಲ್ಲಿ ಏನೇ ಜಗಳ ಅದರೂ ನಮ್ಮಪ್ಪನೆ ತೀರ್ಮಾನ ಮಾಡುತಿದ್ದುದು, ಹಾಗಾಗಿ ಯಾರು ತಿರುಗಿ ಹೇಳುತ್ತಿರಲಿಲ್ಲ]
ಮೇಸ್ಟ್ರು (ಹೆದರಿ): ಆಯಿತು ಗೌಡ್ರೇ, ಏನು ಹೆಸರು?
ಅಪ್ಪ: ತೋಟೆ ಗೌಡ
ಮೇಸ್ಟ್ರು: ಹುಟ್ಟಿದ ದಿನಾಂಕ?
ಅಪ್ಪ: ಗೊತ್ತಿಲ್ಲ ಅಂಥ ಹೇಳಿದನಲ್ಲ
ಮೇಸ್ಟ್ರು: ಇಲ್ಲಿ ಬರ್ಕೊಬೇಕು, ಒಂಚೂರು ಊಹೆ ಮಾಡಿ ಹೇಳಿ ಗೌಡ್ರೇ
ಅಪ್ಪ: ಇವನು ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬದ ನಡುವಿನ ದಿನಗಳಲ್ಲಿ ಹುಟ್ಟಿದ್ದು , ಅಲ್ಲಿ ಒಂದು ದಿನ ಗೊತ್ತು ಮಾಡಿ
ಮೇಸ್ಟ್ರು: ೪-೩-೮೩ ಅಂಥ ಬರೆಯಲಾ?
[ಈಗಾಗಿ ನನ್ನ ಹುಟ್ಟಿದ ದಿನಾಂಕವನ್ನು ನನ್ನ ಪ್ರೈಮರಿ ಶಾಲೆಯ ಮೇಸ್ಟ್ರು ತೀರ್ಮಾನಿಸಿದರು]
ಅಪ್ಪ: ಆಯಿತು ಬರೀರಿ
ಮೇಸ್ಟ್ರು: ಹೋಗೋ ತೋಟೆ ಗೌಡ, ಅಲ್ಲಿ ಮೊದಲನೆ ಮಣೆ ಮೇಲೆ ಕೂರು
ಅಪ್ಪ: ಏನಾದ್ರು ಹಣ ಕೊಡಬೇಕ ಮೇಸ್ಟ್ರೆ?
ಮೇಸ್ಟ್ರು: ಇಲ್ಲಾ ಗೌಡ್ರೇ, ನಿಮ್ಮ ಹತ್ರ ಹಣ ಹೇಗೆ ತಗೋಳೋದು.
[೧೨ರ ಸಮಯ ]
ಅಪ್ಪ: ಮತ್ತೆ ಊಟ ಮಾಡಲಿಕ್ಕೆ ಬರ್ತಿರಾ ಮೇಸ್ಟ್ರೆ, ಬಸ್ಸಾರು ಮತ್ತು ರಾಗಿ ಮುದ್ದೆ.
ಮೇಸ್ಟ್ರು: ಸರಿ ಗೌಡ್ರೇ, ಎಲ್ಲಾ ಊಟಕ್ಕೆ ಹೋಗಿ ಬನ್ನಿ ಮಕ್ಕಳೇ.
[ಕೂತು ಐದು ನಿಮಿಷ ಆಗಿಲ್ಲಾ, ಊಟದ ಸಮಯ. ತಂದೆ ಮತ್ತು ಮೇಸ್ಟ್ರು ಜೊತೆ ನಾನು ಕೂಡ ಊಟಕ್ಕೆ ಹೋದೆ]

ಮುಂದುವರೆಯುವುದು.....

Sunday, August 23, 2009

"College Life is Golden Life" ಅನ್ನೋದು ಎಷ್ಟು ಸರಿ?

ಕಾಲೇಜಿಗೆ ಬರುವ ತುಂಬಾ ಹುಡುಗರೂ (ಮತ್ತು ಹುಡುಗಿಯರೂ) ಅಪ್ಪ/ಅಮ್ಮ ಅಣ್ಣ/ತಮ್ಮ ಅಕ್ಕ/ತಂಗಿ ಯರನ್ನೆಲ್ಲ ಬಿಟ್ಟು ಬೇರೊಂದು ಊರಿಗೆ ಬಂದು ಹಾಸ್ಟೆಲ್ ಅಥವಾ ರೂಮ್ ಮಾಡಿಕೊಂಡು ಜೀವನ ಮಾಡ್ಲಿಕ್ಕೆ ಶುರು ಮಾಡ್ತಾರೆ.

ಹೊಸ ಜಾಗ, ಹೊಸ ಜನ, ಹೊಸ ಪರಿಸರ ಅದಕ್ಕೆಲ್ಲಾ ಹೊಂದಿಕೊಂಡು ಹೋಗಲೇ ಬೇಕು. ಮನೆಯಲ್ಲಿ ಇದ್ದಾಗ ಸಿಕ್ಕಿದ, ವಾತ್ಸಲ್ಯಕ್ಕೆ ಅಮ್ಮ, ಬುದ್ದಿವಾದಕ್ಕೆ ಅಪ್ಪ, ಪ್ರೀತಿಸಲಿಕ್ಕೆ ಅಕ್ಕ/ಅಣ್ಣ, ಜಗಳವಾಡಲಿಕ್ಕೆ ತಂಗಿ/ತಮ್ಮ, ಹಬ್ಬದೂಟ, ಬಿಟ್ಟಿ ಕೂಳಿಗೆ ಬರುವ ನೆಂಟರು, ಹುಟ್ಟಿ ಬೆಳೆದ ಊರು, ಚಡ್ಡಿ ದೊಸ್ತಗಳು ಎಲ್ಲಾ ನೆನಪಿಗೆ ಬರಲಿಕ್ಕೆ ಶುರು ಆಗ್ತದೆ. ಇದೆಲ್ಲಾದರು ಮಹತ್ವ ನಮಗೆ ಅದನ್ನು ಕಳೆದುಕೊಳ್ಳುವರೆಗೂ ಗೊತ್ತಾಗುವುದಿಲ್ಲ. ಆದರೆ ಒಮ್ಮೆ ಊರು, ಮನೆ ಬಿಟ್ಟು ಬೇರೆ ಊರಿಗೆ ಬಂದಾಗ ನೆನಪಾಗಿ ಕಾಡಲಿಕ್ಕೆ ಶುರು ಮಾಡ್ತದೆ.

ಅಮ್ಮನ ಬಗೆ ಬಗೆಯ ಊಟ ತಿಂದು ಅಭ್ಯಾಸ ಇರೋದ್ರಿಂದ, ಹಾಸ್ಟೆಲ್ ಊಟ ಒಳಗೆ ನೂಕಿದರು ಹೊರಗೆ ಬರ್ತಿರುತ್ತೆ. ಕಾಲೇಜ್ ಕ್ಯಾಂಟೀನ್ನಲ್ಲಿ ಒಂದು ಕಾಫಿ ಕೇಳಿದರೆ ಅರ್ದ ಕೊಡ್ತಾರೆ, ಅದರಲ್ಲಿ ಬಯ್/ಟು ಮಾಡಿಕೊಂಡು ಕುಡಿಯೋದು. ಹೋಟೆಲ್/ಹಾಸ್ಟೆಲ್ ಊಟ ತಿಂದು ತಿಂದು, ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಮುಂದೆ ಬರಲಿಕ್ಕೆ ಶುರು ಮಾಡ್ತದೆ.

ಒಂದು ಚಿಕ್ಕ ಜ್ವರ ಅಥವಾ ತಲೆ ನೋವು ಬಂದಾಗ, ಹಾಸಿಗೆ ಹಾಸಿ ಮಲಗಿಸಲಿಕ್ಕೆ ಅಪ್ಪ ಇರಲ್ಲಾ, ರೋಗ ಗುಣಮುಖವಾಗಲಿಕ್ಕೆ ಬೇಕಾದ ಆಡುಗೆ ಮಡಿ ತಿನ್ನಸಲಿಕ್ಕೆ ಅಮ್ಮ ಇರಲ್ಲಾ, ಮಾತ್ರೆಗಳನ್ನು ಬಿಸಿ ನೀರಿನೊಂದಿಗೆ ಮರೆಯದೆ ಕೊಡಲಿಕ್ಕೆ ಅಕ್ಕ/ತಂಗಿ ಇರೋದಿಲ್ಲ. ಒಂದೆರಡು ದಿನಗಳಲಿ ಬಿಟ್ಟು ಹೋಗಬೇಕಾದ ಜ್ವರ, ಶೀತ, ತಲೆನೋವು ವಾರಗಟ್ಟಲೆ ತೊಂದರೆ ಕೊಡಲಿಕ್ಕೆ ಶುರು ಮಾಡುತ್ತವೆ. ಎಸ್ಟೇ ಕಷ್ಟ ಇದ್ದರು ನಾವೇ ಆಸ್ಪತ್ರೆಗೆ ಹೋಗಬೇಕು, ಹೋಟೆಲ್ ಹುಡಿಕಿಕೊಂಡು ಹೋಗಿ, ತಂಗಳು ಕೊಟ್ಟರು ತಿಂದು, ಮರೆಯದೆ ಮಾತ್ರೆ ನುಂಗಿ, ಬಂದು ಹಾಸಿಗೆ ಹಾಸಿಕೊಂಡು ಮಲಗಬೇಕು. ಇದನ್ನೆಲ್ಲಾ ಕಷ್ಟ ಪಟ್ಟು ಮಾಡಬಹುದು, ಕೆಲವೊಮ್ಮೆ ಸ್ನೇಹಿತರು ಕೂಡ ತುಂಬಾ ಸಹಾಯ ಮಾಡುತ್ತಾರೆ. ಆದರೆ ತನ್ನ ನೋವನ್ನು ಕೇಳಲಿಕ್ಕೆ ಯಾರು ಕೂಡ ಇರೋದಿಲ್ಲ. ಮನೆಯಲ್ಲಾದರೆ ಅಮ್ಮನ ಕೂಗಿ ಹೇಳಿದರೆ ಸಾಕು, ಏನೂ ಮಾಡದಿದ್ದರೂ ಹತ್ತಿರ ಬಂದು ಪ್ರೀತಿಯಿಂದ ತಲೆ ನೇವರಿಸುತ್ತಾ " ಏನಾಗ್ತಿದಿಯೋ ಪುಟ್ಟ" ಅಂಥ ಕೇಳಿದ್ರೆ ಸಾಕು ಏನೇ ಜ್ವರ ಇದ್ರೂ ಓಡಿ ಹೋಗಿರುತ್ತೆ. ಅಕ್ಕ/ತಂಗಿ ಬಂದು ಪಕ್ಕ ಕುಳಿತು ಮತಾಡಿಸುತಿದ್ದರೆ ಜ್ವರ ಇರುವುದೇ ಮರೆತು ಹೋಗಿರುತ್ತೆ. ಆದರೆ ಹಾಸ್ಟೆಲ್ ರೂಮ್ನಲ್ಲಿ ಕೂತು ಒಬ್ಬನೇ ಕೊರಗಬೇಕೆ ಹೊರೆತು, ಕೇಳಲಿಕ್ಕೆ ಯಾರು ಇರುವುದಿಲ್ಲ.

ಶನಿವಾರ/ಭಾನುವಾರ ಬಂತೆಂದರೆ ಸಾಕು ಬಟ್ಟೆಗಳನ್ನು ತೊಳೆಯೋದು ಒಂದು ದೊಡ್ಡ ಚಿಂತೆ. ಬಟ್ಟೆಗಳನ್ನು ತೊಳೆದುಕೊಳ್ಳುವುದಕ್ಕೆ ಕುಳಿತಾಗ ಅಮ್ಮನ ನೆನಪಾಗದೆ ಇರುವುದಕ್ಕೆ ಸಾದ್ಯನೇ ಇಲ್ಲ, ಅದಕ್ಕೆ "ಜೀನ್ಸ್ ಪ್ಯಾಂಟ್"ಗಳನ್ನೂ ತಗೊಂಡು ತಿಂಗಳಿಗೊಮ್ಮೆ ತೊಳೆಯುವ ಅಭ್ಯಾಸ ನಮಗೆ ಗೊತ್ತಿಲ್ಲದೆ ರೂಡಿಯಾಗಿ ಬಿಡುತ್ತೆ. ಶರ್ಟ್ ಗಳನ್ನೆಲ್ಲ ತೊಳೆದು, ಇಸ್ತ್ರಿ ಮಾಡಲು ಕಷ್ಟ ಆಗಿ, ಇಸ್ತ್ರಿನೇ ಬೇಕಾಗಿಲ್ಲದ ಟಿ-ಶರ್ಟ್ ಹಾಕಲಿಕ್ಕೆ ಶುರು ಮಾಡೋದು. ಇದನ್ನು ನೆಪಕ್ಕೆ "ಟ್ರೆಂಡ್" ಅಥವಾ "ಫ್ಯಾಷನ್" ಎಂದು ಹೇಳಲಿಕ್ಕೆ ಶುರು ಮಾಡೋದು.

ಪ್ರೊಫೆಸರ್ ಗಳು ಉಪನ್ಯಾಸ ಮಾಡುತ್ತಿರುವಾಗ ಕೈಯಿಂದ ಕಣ್ಣುಗಳನ್ನು ತೆರೆಯಲಿಕ್ಕೆ ಪ್ರಯತ್ನ ಮಾಡಿದಸ್ಟು ಜೋರಾಗಿ ಮುಚ್ಚಿಕೊಳ್ಳುತ್ತವೆ.ಒಂದರಿಂದೆ ಒಂದು "internals/exam" ಬರುತ್ತೆ, ಅದರಲ್ಲಿ "average" ತೆಗೆಲಿಕ್ಕೆ ಪಡುವ ಕಷ್ಟ ಏಳಲಿಕ್ಕೆ ತೀರದು. internals/ lab-exam ನಲ್ಲಿ ಒಳ್ಳೆ ಅಂಕ ಕೊಡಲಿ ಅನ್ನೋ ಆಸೆಗೆ ಮುಟ್ಟಾಳ ಉಪನ್ಯಾಸಕರಿಗೆಲ್ಲ "ಬಕೆಟ್" ಹಿಡಿಯುವ ಕೆಲಸ ಮಾಡಲೇಬೇಕು. ಜೊತೆಗೆ "campus selection" ಅನ್ನೋ ಪೆಡಂಬೂತ ಬಂದು ಕೆಲಸದ ಬಗ್ಗೆ ಚಿಂತೆ ಮಾಡುವ ಹಾಗೆ ಮಾಡ್ತದೆ.

ಅಸ್ಟೋಂದೆಲ್ಲಾ "miss" ಮಾಡ್ಕೊಂಡು, ಕಷ್ಟ ಪಟ್ಟು ಮಾಡೋ ಜೀವನಕ್ಕೆ "Golden Life" ಅಂತಾರೆ, ಇದು ಸರೀನಾ? ನೀವೇ ಹೇಳಿ..

Friday, August 21, 2009

ಕನ್ನಡವನ್ನು ಮರೆತು ಹೊಗುತಿದ್ದೇನಾ?

ನಿಜ ಹೇಳಬೇಕು ಅಂದ್ರೆ ನಂಗೆ ನೆಟ್ಟಗೆ ಬರೋದು ಒಂದೇ ಒಂದು ಭಾಷೆ, ಅದು ಕನ್ನಡ. ಅಲ್ಪ ಸ್ವಲ್ಪ ಅಂಗ್ಲ ಮತ್ತು ಹಿಂದಿ ಭಾಷೆಗಳು ಬರುತ್ತವೆ, ಆದರೆ ನಿರರ್ಗಳವಾಗಿ ಮಾತನಾಡಲಿಕ್ಕೆ ಬರೋದು ಕನ್ನಡದಲ್ಲಿ ಮಾತ್ರ. ಕಾರಣ ಅದು ನನ್ನ ಮಾತೃ ಭಾಷೆ, ನನ್ನ ಅಪ್ಪ ಅಮ್ಮ ಕಲಿಸಿದ ಭಾಷೆ.

ಆದರೆ, ಕನ್ನಡದಲ್ಲಿ ಏನಾದರು ಬರೆದು ಕೆಲವು ವರ್ಷಗಳೇ ಆಗಿ ಹೋದವು, ಎಸ್ ಎಸ್ ಎಲ್ ಸಿ ಮುಗಿದ ಮೇಲಂತೂ ಕನ್ನಡದಲ್ಲಿ ಬರೆಯುವ ಅಬ್ಯಾಸವೇ ನಿಂತು ಹೋಗಿದೆ. ಈಗ ಏನಾದರು ಬರೆಯಲು ಪ್ರಯತ್ನ ಮಾಡಿದರೆ ತುಂಬಾ ತಪ್ಪುಗಳು ಆಗುತ್ತಿವೆ, ಈಗ ಬರೆದ ಎರಡು ಸಾಲಿನಲ್ಲೇ ತುಂಬಾ ತಪ್ಪುಗಳು ಇದೆ ಅಂಥ ಗೊತ್ತು, ಇದನ್ನೆಲ್ಲಾ ಸರಿ ಮಾಡಿಕೊಳ್ಳಲೆಂದೇ ಈ ಬ್ಲಾಗ್ ಶುರು ಮಾಡಿದ್ದೇನೆ, ನೋಡುವ ಎಷ್ಟರ ಮಟ್ಟಿಗೆ ಈ ಪ್ರಯತ್ನದಲ್ಲಿ ಜಯ ಸಿಗ್ತದೆ ಅಂಥ.

ಆದರೆ, ದೇವರಾಣೆ ಏನು ಬರೆಯಬೇಕು ಅಂಥ ಮಾತ್ರ ಗೊತ್ತಿಲ್ಲ. ನನ್ನ ಜೀವನದ ಕೆಲವು ಘಟನೆಗಳ ಬಗ್ಗೆ ಬರೆಯುತ್ತೇನೆ, ಇಷ್ಟ ಆಗಬಹುದು ಓದಿ ನೋಡಿ, ನನ್ನ ಜೀವನ ತುಂಬಾ ತಿರುವುಗಳಿಂದ ಕೂಡಿದೆ. ಆದರೆ ನಾನು ಮಾಡುವ ಕೆಲಸದಲ್ಲಿ ಬಿಡುವಿನ ಸಮಯ ಸಿಗೋದು ತುಂಬಾ ಕಷ್ಟ (ನಾನೇ ಅಂದುಕೊಂಡಿದ್ದು, ಎಷ್ಟರ ಮಟ್ಟಿಗೆ ಸತ್ಯ ಅಂಥ ಗೊತ್ತಿಲ್ಲ), ಆದರೂ ಸಮಯ ಮಾಡಿಕೊಂಡು ಬರೆಯಲೇ ಬೇಕು ಅಂಥ ನಿರ್ಧಾರ ಮಾಡಿದ್ದೇನೆ.

ಬ್ಲಾಗ್ ರೂಪದಲ್ಲಾದರೂ ಕನ್ನಡವನ್ನು ನನ್ನಲ್ಲಿ ಜೀವಂತವಾಗಿ ಇಟ್ಟಿಕೊಳ್ಳುವ ಪ್ರಯತ್ನ ಮಾಡುತಿದ್ದೇನೆ, ನನ್ನ ಬರವಣಿಗೆಯಲ್ಲಿ ನಿಮಗೇನಾದರೂ ತಪ್ಪು ಕಂಡು ಬಂದಲ್ಲಿ ದಯವಿಟ್ಟು ನನಗೆ ತಿಳಿಸಿ.