Wednesday, July 25, 2012

ನಾ ಕವಿಯಲ್ಲ

ನಾನೇನು ಬರಿಯೆ ಕಲ್ಲಿನಲ್ಲೂ
ಶಿಲೆಯ ಕಾಣೋ ಕವಿಯೇನಲ್ಲ
ಆದರೂ ಕಂಡ ಕಂಡಲ್ಲೆಲ್ಲಾ
ಕೇವಲ ನಿನ್ನದೇ ಪ್ರತಿರೂಪ!

ಹೊನ್ನನ್ನು ಮಣ್ಣೆಂದು ಬಿಸಾಡೊ
ವೇದಾಂತಿಯೂ ಕೂಡ ನಾನಲ್ಲ
ಆದರೂ ನಿನ್ನೊಲವಿನ ಮುಂದೆ
ಮತ್ತೆಲ್ಲ ತೀರಾನೆ ತೃಣರೂಪ!

ಬದುಕಿಗೆ ಸಕಲವೂ ಒಲವೆಂದೂ
ಗೊಣಗೊ ಆದರ್ಶವೂ ನನಗಿಲ್ಲ
ಆದರೂ ನೀ ದೂರಾದ ನಂತರ
ಕಾಣದಾಗಿದೆ ಬದುಕಿಗೆ ಕಾರಣ!

ಎಂದೆಂದೂ ನನ್ನ ಕಣ್ಣ ಕನ್ನಡಿಯಲಿ
ಮಿನುಗುವ ನಿನ್ನಯ ಪ್ರತಿಬಿಂಬವು
ಇಂದೇಕೋ ಕಣ್ಣೀರಿನಲಿ ಕರಗಿಹೋಗಿ
ಕಣ್ಣನೆ ತೊರೆಯುತಿರುವುದು ಸರಿಯೆ?

ದಿನವಿಡೀ ಮೌನದಲೆ ಜಗಳವಾಡಿ
ಸೊಲ್ಲೆತ್ತದೆ ಸಂಜೆಗೆ ರಾಜಿಯಾಗಿ
ತುಟಿಗಳಲ್ಲೆ ಬರೆದ ಮುಚ್ಚಳಿಕೆಯ
ಮುರಿದು ದೂರಾಗುತಿರುವುದು ಸರಿಯೆ?

ಬಯಸಿಯೆ ಬರಡಾಗಿ ಹೋದರೂ
ಕಡೆಗಣಿಸಿ ಬಲುದೂರ ಸರಿದರೂ
ನೀನೆನ್ನ ಭಾವನದಿಗೆ ಸಾಗರ
ಬತ್ತುವವರೆಗೂ ಹರಿವೆ ನಿನ್ನೆಡೆಗೆ!

Wednesday, July 4, 2012

ಚಂದಿರ

ಸರಿಹೊತ್ತಲಿ ಹಾಲುಬೆಳಕ ಚೆಲ್ಲುತ
ತನ್ನ ಸುಂದರ ಮೊಗವ ತೋರುತ
ಮೋಹದ ಮಾಯಾಬಲೆಯ ಬೀಸಿದ,
ಬೇಡದಿದ್ದರೂ ಬಿಡದೆ ಬಳಿಬಂದು
ಬೇಡವೆಂದರೂ ಬಿಡದೆ ಬೇರೆಯಾಗಿ
ಎಂದೂ ಮರೆಯದ ಸವಿನೆನಪಾದ!

ಅಬ್ಬರಿಸಿ ಮೂಡುತಿರುವನು ಸೂರ್ಯ
ಮೂಡಣ ದಿಕ್ಕಲಿ ಕೆಂಡವ ಕಾರುತ,
ಅವನ ಕಿರಣಗಳ ಕಾಲ್ತುಣಿತಕೆ ಸಿಕ್ಕಿ
ನಲುಗಿಹೋದ ಮುದ್ದು ಚಂದಿರ
ಮುಂಜಾನೆ ಬಿಳಿಮಬ್ಬಿನ ಮರೆಯಲಿ
ಮರು ಮಾತನಾಡದೆ ಮಾಯವಾದ!

ತಿಂಗಳ ಬೆಳಕಿನ ಇಂಪಾದ ಎದೆಬಡಿತಕೆ
ಹಗಲಿನ ಜಂಜಾಟದ ಕೂಗಾಟ ಸಾಟಿಯೇ?
ರವಿಯುದಯದ ರಮ್ಯತೆಗೆ ಮನಸೋತರೂ
ಕಡುಬಿಸಿಲಿನ ಝಳಪಕೆ ಮನವೊಣಗದಿರದು,
ಮಿಸುಕಾಡದೆ ಬಂದಪ್ಪುವ ಮುದ್ದು ಚಂದಿರನ
ಮೋಹಕೆ ಬಲಿಯಾಗದಿರುವುದು ಸಾದ್ಯವೇ?

ಸಂತೈಸುತಿವೆ ಕಂಡ ಹಕ್ಕಿಹಿಂಡು
ಚಿಲಿಪಿಲಿಯ ರಾಗದಿ ಹಾಡುಹಾಡಿ,
ರೋದಿಸುತಿವೆ ಎಲ್ಲ ಮರಗಿಡಬಳ್ಳಿ
ಎಲೆಗಳ ಮೇಲೆ ಕಣ್ಣೀರ ಹನಿ ಹರಿಸಿ,
ನೋಡುತಿವೆ ಮೂಕವಿಸ್ಮಿತರಾಗಿ
ಕೆರೆ, ಹೊಲ, ಕಾಡು, ಮೇಡು, ಬೀಡು!