Monday, December 28, 2009

ಪ್ರೀತಿಯ ಕೃಷಿ

ಮುಂಗಾರಿನ ಸಮಯದಲಿ
ಹೃದಯವೆಂಬ ಹೊಲದಲಿ
ಹದ ಮಾಡಿ ಕೃಷಿ ಮಾಡುತ್ತಿರುವ
ಪ್ರೀತಿ ಬೆಳೆ ಬೆಳೆಯುತ್ತಿರುವ
ನೀನು, ಯಾವ ರೈತನ ಮಗಳೇ?

ನೀ ಗೀಚಿದ ನೇಗಿಲ ಸಾಲುಗಳಲ್ಲೆಲ್ಲಾ
ಬಿತ್ತರಿಸದ ಪ್ರೀತಿಯ ಮೊಳಕೆಗಳು
ವಾಟೆ ಎತ್ತಿ ಮೇಲೆ ಬರುತಿರೆ
ನನ್ನೊಳಗೇನೋ ಪ್ರೀತಿಯ ಬಸುರಿನ ಅನುಭವ

ಇಳಿಯುತಿವೆ ಬೇರುಗಳು ಆಳಕ್ಕೆ
ಬೆಳೆಯುತಿವೆ ರೆಂಬೆ-ಕೊಂಬೆಗಳು ಹೊರಚಾಚಿ
ತಣಿಯುತಿರೆ ಹೃದಯ ಸೊಂಪಾಗಿ ಬೆಳೆದ ಪೈರಿನಿಂದ

ನನಗೇನೋ ಜೀವನವೇ ತಂಪಾದ ಅನುಭವ

ಹೃದಯದಲ್ಲೊಂದು ಪುಟ್ಟ ಗುಡಿಸಲು ಕಟ್ಟಿ
ಸುತ್ತಲು ಮುಳ್ಳಿನ ಬೇಲಿ ಕಟ್ಟಿ
ಕಾಪಾಡುತಲಿರೆ ನಿನ್ನ ಪ್ರೀತಿಯ ಬೆಳೆಯನು
ನನಗೇನೋ ಕಬ್ಬಿಣದ ಕವಚ ಧರಿಸಿದ ಅನುಭವ

ಶುದ್ಧಿಗೊಳಿಸುತಿರುವೆ ನನ್ನ ಹೃದಯವನು
ಹರಗಿ ಕಳೆದು, ಹುಟ್ಟಿದ ಕಳೆಯ
ಹುಡುಕಿ ಕೊಲ್ಲುತಿರೆ, ಆಕ್ರಮಿಸಿದ ಕ್ರಿಮಿಗಳ
ನನ್ನೊಳಗೇನೋ ದೇಹಾತ್ಮ ಶುದ್ಧಿಯಾದ ಅನುಭವ

ನನ್ನ ಹೃದಯದ ಚೆಲುವೇ ಬದಲಾಗಿದೆ ಇಂದು
ಹುಲುಸಾದ ಬೆಳೆಯ ಹಸಿರು ರಂಗಿನಿಂದ
ನಾ ಸಿರಿವಂತನಾದೆ ನಿನ್ನ ಪ್ರೀತಿಯ ಫಸಲಿನಿಂದ
ಈ ಬದಲಾವಣೆ ಸಾಧ್ಯವಾದದ್ದು ಕೇವಲ ನಿನ್ನಿಂದ

Thursday, December 17, 2009

ಚೆಲುವೆ ನೀನು ಮೊದಲ ಬಾರಿ ಎದುರಾದಾ ಘಳಿಗೆ

ಚೆಲುವೆ ನೀನು ಮೊದಲ ಬಾರಿ ಎದುರಾದಾ ಘಳಿಗೆ
ಮಾಡುವುದೇನೆಂದು ತಿಳಿಯದು ಅರಿವಿಗೆ
ತಿಳಿಯದೆ ಒಪ್ಪಿಸಿದೆ ನನ್ನನ್ನೇ ಮರೆವಿಗೆ
ಅದರೂ ಏನೋ ಒಂಥರ ಸಲಿಗೆ
ಯಾಕ್ಹೀಗೆ ಎಂಬುದೇ ತಿಳಿಯದು ಅಸಲಿಗೆ

ಹಿತವಾದ ಭಾವನೆ ಹೃದಯದೊಳಗೆ
ಸಿಹಿಯಾದ ಕಲ್ಪನೆ ಮನಸೊಳಗೆ
ಬಿಸಿಯಾದ ಸಂಚಲನ ಕಣ್ಣೊಳಗೆ
ಮುದವಾದ ರೋಮಾಂಚನ ಮೈಯೊಳಗೆ
ತಿಳಿಯಾದ ಖುಷಿ ಒಳಗೊಳಗೆ
ಅರಿಯದ ಭಯ ಹೊರಗೊರಗೆ

ಎದುರಿಸಲಾಗದೆ ನಿನ್ನ ಕಂಗಳ ಬಾಣದ ಬಿರುಸು
ಪಿಳ ಪಿಳ ನೋಡುವೆ ಅತ್ತಿತ್ತ
ಮೊಟ್ಟೆಯೊಡೆದು ಹೊರ ಬಂದ ಪಿಳ್ಳೆಯ ಹಾಗೆ

ತಡೆಯಲಾರದೆ ನಿನ್ನ ಮಿಂಚಿನಂಥ ನಗುವಿನ ಕಾಂತಿ
ಹಿತವಾಗಿ ನರಳುತ್ತಿರುವೆ ಸುಖದಲ್ಲೇ
ರವಿಯ ಕಿರಣಗಳಿಂದ ಅರಳುವ ತಾವರೆಯ ಹಾಗೆ

ತಾಳಲಾರದೆ ನಿನ್ನ ಮೌನದ ತೀಕ್ಷ್ಣತೆ
ಶರಣಾಗಿರುವೆ ನಿಂತಲ್ಲೇ ಶಿರಬಾಗಿ
ರೆಂಬೆ ಮುರಿದ ಬಳ್ಳಿಯ ಹಾಗೆ

ಸಹಿಸಲಾರದೆ ನಿನ್ನ ಸ್ಪರ್ಶದ ಆಕ್ರಮಣ
ಓಡುತ್ತಿರುವೆ ಕಾಣದೆ ದಿಕ್ಕುಗಳ
ಹುಲಿಯ ಬಾಯಿಂದ ಪಾರಾದ ಜಿಂಕೆಯ ಹಾಗೆ

ಉತ್ತರವಿಲ್ಲದೆ ನಿನ್ನ ಮಾತಿನ ಮೋಡಿಗೆ
ಮನಸಾರೆ ಮೂಕನಾಗಿರುವೆ ಮರುಕ್ಷಣದಲ್ಲೇ
ಸಿಡಿಲು ಗುಡುಗಿಗೆ ಹೆದರಿದ ಚಂದಿರನ ಹಾಗೆ

Friday, December 4, 2009

ಅರಿಯದ ಜೀವನ

ಪಯಣಿಸುತಿರುವೆ ದಾರಿಯಲಿ ಅರಿಯದೆ ದಿಕ್ಕನ್ನು
ತಲುಪುವುದೊಂದೇ ಊರು ಅದುವೇ ಸಾವಿನ ಕೇರಿ

ಮಾಡುತಿರುವೆ ಕರ್ಮ ಅರಿಯದೆ ಮರ್ಮ
ಮಾಡುವುದೊಂದೇ ಸಾಧನೆ ಅದುವೇ ಕಾಲಾಹರಣ

ಬಿಡಿಸುತಿರುವೆ ಚಿತ್ರ ಅರಿಯದೆ ವರ್ಣ
ಕಾಣುವುದೊಂದೇ ಚಿತ್ರ ಅದುವೇ ಪ್ರತಿಬಿಂಬ

ನುಡಿಸುತಿರುವೆ ವಾದ್ಯ ಅರಿಯದೆ ತಾಳ
ಕೇಳುವುದೊಂದೇ ನಾದ ಅದುವೇ ಮೌನ

ಬರೆಯುತಿರುವೆ ಕವನ ಅರಿಯದೆ ಭಾವನೆ
ಬರೆಯುವುದೊಂದೇ ಪಲ್ಲವಿ ಅದುವೇ ಅಹಂಕಾರ

ಓದುತಿರುವೆ ಕಾವ್ಯ ಅರಿಯದೆ ತಿರುಳು
ತಿಳಿಯುವುದೊಂದೇ ಪದ ಅದುವೇ ಸ್ವಾರ್ಥ

ಬಿಡಿಸುತಿರುವೆ ಲೆಕ್ಕ ಅರಿಯದೆ ಸೂತ್ರ
ಸಿಗುವುದೊಂದೇ ಉತ್ತರ ಅದುವೇ ಶೂನ್ಯ