Thursday, December 8, 2011

ನಿಲ್ಲಿಸು ಹೃದಯವೆ ನಿನ್ನ ಕೂಗಾಟವ


ನಿಲ್ಲಿಸು ಹೃದಯವೆ ನಿನ್ನ ಕೂಗಾಟವ
ಆಲಿಸು ಅವಳ ಮೌನದೊಳಗಿನ ನೋವ
ನೀನು ಕೂಗಾಡಿ, ಅವಳು ನರಳಾಡಿ
ಸುರಿಯುತಿರುವಿರೇಕೆ ಕೆಂಡವ ಪ್ರೀತಿಯ ಎದೆಗೂಡಿಗೆ!

ಸದಾ ಇಲ್ಲಸಲ್ಲದ ನೆಪವ ಹೂಡಿ ಮುನಿದು
ಅವಳ ಕನಿಕರಕೆ ಹಾತೊರೆಯುವ ಮನವು,
ಅವಳೊಳಗೆ ಅರೆಘಳಿಗೆ ತನ್ನನು ಕಾಣದಿದ್ದರೆ
ಅವಳಿಗೂ ನೋಯಿಸಿ ತನ್ನನು ದಂಡಿಸಿಕೊಳ್ಳುವಂತ ಮೂಢ!

ಅವಳನುಮಾನವಲ್ಲ, ನನ್ನೊರಟುತನವಲ್ಲ
ನೋವಿಗೆ ಮೂಲವು ಮಿತಿಯಿಲ್ಲದ ಅಪೇಕ್ಷೆ
ಸಾಮಾನ್ಯವದುವೆ ಈ ಸ್ವಾರ್ಥ ಪ್ರೀತಿಯಲಿ
ಒಬ್ಬರನ್ನೊಬ್ಬರು ಅರಿವ ಪ್ರೌಢತೆಯ ಬೇಡಿದೆ ಬಾಳು!

ಅರ್ಪಿಸು ಪ್ರತಿದಿನ ನಂಬಿಕೆಯ ನೈವೇದ್ಯ
ಕೇಳಿಸು ಅಂತರಾಳದ ಸರ್ವಭಾವ ಮಂತ್ರ
ಸಲ್ಲಿಸು ನಿನ್ನ ಮುಂಗೋಪದ ಬಲಿಯ ಹರಕೆ
ಮತ್ತೇನನ್ನು ಕೇಳದು ನಾವು ನಂಬಿರುವ ಪ್ರೀತಿದೇವರು!

Thursday, December 1, 2011

ಮನ್ವಂತರ


ಒಂದು ಕಳ್ಳ ನೋಟದಲಿ
ಏನೂ ಅರಿಯದ ಈ ಹಳ್ಳಿ ಗಮಾರನ ಕವಿಯಾಗಿಸಿದೆ;

ಒಂದು ಸಣ್ಣ ನಗುವಿನಲಿ
ನನ್ನೆದೆವೃಕ್ಷದಲಿ ಅಡಗಿಕೂತಿದ್ದ ಭಾವಪಕ್ಷಿಗಳ ಹಾರಿಸಿದೆ;

ಒಂದು ತುಂಟ ಮಾತಿನಲಿ
ನನ್ನ ಕನಸಿನ ಕುಣಿಕೆ ಕಳಚಿ ಕೈಗೆ ಸಿಗದಂತೆ ಓಡಿಸಿದೆ;

ಒಂದು ಬಿಗಿ ಅಪ್ಪುಗೆಯಲಿ
ಏನೂ ತಿಳಿಸದೆ ಈ ಎಳೆನಾಸ್ತಿಕನ ಆಸ್ತಿಕನಾಗಿಸಿದೆ;

ಒಂದು ಸಿಹಿ ಒಪ್ಪಿಗೆಯಲಿ
ಈ ಭಾವಜೀವಿಯ ಬಾಳನೆಂದೆಂದಿಗೂ ಬೆಳಗಿಸಿಬಿಡು;

Wednesday, November 2, 2011

ಹೋಗು ಕವಿತೆಯೆ ಹೋಗು


ಹೋಗು ಕವಿತೆಯೆ ಹೋಗು
ನನ್ನವಳೆದೆಗೂಡಿಗೋಡೋಡಿ ಹೋಗು:
ಒಲವಿನ ಬರಿ ಮಾತಲಿ ಮಡಚಿಡಲಾಗದೆ ನರಳಿದ
ನಸು ನಾಚಿಕೆಯ ತಿಳಿನೀರಲಿ ತೇಲಿಬಿಟ್ಟು ಕೊರಗಿದ
ನನ್ನ ಗಂಡುಬುದ್ಧಿಯ ಗುಟ್ಟನ್ನೆಲ್ಲ ಅವಳಿಗೆ ರಟ್ಟು ಮಾಡಿ ಬಾ!
 ಹೋಗು ಕವಿತೆಯೆ ಹೋಗು!

ನನ್ನವಳ ಕಣ್ತುಂಬ ಕಂಡಾಗ ನನ್ನದೇ ಪ್ರತಿಬಿಂಬ
ಕ್ಷಣವೆ ಮೀನಾದ ಮನಸಿನ ತುಂಟಾಟದಾರಂಭ
ಜಿಗಿದು ಅವಳೊಡಲ ಜೇನ್ಗಡಲಿಗೆ ಹಾರಿ
ಗಾಳಿಗೆ ಲೋಕದ ಕಟ್ಟುಪಾಡುಗಳ ತೂರಿ
ಈಜಿದ ರಸಕ್ಷಣದ ಮಧುರಾನುಭವವ ಅವಳಿಗೆ ವಿವರಿಸಿ ಬಾ!
  ಹೋಗು ಕವಿತೆಯೆ ಹೋಗು!

ನನ್ನ ಬಿಗಿಯಪ್ಪುಗೆಯ ಬಂಧನದಲಿ ಬೆಂದು
ಪ್ರಥಮಚುಂಬನದ ಮಹಾಮತ್ತಿನಲಿ ಮಿಂದು
ಅವಳು ಮೈಮನ ಮರೆತು ಕರಗುತಿರುವಾಗ,
ಅವಳ ಹೂಮೈಗಂಟಿದೆನ್ನ ತುಂಟ ಕರಗಳು,
ಹಿಡಿದಾಡಿದ ಎಸಳುಗಳ ಪಟ್ಟಿಯನೊಮ್ಮೆ ಅವಳಿಗೆ ಕೊಟ್ಟು ಬಾ!
             ಹೋಗು ಕವಿತೆಯೆ ಹೋಗು!

ನಾ ಮಲಗಿದರೂ ಮಲಗದ ಮನಸು ಅಲೆಮಾರಿ
ರೂಢಿಯಂತೆ ಕನಸಿನ ಮಾಯಾಲೋಕಕೆ ಹಾರಿ
ಅವಳೊಡನೆ ನಟಿಸುವ ಸ್ವಪ್ನಮಂಟಪದಲಿ,
ಪ್ರತಿನಿತ್ಯ ಜರುಗುವ ಶೃಂಗಾರಲೀಲೆ ಪ್ರಸಂಗದ,
ಪ್ರತಿಯೊಂದು ಅಧ್ಯಾಯವ ಭಾವಾಭಿನಯ ಮಾಡಿ ತೋರಿಸಿ ಬಾ!
              ಹೋಗು ಕವಿತೆಯೆ ಹೋಗು!

ಅವಳ ವಿರಹದುರಿಗೆ ಜೇನ್ ತುಪ್ಪವ ಕುಡಿಸಿ
ತಿದ್ದಿರದ ಪ್ರಣಯದಾಹವ ಹದವಾಗಿ ಕುದಿಸಿ
ಹೆಣ್ ಸಹಜ ಲಜ್ಜೆಬಲೆಯಿಂದ ಮೆದುವಾಗಿ ಬಿಡಿಸಿ
ಈ ತಂಪಾದ ಬೆಳದಿಂಗಳಿರುಳ ಬೃಂದಾವನಕೆ,
ಬಿಂಕದಿ ಸಿಂಗರಿಸಿದೆನ್ನ ಮೈಡೊಂಕಿನ ವಯ್ಯಾರಿಯ ಕರೆದು ತಾ!
      ಹೋಗು ಕವಿತೆಯೆ ಹೋಗು!
   ನನ್ನವಳೆದೆಗೂಡಿಗೋಡೋಡಿ ಹೋಗು!

Monday, October 3, 2011

ಬೇಡಿಕೆ



ನಿನ್ನೊಂದಿಗೆ ಕಳೆಯುತಿರುವ
ಪ್ರತಿಯೊಂದು ಕ್ಷಣಗಳು
ಕೂಗಿ ಕೂಗಿ ಕೇಳುತಿವೆ,
ಕೂಡಿಡು ನಮ್ಮನು ನೆನಪಿನ ಖಜಾನೆಯಲಿ
ಉಪವಾಸದಿ ಮೆಲುಕುಹಾಕುವ ತುತ್ತಾಗಬೇಕಿದೆ ಎಂದು!

ನನ್ನೊಳಗೆ ಏಳುತಿರುವ
ನೂರಾರು ಪ್ರಶ್ನೆಗಳು
ಕಾಡಿ ಕಾಡಿ ಕೇಳುತಿವೆ,
ನಮಗುತ್ತರ ಹುಡುಕದಿರು ಎಂದೆಂದೂ
ನಮ್ಮ ಉತ್ತರಗಳು ಉತ್ತರಿಸಲಾಗದ ಪ್ರಶ್ನೆಗಳೆ ಎಂದು!

ಮನದಲಿ ಮೂಡುತಿರುವ
ಪ್ರತಿಯೊಂದು ಮಾತುಗಳು
ಬೇಡಿ ಬೇಡಿ ಕೇಳುತಿವೆ,
ನುಡಿಯದಿರು ನಮ್ಮನು ಎಂದೆಂದೂ
ನುಡಿದು ಒಡೆಯದಿರು ಭಾವಗಳ ಮೌನರಾಗವ ಎಂದು!

ನಿನ್ನನ್ನೇ ನೋಡುತಿರುವ
ನನ್ನೆರಡು ಕಣ್ಗಳು
ಪರಿ ಪರಿ ಹೇಳುತಿವೆ,
ನೋಡಿಬಿಡು ರಪ್ಪೆಯೊಡೆಯದೆ
ಮಾಯವಾಗಲಿದೆ ಕಣ್ಣೆದುರಿಗಿರುವಂದ ಎಂದು!

ನಿನ್ನನ್ನು ಬಿಗಿಯಾಗಪ್ಪಿರುವ
ನನ್ನೆರಡು ತೋಳ್ಗಳು
ಒತ್ತಿ ಒತ್ತಿ ಹೇಳುತಿವೆ,
ಸಡಿಲಗೊಳಿಸದಿರು ಅಪ್ಪುಗೆಯ
ಕನಸಿನೊಳಗಿಂದ ಕೆಳಗೆ ಜಾರಿಬೀಳುವೆ ಎಂದು!

ಜೋರಾಗಿ ಬಡಿಯುತಿರುವ
ನನ್ನೆದೆಯ ಕಂಪನಗಳು
ಕುಗ್ಗಿ ಕುಗ್ಗಿ ಹೇಳುತಿವೆ,
ಕೇಳದಿರು ಅವಳೆದೆಬಡಿತ
ಸುಮ್ಮನೆ ಯಾತಕೆ ಯಾತನೆ ಎರೆಡೆದೆಗೂ ಎಂದು!

Tuesday, September 27, 2011

ಸಂಗೀತ


ಸಹಿಸಲಾರೆನು ನೀ ಸನಿಹವಿರದ ಸಪ್ಪೆ ಸಮಯವ
ಇರಲಾರೆನು ಸವಿಯದೆ ಅನುದಿನ ನಿನ್ನ ಕಲರವ
ನೀನೊಂದು ಅಗಾಧ ಬಲವಿರೊ ಸುಗಂಧ ಹೂವು
ನಿನ್ನ ಮಕರಂದ ಹೀರದಿದ್ದರೆಲ್ಲಿದೆ ಬಾಳಲ್ಲಿ ಚೆಲುವು?

ನಿಲ್ಲದೆ ಓಡುವ ಕಾಲನ ಕಾಲ್ಹಿಡಿದೆಳೆದು ನಿಲ್ಲಿಸಿ
ಜಗದೆಲ್ಲ ಜಂಜಾಟಗಳ ಕಣ್ಣಿಗೆ ಜವನಿಕೆ ಹೊದಿಸಿ
ಯಾವುದೆ ಗುರುದಕ್ಷಿಣೆಯಿಲ್ಲದೆ ಧ್ಯಾನಕ್ಕೆ ಜಾರಿಸಿ
ನೊಂದ ಜೀವವ ಮಡಿಲಲಿಟ್ಟು ದಣಿವಿನ ಪೊರೆ ಬಿಡಿಸುವೆ;

ನೋವು ನಲಿವಿನಲ್ಲೂ, ಮಯ್ಯಿ ಮನಸಿಗೂ,
ತಂಗಾಳಿಯಲ್ಲಿ ತೇಲಿಬಂದು ತಾಯಂತೆ ಬೆವರ ಒರಸುವೆ;
ಮಗು ಮುದುಕನೆನ್ನದೆ, ಬಡವ ಗಡವನೆನ್ನದೆ,
ಎಲ್ಲರ ಭಾವವೀಣೆಯಿಂದ ಜೀವನೋಲ್ಲಾಸ ಚಿಮ್ಮಿಸುವೆ;

ಜಗವನೆ ಮರುಳಾಗಿಸುವ ಮಾಯಾತರಳೆ
ದೇಶ ಭಾಷೆಗಳ ಎಲ್ಲೆಮೀರಿ ತಲುಪುವೆ ನೀನೆಲ್ಲರೆದೆ;
ಗಿಡ ಮರದಲ್ಲಿ, ಗಾಳಿ ನೀರಲ್ಲಿ, ಕಲ್ಲು ಮಣ್ಣಲ್ಲಿ,
ಕಾಣುವ ಮನಸೊಂದಿದ್ದರೆ ಗುಪ್ತಗಾಮಿನಿ ನೀನೆಲ್ಲದರಲ್ಲಿ;


ಕಂದಮ್ಮಂಗೆ ಅಮ್ಮನ ನಿತ್ಯಲಾಲಿಯ ಸವಿಗಾನ
ಗೆಳೆಯಂಗೆ ಗೆಳತಿಯ ಒಲವಿನ ಕೂಗೆ ರತಿಗಾನ
ಧ್ಯಾನಕೆ ಕುಳಿತ ಯೋಗಿಗೆ ಕಡುಮೌನವೇ ಸಂಗೀತ
ಕಲ್ಪನಾಲೋಕವಾಸಿ ಕವಿಗೆ ಕೇಳಿಸುವುದೆಲ್ಲವೂ ಸಂಗೀತ

Sunday, August 28, 2011

ಹೀಗೇಕೆ?

ಕೆರೆಯ ಶುದ್ದ ನೀರಿಗೆ ಎಳೆದೊಯ್ಯಲು ಬಂದರೂ
ಗದ್ದೆಸಾಲಿನ ಕೆಸರಲಿ ಬಿದ್ದು ಒದ್ದಾಡುವ ಹಠವೇಕೆ ಮನವೆ?
ಗೋಮಾಳದಿ ಹುಲುಸಾದ ಹುಲ್ಲು ಮೇಯಲು ಬಿಟ್ಟರೂ
ಹೊಲದ ಪೈರು ತಿನ್ನಲು ಬೇಲಿಹಾರಿ ಓಡುವೆಯೇಕೆ ಮನವೆ?
ಬಿಸಿಬಿಸಿಯ ಕೂಳು ಬೇಯಿಸಿ ತಂದು ಹಾಕಿದರೂ
ಮಲದ ವಾಸನೆಯಿಡಿದು ಮೂಸುತ ತೆರಳುವೆಯಾಕೆ ಮನವೆ?
ತುಂಬಿದ ಕೆರೆಯಲಿ ಕೊರತೆಯಿಲ್ಲದೆ ಬದುಕುತಿದ್ದರೂ
ಸಣ್ಣ ಹಳ್ಳದ ಜಾಡು ಹಿಡಿದು ಈಜುವ ಹುಂಬತನವೇಕೆ ಮನವೆ?
ನಾಳೆಯ ಬೆಳಕಿನ ಮೇಲೆ ನೆಚ್ಚಿಕೆಯಿಡುವುದ ಬಿಟ್ಟು
ಬೆಂಕಿಯ ಮೋಹಕಿಂದು ರಾತ್ರಿಯೆ ತುತ್ತಾಗಿ ಸಾಯುವೆಯೇಕೆ ಮನವೆ?

ನಿನ್ನ ಕಣ್ಣೆದುರಿಗಿರುವ ಸಕಲ ಭಾಗ್ಯವ ಬದಿಗೊತ್ತಿ
ಇನ್ನೂ ತೆರೆಯದಿರ ಬಾಗಿಲ ಕಡೆಗೇ ಸೆಳೆಯುವೆಯೇಕೆ ಮನವೆ?
ದಾಕ್ಷಿಣ್ಯವೆ ದಾರಿದ್ರ್ಯಕೆ ದಾರಿಯೆಂದು ಅರಿವಿದ್ದರೂ
ಬೇಡದ ಬೇಳೆಯ ಬಿಡದೆ ಬೇಯಿಸುವ ಕಾಯಕವೇಕೆ ನಿನಗೆ?
ವಿಚಾರಕದಗಳೇ ಇಲ್ಲದ ಬರೀ ಆಚಾರಮನೆ ಕಟ್ಟಿ
ಅದರೊಳಗೆ ಮರಳಿ ಏಳಲಾರದಂತೆ ಮಲಗುವುದು ನೆಲೆಯೆ?
ಕಂದಕದಿಂದ ಮೇಲೇಳಲು ಸಿಕ್ಕಿರುವ ಕಣ್ಣಿಯ ಬಿಟ್ಟು
ಕಾಣದ ಕಲ್ಲು ದೇವರ ಪವಾಡಕೆ ಕಾದು ಕೊರಗುವುದು ಸರಿಯೆ?
ಭೋರ್ಗೆರೆಯುತ ಆರ್ಭಟಿಸಿ ಬರುವ ಯೋಚನಾಗಜಗಳ
ಪಳಗಿಸುವ ಅರಿವಿನ ಗಜಶಾಲೆಯ ಮಾವುತನಾಗುವುದೆಂದು ಮನವೆ?

Monday, July 18, 2011

ಪ್ರತೀಕ್ಷೆ

ಒಲಮೆಯ ಒಡಯನೆ ಒಲಿದು ನೋಡು ಒಮ್ಮೆ ನೀನೆನಗೆ
ಒಡನೆಯೇ ನನ್ನನ್ನೇ ಉಡುಗೊರೆಯಾಗಿಸುವೆ ನಾನಿನಗೆ 
ಪ್ರತಿದಿನ ಕವಿಕಲ್ಪನೆಯಲೆ ಕೆತ್ತಿದ ರೂಪದ ಹೊದಿಕೆ ಹೊದ್ದು
ಕಂಡರೂ ಕಾಣದಂತೆ ಬಂದು ಎದೆಗೂಡೊಳಗೆ ನೆಲೆಸು ಬಾರೊ

ಕನಸಿನ ಮೋಡಗಳ ಹೊತ್ತು ಇನ್ನೂ ಸುಮ್ಮನೆ ಏಕೆ ನಿಂತಿರುವೆ
ನಿನ್ನೊಲವ ಮಳೆಗೆಂದೇ ಕಾದಿರುವೆನಗೆ ಹೀಗೆ ಎಷ್ಟು ಕಾಯಿಸುವೆ
ನನ್ನೆದೆಯ ಬರಿದಾದ ಪುಟ್ಟ ಹೃದಯಕೊಳವ ಒಮ್ಮೆ ಭರಿಸಿ
ಬಾಳಬನದಿ ಹಸಿರ ಚಿಗುರಿಸಲು ಜೀವಜಲ ಸುರಿಸು ಬಾರೊ

ಬೇಕಿದೆ ಪ್ರಥಮ ಚುಂಬನಾತಿಥ್ಯದೊಡನೆ ಗಡ್ಡದ ಕಚಗುಳಿ
ಜೊತೆಗೆ ಚಳಿಯ ನೆಪಹೂಡಿ ಬಂಧಿಸುವ ಆ ಹುಸಿ ಕಳಕಳಿ
ಎಲ್ಲಾ ತಾಪತ್ರಯ ಮರೆತು ಮಲಗಿ ನಿನ್ನೆದೆಬಡಿತ ಆಲಿಸೊ ಕನಸ
ಯಾವ ತಕರಾರು ಮಾಡದೆ ಈಗಲೆ ಸಾಕಾರಗೊಳಿಸು ಬಾರೊ

ನೂರೆಂಟು ತುಂಟಾಟಗಳ ಆಡಿ ಬೇಕಂತಲೆ ತುಸು ರೇಗಿಸಿ
ಹದಿನೆಂಟು ಬೇಸಿಗೆಗಳ ಬೇಗೆಯ ನಾನಿಂತಲ್ಲೆ ಅಸು ನೀಗಿಸಿ
ನನ್ನ ಮನದೆಲ್ಲಾ ಮೂಲೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಮಲಗಿರುವ
ಎಲ್ಲ ಭಾವಗೀತೆಗಳಿಗಿಂದು ಜೀವರಾಗ ನೀಡಿ ನುಡಿಸು ಬಾರೊ

ಸಂಜೆಹೊತ್ತಲಿ ಸುರಿಯುವ ಸೋನೆ ಮಳೆಯಲಿ ಮಿಂದು
ಕಾಡುಹಾದಿಲಿ ಕಾರಣವಿಲ್ಲದೆ ನಾವಿಬ್ಬರೇ ನಡೆದು ಬಂದು
ಯಾರದು ಕ್ಯಾತೆ ಇರದಲ್ಲಿ ಯಾವುದೆ ಕ್ಯಾಮೆ ಇಲ್ಲದೆ ಕುಳಿತು
ಎಂದೂ ಮರೆಯದಂಥ ಪದವ ಕಟ್ಟಿ ಮೈಮರೆತು ಹಾಡುವ ಬಾರೊ

Wednesday, June 29, 2011

ತಾಯ್ ಗೂಡು


ಏನು ಹರುಷವೂ ತೆರಳಲು ಚೆಲುವ ತಾಯ್ ಗೂಡಿಗೆ
 ಸದಾ ಕೈ ಬೀಸಿ ಕರೆವ ಚಿರಯೌವ್ವನ ಬೀಡಿಗೆ
ಎಂಥಾ ಸೊಗಸು ನಾಹುಟ್ಟಿ ಬಲಿತ ತಾಯ್ ಒಡಲು
ಮನವು ಗರಿ ಬಿಚ್ಚಿ ನವಿರಾಗಿ ಕುಣಿಯುವ ಬೃಂದಾವನ
ಎಣೆ ಯಾವುದು ಈ ಪುಟ್ಟ ಸೌಂದರ್ಯ ರತ್ನದ ಗಣಿಗೆ
ನೇಗಿಲಯೋಗಿ ಜಗದ್ ಏಳ್ಗೆಗೆ ಜಪಗೈವ ತಪೋಭೂಮಿಗೆ

ಚೋಳ ಚಾಲುಕ್ಯರ ಅಟ್ಟಹಾಸದ ಬುಡಮುರಿದು
ವೀರಕನ್ನಡಿಗರು ನೆತ್ತರು ಚೆಲ್ಲಿ ಕಟ್ಟಿದ ಹೊಯ್ಸಳನಾಡು;
ಹಲ್ಮಿಡಿ ಶಾಸನವಿರುವ ಕನ್ನಡಾಂಬೆಯ ಹಳೇಬೀಡು;
ಸಮರಗೀತೆಯೊಳಗೂ ಅಹಿಂಸಾ ತತ್ವ ಸಾರಿದ ನಾಡು;
ನಾಟ್ಯಮಯೂರಿ ಚೆಲುವರಾಣಿ ಶಾಂತಲೆಯ ತವರೂರು;
ಶಿಲ್ಪಕಲೆಯ ರಸಋಷಿ ಜಕ್ಕಣ್ಣ ಚಿರಾಯುವಾಗಿಸಿದೂರು;

ಆ ತಾಯ್ ಒಡಲಲಿ... 
ಮುಂಜಾನೆ ಬೆಳಕಲಿ ತಳಿರ ಮೇಲಿನ ಇಬ್ಬನಿ ಹೀರಿ
ತೋಟಗದ್ದೆ ಕಾಡುಗುಡ್ಡಗಳ ಅಲೆದಲೆದು ಮನವ ತಣಿಸಿ
ಕೋಗಿಲೆಗಳ ಸುಮಧುರ ಗಾನ ಕೇಳಿ ನನ್ನನ್ನೇ ಮರೆತು
ಯಾರು ಕಾಣದ ಕಾಡಲಿ ನವಿಲಿನೊಡಗೂಡಿ ಕುಣಿದು
ಸೊಂಪಾದ ಹೊಂಗೆ ಮರದಡಿ ಮಲಗಿ ಹಗಲುಗನಸ ಕಾಣುವಾಗ
ಇಲ್ಲಿ ಬಾ ಸ್ವರ್ಗಕೆ ಮೂರೇ ಗೇಣು ಎಂದರೆ ನಾ ಒಲ್ಲೆ ಎನ್ನುವೆ!


ಆ ತಾಯ್ ಗೂಡಲಿ...
ಅವ್ವನ ಆರೈಕೆಯ ಆಗರದ ಮಡಿಲಲ್ಲಿ ಚಿರಮಗುವಾಗಿ ಮಲಗಿ
ಅಪ್ಪನ ಪ್ರೀತಿಯ ಬೈಗುಳದ ಬೆಟ್ಟದ ತುದಿಯಲಿ ನಿಂತು ನಕ್ಕು
ಸಹೋದರರ ಸಕ್ಕರೆಯ ನುಡಿಗಳ ಸವಿದು ಸವಿದು ಬೀಗಿ
ಬಂಧುಬಾಂಧವರ ಹೊಗಳಿಕೆಯ ಕದ್ದಾಲಿಸಿ ಹಿರಿಹಿರಿ ಹಿಗ್ಗಿ
ವಿದಾಯದ ಸಮಯ ಸನಿಹವಾದಾಗ ಕಾರಣವಿಲ್ಲದೆ ಕುಗ್ಗಿದರೂ
ಹೊಟ್ಟೆ ಹಸಿದಷ್ಟು ಬಾಯಿಗೆ ರುಚಿಯೆಂದು ಸಂತೈಸಿಕೊಂಡು ಮಾಗುವೆ!

Friday, May 27, 2011

ಓ ಗೋಮುಖವ್ಯಾಘ್ರಗಳೆ ಕೇಳಿ


ಬಿಡುವಿಲ್ಲದೆ ಬೆವರ ಬೆರೆಸಿ ನಾ ದುಡಿದನ್ನವನುಂಡು
ಬದುಕ ನೀಡಿದ ಈ ಬಡವನುಡುಗೊರೆಯ ಮೆಚ್ಚಿಕೊಂಡು
ನನಗೇ ಅಸ್ಪೃಶ್ಯನೆಂಬ ಬಿರುದಿಟ್ಟು ಋಣ ತೀರಿಸಿರುವ

ಇಲ್ಲಸಲ್ಲದ ಸ್ವಕಾರ್ಯಸಿದ್ದಿ ಧರ್ಮವ ಮೇಲೆತ್ತಿ
ಏನೂ ಅರಿಯದ ಮತಿಗೆ ಮೂಮಸಿಯ ಮೆತ್ತಿ
ನಾ ಬೆಳೆದನ್ನಕೆ ನನ್ನನ್ನೆ ಭಿಕ್ಷುಕನನ್ನಾಗಿ ಮಾಡಿರುವ

ವಿದ್ಯಾಬುದ್ಧಿಯಾರ್ಜನೆಯಿಂದ ನಯವಾಗಿ ವಂಚಿಸಿ
ಸಕಲ ಸುಖಸನ್ಮಾನಗಳಿಂದ ಸದಾ ದೂರವಿರಿಸಿ
ನನ್ನ ದಣಿವಿನುರಿಯಲ್ಲಿ ನಿಮ್ಮ ಬೇಳೆ ಬೇಯಿಸುತಿರುವ

ಓ ಗೋಮುಖವ್ಯಾಘ್ರಗಳೆ ಇನ್ನಾದರೂ ಸಾಕುಮಾಡಿ
ಕುಳಿತ ಕೊಂಬೆಗೆ ಕೊಡಲಿ ಹಾಕುವ ದುರ್ನಿಪುಣತೆ
ಹಾಲಿಗಾಗಿ ಗೋವಿನ ಕೆಚ್ಚಲು ಕುಯ್ಯುವ ದುರ್ನಡತೆ

ನನ್ನ ಧಿಕ್ಕಾರವಿದೆ ನಿಮ್ಮ ಅಂಧರ್ಮದ ಕುತಂತ್ರನೀತಿಗೆ
ನೇರ ಉತ್ತರವಿದೆ ನಿಮ್ಮ ಸಹಿಸಲಸಾಧ್ಯ ಹುಂಬದರ್ಪಕೆ
ನ್ನು ಸಲ್ಲದು ನಿಮ್ಮ ಭಗವಂತನಾಮ ಭಯೋತ್ಪಾದನೆ

Monday, April 18, 2011

ಆರಂಬಕಾರ

ಹಗಲಿರುಳು ನೆರಳುನಿದ್ದೆಯ ಮೆಟ್ಟಿ, ಹೊಟ್ಟೆಬಟ್ಟೆಯ ಕಟ್ಟಿ,
ಸುಖಸನ್ಮಾನಗಳಿಗಾಶಿಸದೆ, ಜಾತಿಮತಗಳ ಭೇದವೆಣಿಸದೆ
ಜಗದೆಲ್ಲರ ಹಸಿವಾಗ್ನಿಯ ತನ್ನ ಬೆವರಿಂದ ನಂದಿಸುವಾತ
ಪರಮಪೂಜ್ಯ ಶ್ರೀಸಾಮಾನ್ಯನಲ್ಲವೆ? ಈ ಅನ್ನಧಾತ;

ಅನ್ಯಜೀವಿಗಳನ್ಯವೆನ್ನದೆ ಬಳಗದೊಳಕೂಡಿ ಬಾಳೊ ಬುದ್ದ
ಕಲ್ಮಣ್ಣಲೂ, ಗಿಡಮರದಲೂ ಪ್ರತ್ಯಕ್ಷ ದೇವರ ಕಾಣೊ ಸಿದ್ದ
ನೇಗಿಲಕೆಲಸದಿ ಕೈಲಾಸವ ಕಾಣೊ ಕರ್ಮಯೋಗಿ
ಭುವಿಯಲುತ್ತಮ ಧರ್ಮಿಷ್ಠನಲ್ಲವೆ? ಈ ನೇಗಿಲಯೋಗಿ;

ನೇಗಿಲಿಡಿದು ಜೀವಂತ ಚಿತ್ತಾರ ಬಿಡಿಸೊ ಭೂಚಿತ್ರಕಾರ
ನಿಸರ್ಗದ ಮಿಡಿತಕ್ಕನುಸಾರ ಉಸಿರಾಡೊ ಹಾಡುಗಾರ
ಕಸದಿಂರಸವ, ಮಣ್ಣಿಂದನ್ನವ ಸೃಷ್ಟಿಸಬಲ್ಲ ಜಾದುಗಾರ
ಗಂಧದೆದೆಯ ಜೀವನಕಲಾವಲ್ಲಭನಲ್ಲವೆ? ಈ ಆರಂಬಕಾರ;

ಹಸಿವಿಗಿಂತ ನರಕಶಿಕ್ಷೆಯಿಲ್ಲ, ಅನ್ನಧಾತನಿಗಿಂತ ಧಾತನಿಲ್ಲ
ಇವನಿಲ್ಲದೆ ಜಗನೆಡೆಯದೊ, ಇವನೆಡೆಗೆ ಭಕ್ತಿ ತೋರೊ;
ಅನ್ನ ನೀಡುವ ಕೈ ಸಣಕಲಾದರೆ, ಜಗವೆ ಬಡಕಲು ತಿಳಿಯೊ
ಇವನಳಿವಲಿ ಮನುಕುಲದಳಿವಡಗಿದೆ, ಇದನರಿತು ಬಾಳೊ;

Friday, March 25, 2011

ಹೇಳಲೇಬೇಡ ಗೆಳತಿ

ನೀನೆಂದೂ ಹೇಳಲೆಬೇಡ ಗೆಳತಿ, ನಿನ್ನ ಹೆಸರ
ಯಾವ ಪದಬಂಧದ ಹಂಗಿಗೂ ಎಟುಕದ ಚೆಲುವು ನಿನ್ನದು!
ನಾನೆಂದೂ ಕೇಳುವುದೆ ಇಲ್ಲ ಒಡತಿ, ನಿನ್ನ ಕುಲ
ಯಾವ ಕುಲಕರ್ತೃವಿನ ನಿಲುವಿಗೂ ನಿಲುಕದ ಪ್ರೀತಿ ನಮ್ಮದು!

ನಿನ್ನ ಪೂರ್ವಾಪರದ ಹಾದಿ ಅರಿತು ಆಗಬೇಕಾಗಿರುವುದೆನಿಲ್ಲ
ಈ ಗೌಡಶಕದಿ ಎಂದೆಂದೂ ಹೂವಹಾದಿಯಲ್ಲೇ ನಿನ್ನ ಪಯಣ!
ನಿನ್ನ ಊರುಕೇರಿಯ ಕಥೆ ಕೇಳದೆ ಕಳೆದುಕೊಳ್ಳುವುದೆನಿಲ್ಲ
ಮುಂದೆ ನೀನೆಂದೆಂದು ನನ್ನೆದೆಯಂತಃಪುರದ ಖಾಯಂನಿವಾಸಿ!

ನಾ ಮೀಟಿದ ಭಾವಕೆ, ನೀ ಹಾಡದಿದ್ದರೂ ಬಯಕೆಗೀತೆ
ನಾ ಬಿಡದೆ ಆಲಿಸಬಲ್ಲೆ ನಿನ್ನೆದೆಬಡಿತದ ನಾದಸುಧೆಯೊಳಗೆ!
ನಾ ನುಡಿಸಿದ ತಾಳಕೆ, ನೀ ಕುಣಿಯದಿದ್ದರೂ ಲಜ್ಜೆಕುಣಿತ
ನಾ ನಿಂತಲ್ಲೇ ಕಾಣಬಲ್ಲೆ ನಿನ್ನ ಕಣ್ಣಂಚಿನ ಸ್ಫುಟಸಂಚಿನೊಳಗೆ!

ಕಣ್ ಮುಚ್ಚಿದ ಕತ್ತಲಲ್ಲೂ ಮಿಂಚಂತೆ ನೀನೆ ಕಾಡುವಾಗ
ದರುಶನಕೆ ಯಾಕೆ ನೀಡಲಿ ಅಂತೆಕಂತೆಯ ಕಪ್ಪಕಾಣಿಕೆ?
ಇರುವ ನಿಜಜನುಮದಲ್ಲೇ ನಮ್ಮೆಲ್ಲ ವ್ಯವಹಾರಗಳ ಮುಗಿಸದೆ
ಏಳೇಳು ಜನುಮಕ್ಕೂ ಕರುಣಿಸಲು ದೇವರಿಗೇಕೆ ಬಿಸಿಬೇಡಿಕೆ?

ದೃಷ್ಟಿಬಾಣಗಳ ಸುರಿಮಳೆಗೈದು ಕಾಡಬೇಡವೆ ಕನ್ನಿಕೆಯೇ  
ಮೊದಲ ಬಾಣಕೆ ಖುದ್ದಾಗಿ ಖುಷಿಯಿಂದಲೆ ಶರಣಾಗಿರುವೆ!
ನಿನ್ನ ನಾಜೂಕಿನ ನೀಳ ತೋಳ್ಗಳಿಂದ ಬಿಗಿಯಾಗಿ ಬಂಧಿಸಿ
ನಿನ್ನೆದೆಗೂಡಲಿ ಕೂಡಿಹಾಕು, ಹಾಯಾಗಿ ಸೆರೆಯಾಳಾಗಿರುವೆ!

Monday, February 7, 2011

ಪ್ರೀತಿಯಾರಾಧಕ

ಸೌಂದರ್ಯವೆ ಜಗಕೆ ಮೂಲದೇವರೆಂದರೆ
ನಿನಗಿಂತ ಮಿಗಿಲಾದ ದೇವತೆ ಎನಗಿಲ್ಲ;
ಧ್ಯಾನವೊಂದೆ ಜೀವಕೆ ಮುಕ್ತಿಮಾರ್ಗವೆಂದರೆ
ನನ್ನನ್ನ ಮೀರಿಸುವ ಯೋಗಿಯ ಕಂಡಿಲ್ಲ;

ಒಂಟಿಬಾಳಿನ ಬವಣೆ ನೀಗಲು ವರವಾಗಿ ನೀ ಬಂದು
ಬ್ರಹ್ಮ ನನ್ನೊಳಗವತರಿಸುವರೆಗೂ ಬಿಡದೆ ಮುದ್ದಾಡು;
ನಾನಟ್ಟಿಟ್ಟ ರಸದೆಡೆಯ ನೈವೇದ್ಯವ ನೀ ಸವಿದು
ಹಸಿದ ಭಕ್ತನ ಬಯಕೆಗಳ ಉಪವಾಸಕೆ ಅಂತ್ಯಹಾಡು;

ಸರಸದಲಿ ಬೆಂದು, ರಸಸಮಾಧಿಯಲಿ ಮಿಂದು
ಹರಯವೆಂಬ ಹರಕೆ ಅರ್ಪಿಸಿ ಹಾಡೊ ದಾಸನಿವ;
ಮುತ್ತಿನಲಿ ಸಿಂಗರಿಸಿ, ಲಾವಣ್ಯಮಂತ್ರ ಜಪಿಸಿ
ಪ್ರಣಯಾಭಿಷೇಕದ ಅರ್ಚನೆಮಾಡೊ ಶರಣನಿವ;

ಕಾಮಕಮ್ಮಟದಿ ನನ್ನ ಕಸರತ್ತಿನ ಕುಶಲತೆಗೆ ಕರಗಿ
ಆ ರಮಿಸುವ ಪರಿಯ ಪರಿಧಿಗೆ ಬೆಕ್ಕಸ ಬೆರಗಾಗಿ
ನೀ ಕಣ್ಣಲ್ಲೇ ಕರುಣಿಸಿದ ಕಾಮೇಶ್ವರಜ್ಯೋತಿಯ
ಆರದ ಹಾಗೆ ಸದಾಕಾಪಾಡೊ ಕರ್ಮಯೋಗಿಯಿವ;

Wednesday, January 5, 2011

ಕಾದಿರುವೆ ಬಾರೊ ಮಹಾಗುರುವೆ


ಎಲ್ಲಿರುವೆಯೋ ಎನ್ನ ಮಹಾಗುರುವೆ, ಕಾದಿರುವೆ ನಿನಗಾಗಿ
ಮನಸೆಂಬ ಹೋರಿಯ ತಿದ್ದಿ, ಬೇಸಾಯದೆತ್ತು ಮಾಡುಬಾರೊ ರೈತನೆ;
ದಿಕ್ಕೆಟ್ಟು ಕೂತಿರುವೆನ್ನ ಎದೆಯೊಳಗಡಗಿರುವ ಚೈತನ್ಯದೀಪಕೆ
ಜ್ಞಾನದ ಕಿಡಿಯಿಟ್ಟು ಬೆಳಗಿಸಿ, ಚರಮಮುಕ್ತಿಯಡೆಗಟ್ಟುಬಾರೊ ದೇವನೆ;

ಒಳಗಡಗಿರುವ ಸುಂದರಶಿಲೆಯ ಅಲ್ಪಕಲ್ಪನೆಯು ಇಲ್ಲದೆ
ನಶ್ವರಕಾಮನೆಗಳ ದಂಡಿನ ಕಾಲ್ತುಳಿತಕೆ ಸಿಕ್ಕಿ ಸವೆದು
ಚಕಾರವೆತ್ತದೆ ವಿಕಾರವಾಗುತಿರುವೀ ನಿರಾಕಾರ ಬಂಡೆಗೆ
ಜ್ಞಾನದುಳಿಪೆಟ್ಟು ಕೊಟ್ಟು, ವಿರಕ್ತಮೂರ್ತಿಯಾಕಾರ ಕಡೆದು
ಕಾಲಲ್ತುಳಿತಿರುವ ಕಾಮನೆಗಳು ಕೈಮುಗಿವಂತೆ ಮಾಡುಬಾರೊ ಶಿಲ್ಪಿಯೆ!

ದಿಕ್ಕುದೆಸೆಯಿಲ್ಲದೆ ತೆವಳುತಿರುವೀ ಸಂಸಾರಸಾಗರದಲಿ
ಸರ್ವೆಂದ್ರಿಯಗಳ ಎಂದೂ ಮುಗಿಯದ ಮೋಹದಲೆಗಳು
ಮೇಲೆತ್ತುವಂತೆ ತೋರಿ, ಸಂಪೂರ್ಣ ಮುಳಿಗಿಸಿ
ಈಜಿ ಮರಳಲಾಗದ ತೀರಕೆ ಸೆಳೆದೊಯ್ಯುವ ಮುನ್ನ
ಆಪತ್ ಭಾಂಧವನಾಗಿ ಬಂದು, ಬಿಡಿಸಿ ಎಳೆದೊಯ್ಯುಬಾರೊ ಅಂಬಿಗ!

ಋಷಿಯ ದನಿಯಾಗಿ ಬಾರೊ, ಗುಡಿಯ ಕಲ್ಲಾಗಿ ಬಾರೊ,
ಕಬ್ಬದ ರಸವಾಗಿ ಬಾರೊ, ಕಥೆಯ ಪಾತ್ರವಾಗಿ ಬಾರೊ,
ಹಸಿವ ನೋವಾಗಿ ಬಾರೊ, ಬೇಸವ ಬಾಂಧವ್ಯವಾಗಿ ಬಾರೊ,
ಸದ್ಯ ಹೇಗಾದರೂ ಬಾರೊ, ಬರದೆ ಮಾತ್ರ ಕಾಡಿಸಬೇಡ;
ದಾಕ್ಷಿಣ್ಯನೆರೆಯಲಿ ಕೊಚ್ಚಿಹೋಗುತಿರುವೆನಗೆ ಭಾವದಾಸರೆಯಾಗಿ
ಗೊಂದಲಗದ್ದೆಯಿಂದ ಎದ್ದೇಳಲು ನಿನ್ನ ತೋಳ್ಗಳ ನೀಡುಬಾರೊ ತೆತ್ತಿಗ!