Wednesday, May 30, 2012

ಭಾವಪ್ರವಾಹ

ಇಷ್ಟು ದಿನ ಸುಮ್ಮನಿದ್ದು
ಯಾವ ಸುಳಿವು ನೀಡದೆ
ಇಂದೇಕೊ ಉಕ್ಕಿಬಂದ
ಭಾವಪ್ರವಾಹಕೆ ಸಿಕ್ಕಿ 
ಗೊತ್ತುಗುರಿ ಇಲ್ಲದಯೆ
ತೊಳಲಾಡಿದೆ ಮನಸು

ನೀ ಕೂಡಿ ಹಾಡುವುದ ನಿಲ್ಲಿಸಿ
ಬಹುದೂರ ಹೋದ ನಂತರ
ತಾಳತಪ್ಪಿ ಕೊರಗುತಿರುವ
ನನ್ನ ಬಾಳಿನ ಸಂಗೀತದ
ಅಪೂರ್ಣತೆಯ ಅರಿವಾಗಿ
ತಳಮಳದ ಕೂಗು ನನ್ನೊಳಗೆ

ನೀನಿದ್ದೆ ನನ್ನ ಎದೆಯೊಳಗೆ
ಚೆಂಡಿನೊಳಗಿನ ಗಾಳಿಯಂತೆ
ಕಾಣದ ಬಲದ ಮೂಲವಾಗಿ
ನೀ ಹೊರ ನಡೆದ ಮೇಲೆ
ನಾ ಉಸಿರೆ ಇಲ್ಲದ ಶೂನ್ಯದಲಿ
ಚೇತನವಿಲ್ಲದ ಬರಿ ಮುದ್ದೆ

ನಿನ್ನ ನೆನಪಿನ ಹಚ್ಚಹಸಿರು 
ನನ್ನೆದೆಯಲಿ ಬತ್ತದ ಹಾಗೆ
ಕಣ್ಣೀರಿನ ಮಳೆಗರೆದಾದರೂ
ಸದಾ ಹಸಿರಾಗೆ ಇಡುವೆ
ದಿನಾ ಬಿಡದೆ ನೆನೆಸುವೆ
ನೆನೆಸುತಲೆ ನಿನ್ನ ಮರೆವೆ

Sunday, May 27, 2012

ಅರಿಯದೆ ಏನೋ ಕಳೆದು ಕೊಂಡಿರುವೆ

ನನ್ನ ಮುಖ ನೋಡಲಾಗದೆ
ನೀ ಎಷ್ಟೇ ದೂರ ಸರಿದರೂ,
ನನ್ನ ದ್ವನಿ ಕೇಳಲಾರದೆ
ನೀ ಕಿವಿ ಮುಚ್ಚಿ ಕೊಂಡರೂ,
ಅನ್ಯ ಮಾರ್ಗ ಕಾಣದಾಗಿದೆ
ಇಳಿಸಲೆನ್ನ ಹೃದಯ ಭಾರವ,
ನೀನೆ ಪ್ರೀತಿಯಿಂದ ನೀಡಿದ
ಹಸಿ ನೆನಪುಗಳ ಸಾಲವ,
ಇಂದೊಮ್ಮೆ ಸಹಿಸಿಕೋ ಒಲವೆ
ಮತ್ತೆಂದು ಸುಳಿಯನು ನಿನ್ನ ಸನಿಹಕೆ.

ಇಷ್ಟು ದಿನ ಜೊತೆ ನಡೆದ ದಾರಿ
ನಿನಗಿಂದು ಬೇಸರ ತರಿಸಿದೆ,
ಮತ್ತೊಂದು ಸುಂದರ ದಾರಿ
ನಿನ್ನ ಹೃದಯದ ಕಣ್ ಸೆಳೆದಿದೆ,
ಬೇಡವೆನ್ನಲು ಮೂಡ ನಾನ್ಯಾರು?
ನಿನ್ನ ಪ್ರಯಾಣ ಸುಖವಾಗಿರಲಿ
ಎಂಬುದಷ್ಟೇ ನನ್ನಯ ಬಯಕೆ,
ನೀ ತುಂಬಿದ ಸಿಹಿಕ್ಷಣದ ಜೋಳಿಗೆಯ
ನೆನಪುಗಳ ಮೆಲುಕು ಹಾಕಿ ಹಾಡುತ
ಸಾಗಿಸುವೆ ನನ್ನಯ ಒಂಟಿಪಯಣ.

ನಿನ್ನ ಸುಂದರ ಜೀವನ ಕಥೆಯಲಿ
ಮುಗಿದ ಸಣ್ಣ ಅಧ್ಯಾಯ ನನ್ನದು,
ನಿನಗದು ಮುಗಿದ ಸಪ್ಪೆ ಅಧ್ಯಾಯ,
ನನಗದುವೆ ಮುಗಿಯದ ಸ್ವಪ್ನಕಾವ್ಯ,
ಆದರೆ ನನ್ನದೆಲ್ಲ ಪುಟಗಳು ಇಂದೇಕೊ
ಖಾಲಿ ಖಾಲಿ ಹಾಳೆಗಳಂತೆ ತೋರಿವೆ,
ಬರೆಯಬೇಕಾದುದು ಬಹಳ ಉಳಿದಿದೆ,
ಬರೆಯಲು ಈಗ ಕಾಲ ಮೀರಿಹೋಗಿದೆ,
ಅರಿಯದೆ ಏನೋ ಕಳೆದು ಕೊಂಡಿರುವೆ,
ಕಳೆದುದು ಏನೋ ಇನ್ನೂ ತಿಳಿಯದಾಗಿದೆ.

ನಿನ್ನ ಎಲ್ಲ ಕಷ್ಟಸುಖಗಳಿಗೆ
ಇಷ್ಟಪಟ್ಟು ನಾ ಭಾಗಿಯಾದೆ,
ನಿನ್ನ ಒಲವನೆಲ್ಲ ದೋಚಿಕೊಂಡು
ಸಿರಿವಂತನಾಗಿ ಹೋದೆ ನಾನು,
ಇದ್ದಕಿದ್ದ ಹಾಗೆ ನಿನಗೆ ಬೇಡವಾದ
ಬಡತನವ ಹೇಗೆ ತಾನೇ ಸಹಿಸಲಿ?
ನಿನ್ನ ತಿರಸ್ಕಾರದ ಜ್ವಾಲೆಯಲಿ
ಬೆಂದಾದ ಕರಕಲು ನಾನಿಂದು,
ಆದರೇನಂತೆ ನಿನ್ನ ದಂತಶುಚಿಯ
ಕರೆಯ ನೀರಿಕ್ಷೆ ಇನ್ನೂ ನನ್ನಲಿ ಜೀವಂತ.

Friday, May 25, 2012

ಹಾರುತಿರುವ ಹಕ್ಕಿಗೆ...

ನನ್ನ ಪುಟ್ಟ ಎದೆಯ ಗೂಡಿನಿಂದ
ಹಾರುತಿರುವ ನನ್ನ ಮುದ್ದು ಹಕ್ಕಿಯೇ
ನಿನ್ನ ರೆಕ್ಕೆ ಬಿಚ್ಚಿ ಮೇಲೆ ಹಾರಲಿಲ್ಲಿ
ತಾವು ಸಾಲದೆಂದು ನೀನು ತಿಳಿದೆಯ?

ಅಂದು ಹಾಗೆ ಒಳಗೆ ನುಗ್ಗಿ ಬಂದೆ
ನನ್ನನು ಏನು ಕೇಳದೆ
ಇಂದು ಹೀಗೆ ಹೊರಟು ಹೋಗುತಿರುವೆ
ಕೇಳಲು ಏನನು ಉಳಿಸದೆ

ಯಾವ ಮೋಹದ ಗೂಡು ಸೆಳೆಯಿತು
ನಿನ್ನ ಮಾಗದ ಮನಸನು?
ಇನ್ನು ಯಾರಿಗೆ ಕಾದು ಎಣೆಯಲಿ  
ನನ್ನ ಕನಸಿನ ಕವಿತೆಯ?

ಬಣ್ಣಬಣ್ಣದ ನೆನಪಿನ ದೀಪಗಳ
ನನ್ನಯ ಎದೆಗೂಡಿನ ತುಂಬ ಹಚ್ಚಿದ ಹಕ್ಕಿಯೇ
ಇಂದು ಗೂಡನೆ ಬಿರುಗಾಳಿಗೆ ಎಡೆಮಾಡಿ
ತಿರುಗಿ ಕೂಡ ನೋಡದೆ ಹೊರಟಿರುವೆಯ?

ಅಂದು ನನ್ನ ಗೂಡಿನ ಕರಿನೆರಳಿನ ಮರೆಯಲಿ
ಕಾಣದಾದೆನು ನಿನ್ನಯ ರಂಗುರಂಗಿನ ರೆಕ್ಕೆ
ಇಂದು ನೀನು ದೂರ ಹಾರಿ ಹೋಗುವಾಗ
ಕುಕ್ಕುತಿರುವುವು ನನ್ನ ಕುರುಡು ಕಣ್ಣನು ಅದೇ ರೆಕ್ಕೆ

ಹೇಳಬೇಕಾದ ಭಾವನೆಗಳ ಹೆಕ್ಕಿ ತರುವ ಮೊದಲೆ  
ನನ್ನಿಂದ ಬಹುದೂರ ಹೊರಟು ಹೋಗಿರುವೆಯಾ ಒಲವೆ 
ಮೌನವೀಣೆಯ ಈ ಒಂಟಿರಾಗದ ಸದ್ದನು ಮುರಿದು 
ನಿನ್ನ ಚಿಲಿಪಿಲಿಯ ಕಲರವವ ಮತ್ತೆ ಕೇಳ ಬಯಸಿದೆ ಮನವು  

ನೀನಿಲ್ಲದೆ ಈ ಗೂಡು ರವಿಯಿಲ್ಲದ ಬರಿಯೆ ಕರಿಯಾಗಸ
ನನ್ನೆಲ್ಲ ಕನಸಿನ ಚಿತ್ತಾರಗಳು ಆ ಕತ್ತಲಲೆ ಕರಗಿಹೋಗಿವೆ
ಗೂಡನೆಲ್ಲ ಗುಡಿಸಿ ಸಾರಿಸಿ ಕಾದಿರುವೆ ಮತ್ತೆ ಮರಳಬಾರದೆ
ನಿದಿರೆ ನೀಗಿದ  ಮೇಲೆ ಸದ್ದಿಲ್ಲದೆ ಬಂದೇಳಿಸೊ ರವಿಯಂತೆ?