Tuesday, August 24, 2010

ಅಕ್ಕ-ತಂಗಿ


ಎಲ್ಲಾ ಮಹಾಮತಿಯರಸರ ಹಾಗೆ ವಿಷಯದಾಳ ಅರಿಯುವ ಬದಲಾಗಿ
ತರಾತುರಿಯಲಿ ಅವರವರ ಜೊಳ್ಳು ಆದರ್ಶಭರಿತ ತಕ್ಕಡಿಯಲಿ ತೂಗಿ
ಉಳಿದ ಹಾಳೂರಿನ ಗೌಡನಂತೆ ಇಲ್ಲಸಲ್ಲದ ಹಳಸು ತೀರ್ಪು ನೀಡದೆ
ತಾಸುಗಟ್ಟಲೆ ಜೊತೆಯಲ್ಲಿ ಸುಮ್ಮನೆ ಕೂತು ಒರಗಲು ಹೆಗಲು ಕೊಟ್ಟು
ತಾಯಿ ತನ್ನ ಮಗುವಿನ ಮೊದಲ ತೊದಲು ನುಡಿಗಳನ್ನು ಆಲಿಸಿದಂತೆ
ಯಾರಿಗೂ ಹೇಳಲಾಗದ ಕಷ್ಟಕಾರ್ಪಣ್ಯಗಳ ಪಟ್ಟಿಯನ್ನು ಹೃದಯವನ್ನರಳಿಸಿ ಕೇಳಿ
ಮರುಮಾತಡದೆ ಮೂಕನೋಟದಲೆ ತರ್ಕ ಮಾಡಿ ದುಗುಡವನ್ನೋಡಿಸಿ
ತಲೆಹೋಗುವಂತದ್ದೇನು ನಡೆದೇ ಇಲ್ಲವೆನ್ನುವಂತೆ ಮೊಗವರಳಿಸಿ ನಸುನಗುತ್ತ
ಅಕ್ಕರೆಯಿಂದ ತನ್ನೆದೆಗವಚಿ ಸೆರಗಿನಿಂದ ಮೋರೆಯ ದಣಿವನ್ನೊರೆಸುತ್ತ
ತಲೆಯನ್ನು ನೇವರಿಸಿ ಹಣೆಗೆ ಮುತ್ತಿಟ್ಟು ಈ ಹಾಳು ಜೀವನವೇ ಇಷ್ಟೆಂದು ತಿಳಿಹೇಳಿ
ಮುದುಡಿದ ಮನಸನ್ನು ಗಾಳಿಪಟ ಮಾಡಿ ಹಾರಿಸಿದವಳು ನೀನೇ... ನನ್ನ ಅಕ್ಕಯ್ಯ...

ಸರಿತಪ್ಪುಗಳ ಆತ್ಮವಿಮರ್ಶೆ ಮಾಡಿಕೊಳ್ಳಲು ಕೂಡ ಸಿಗದೇ ಪುರುಸೊತ್ತು
ಯಾಂತ್ರಿಕವಾಗಿರುವ ಕರ್ಮಗಳ ಅರ್ಥಗರ್ಭಿತ ಧ್ಯೇಯಗಳೆಲ್ಲಾ ಸತ್ತು
ಈ ಬದುಕಿನ ಅವಿರತ ಅಸಂಖ್ಯ ಜಂಜಾಟಗಳ ತುಲನೆಯಿಂದ ಬೇಸತ್ತು
ಈ ಬದುಕು ಕವಲುದಾರಿಯಲ್ಲಿ ಸಾಗುತಿರುವ ವ್ಯಥೆಯ ಶಿಖರದಲ್ಲೇ ಇದ್ದರೂ
ಭರಸಿಡುಕಿನ ಸಾಗರದಲ್ಲೇ ಇದ್ದರೂ, ಭಾವದಭಾವದ ಮರುಭೂಮಿಯಲ್ಲೇ ಇದ್ದರೂ
ನಿನ್ನ ಅಂತರಾಳದಲ್ಲಿ ಮೂಡಿದ ನಗುವಿನ ಕಿರಣಗಳು ಸೋಕಿದರೆ ಸಾಕು
ಆ ಪುಟ್ಟ ತೋಳುಗಳ ಮನಸಾರೆ ಆಲಿಂಗನದ ಸ್ಪರ್ಶ ತಾಕಿದರೆ ಸಾಕು 
ಸಿಡುಕಿನ ಭಾರೀ ಮಂಜುಗಡ್ಡೆ ಕರಗಿ ಅನುರಾಗದ ಪನ್ನೀರಾಗಿ ಹರಿದು
ನನ್ನೆದೆಯ ಭಾವನೆಗಳ ಕೆರೆಯು ತುಂಬಿ ಒಲವಿನ ಕೋಡಿ ಸುರಿದು
ಹೃದಯದ ಬಯಲಿನ ತುಂಬೆಲ್ಲಾ ಸೊಂಪಾದ ಪ್ರೀತಿಯ ಫಸಲು ಬೆಳೆದು
ಸಾಗುತಿರುವ ಈ ಬಾಳ ದಾರಿಯ ಹಚ್ಚಹಸುರಾಗಿಸಿದವಳು ನೀನೇ... ನನ್ನ ತಂಗ್ಯವ್ವ...

ಭರ ಭರನೆ ದೊಡ್ಮನುಷ್ಯನಾಗುವ ಹುನ್ನಾರದ ತುರಗವನ್ನೇರಿ
ದೊಡ್ಡ ದೊಡ್ಡ ಕನಸುಗಳ ಸಾಕಾರದ ಅಶ್ವಮೇಧಯಾಗಕೆ ಹೊರಟು
ನನಗರಿಯದೆ ನನ್ನೊಳಗಿನ ಹುಡುಗಾಟಿಕೆಯ ಎಳೆಮನದ ಗಿಣಿಯ
ಗೊಡ್ಡು ಗುರಿಗಳ ಸರಳುಗಳ ಹಿಂದೆ ಮುಲಾಜಿಲ್ಲದೆ ಬಂದಿಯಾಗಿಸಿರುವೆ
ಆ ನಿರಪರಾಧಿ ಅತಂತ್ರ ಗಿಳಿಯ ಚಣಕಾಲವಾದರೂ ಸ್ವತಂತ್ರಗೊಳಿಸಿ
ಜೊತೆಯಲಿ ಸ್ವಚ್ಛಂದ ಬಾನಿಗೆ ಹಾರಿಸಿ ಸ್ವೇಚ್ಛ ಚಿತ್ತಾರ ಬಿಡಿಸಬಲ್ಲವರು ನೀವೇ;
ಹುಣ್ಣಿಮೆಯ ರಾತ್ರಿಯಲಿ ಪ್ರೀತಿಯ ಕಣ್ಮುಚ್ಚಿ ಸಾಗುತಿದ್ದ ಈ ಹುಂಬನಿಗೆ
ಪ್ರೀತಿಯ ಒಳಗಣ್ಣ ತೆರೆಸಿ, ಬೆಳದಿಂಗಳ ಸೌಂದರ್ಯ ತೋರಿಸಿ
ತೋಚಿದ ದಾರಿಯಲಿ ಸಾಗುತಿದ್ದ ನನಗೆ ಉತ್ತಮ ದಿಕ್ಕನ್ನು ಸೂಚಿಸಿ
ನಾಲ್ಕು ದಿನದ ಬಾಳಲಿ ಪ್ರೀತಿಯ ಕೊಟ್ಟುಣ್ಣುವುದರ ಅರಿವು ಮೂಡಿಸಿ
ಬಾಳ ಧಗೆಯ ಪಯಣದಲಿ ತಂಬೆಲರಂತೆ ಜೊತೆಗಿರುವವರು ನೀವೇ... ನನ್ನ ಸೋದರಿಯರೆ... 

// ಪ್ರೀತಿಯ ಸೋದರ