Friday, June 22, 2012

ಮರೆಯಲಾರೆ ನೀನೆಂದೂ

ಒಲವೆ
ಮರೆಯಬಹುದು ನನ್ನನು ನೀನಿಂದು 
ಆದರೆ ಮರೆಯಲಾರೆ ನೀನೆಂದೂ
ನಿನ್ನೆದೆಯೋಳಗಿನ ನನ್ನ ಹೆಜ್ಜೆಗುರುತು!

ತೊರೆಯಬಹುದು ನನ್ನನು ನೀನಿಂದು
ಆದರೆ ತೊರೆಯಲಾರೆ ನೀನೆಂದೂ
ನಿನ್ನ ಕಣ್ ರೆಪ್ಪೆಯೊಳಗಿನ ನನ್ನ ಮುತ್ತು!

ಅಳಿಸಬಹುದು ನನ್ನನೆ ನೀನಿಂದು
ಆದರೆ ಅಳಿಸಲಾರೆ ನೀನೆಂದೂ
ನಾವಿಬ್ಬರು ಕೂಡಿ ಬರೆದ ನೆನಪಿನ ಚಿತ್ರಪಟವ!

ನಂಬಿಸಬಹುದು ಜಗವನೆ ನೀನಿಂದು
ಆದರೆ ನಂಬಿಸಲಾರೆ ನೀನೆಂದೂ
ನನ್ನ ಕಂಡೊಡನೆ ಕುಣಿಯುವ ನಿನ್ನ ಹೃದಯವ!

ಮಲಗಬಹುದು ಉಪ್ಪರಿಗೆಯಲೇ ನೀನಿಂದು
ಆದರೆ ನನ್ನೆದೆಯ ಮೇಲೆ ಮಲಗಿ ನಿದ್ರಿಸಿದ 
ಆ ಮೋಹದ ರಾತ್ರಿಯ ಮೀರಿಸಲಾರೆ ನೀನೆಂದೂ!

ಹೇಳಬಹುದು ಜಗವೇ ಸುಂದರಿ ನೀನೆಂದು
ಆದರೆ ನನ್ನ ಕಣ್ಣೊಳಗಿನ ನಿನ್ನ ರೂಪವ ಕಂಡು
ನೀನೇ ಬೆರಗಾಗಿ ಹೋದಂತೆ ಕಾಣಲಾರೆ ಮತ್ತೆಲ್ಲೂ!

Thursday, June 14, 2012

ಮರುಭೂಮಿ

ಎಷ್ಟೇ ನೀರು ಸುರಿದರೆ ಏನು?
ಎಷ್ಟೇ ತಂಪು ಎರೆದರೆ ಏನು?
ಎಷ್ಟೇ ಹದ ಮಾಡಿದರೆ ಏನು?
ಎಷ್ಟೇ ಬೀಜ ಬಿತ್ತಿದರೆ ಏನು?
ಮಳೆಬಿಸಿಲಿನ ಹೊಡೆತಕೆ ಸಿಕ್ಕಿ
ಕರಗಿ ಮಣ್ಣಾಗಿ ಮೆದುವಾಗದೆ
ಯಾವ ಮೊಳಕೆಯು ಒಡೆಯದು
ಈ ಗುಂಡಿಗೆಯ ಕಲ್ಲುಬಂಡೆಯಲಿ!

ಕರಗಿ ಮಣ್ಣಾದ ಮೇಲೆ ಎಲ್ಲಿ ಹೋದೆ ಹೆಣ್ಣೇ
ನಿನ್ನ ನೀರು ನೆರಳಿಲ್ಲದೆ ನನ್ನೆದೆ ಬರಿ ಮಣ್ಣೇ
ಸೋನೆಮಳೆಯಾಗಿ ಬಂದು ತಣಿಸುವೆಯ?
ಬಿರುಗಾಳಿಯಾಗಿ ಬಂದು ಕದಡುವೆಯ?
ಎಂದೂ ಬರದೆ ಮರುಭೂಮಿಯಾಗಿಸುವೆಯ?

Friday, June 1, 2012

ಪ್ರೀತಿಯಂಗಡಿ


ನನ್ನ ಮನಸಿನ ಅಂಗಡಿಯಲಿ
ರಾಶಿ ರಾಶಿ ಕನಸುಗಳ ಕೂಡಿಟ್ಟು
ಬಣ್ಣ ಬಣ್ಣದ ಆಸೆಗಳ ಬಿಡಿಸಿಟ್ಟು
ಎಲ್ಲವನು ನಿನಗಾಗೆ ಮುಡಿಪಿಟ್ಟು
ತಲುಪಿಸುವುದು ಹೇಗೆಂದು ಅರಿಯದೆ
ಆಸೆಗಳ ಆಕರ್ಷಣೆಗೆ ಓಗೊಟ್ಟು
ಕನಸುಗಳ ಕಂಪಿನ ಜಾಡು ಹಿಡಿದು
ನೀನೆ ಬರುವೆಯೆಂದು ಕಾಯುತ
ವರುಷ ವರುಷಗಳೆ ಕಳೆದರೂ
ಋತು ಮುಗಿಯುತ ಬಂದರೂ
ನೀನೆಂದು ಬರದೇ ಇದ್ದ ಮೇಲೆ
ನಾನೇ ಕುದ್ದು ಕೊಡಲು ಬಂದಾಗ
ನೀನಾಗಲೆ ಬೇರೊಂದು ಅಂಗಡಿಯ ಮುಂದೆ
ನಗುತಾ ನಿಂತು ಪ್ರೀತಿ ವ್ಯವಹರಿಸುತಿದ್ದೆ
ಇನ್ನೆಲ್ಲಿಯ ಬೆಲೆ ನಿನಗೆಂದೇ ಮುಡಿಪಿಟ್ಟ
ಕೇವಲ ನಿನ್ನದೆ ಆಸೆ ಕನಸು ತುಂಬಿದ
ಈ ಬಡವನ ಪುಟ್ಟ ಅಂಗಡಿಗೆ
ನನ್ನ ಕರಗಿದ ಆಸೆಗಳ ಅಲ್ಲೇ ಬಿಟ್ಟು
ಮುದುಡಿ ಹೋದ ಕನಸುಗಳ ಸುಟ್ಟು
ಭಾರವಾದ ಹೃದಯವ ಹೊತ್ತು
ಹೊರಟಿರುವೆನಿಂದು ಬರಿಗೈಯಲಿ
ಮಬ್ಬು ಮಬ್ಬಾದ ದಾರಿಯಲಿ
ತಿಳಿಯದಾಗಿದೆ ಎಲ್ಲಿಗೆಂದು
ಆದರೂ ಹೋಗಲೆಬೇಕಿದೆ, ಹೊರಟಿರುವೆ!