Saturday, December 21, 2013

ಓ ಕೋಗಿಲೆಯೆ ಕೇಳಿಲ್ಲಿ

ಓ ವಸಂತಕಾಲದ ಅತಿಥಿಯೆ, 
ಆಗಸದಿ ಹಾರುತಿರುವ ಹಕ್ಕಿಯೆ, 
ಬಣ್ಣ ಬಣ್ಣದ ಚಿಗುರೆಲೆ ಮರಗಳ 
ಸೆಳೆತಕೆ ಮನಸೋತು, 
ಮರೆಯದಿರು ನನ್ನನು, 
ಕಡೆಗಣಿಸದಿರು ಈ ಬಡಕಲು ಮಾವಿನ ಮರವನು! 
ನಿನ್ನ ಕೊರಳಿನ ಸುಮಧುರ ರಾಗದ 
ಚಿಲುಮೆಯ ಸೆಲೆಯೆ ನಾನೆಂಬುದನು ಮರೆಯದಿರು, ಕೋಗಿಲೆಯೆ!
ಇದು ಅಹಂಕಾರವೆನಿಸಿದರೆ,
ಕ್ಷಮಿಸು, 
ಕೆಲವೊಮ್ಮೆ ಹತಾಶೆಯ ಬಣ್ಣವೂ ಕೂಡ ಹಾದಿ ತಪ್ಪಿಸುತ್ತದೆ!

Tuesday, January 22, 2013

ಮದುವೆಯ ಕರೆಯೋಲೆ

                                                        ಆತ್ಮೀಯರೇ,  

ಎದೆಯಲಿ ಪ್ರೀತಿಯ
ಮಳೆಯ ಸುರಿಸುತ
ಮನದಲಿ ನಂಬಿಕೆಯ
ಷರವ ಬರೆಯುತ
ಪ್ರೀತಿಬಂಡಿಯ ನೊಗಕೆ
ಜೋಡೆತ್ತು ನಾವಾಗುತ
ಕಾಲಿಡುತಿರುವೆವು ಬಾಳಿನ
ಹೊಸದೊಂದು ಪಯಣಕೆ;

ನಿರೀಕ್ಷಿಸುತಿರುವೆವು ನಿಮ್ಮನು
ನಮ್ಮ ಮದುವೆ ಮಹೋತ್ಸವಕೆ
ಹರಸ ಬನ್ನಿರಿ ನಮ್ಮನು
ಬಾಳಿನ ಈ ಪ್ರೀತಿ ಪಯಣಕೆ;

                                                                            ನಿಮ್ಮಯ 
                                                                  ತೋಟೇಗೌಡ & ಪೂಜ  

Thursday, January 17, 2013

ಸರಿಯೆ?

ನಿನ್ನ ಮೋಹದ ಸುಳಿಯ 
ಸೆಳೆತಕೆ ಸಿಕ್ಕಿದ ಮನವ 
ಬಯಕೆ ಬೆಂಕಿಯಲಿ ಬೇಯಿಸಿ 
ಸುಣ್ಣದ ಕಲ್ಲಾಗಿಸಿರುವುದು ಸರಿಯೆ? 

ಸುಂದರ ಆಗಸವ ಕಂಡು 
ಹಾರಲು ಹೋದ ಹಕ್ಕಿಗೆ 
ಕಾಣದ ಗಾಜಿನ ಗೋಡೆಯ ಕಟ್ಟಿ 
ಮತ್ತೆ ನೆಲಕೆ ಬೀಳಿಸೋದು ಸರಿಯೆ? 

ನಿನಗೆಂದೇ ಮೂಡಿಬಂದ ರವಿಯ 
ಕರೆಗೆ ಕಿವಿಗೊಡದೆ ದೂರಾಗಿ 
ಸತಾಯಿಸುವ ಸೂರ್ಯಕಾಂತಿಯೆ 
ನೀನು ಮಾಡುತಿರುವುದು ಸರಿಯೆ? 

ನಿನ್ನೊಳಗೆ ಲೀನವ ಬಯಸಿ
ಮೈದುಂಬಿ ಬಂದ ನದಿಯಿಂದ 
ಮತ್ತೆ ಮತ್ತೆ ದೂರ ಸರಿದು 
ನದಿಯನೆ ಬರಿದಾಗಿಸುವುದು ಸರಿಯೆ? 

Monday, December 17, 2012

ಅವಸರವೇಕೆ?

ಕೇಳೊ ನನ್ನೆದೆಯ ಸವಾರನೆ
ನಿನ್ನವಳು ಭಾವಗಳೇ ಇಲ್ಲದ 
ಬರಡುಜೀವ ಎಂದು ಹೇಳದಿರು
ಹೇಳಿ ನನ್ನನು ನೋಯಿಸದಿರು 
ನೋಯಿಸಿದ ತಪ್ಪಿಗೆ ನೋವುಂಡು 
ನಿನ್ನನೆ ನೀನು ಶಿಕ್ಷಿಸದಿರು

ನಿನ್ನ ಕಣ್ಣಂಚಿನ ಒಂದು ಒಳಪಿಗೊಸ್ಕರ 
ಮಾಡಿರುವ ನನ್ನಲಂಕಾರ ನಿನಗೆ ಕಾಣದೆ? 
ನಾನು ಮುಡಿದ  ಹೂವಿನ ಪರಿಮಳ 
ಕರೆಯುತಿಲ್ಲವೆ ನಿನ್ನನು ನನ್ನ ಸನಿಹಕೆ?   
ನನ್ನ ಎರಡೂ ಕಂಗಳ ಈ ಕೆಂಪು ಬಣ್ಣ 
ಹೇಳದೆ ನಿನಗೆ ನನ್ನ ತಳಮಳದ ಕಥೆ? 

ನೀನಪ್ಪಲು ಬಯಸಿ ಬಳಿ ಬಂದಾಗ 
ಮೈಶಾಖಕೆ ರೋಮಾಂಚನಗೊಂಡು 
ಬಿಂಕವದು ನನ್ನ ಮೈಮೇಲೆ ಬಂದು 
ನನಗರಿವಿಲ್ಲದೆ ನಿನ್ನ ದೂರ ತಳ್ಳಿದರೆ 
ಪ್ರೀತಿಸುವ ಪರಿ ತಿಳಿಯದವಳೆನ್ನುವೆ?
ಇದನ್ನೆಲ್ಲ ಹೇಗೆ ಹೇಳಲಿ ನಾ ನಿನಗೆ?   

ಮುತ್ತಿಡಲು ಮೈದುಂಬಿ ನೀಬಂದಾಗ 
ನಿನ್ನ ಬಿಸಿಯುಸಿರಿನ ಬಡಿತಕೆ ಸಿಕ್ಕಿದ  
ನನ್ನ ಮೈಯಲ್ಲಿ ಬೆದರಿ ಬೆವರಿಳಿದು  
ಲಜ್ಜೆಯ ಮೊರೆಹೋಗಿ ಅವಿತರೆ  
ಭಾವಗಳಿಲ್ಲದ ಬೊಂಬೆ ಎನ್ನುವೆ? 
ಹೇಗೆ ಬಿಡಿಸಿ ತಿಳಿಸಲಿ ನಾ ನಿನಗೆ?

ಹೆಣ್ ಮಳೆಯಲೆಂದೂ ನೆನೆಯದ ನಿನಗೆ 
ಹೆಣ್ ಜೀವದ ತಳಮಳ ಹೇಗೆ ತಿಳಿದೀತು 
ಮಲ್ಲಿಗೆ ತಂದು ಹೆಣ್ಣ ಮೆಲ್ಲಗೆ ಮಾಡುವ 
ಕಲೆಯನು ನೀನೆಂದು ಕಲಿಯುವೆಯೊ? 
ಬಿಂಕ ಬಿಗುಮಾನ ವ್ಯಯಾರಗಳಾಡಿಸುವ  
ತುಂಟ ಮಾತಾಡಲೆಂದು ತಿಳಿಯುವೆಯೊ? 

ಒಲವು ಮೂಡಿದ ಮರುದಿನವೆ 
ನನ್ನೆಲ್ಲ ಹೆಣ್ ಭಾವ ಮಂತ್ರಗಳ 
ಅರೆದು ಕುಡಿವ ಅವಸರವೇಕೆ? 
ನಿನಗಿದು ತಿಳಿಯದೆ ಗೆಳೆಯನೆ 
ಮೇರುಕವಿಗಳೆ ಓದಲು ಎಣಗಿದ 
ಮಹಾಕಾವ್ಯ ಹೆಣ್ಣಿನಂತರಂಗ ಎಂದು?

Sunday, November 25, 2012

ಹೆಸರು

ಏನೆಂದು ಕರೆಯಲೆ ಇಂದು ನಾನಿನ್ನ
ನೀನೆ ನನ್ನೊಳಗೆ ಆವರಿಸಿರುವಾಗ
ಸಂಪೂರ್ಣ ನಿನಗೆ ಶರಣಾಗಿರುವಾಗ
ನನಗೊಂದು ನಿನಗೊಂದು ಹೆಸರುಗಳೇಕೆ?
ನಮ್ಮ ಇಬ್ಬರ ನಡುವೆ ಸಂಭೋದಿಸಲು
ವ್ಯಾಕರಣವೂ ವ್ಯವಹಾರ ನಡೆಸಬೇಕೆ?
ಹೇಳುವ ಮಾತೆಲ್ಲ ಹೊರಡುವ ಮುನ್ನವೆ
ನಿನ್ನನು ತಲುಪುವಾಗ ಕರೆಯ ಹಂಗೇಕೆ?

ರಂಭೆ ಊರ್ವಶಿ ಮೇನಕೆ ಎನಲು
ಕಂಡಿರದವರ ರೂಪವ ಹೆಚ್ಚೆಂದು ಹೇಗೆನ್ನಲಿ?
ಚಿನ್ನ ಬೆಳ್ಳಿ ರನ್ನ ಎನಲು
ಭಾವನೆಗಳೇ ಇಲ್ಲದ ನಿರ್ಜೀವ ವಸ್ತುವೆ ನೀನು?
ಬೆಲ್ಲ ಸಕ್ಕರೆ ಮಧು ಎನಲು
ಬರೀ ನನ್ನ ಸಿಹಿ ರುಚಿಯ ಪಾಲುದಾರಳೆ ನೀನು?
ಗೆಳತಿ ಎಂದು ಕರೆದು
ನಮ್ಮ ಸಂಬಂಧಕೆ ಚೌಕಟ್ಟಿನ ಬೇಲಿ ಹಾಕಬೇಕೆ?
ಪ್ರೀತಿ ಪ್ರಿಯೆ ಒಲವೆ ಎನಲು ಕೂಡ
ತಿಳಿಯದ ಅಸಮಧಾನ ನನ್ನ ಎದೆಯೊಳಗೆ
ಏನೆಂದು ಕರೆಯಲಿ ಇಂದು ನಾನಿನ್ನ
ನೀನೆ ನನಗೆ ತಿಳಿಸಿ ಹೇಳಿ ನನ್ನ ಕಾಪಾಡು!

ನಿನ್ನ ಪ್ರೀತಿಯ ಒಳಗಿಳಿದು
ಭಾವಗಳನ್ನೆಲ್ಲ ಹಿಡಿದು ಬಂಧಿಸಿ
ನಿನ್ನ ಹೂ ಅಂದದ ಆಳಕ್ಕಿಳಿದು
ಎಸಳುಗಳ ರಂಗನೆಲ್ಲ ಲೇಪಿಸಿ
ನಿನ್ನ ನಗುಮಿಂಚನು ಸೆರೆಹಿಡಿದು
ಅದರ ಹೊಳಪ ತೂಗಿ ಸೇರಿಸಿ
ನಿನ್ನೊಳಗೆ ಅಡಗಿರುವ ಬಿಂಕವ
ಬಗ್ಗಿಸಿ ಹೊದಿಕೆ ಮಾಡಿ ಹೊದಿಸಿ
ಒಂದೇ ಪದದಿ ನಿರೂಪಿಸುವ ಹೆಸರ
ಕೆದಕಿ ತೆಗೆಯಬಲ್ಲ ನೈಪುಣ್ಯತೆ
ಈ ಎಳೆಕವಿಯ ಕೈಗೆಟುಕದು ಬಿಡು!