Sunday, November 25, 2012

ಹೆಸರು

ಏನೆಂದು ಕರೆಯಲೆ ಇಂದು ನಾನಿನ್ನ
ನೀನೆ ನನ್ನೊಳಗೆ ಆವರಿಸಿರುವಾಗ
ಸಂಪೂರ್ಣ ನಿನಗೆ ಶರಣಾಗಿರುವಾಗ
ನನಗೊಂದು ನಿನಗೊಂದು ಹೆಸರುಗಳೇಕೆ?
ನಮ್ಮ ಇಬ್ಬರ ನಡುವೆ ಸಂಭೋದಿಸಲು
ವ್ಯಾಕರಣವೂ ವ್ಯವಹಾರ ನಡೆಸಬೇಕೆ?
ಹೇಳುವ ಮಾತೆಲ್ಲ ಹೊರಡುವ ಮುನ್ನವೆ
ನಿನ್ನನು ತಲುಪುವಾಗ ಕರೆಯ ಹಂಗೇಕೆ?

ರಂಭೆ ಊರ್ವಶಿ ಮೇನಕೆ ಎನಲು
ಕಂಡಿರದವರ ರೂಪವ ಹೆಚ್ಚೆಂದು ಹೇಗೆನ್ನಲಿ?
ಚಿನ್ನ ಬೆಳ್ಳಿ ರನ್ನ ಎನಲು
ಭಾವನೆಗಳೇ ಇಲ್ಲದ ನಿರ್ಜೀವ ವಸ್ತುವೆ ನೀನು?
ಬೆಲ್ಲ ಸಕ್ಕರೆ ಮಧು ಎನಲು
ಬರೀ ನನ್ನ ಸಿಹಿ ರುಚಿಯ ಪಾಲುದಾರಳೆ ನೀನು?
ಗೆಳತಿ ಎಂದು ಕರೆದು
ನಮ್ಮ ಸಂಬಂಧಕೆ ಚೌಕಟ್ಟಿನ ಬೇಲಿ ಹಾಕಬೇಕೆ?
ಪ್ರೀತಿ ಪ್ರಿಯೆ ಒಲವೆ ಎನಲು ಕೂಡ
ತಿಳಿಯದ ಅಸಮಧಾನ ನನ್ನ ಎದೆಯೊಳಗೆ
ಏನೆಂದು ಕರೆಯಲಿ ಇಂದು ನಾನಿನ್ನ
ನೀನೆ ನನಗೆ ತಿಳಿಸಿ ಹೇಳಿ ನನ್ನ ಕಾಪಾಡು!

ನಿನ್ನ ಪ್ರೀತಿಯ ಒಳಗಿಳಿದು
ಭಾವಗಳನ್ನೆಲ್ಲ ಹಿಡಿದು ಬಂಧಿಸಿ
ನಿನ್ನ ಹೂ ಅಂದದ ಆಳಕ್ಕಿಳಿದು
ಎಸಳುಗಳ ರಂಗನೆಲ್ಲ ಲೇಪಿಸಿ
ನಿನ್ನ ನಗುಮಿಂಚನು ಸೆರೆಹಿಡಿದು
ಅದರ ಹೊಳಪ ತೂಗಿ ಸೇರಿಸಿ
ನಿನ್ನೊಳಗೆ ಅಡಗಿರುವ ಬಿಂಕವ
ಬಗ್ಗಿಸಿ ಹೊದಿಕೆ ಮಾಡಿ ಹೊದಿಸಿ
ಒಂದೇ ಪದದಿ ನಿರೂಪಿಸುವ ಹೆಸರ
ಕೆದಕಿ ತೆಗೆಯಬಲ್ಲ ನೈಪುಣ್ಯತೆ
ಈ ಎಳೆಕವಿಯ ಕೈಗೆಟುಕದು ಬಿಡು!

Monday, November 19, 2012

ಜಗದಗಲ

ನಿನ್ನ ಪುಟ್ಟ ಬೊಗಸೆಯಲಿ
ಸಾಗರದ ನೀರು ಅಳೆಯಲು ಸಾದ್ಯವೆ?
ನಿನ್ನ ಸಣ್ಣ ಕಂಗಳಲಿ
ಜಗದಗಲವ ಕಾಣಲು ಸಾದ್ಯವೆ?

ಸರಳ ಸುಂದರ ಬಿಳಿ ಬಣ್ಣದಲೂ
ಏಳು ಬಣ್ಣಗಳು ಅಡಗಿ ಕೂತಿವೆ
ಕಾಣದೆ ಬೀಸೋ ಬರೀ ಗಾಳಿಯಲೂ
ನೂರಾರು ವಿಸ್ಮಯಗಳು ತೇಲಿ ಸಾಗಿವೆ

ಗುಲಾಬಿ ಕಂಡು ಬಿಗಿದಪ್ಪಿಕೊಂಡರೆ
ಮುಳ್ಳುಗಳು ಮುತ್ತಿಡದೆ ಬಿಡವು
ಕೊಳಕು ಕೆರೆಯ ಕೆಸರೆಂದುಕೊಂಡರೆ
ಸುಂದರ ತಾವರೆ ಎಂದೂ ಕಾಣವು

ಕಂಬಳಿಹುಳ ಕೀಟವೆಂದು ಈಗ ಕೊಂದರೆ
ಮುಂದೆ ಬಣ್ಣಬಣ್ಣದ ಚಿಟ್ಟೆಯ ಕಾಣಲಾಗದು
ಸೂರ್ಯದೇವ ಎಂದೂ ಬಳಿ ಹೋದರೆ
ಸುಟ್ಟ ಹನುಮಂತನ ಮೂತಿಯಾಗದಿರದು

ಹಸಿರನೇ ತಿಂದು ಬದುಕೊ ಹಸುವು ಕೂಡ
ಯಾಮಾರಿ ಹಸಿರು ತಿಂದೆ ಸಾಯಬಹುದು
ಸಾಯಿಸಲೆಂದೆ ಇರುವ ವಿಷವೂ ಕೂಡ
ಸಮಯದಲಿ ಜೀವವ ಉಳಿಸಬಹುದು 

Monday, November 5, 2012

ಪೂಜೆ

ದಿನವಿಡೀ ನಿನ್ನಯ
ಹೆಸರಿಗೆ ಪೂಜಿಸುವೆ 
ಕನಸಲಿ ನಿನ್ನಯ 
ಆಗಮನಕೆ ಕಾದಿರುವೆ 
ಮನಸಿನ ಬಳಿಬಂದು 
ಮನಸಾರೆ ಮಾತನಾಡು ಬಾ 
ಕನಸಿನ ಒಳಬಂದು 
ಕಾತುರವ ದೂರಮಾಡು ಬಾ  

ಮಾತುಗಳ ಮುಲಾಜಿಲ್ಲದೆ 
ಪ್ರೀತಿಪಾಠವ ಕಲಿಸಿದೆ
ಪದಪ್ರಯೋಗದ ಹಂಗಿಲ್ಲದೆ 
ಪ್ರೇಮಕಾವ್ಯವ ಕೇಳಿಸಿದೆ 
ಜಡಗಟ್ಟಿದ ಜೀವಕೆ 
ಒಲವಿನ ಚೇತನವ ಹರಿಸು ಬಾ 
ಮರಗಟ್ಟಿದ ಮನಸಿಗೆ 
ಸಿಹಿ ಮುತ್ತಿನ ಅಮಲೇರಿಸು ಬಾ 

ಎದೆಯಲಿ ಪ್ರೀತಿಯ 
ಮಳೆಯ ಸುರಿಸುತಾ 
ಮನದಲಿ ನಂಬಿಕೆಯ 
ಷರವ ಬರೆಯುತಾ 
ಶುರುಮಾಡುವ ಬಾಳಿನ 
ಹೊಸದೊಂದು ಪಯಣವ 
ಬಾಳಬಂಡಿಯ ನೊಗಕೆ 
ಜೋಡೆತ್ತು ನಾವಗುವ ಬಾ 

ನನ್ನೊಳಗಿನ ಹೆಣ್ತನವೆ 
ನೀನಾಗಿ ಒಡಮೂಡಿ 
ನಿನ್ನೊಳಗಿನ ಗಂಡಸುತನವೆ 
ನಾನಾಗಿ ಅವತರಿಸಿ 
ಒಬ್ಬರ ಅಪೂರ್ಣತೆಗೆ 
ಮತ್ತೊಬ್ಬರು ಆಸರೆಯಾಗಿ  
ಸಂಪೂರ್ಣ ಪಯಣವ  
ಒಂದಾಗಿ ಸವೆಸುವ ಬಾ