Monday, November 19, 2012

ಜಗದಗಲ

ನಿನ್ನ ಪುಟ್ಟ ಬೊಗಸೆಯಲಿ
ಸಾಗರದ ನೀರು ಅಳೆಯಲು ಸಾದ್ಯವೆ?
ನಿನ್ನ ಸಣ್ಣ ಕಂಗಳಲಿ
ಜಗದಗಲವ ಕಾಣಲು ಸಾದ್ಯವೆ?

ಸರಳ ಸುಂದರ ಬಿಳಿ ಬಣ್ಣದಲೂ
ಏಳು ಬಣ್ಣಗಳು ಅಡಗಿ ಕೂತಿವೆ
ಕಾಣದೆ ಬೀಸೋ ಬರೀ ಗಾಳಿಯಲೂ
ನೂರಾರು ವಿಸ್ಮಯಗಳು ತೇಲಿ ಸಾಗಿವೆ

ಗುಲಾಬಿ ಕಂಡು ಬಿಗಿದಪ್ಪಿಕೊಂಡರೆ
ಮುಳ್ಳುಗಳು ಮುತ್ತಿಡದೆ ಬಿಡವು
ಕೊಳಕು ಕೆರೆಯ ಕೆಸರೆಂದುಕೊಂಡರೆ
ಸುಂದರ ತಾವರೆ ಎಂದೂ ಕಾಣವು

ಕಂಬಳಿಹುಳ ಕೀಟವೆಂದು ಈಗ ಕೊಂದರೆ
ಮುಂದೆ ಬಣ್ಣಬಣ್ಣದ ಚಿಟ್ಟೆಯ ಕಾಣಲಾಗದು
ಸೂರ್ಯದೇವ ಎಂದೂ ಬಳಿ ಹೋದರೆ
ಸುಟ್ಟ ಹನುಮಂತನ ಮೂತಿಯಾಗದಿರದು

ಹಸಿರನೇ ತಿಂದು ಬದುಕೊ ಹಸುವು ಕೂಡ
ಯಾಮಾರಿ ಹಸಿರು ತಿಂದೆ ಸಾಯಬಹುದು
ಸಾಯಿಸಲೆಂದೆ ಇರುವ ವಿಷವೂ ಕೂಡ
ಸಮಯದಲಿ ಜೀವವ ಉಳಿಸಬಹುದು 

No comments:

Post a Comment