Friday, June 1, 2012

ಪ್ರೀತಿಯಂಗಡಿ


ನನ್ನ ಮನಸಿನ ಅಂಗಡಿಯಲಿ
ರಾಶಿ ರಾಶಿ ಕನಸುಗಳ ಕೂಡಿಟ್ಟು
ಬಣ್ಣ ಬಣ್ಣದ ಆಸೆಗಳ ಬಿಡಿಸಿಟ್ಟು
ಎಲ್ಲವನು ನಿನಗಾಗೆ ಮುಡಿಪಿಟ್ಟು
ತಲುಪಿಸುವುದು ಹೇಗೆಂದು ಅರಿಯದೆ
ಆಸೆಗಳ ಆಕರ್ಷಣೆಗೆ ಓಗೊಟ್ಟು
ಕನಸುಗಳ ಕಂಪಿನ ಜಾಡು ಹಿಡಿದು
ನೀನೆ ಬರುವೆಯೆಂದು ಕಾಯುತ
ವರುಷ ವರುಷಗಳೆ ಕಳೆದರೂ
ಋತು ಮುಗಿಯುತ ಬಂದರೂ
ನೀನೆಂದು ಬರದೇ ಇದ್ದ ಮೇಲೆ
ನಾನೇ ಕುದ್ದು ಕೊಡಲು ಬಂದಾಗ
ನೀನಾಗಲೆ ಬೇರೊಂದು ಅಂಗಡಿಯ ಮುಂದೆ
ನಗುತಾ ನಿಂತು ಪ್ರೀತಿ ವ್ಯವಹರಿಸುತಿದ್ದೆ
ಇನ್ನೆಲ್ಲಿಯ ಬೆಲೆ ನಿನಗೆಂದೇ ಮುಡಿಪಿಟ್ಟ
ಕೇವಲ ನಿನ್ನದೆ ಆಸೆ ಕನಸು ತುಂಬಿದ
ಈ ಬಡವನ ಪುಟ್ಟ ಅಂಗಡಿಗೆ
ನನ್ನ ಕರಗಿದ ಆಸೆಗಳ ಅಲ್ಲೇ ಬಿಟ್ಟು
ಮುದುಡಿ ಹೋದ ಕನಸುಗಳ ಸುಟ್ಟು
ಭಾರವಾದ ಹೃದಯವ ಹೊತ್ತು
ಹೊರಟಿರುವೆನಿಂದು ಬರಿಗೈಯಲಿ
ಮಬ್ಬು ಮಬ್ಬಾದ ದಾರಿಯಲಿ
ತಿಳಿಯದಾಗಿದೆ ಎಲ್ಲಿಗೆಂದು
ಆದರೂ ಹೋಗಲೆಬೇಕಿದೆ, ಹೊರಟಿರುವೆ! 

No comments:

Post a Comment