Monday, July 26, 2010

ನಿನಗ್ಯಾಕೆ ಇಷ್ಟೊಂದು ಕಾತುರ?


ನನ್ನೊಳಗಿನ ಕವಿಯ ಅಣಕಿಸುತಿದೆ 
ನಿನ್ನಯ ಚಂಗಲು ನೋಟದ ಮೂಕ ಮಾತು
ನನ್ನೊಳಗಿನ ರಸಿಕನ ಕಿಚಾಯಿಸುತಿದೆ 
ನಿನ್ನಯ ನವಯೌವನದಿ ತುಂಬಿದೆದೆಯ ಸಿರಿ 
ನನ್ನೊಳಗಿನ ದುಂಬಿಯ ಕೆಣಕುತಿದೆ 
ನಿನ್ನಯ ಅಧರದ ಮಧುಮತ್ತ ಮಕರಂದ
ನನ್ನೊಳಗಿನ ಕಾಮಾಸುರನಿಗೆ ರಸದೆಡೆಯಾಗಲು 
ನಿನಗ್ಯಾಕೆ ಇಷ್ಟೊಂದು ಕಾತುರ

ವಿರಹದ ಬೇಸಿಗೆಯಲಿ ಬೆಂದು ಬೆಂಡಾದ ಬೆತ್ತಲೆ ಭೂಮಿಯಂತೆ
ತಣಿಯಲು ಕಾದಿರುವೆಯ ನನ್ನಯ ಪ್ರೀತಿಯ ಮುಂಗಾರು ಮಳೆಗಾಗಿ
ಒಂಟಿತನದ ಕೆಸರಲೆ ಬೆಳೆದು ನಿಂತಿರುವ ತಾವರೆ ಮೊಗ್ಗಿನಂತೆ
ಅರಳಲು ಕಾದಿರುವೆಯ ಈ ರವಿಯ ಬಾಹು ಬಂಧನದ ಕಾವಿಗಾಗಿ
ಶೃಂಗಾರದ ಸಕಲ ರಾಗಗಳ ತನ್ನೊಳಗೆ ಬಚ್ಚಿಟ್ಟ ಕೊಳಲಿನಂತೆ
ನುಡಿಯಲು ಕಾದಿರುವೆಯ ಈ ಮಾಂತ್ರಿಕನ ಅನುರಾಗದ ಸ್ಪರ್ಶಕ್ಕಾಗಿ
ಬಯಕೆಗಳ ಬೆಳೆ ಬೆಳೆದು ಫಸಲು ಕೊಯ್ಲಿಗೆ ಬಂದಿರುವ ಹೊಲದಂತೆ
ಅರ್ಪಿಸಲು ಕಾದಿರುವೆಯ ಈ ರೈತನ ಸುಗ್ಗಿಯ ಕಾಲದ ಹಿಗ್ಗಿಗಾಗಿ

ಕುಡಿಸದೆ ಮತ್ತೇರಿಸುವ ಗಮ್ಮತ್ತು ನಿನ್ನ ಮೈಮಾಟಕ್ಕಿದೆ
ಕೂತಲ್ಲೆ ಸೆಳೆಯುವ ಕಿಮ್ಮತ್ತು ನಿನ್ನ ಕಣ್ಣೋಟಕ್ಕಿದೆ
ಮುಟ್ಟದೆ ಮುದ್ದಾಡುವ ತಾಕತ್ತು ನಿನ್ನ ಒಡನಾಟಕ್ಕಿದೆ
ಬಲೆಯಿಲ್ಲದೆ ಬಂಧಿಸುವ ಮಸಲತ್ತು ನಿನ್ನ ಮನದ ತೊಳಲಾಟಕ್ಕಿದೆ
ಬಿಂಕದ ಭಂಗಿಗಳಿಂದಲೇ ನನ್ನ ನೆಮ್ಮದಿಗೆ ಭಂಗ ತರುತ್ತಿರುವೆ 
ವಯ್ಯಾರದ ನಡಿಗೆಯ ಹಾವ ಭಾವಗಳಿಂದ ನನ್ನ ಸಂಗ ಬಯಸುತ್ತಿರುವೆ
ನಿನ್ನೆದೆ ಕೆರೆಯ ಕಾಮನೆಗಳಿಂದ ತುಂಬಿ ನಯನಗಳಲ್ಲಿ ಕೋಡಿ ಹರಿಸುತ್ತಿರುವೆ 
ನನ್ನಯ ಪ್ರಾಯ ನೆಟ್ಟಗೆ ಬಲಿಯುವ ಮುಂಚೇನೆ ಪ್ರಣಯಕ್ಕೆ ಬಲಿ ತರವೆ

ಎಲ್ಲದನ್ನು ಪೂರ್ವ ಪರಿಣಿತಿ ಪಡೆದೆ ಮಾಡಬೇಕೆಂದೇನಿಲ್ಲ
ತಗ್ಗಿರುವಡೆಗೆ ನೀರು ಹರಿಯುವುದು ಪ್ರಕೃತಿ ನಿಯಮ 
ಎಲ್ಲವನ್ನು ಮೊದಲೇ ಕಲಿತು ಅರಿತು ಮಾಡಬೇಕೆಂದೇನಿಲ್ಲ
ಕಾಯಕವೆ ಕೈಲಾಸ ಎಂದು ದುಡಿವುದು ಧರ್ಮದ ಮೂಲ ನಿಯಮ
ಎಲ್ಲದಕ್ಕೂ ಸೋಲು ಗೆಲುವುಗಳ ಲೆಕ್ಕ ಹಾಕಬೇಕೆಂದಿಲ್ಲ
ಫಲಿತಾಂಶಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯವೆಂಬುದು ಜನರ ನಿಯಮ 
ಎಲ್ಲದಕ್ಕೂ ಲಾಭ ನಷ್ಟದ ತೂಕ ಹಾಕಬೇಕೆಂದಿಲ್ಲ
ಮಾಡುವ ಕರ್ಮದಲಿ ಸಂತೃಪ್ತಿಯಿರಬೇಕೆಂಬುದು ನಿನ್ನಯ ನಿಯಮ 
ಎಲ್ಲದಕ್ಕೂ ಸರಿ ತಪ್ಪಿನ ಅಳತೆ ಮಾಡಬೇಕೆಂದೇನಿಲ್ಲ
ನಿರ್ಧಾರ ಅವರವರ ಜ್ಞಾನಕ್ಕನುಸಾರವಾಗಿರುತ್ತದೆಂಬುದು ನನ್ನಯ ನಿಯಮ 
ಆದರೂ ಏಕೋ ಕಾಣೆ ಹೆದರಿಕೆ ಶುರು ಮಾಡಲು ಬಾಳ ಈ ಹೊಸ ಆಯಾಮ 


11 comments:

 1. Gowdre.. Nijvaglu nimge eno aagide ;) :P .. nim tandeyavar hatra maatadi.. nimgondu maduve madsodu olledu anta anistidi..

  ReplyDelete
 2. anda haage photo tumba chennagide ;)

  ReplyDelete
 3. Eno modle nodkondu lekkachara hakida haagide, Kavanadalli enono idee..Kanasu kanuvudannu kammi maadi try madi...sigade elli hoguthhe..

  ReplyDelete
 4. ಗೌಡ್ರೆ, ಮದುವೆ ಮಾಡ್ಕೊಳ್ಳಿ ;)
  ಕವನ ಚೆನ್ನಾಗಿದೆ!
  "ಎಲ್ಲದನ್ನು ಪೂರ್ವ ಪರಿಣಿತಿ ಪಡೆದೆ ಮಾಡಬೇಕೆಂದೇನಿಲ್ಲ" ಅಂತ ಹೇಳಿ ಕವನ ಬರಿತಾ ಬರಿತಾ ನೀವು ಕವಿ ಯಾಗ್ಬಿಟ್ರಿ... ರಸಕವಿಯಾಗ್ಬಿಟ್ರಿ ;)

  ReplyDelete
 5. ತಮ್ಮ ಅಮೂಲ್ಯ ಸಮಯವನ್ನು ನನ್ನ ಈ ಕವನ ಓದಲು ಉಪಯೋಗಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ದನ್ಯವಾದಗಳು.

  @ಸುನಿಲ್: ನನಗೇನೂ ಆಗಿಲ್ಲ, ಚೆನ್ನಾಗಿದ್ದೀನಿ. ನನ್ನ ಅಪ್ಪನಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ :)
  @ಮಹೇಶ್: ಮಚ್ಚಾ, ಯಾವ ಲೆಕ್ಕಾಚಾರ ಕೂಡ ಇಲ್ಲ, ಸುಮ್ಮನೆ ಕಾಲಹರಣಕ್ಕೆ ಬರೆದ ಕವಿತೆ
  @ನವೀನ: ಮದುವೆಗೆ ಇನ್ನೂ ಕಾಲ ಇದೆ. ಕವಿ??? ಜೀರ್ಣಿಸಲು ಸ್ವಲ್ಪ ಕಷ್ಟ.

  ReplyDelete
 6. U have come a long way as a poet I must say.. Amazing!

  ReplyDelete
 7. @Sumi: Your vague comment clearly prompts me that you didn't understand the poem at all! lol;)
  Anyways thanks a lot

  ReplyDelete
 8. True that this is beyond my understanding.. had to read several times to catch the words. Though not sure if I have caught up fully with your poetry yet :) but truely.. great job! The last stanza is what I liked.. I mean even in general context it makes good sense :)

  ReplyDelete
 9. @Sumi Akka: Thanks for praising my work without even bother to understand it ;)

  ReplyDelete
 10. "ಆದರೂ ಏಕೋ ಕಾಣೆ ಹೆದರಿಕೆ ಶುರು ಮಾಡಲು ಬಾಳ ಈ ಹೊಸ ಆಯಾಮ" ಗೌಡ್ರೆ, ಹೊಸ ಆಯಾಮ ಶುರು ಮಾಡಿ . ತಮ್ಮ ಮನಸಿನ ಅಂಗಳದಲ್ಲಿ ನೆಲೆ ನಿಂತಿರುವ ಆ ಕನ್ಯೆ ಯನ್ನು ವರಿಸಿ ವಿರಹದ ವೇದನೆಯನ್ನು ತಣಿಸಿ . ನನಗೆ ಖುಷಿ ಕೊಟ್ಟ ವಾಕ್ಯ -- ಮುಟ್ಟದೆ ಮುದ್ದಾಡುವ ತಾಕತ್ತು ನಿನ್ನ ಒಡನಾಟಕ್ಕಿದೆ ಬಲೆಯಿಲ್ಲದೆ ಬಂಧಿಸುವ ಮಸಲತ್ತು ನಿನ್ನ ಮನದ ತೊಳಲಾಟಕ್ಕಿದೆ. ಸುಗ್ಗಿಯ ಕಾಲ ಬಂದಿದೆ ಗೌಡ್ರೆ , ಇನ್ನು ತಡ ಯಾಕೆ??

  ReplyDelete
 11. @ಕೆಪಿ: ನನ್ನ ಜೀವನದಲ್ಲಿ ಇನ್ನೂ ಮುಂಗಾರೆ ಶುರು ಆಗಿಲ್ಲಾ, ಇನ್ನೂ ಸುಗ್ಗಿಯ ಕಾಲ ಎಲ್ಲಿಂದ ಬರಬೇಕು. ಎಲ್ಲದಕ್ಕು ಕಾಲವೆ ಉತ್ತರಿಸಲಿದೆ. ಇದೆಲ್ಲಾ ನನ್ನ ಕಲ್ಪನೆಯ ಕೃಷಿ ಅಷ್ಟೆ.

  ReplyDelete