Wednesday, September 16, 2009

ಆಟ-ಹುಡುಗಾಟ

ಇತ್ತೀಚಿಗೆ ಒಮ್ಮೆ ಮಂಗಳೂರಿಗೆ ಯಾವುದೋ ಕಾರ್ಯದ ಮೇಲೆ ಹೋಗಿದ್ದಾಗ, ಸ್ನೇಹಿತರು "ಭರತ್ ಮಾಲ್" ಸುತ್ತಾಡುವ ಎಂದು ಕರೆದು ಕೊಂಡು ಹೋದರು. ಉಡುಪಿಗೆ ಬಂದು ೩+ ವರ್ಷಗಳಲ್ಲಿ ಪ್ರಥಮ ಬಾರಿಗೆ ಆ ಮಾಲ್ (ಮಾಲುಗಳ!!!) ವೀಕ್ಷಣೆಗೆಂದು ಅಲ್ಲಿಗೆ ಹೋಗಿದ್ದೆ. ಹೊಳಗೆ ಹೋದ ಸ್ವಲ್ಪ ಹೊತ್ತಿಗೆ, ನಾನು normal ಇದ್ದೇನಾ ಅನ್ನುವ ಸಂದೇಹಗಳು ನನ್ನಲ್ಲಿ ಮೂಡಲು ಶುರು ಮಾಡಿದವು. ಅಲ್ಲಿ ಬರುವವರ ಜೀವನ ವ್ಯವಸ್ಥೆ, ಅವರ ವೇಷ-ಭೂಷಣ, ಅವರ ಇಂಗ್ಲಿಷ್, ಎಳೆಯದೆ ಬೀಳಲಿಕ್ಕೆ ರೆಡಿ ಇರುವ ಪ್ಯಾಂಟುಗಳು, ಕರೆಂಟ್ ಹೊಡೆದ ಕಾಗೆ ಪುಕ್ಕದ ಹಾಗೆ ಇರೋ ತಲೆ ಕೂದಲು, ಉಬ್ಬು-ತಗ್ಗುಗಳೆನ್ನೇ ತೋರಿಸಲೆಂದು ಹಾಕಿದ್ದಾರೆ ಅನಿಸುವಂತಿರುವ ಹುಡುಗಿಯರ ವೇಷ, ಆ ಹುಡುಗಿಯರ ಬೆಕ್ಕಿನ ನಡಿಗೆ, ಅವರ iphone-iPod ಗಳು, ಆ ಸೇಲ್ಸ್ ಹುಡುಗಿಯರ ಯಾಂತ್ರಿಕ ನಗು, ಆ ವಸ್ತುಗಳ ಬೆಲೆ ನೋಡಿದರೆ ನೂರು ಪಟ್ಟು ದುಬಾರಿ. ಆಬ್ಭಾ, ನನಗೆ ಇದು ನಿಜವಾಗಿಯು ನಮ್ಮ ಕರ್ನಾಟಕವೇ ಎಂಬುವ ಅನುಮಾನ ಶುರುವಾಗಿತ್ತು. ನನಗೆ ಅಲ್ಲಿಂದ ಯಾವಾಗ ಹೊರಗೆ ಹೋಗುತ್ತೇನೆ ಅನ್ನಿಸುತಿತ್ತು. ಆದರೆ ಆ ವಿಷಯವನ್ನು ಸ್ನೇಹಿತರಿಗೆ ಹೇಳಿದರೆ ನನ್ನನ್ನು "not normal" ಅಂತಾ ನಿರ್ದರಿಸುತ್ತಾರೆ ಎಂದು ಸುಮ್ಮನೆ ಅವರೊಡನೆ ಸುತ್ತಾಡುತಿದ್ದೆ.

ಕೊನೆಗೆ ೩ನೆ ಹಂತಸ್ತಿಗೆ ತಲುಪಿದೆವು, ಅದು ಮಕ್ಕಳು ಆಟ ಆಡುವ ಜಾಗ - ಸ್ವಲ್ಪ normal ಅನ್ನಿಸುತಿತ್ತು. ಅಲ್ಲಿ ತುಂಬ ಜನ ಅಪ್ಪ ಅಮ್ಮಂದಿರು ಅವರ ಮಕ್ಕಳಿಗೆ ಆಟ ಆಡಿಸುತಿದ್ದರು. ಸ್ವಲ್ಪ ಸುತ್ತು ಹಾಕಿ ನೋಡಿದೆ, ಎಲ್ಲಾ ಕಂಪ್ಯೂಟರ್ ಆಟಗಳು. ಅವರ ಅಪ್ಪ ಅಮ್ಮಂದಿರು ಮಕ್ಕಳ ಖುಷಿಗಾಗಿ ಅಸ್ಟೊಂದು ಹಣ ಕರ್ಚು ಮಾಡುತಿರುವುದನ್ನು ನೋಡಿ ತುಂಬ ಖುಶಿ ಆಯಿತು. ಮತ್ತೆ ಕೆಳೆಗೆ ಬಂದು ಇನ್ನೊಮ್ಮೆ ಮಾಲ್ ಗಳ ವೀಕ್ಷಣೆ ಮಾಡಿಕೊಂಡು, ಕಣ್ಣನ್ನೆಲ್ಲಾ ಸ್ವಲ್ಪ ತಂಪು ಮಾಡಿಕೊಂಡು ಹೊರಗಡೆ ಬಂದೆವು. ಅಲ್ಲಿ ಏನಾದರು ವ್ಯಾಪಾರ ಮಾಡುವಸ್ಟು ಹಣ ನಮ್ಮ ಬಳಿ ಇರಲಿಲ್ಲ. ಹೊರಗಡೆ ಬಂದು ನನ್ನ ಸುತ್ತ ಮುತ್ತ ಇರುವ ಜನರನ್ನು ನೋಡಿ ತುಂಬ ಮನಸ್ಸಿಗೆ ಸಮಾಧಾನ ಆಯಿತು, ಜೊತೆಗೆ ಒಂದು KSRTC ಬಸ್ ನೋಡಿ ಇದು ಕರ್ನಾಟಕವೇ ಎಂದು ಮನದಟ್ಟಾಯಿತು.

ಅಲ್ಲಿಂದ ಬಂದು ಉಡುಪಿ ಬಸ್ ಹತ್ತಿ ಪ್ರಯಾಣ ಶುರು ಮಾಡಿದೆವು, ಆಗ ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಕೊರೆಯಲಿಕ್ಕೆ ಶುರು ಮಾಡಿತು - ನಾನು ಚಿಕ್ಕವನಾಗಿದ್ದಾಗ ಯಾವ ಯಾವ ಆಟಗಳನ್ನು ಆಡುತಿದ್ದೆ?, ನನ್ನ ಅಪ್ಪ-ಅಮ್ಮ ಎಷ್ಟು ಹಣ ಖರ್ಚು ಮಾಡುತಿದ್ದರು? ನಾವು ಕೂಡ ಈ ಮಕ್ಕಳ ಹಾಗೆ ನನ್ನ ಬಾಲ್ಯವನ್ನು ಎಂಜಾಯ್ ಮಾಡಿದ್ದೇನಾ?

ನನಗೆ ತಿಳಿದಿರುವ ಹಾಗೆ ನನ್ನ ಅಪ್ಪ-ಅಮ್ಮ ನನ್ನ ಆಟಕ್ಕಾಗಿ ಒಂದು ಬಿಡಿಗಾಸು ಕೂಡ ಖರ್ಚು ಮಾಡಿಲ್ಲ. ನಾವು ಆಡುತಿದ್ದ ಆಟಗಳಿಗೆ ಯಾವುದೇ ಹಣದ ಅವಶ್ಯಕತೆ ಇರಲಿಲ್ಲ. ಯಾವುದೇ ಯಂತ್ರದ ಮೇಲೆ ಅವಲಂಬಿತವಾಗಿರಲಿಲ್ಲ. ನಮ್ಮ ಅಪ್ಪ ಅಮ್ಮ ಯಾವತ್ತು ನಮಗೆ ಆಟ ಅಡಿಸಲಿಕ್ಕೆ ಬರುತ್ತಿರಲಿಲ್ಲ, ರೈತರಾದ ಅವರಿಗೆ ಸಮಯವೇ ಇರುತ್ತಿರಲಿಲ್ಲ. ನಮ್ಮೂರಿನ ಸ್ಥಿತಿ ಈಗಲೂ ಹಾಗೆ ಇದೆ. ನಾವುಗಳು ಆಡುತಿದ್ದ ಆಟಗಳೆಂದರೆ ಬುಗರಿ (ಬಗರಿ), ಗಿಲ್ಲಿ-ದಾಂಡು, ಟಿಕ್ಕಿ, ಕೋಲಾಟ, ಕಳ್ಳ-ಪೋಲಿಸ್, ಕಣ್ಣಾ-ಮುಚ್ಚಾಲೆ, ಚೌಕಾಬರೆ, ಕುಂಟೆ-ಬಿಲ್ಲೆ, ಕಬಡ್ಡಿ, ಮರಕೋತಿ, ಈಜು, ಹಾಗು ಇತರೆ ಸಣ್ಣ ಪುಟ್ಟ ಆಟಗಳು. ನಮಗೆ ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್ ಅಂತೆಲ್ಲಾ ಆಟಗಳು ಇದೆ ಅಂಥ ಕೂಡ ಗೊತ್ತಿರಲಿಲ್ಲ, ನನ್ನ ಜೀವನದಲ್ಲಿ ಕ್ರಿಕೆಟ್ ಅಂಥ ಆಟ ಇದೆ ಅಂಥ ತಿಳಿದದ್ದು ಎಂಟನೆ ತರಗತಿಯಲ್ಲಿ ಹಾಗು ಪುಟ್ಬಾಲ್, ಟೆನ್ನಿಸ್ ಬಗ್ಗೆ ತಿಳಿದದ್ದು puc ಯಲ್ಲಿ. ಎತ್ತಿನ ಗಾಡಿಯಲ್ಲಿ ಕೂತು (ಎಮ್ಮೆಯ ಮೇಲೆ ಕೂತು) ರಿಯಲ್ ರೇಸ್ ಮಾಡಿ ಅಭ್ಯಾಸ ಇತ್ತೇ ಹೊರೆತು, ಯಾವುದೇ ಕಂಪ್ಯೂಟರ್ ಕಾರ್ ರೇಸ್ ಬಗ್ಗೆ ಗೊತ್ತಿರಲಿಲ್ಲ. ಯಾವುದೇ ಬೋಟಿಂಗ್ ಮಾಡಿ ಗೊತ್ತಿಲ್ಲದಿದ್ದರೂ ಎಮ್ಮೆ ಅಥವಾ ಎತ್ತಿನ ಮೇಲೆ ಕೂತು (ಈಜು ಬಾರದೆ ಇದ್ದರು, ಕೆಲವೊಮ್ಮೆ ಎಮ್ಮೆಯ ಬಾಲ ಹಿಡಿದುಕೊಂಡು) ಆಳವಾದ ಕೆರೆಯಲ್ಲೆಲ್ಲಾ ಸವಾರಿ ಮಾಡಿದ ಅನುಭವ ಇದೆ.

ಮೇಲಿನ ಯಾವುದೇ ಆಟಗಳಿಗೆ ಹಣದ ಅವಶ್ಯಕತೆ ಇರಲಿಲ್ಲ. ಬುಗರಿ ಹಾಗು ಗಿಲ್ಲಿ-ದಾಂಡು ಆಟದಲ್ಲಿ ನಾನು ನಮ್ಮೂರಿನ ಚಾಂಪಿಯನ್. ನಮ್ಮೂರಿನ ಪ್ರತಿಯೊಬ್ಬ ಹೆಂಗಸರು ಹಾಗು ಅಜ್ಜಂದಿರು ನನಗೆ ಬೈದಿದ್ದಾರೆ ಏಕೆಂದರೆ ಪ್ರತಿಯೊಬ್ಬರ ಮನೆ ಹೆಂಚಿಗು ಚಿನ್ನಿ (ಮರದ ತುಂಡು)ಯಿಂದ ಹೊಡೆದು ತೂತು ಮಾಡಿರುತಿದ್ದೆ. ಇನ್ನು ಟಿಕ್ಕಿ ಆಟ ಊರಿನ ಬೀದಿಯಲ್ಲಿ ಬಿದ್ದಿರುವ ಸಿಗರೇಟು ಪ್ಯಾಕೇಟು ಹಾಗು ಬೆಂಕಿ ಪೊಟ್ಟಣದ ತುಂಡುಗಳಿಂದ ಆಡುತಿದ್ದ ಆಟ. ಕಳ್ಳ-ಪೋಲಿಸ್ ಆಟ ಒಂದು ಭಯಾನಕ ಆಟ, ಏಕೆಂದರೆ ಈ ಆಟದಲ್ಲಿ ಕಳ್ಳ ಆದವರು ಊರಿನ ಯಾವುದೇ ಮನೆಗೆ ಹೋಗಿ ಅವಿತುಕೊಳ್ಳಬಹುದಿತ್ತು, ಪೋಲಿಸ್ ಆದವನು ಊರಿನ ಎಲ್ಲಾ ಮನೆಗಳನ್ನು ಹುಡುಕಬೇಕಿತ್ತು - ಕೆಲವೊಮ್ಮೆ ಒಂದೊಂದು ದಿನ ಹುಡುಕುವುದರಲ್ಲೇ ಕಳೆದು ಹೋಗುತಿತ್ತು. ಚೌಕಾಬರೆ ಆಟ, ಇದು ಚೆಸ್ ವಿಧವಾದ ಆಟ ಅಂಥ ಹೇಳಬಹುದು, ತುಂಬ ಚತುರತೆಯಿಂದ ಆಡಬೇಕಾದ ಆಟ - ಇದಕ್ಕೆ ಬೇಕಾದ ಕವಡೆಗಳನ್ನು ನಾವು ಹುಣಸೆ ಬೀಜದ ಒಂದು ಭಾಗವನ್ನು ತೆವೆದು ಬೆಳ್ಳಗೆ ಮಾಡಿಕೊಂಡು ಅವುಗಳಲ್ಲಿ ಆಡುತಿದ್ದೆವು. ಮರಕೋತಿ ಆಟವನ್ನು ಆಡಲಿಕ್ಕೆ ಹೋಗಿ ತುಂಬ ಸಲ ಕೈ ಕಾಲಿಗೆ ಪೆಟ್ಟು ಮಾಡಿಕೊಳ್ಳುತಿದ್ದೆವು. ಕಬಡ್ಡಿ ಹಾಗು ಈಜು ಸ್ವಲ್ಪ ದೊಡ್ಡವರಾದ ಮೇಲೆ ಆಡಲಿಕ್ಕೆ ಶುರು ಮಾಡಿದ ಆಟಗಳು, ಜೊತೆಗೆ ತುಂಬ ಎಂಜಾಯ್ ಮಾಡಿದ ಆಟಗಳು. ಇವತ್ತಿಗೂ ನಮ್ಮೂರಿನ ಕೆರೆಯ ಹತ್ತಿರ ಹೋದರೆ ಡೈವ್ ಹೊಡೆಯುವ ಅಂಥ ಅನ್ನಿಸುತ್ತದೆ.

ಈಗಿನ ಪಟ್ಟಣದಲ್ಲಿ ಜೀವನ ಮಾಡುವವರು ಎಷ್ಟೇ ಹಣ ಖರ್ಚು ಮಾಡಿದರು, ನಮ್ಮಂಥ ಹಳ್ಳಿ ಹುಡುಗರ ಹಾಗೆ ಜೀವನವನ್ನು ಸವಿಯಲು ಸಾಧ್ಯ ಇಲ್ಲಾ, ಅದು ಯಾವುದೇ ರೀತಿಯಲ್ಲೂ ಹಣ ವ್ಯಯ ಮಾಡದೆ. ಈ ಎಲ್ಲಾ ಆಟಗಳ ಜೊತೆಗೆ ಬೇರೆ ತುಂಟಾಟಗಳನ್ನೂ ಮಾಡುತಿದ್ದೆವು ಅವುಗಳ ಬಗ್ಗೆ ಮತ್ತೊಮ್ಮೆ ಸಮಯ ಸಿಕ್ಕಾಗ ಬರೆಯುತ್ತೇನೆ.

No comments:

Post a Comment