Friday, September 11, 2009

ಭಾಗ-೩:ನಾನೇ ನಮ್ಮೂರಿನ ಯುವಗೌಡ!

ನಾನು ಕೊನೆಯ ಅಂಕಣದಲ್ಲಿ ಹೇಳಿದ ಹಾಗೆ ನಮ್ಮೂರಿನ ಶಾಲೆಗೆ ಒಬ್ಬರೇ ಶಿಕ್ಷಕರು. ನಾನು ಶಾಲೆಗೆ ಸೇರಿದ ಸಮಯದಲ್ಲಿ ನಾಗರಾಜು ಎಂಬ ಶಿಕ್ಷಕರಿದ್ದರು, ಅವರಿಗೆ ಸರಿ ಸುಮಾರು ೪೫-೫೦ ವರ್ಷ ವಯಸ್ಸಾಗಿತ್ತು. ಜೀವನದಲ್ಲಿ ಕೇವಲ ಸಂಬಳಕ್ಕಾಗಿ ಕೆಲಸ ಮಾಡುತಿದ್ದ, ನನ್ನಂತ ಹಳ್ಳಿ ಹುಡುಗರ ಉದ್ದಾರ ಮಾಡುವ ಯಾವುದೇ ಹುಮ್ಮಸ್ಸು ಇಲ್ಲದ ಒಬ್ಬ ವ್ಯಕ್ತಿ. ಅವರು ನಮ್ಮ ಪಕ್ಕದ ಊರಿನವರು, ನಮ್ಮೂರಿನಿಂದ ಅವರ ಊರಿಗೆ ಹೆಚ್ಚು ಕಮ್ಮಿ ೮ ಕಿ ಮಿ. ಮೇಸ್ಟ್ರು ದಿನಾ ಸೈಕಲ್ ಮೇಲೆ ಬರುತಿದ್ದರು, ಬಂದು ನಮ್ಮೂರಿಗೆ ಬಂದು ತಲುಪುವಷ್ಟರಲ್ಲಿ ಪೂರ್ತಿ ಸುಸ್ತಾಗಿ ಹೋಗಿರುತಿದ್ದರು, ಹಾಗಾಗಿ ಬಂದು ಆರಾಮಾಗಿ ನಿದ್ದೆ ಮಾಡಿ ಹೋಗುತಿದ್ದರು.

ಮೇಸ್ಟ್ರಿಗೆ ನನ್ನ ಮೇಲೆ ತುಂಬ ಪ್ರೀತಿ ಹಾಗಾಗಿ ಶಾಲೆಗೆ ಹೋದ ತಕ್ಷಣ ಕೆರೆದು ನನ್ನ ಯೋಗಕ್ಷೇಮ ವಿಚಾರಿಸಿ, ಜೊತೆಗೆ ಅಂದು ನಮ್ಮನೇಲಿ ಉಟಕ್ಕೆ ಏನು ಮಾಡಿದ್ದರೆ ಎಂದು ಕೇಳುತಿದ್ದರು. ಏನಾದರು ಅವರಿಗೆ ಇಷ್ಟ ಇದ್ದ ಸಾಂಬಾರ್ ಏನಾದ್ರೂ ಮಾಡಿದ್ದರೆ (ಕೋಳಿ ಸಾರು ಅಂದ್ರೆ ಅವರಿಗೆ ತುಂಬ ಇಷ್ಟ ಇತ್ತು) ಅಂತ ಏನಾದ್ರು ಹೇಳಿದರೆ ಸಾಕು. ಏನಾದ್ರೂ ನೆಪ ಮಾಡಿಕೊಂಡು ನಮ್ಮ ಮನೆಗೆ ಹೋಗುತಿದ್ದರು. ನಮ್ಮ ಮನೆಗೆ ಬಂದವರಿಗೆ ಊಟ ಬಡಿಸದೆ ಕಳಿಸುತ್ತಿರಲಿಲ್ಲ, ಹಾಗಾಗಿ ಭರ್ಜರಿ ಸೇವೇ ಮಾಡಿಸಿಕೊಂಡು, ಜೊತೆಗೆ ತರಕಾರಿ, ಕಾಳು-ಕಡ್ಡಿ ಎಲ್ಲಾ ತುಂಬಿಕೊಂಡು ಬರುತಿದ್ದರು.

ನಾನು ಮೊದಲನೇ ತರಗತಿಗೆ ಸೇರಿದಾಗ, ನಮ್ಮ ಮೇಸ್ಟ್ರು ಶಾಲೆಗೆ ಬರೋದೇ ೧೧ ಅಥವಾ ೧೨ ಗಂಟೆ ಆಗಿರುತಿತ್ತು. ಬಂದು ಒಂದು ಗಂಟೆ ಅ ಆ ಇ ಈ ಕಲಿಸಿಕೊಡುತಿದ್ದರು, ನಂತರ ಊಟಕ್ಕೆ. ಮಧ್ಯಾನ ೧ ೨ ೩ ೪ ಹೇಳಿಕೊಟ್ಟು ೪ ಗಂಟೆಗೆ ಜಾಗ ಕಾಲಿ ಮಾಡಿ ಹೋಗುತಿದ್ದರು. ನನ್ನ ಮೊದಲಿನ ಎರಡು ವರ್ಷದಲ್ಲಿ ಅವರು ಹೇಳಿಕೊಟ್ಟಿದ್ದು, ನಾವು ಕಲಿತಿದ್ದು ಇದು ಎರಡೇ. ಈ ಎರಡು ವರ್ಷ ಕೂಡ ನಾನು ಯಾವುದೇ ಪುಸ್ತಕ, ನೋಟ್ ಬುಕ್, ಪೆನ್ ಏನು ತೆಗೆದು ಕೊಲ್ಲದೆ ಕೇವಲ ಸ್ಲೇಟ್ & ಚಾಪಿಸ್ ( ಸುಣ್ಣದ ಬಳಪ)ನಲ್ಲೆ ಮುಗಿಸಿದೆ. ಇತ್ತೀಚಿಗೆ ಮಕ್ಕಳಿಗೆ optional ಪರೀಕ್ಷೆ ಕೊಡಲು ಸರ್ಕಾರ ತೀರ್ಮಾನಿಸಿದೆ ಅಂಥಾ ಯಾವುದೊ ನಿಯತಕಾಲಿಕೆಯಲ್ಲಿ ಓದಿದೆ, ಆದರೆ ನಮಗೆ ಆ ಸಮಯದಲ್ಲೇ ಈ ವ್ಯವಸ್ಥೆ ಇತ್ತು. ನಮಗೆ ಯಾವುದೇ ಪರೀಕ್ಷೆ ಅಗಲಿ, ಕಿರು ಪರೀಕ್ಷೆ ಆಗಲೀ ಇರುತ್ತಿರಲಿಲ್ಲ. ಆದರೆ ಪಲಿತಾಂಶದ ದಿನ ಎಲ್ಲಾ ಹುಡುಗರು ಶಾಲೆಗೆ ಹೋಗುತಿದ್ದೆವು, ಅಂದು ಮೇಸ್ಟ್ರು ಎಲ್ಲರನ್ನು ಸಾಲಿನಲ್ಲಿ ಕೂರಿಸಿ, ಒಬ್ಬೊಬ್ಬರನ್ನಾಗಿ ಕರೆದು ಅವನ ಮುಖ ನೋಡಿ ಅವನು ಉತ್ತಿರ್ಣ ಅಥವಾ ಅನುತ್ತಿರ್ಣ ಎಂದು ನಿರ್ದರಿಸುತಿದ್ದರು. ಆ ದಿನ ಯಾರು ಶಾಲೆಗೇ ಬರೋದಿಲ್ಲ ಅವರುಗಳೆಲ್ಲ ಅನುತ್ತಿರ್ಣ. ನಾನು ಊರಿನ ಗೌಡರ ಮಗ ಆಗಿದ್ದರಿಂದ ನನ್ನನ್ನು ಅನುತ್ತಿರ್ಣ ಮಾಡುವ ದ್ಯೈರ್ಯ ಮೇಸ್ಟ್ರು ಮಾಡುತ್ತಿರಲಿಲ್ಲ!.

ರಾಜಕೀಯ ಪ್ರವೇಶ:
ನಾನು ಶಾಲೆಗೆ ಸೇರಿದ ವರ್ಷ ನನ್ನ ಅಣ್ಣ ಕೂಡ ಅದೇ ಶಾಲೆಯಲ್ಲಿ ನಾಲ್ಕನೆ ತರಗತಿಯಲ್ಲಿ ಓದುತಿದ್ದ, ಅವನು ಶಾಲೆಯ ಲೀಡರ್, ಮೇಸ್ಟ್ರು ನಿದ್ದೆ ಮಾಡುವಾಗಿ ಯಾರು ಗಲಾಟೆ ಮಾಡಿ ಹೆಚ್ಚರ ಮಾಡದಂತೆ ನೋಡಿಕೊಳ್ಳುವುದು ಅವನ ಕೆಲಸ. ನಮ್ಮೂರಿನಲ್ಲಿ ಕೇವಲ ನಾಲ್ಕನೆ ತರಗತಿಯವರೆಗೆ ಮಾತ್ರ ಇದ್ದುದದರಿಂದ, ಅವನು ನಾನು ಎರಡನೇ ತರಗತಿಗೆ ಬಂದಾಗ ಅವನು ಶಾಲೆಯಲ್ಲಿ ಇರಲಿಲ್ಲ. ಆಗ ಮೇಸ್ಟ್ರು ಲೀಡರ್ ಕೆಲಸಕ್ಕೆ ಒಬ್ಬ ಉತ್ತರಾದಿಕಾರಿಯನ್ನು ನೇಮಿಸ ಬೇಕಾಗಿ ಬಂತು. ಆಗ ಅವರಿಗೆ ಊರಿನ ಗೌಡರ ಮಗನಾದ ನನ್ನನ್ನು ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಲು ಮನಸಾಗದೆ ನನ್ನನ್ನೇ ಲೀಡರ್ ಮಾಡಿದರು. ರಾಜಕೀಯ ನನ್ನ ರಕ್ತದಲ್ಲೇ ಇತ್ತು ಅಂತ ಕಾಣುತ್ತೆ. ಯಾರಾದರು ನನ್ನ ಮಾತು ಕೇಳದೆ ಇದ್ದರೇ, ಯಾರಾದರು ನನಗೆ ಇಷ್ಟ ಇಲ್ಲದಿದ್ದರೆ, ನನಗೆ ಚಾಪಿಸು (ಸುಣ್ಣದ ಬಳಪ - chalk piece) ಲಂಚ ಕೊಡದೆ ಇದ್ದರೇ, ಅವರ ಹೆಸರುಗಳನ್ನು ಮೇಸ್ಟ್ರು ಒಂದು ಸುತ್ತು ನಿದ್ದೆ ಮಾಡಿ ಎದ್ದ ತಕ್ಷಣ ಹೇಳಿ ಒದೆ ಕೊಡಿಸುತಿದ್ದೆ. ಹಾಗಾಗಿ ಊರಿನ ಹುಡುಗರೆಲ್ಲ ನನಗೆ ಹೆದರುತಿದ್ದರು. ಆದರೆ ಮಂಜುಳಾ ಅನ್ನೋ ಹುಡುಗಿ ಅಂದ್ರೆ ಏನೋ ಒಂಥರಾ ಇಷ್ಟ (ಯಾಕೆ ಅಂತ ಇನ್ನು ಕೂಡ ಗೊತ್ತಿಲ್ಲ) ಆಗುತಿದ್ದಳು, ಅವಳು ಮತ್ತು ನನ್ನ ತಮ್ಮ (ಬಂಗಾರಿ) ಎಷ್ಟು ಗಲಾಟೆ ಮಾಡಿದ್ರು ಕೂಡ ಮೇಸ್ಟ್ರಿಗೆ ಹೇಳುತ್ತಿರಲಿಲ್ಲ.

ನಾನು ಮೂರನೇ ತರಗತಿಗೆ ಹೋದಾಗ ನಾಗರಾಜ ಮೇಸ್ಟ್ರಿಗೆ ವರ್ಗಾವಣೆ ಆಗಿತ್ತು. ಯಾದವರಾಜ್ ಎಂಬ ಯುವ ಮೇಸ್ಟ್ರು ನಮ್ಮೂರಿಗೆ ಬಂದಿದ್ದರು. ಆವರಿಗೆ ಬಡ ರೈತರ ಮಕ್ಕಳಿಗೆ ಕಲಿಸಬೇಕು, ಉದ್ದಾರ ಮಾಡಬೇಕು ಎಂದು ತುಂಬಾ ಆಸೆ ಮತ್ತು ಹುಮ್ಮಸ್ಸು ಇತ್ತು. ಬಂದ ಕೆಲವೇ ದಿನಗಳಲಿ, ನೆಲದ ಮೇಲೆ ಕೂರುತಿದ್ದ ನಮಗೆ ಮಣೆಗಳ ಮೇಲೆ ಕೂರುವ ವ್ಯವಸ್ಥೆ ಮಾಡಿಸಿದರು. ಕಾಗುಣಿತ, ಮಗ್ಗಿ, ಗಣಿತ (ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ) ಹೇಳಿ ಕೊಟ್ಟು. ಸ್ವಲ್ಪ ಓದು-ಬರೆಯುವುದನ್ನು ಅಭ್ಯಾಸ ಮಾಡಿಸುತಿದ್ದರು.

ಶಿಕ್ಷಕರ ಹುಮ್ಮಸ್ಸು ಕೂಡ ತುಂಬ ದಿನಾ ಉಳಿಯಲಿಲ್ಲ. ಅವರು ಕೆಳ ವರ್ಗಕ್ಕೆ ಸೇರಿದವರೆಂದು ತಿಳಿದ ಮೇಲೆ ನಮ್ಮೂರಿನ ಅನಕ್ಷರಸ್ಥ ದಡ್ಡ ಜನ ಅವರನ್ನು ಕೀಳಾಗಿ ಮಾತನಾಡಿಸಲು ಶುರು ಮಾಡಿದರು. ಒಬ್ಬ ಶಿಕ್ಷಕರಿಗೆ ಸಿಗಬೇಕಾದ ಮರ್ಯಾದೆಅವರಿಗೆ ಸಿಗುತ್ತಿರಲಿಲ್ಲ. ನಮಗೆಲ್ಲಾ ಅವರನ್ನು ಮುಟ್ಟದೆ ಇರೋ ಹಾಗೆ ಸೂಚನೆ ನೀಡುತಿದ್ದರು.

ಒಂದು ದಿನ ನಾನು ಹಾಗು ನನ್ನ ಸೋದರ ಅತ್ತೆಯ ಮಗ ತಮ್ಮಣ್ಣ (ಪ್ರೀತಿಯ ಹೆಸರು "ಡಬ್ಬಾ ") ಶಾಲೆಗೇ ಹೋಗಿದ್ದೆವು, ಮೇಸ್ಟ್ರು ಏನೋ ಹೇಳಿಕೊಡುತಿದ್ದಾಗ ನಾವಿಬ್ಬರೂ ಮಾತಾಡುತ್ತ ಕುಳಿತಿದ್ದೆವು, ಅವರಿಗೆ ಸಿಟ್ಟು ಬಂದು ನಮ್ಮಿಬ್ಬರನ್ನು ಕರೆದರು, ನಾನು ಮೊದಲು ಹೋದೆ. ನನಗೆ ಒಂದು ಒದೆ ಕೊಟ್ಟು ಕೂರಲಿಕ್ಕೆ ಹೇಳಿದರು, ಅವನನ್ನು ಕರೆದು ಒಂದು ಒದೆ ಕೊಟ್ಟರು. ಆದರೆ ಅವನಿಗೆ ತುಂಬ ಸಿಟ್ಟು ಬಂದು ಕೈಲಿದ್ದ ಸ್ಲೇಟ್ ನಿಂದ ಅವರ ಮುಖಕ್ಕೆ ಜೋರಾಗಿ ಹೊಡೆದು ಮನೆಗೆ ಹೊಡಿ ಹೋದ. ಮತ್ತೆಂದು ಅವನು ಶಾಲೆ ಕಡೆ ತಿರುಗಿ ನೋಡಲಿಲ್ಲ, ಮತ್ತು ನಮ್ಮ ತಂದೆ-ತಾಯಿಯರಿಗೆ ಮಕ್ಕಳನ್ನು ತಿದ್ದಿ, ಬುದ್ದಿ ಹೇಳಿಶಾಲೆಗೇ ಕಳಿಸುವಸ್ಟು ಬುದ್ದಿ ಹಾಗು ಸಮಯ ಇರಲಿಲ್ಲ. ಇವತ್ತು ಊರಲ್ಲಿ ಎಮ್ಮೆ ಮೇಯಿಸಿಕೊಂಡು ಜೀವನ ಮಾಡುತಿದ್ದಾನೆ. ನಾನೇನಾದರು ದಿನ ಅವನು ಮಾಡಿದ ಕೆಲಸ ಮಾಡಿದ್ದರೆ, ಇವತ್ತು ನಾನು ಕೂಡ ಅವನ ಜೊತೆ ಎಮ್ಮೆ ಮೇಯಿಸುತಿದ್ದೆ.

ಇನ್ನೊಂದು ದಿನ ಲೀಲಾವತಿ ಅನ್ನೋ ಹುಡುಗಿಗೆ ಅ ಆ ಇ ಈ ಹೇಳಲಿಕ್ಕೆ ಬರಲಿಲ್ಲ ಅಂಥ ಮೇಸ್ಟ್ರು ಶಿಕ್ಷಿಸುತಿದ್ದರು, ಆ ಹುಡುಗಿ ತಪ್ಪಿಸಿಕೊಳ್ಳಲು ಹೋಗಿ ಅವಳ ರಟ್ಟೆಯ ಮೇಲೆ ಒದೆ ಬಿದ್ದು ಬಾರುಸುಂಡೆ (swelling) ಬಂದು ಬಿಟ್ಟಿತು. ಅದೇ ಸಮಯದಲ್ಲಿ ಅವರ ಅಪ್ಪ ಹೊನ್ನಣ್ಣ, ಜಮೀನಿನ ಕೆಲಸ ಮುಗಿಸಿ ಮನೆಗೆ ಹೋಗುತಿದ್ದರು. ಆ ಹುಡುಗಿ ಹೊಡಿ ಹೋಗಿ ತಂದೆಗೆ ಆ ಬಾರುಸುಂಡೆ ತೋರಿಸಿದಳು. ಅವರಪ್ಪ ಸೀದಾ ಶಾಲೆಗೇ ಬಂದು, ಏನು ಕೇಳದೆ ಕೈಯಲ್ಲಿದ ಗೆಡ್ಡಗೊಲು (ದನಗಳಿಗೆ ಒಡೆಯಲು ರೈತರು ಬಳಸುವ ಬಿದಿರಿನ ತುಂಡು)ನಿಂದ ಮೇಸ್ಟ್ರಿಗೆ ಎರಡು ಕೊಟ್ಟರು. ಮೇಸ್ಟ್ರು ವಿಧಿ ಇಲ್ಲದೆ ಶಾಲೆಯಿಂದ ಹೊರಗಡೆ ಹೊಡಿ ಹೋದರು. ಆದರು ಬಿಡದೆ ಅವರನ್ನು ಹಿಂಬಾಲಿಸಿಕೊಂಡು ಹೋದರು ಹೊನ್ನಣ್ಣ, ಅವರಿಂದೆ ನಾವೆಲ್ಲ ನಗುತ್ತ ಹೊಡಿ ಹೋಗುತಿದ್ದೆವು. ಮೇಸ್ಟ್ರು ಸೀದಾ ನಮ್ಮ ಮನೆಯ ಹತ್ತಿರ ಹೊಡಿ ಹೋಗಿ ನನ್ನ ತಂದೆ ಹತ್ತಿರ ಕೇಳಿಕೊಂಡರು. ಆಗ ನಮ್ಮಪ್ಪ ಹೊನ್ನಣ್ಣನಿಗೆ ಸಮಾಧಾನ ಮಾಡಿ ಕಳುಯಿಸಿ ಕೊಟ್ಟರು. ಆ ಹುಡುಗಿಯ ವಿಧ್ಯಾಭ್ಯಾಸ ಕೂಡ ಅವತ್ತಿಗೆ ಕೊನೆಗೊಂಡಿತು.

ಮೇಸ್ಟ್ರಿಗೆ ಇದನ್ನೆಲ್ಲಾ ಸಹಿಸಿಕೊಳ್ಳಲು ಆಗದೆ ವರ್ಗಾವಣೆ ಮಾಡಿಸಿಕೊಂಡು ಬೇರೆ ಕಡೆ ಹೊರಟು ಹೋದರು. ನಮ್ಮೂರಿಗೆ ಮತ್ತೊಬ್ಬ ನಿದ್ದೆ ಗುರುಗಳು ಬಂದು ಸೇರಿಕೊಂಡರು.

ಪ್ರೀತಿಯಿಂದ
ಗೌಡ




No comments:

Post a Comment