Wednesday, June 29, 2011

ತಾಯ್ ಗೂಡು


ಏನು ಹರುಷವೂ ತೆರಳಲು ಚೆಲುವ ತಾಯ್ ಗೂಡಿಗೆ
 ಸದಾ ಕೈ ಬೀಸಿ ಕರೆವ ಚಿರಯೌವ್ವನ ಬೀಡಿಗೆ
ಎಂಥಾ ಸೊಗಸು ನಾಹುಟ್ಟಿ ಬಲಿತ ತಾಯ್ ಒಡಲು
ಮನವು ಗರಿ ಬಿಚ್ಚಿ ನವಿರಾಗಿ ಕುಣಿಯುವ ಬೃಂದಾವನ
ಎಣೆ ಯಾವುದು ಈ ಪುಟ್ಟ ಸೌಂದರ್ಯ ರತ್ನದ ಗಣಿಗೆ
ನೇಗಿಲಯೋಗಿ ಜಗದ್ ಏಳ್ಗೆಗೆ ಜಪಗೈವ ತಪೋಭೂಮಿಗೆ

ಚೋಳ ಚಾಲುಕ್ಯರ ಅಟ್ಟಹಾಸದ ಬುಡಮುರಿದು
ವೀರಕನ್ನಡಿಗರು ನೆತ್ತರು ಚೆಲ್ಲಿ ಕಟ್ಟಿದ ಹೊಯ್ಸಳನಾಡು;
ಹಲ್ಮಿಡಿ ಶಾಸನವಿರುವ ಕನ್ನಡಾಂಬೆಯ ಹಳೇಬೀಡು;
ಸಮರಗೀತೆಯೊಳಗೂ ಅಹಿಂಸಾ ತತ್ವ ಸಾರಿದ ನಾಡು;
ನಾಟ್ಯಮಯೂರಿ ಚೆಲುವರಾಣಿ ಶಾಂತಲೆಯ ತವರೂರು;
ಶಿಲ್ಪಕಲೆಯ ರಸಋಷಿ ಜಕ್ಕಣ್ಣ ಚಿರಾಯುವಾಗಿಸಿದೂರು;

ಆ ತಾಯ್ ಒಡಲಲಿ... 
ಮುಂಜಾನೆ ಬೆಳಕಲಿ ತಳಿರ ಮೇಲಿನ ಇಬ್ಬನಿ ಹೀರಿ
ತೋಟಗದ್ದೆ ಕಾಡುಗುಡ್ಡಗಳ ಅಲೆದಲೆದು ಮನವ ತಣಿಸಿ
ಕೋಗಿಲೆಗಳ ಸುಮಧುರ ಗಾನ ಕೇಳಿ ನನ್ನನ್ನೇ ಮರೆತು
ಯಾರು ಕಾಣದ ಕಾಡಲಿ ನವಿಲಿನೊಡಗೂಡಿ ಕುಣಿದು
ಸೊಂಪಾದ ಹೊಂಗೆ ಮರದಡಿ ಮಲಗಿ ಹಗಲುಗನಸ ಕಾಣುವಾಗ
ಇಲ್ಲಿ ಬಾ ಸ್ವರ್ಗಕೆ ಮೂರೇ ಗೇಣು ಎಂದರೆ ನಾ ಒಲ್ಲೆ ಎನ್ನುವೆ!


ಆ ತಾಯ್ ಗೂಡಲಿ...
ಅವ್ವನ ಆರೈಕೆಯ ಆಗರದ ಮಡಿಲಲ್ಲಿ ಚಿರಮಗುವಾಗಿ ಮಲಗಿ
ಅಪ್ಪನ ಪ್ರೀತಿಯ ಬೈಗುಳದ ಬೆಟ್ಟದ ತುದಿಯಲಿ ನಿಂತು ನಕ್ಕು
ಸಹೋದರರ ಸಕ್ಕರೆಯ ನುಡಿಗಳ ಸವಿದು ಸವಿದು ಬೀಗಿ
ಬಂಧುಬಾಂಧವರ ಹೊಗಳಿಕೆಯ ಕದ್ದಾಲಿಸಿ ಹಿರಿಹಿರಿ ಹಿಗ್ಗಿ
ವಿದಾಯದ ಸಮಯ ಸನಿಹವಾದಾಗ ಕಾರಣವಿಲ್ಲದೆ ಕುಗ್ಗಿದರೂ
ಹೊಟ್ಟೆ ಹಸಿದಷ್ಟು ಬಾಯಿಗೆ ರುಚಿಯೆಂದು ಸಂತೈಸಿಕೊಂಡು ಮಾಗುವೆ!

4 comments:

  1. ಚೆನ್ನಾಗಿದೆ... ನಿಮ್ಮ ತಾಯಿ ಗೂಡು ನೋಡಬೇಕು ಎಂಬ ಆಸೆಯಾಗುತ್ತಿದೆ. :)

    ReplyDelete
  2. Thank you very much - Anonymous. where should i send the invite to welcome to my native?

    ReplyDelete
  3. ಪ್ರೀತಿಯ ಗೌಡ್ರೆ

    ನಿಮ್ಮ ಕವನ ಓದಿ ತುಂಬಾ ಖುಷಿಯಾಯಿತು. ಹುಟ್ಟಿದ ಊರು ಮತ್ತು ಹೆತ್ತವ್ವಳ, ಮನೆಯವರ ಪ್ರೀತಿಯನ್ನು ಚೆನ್ನಾಗಿ ನಿರೂಪಿಸಿದ್ದೀರ. ಉಡುಪಿ, ನಿಮ್ಮ ಊರಿನಷ್ಟು ಸುಂದರವಗಿಲ್ಲದಿದ್ದರೂ, ನಮ್ಮನೆಗೆ ತೆರಳುವಾಗ ಇರುವ ಮಜವೇ ಬೇರೆ. ಬಹುಷಃ ಇದು ಬೇರೆ ಯಾವ ಊರಿಗೂ, ಬೇರೆ ಯಾರ ಮನೆಗೂ ಹೋದರೆ ಸಿಗುವುದಿಲ್ಲ. ಇದು, ಎಲ್ಲಾರಿಗೂ ಅನ್ವಯವಾಗುತ್ತದೆ. ಇವೆಲ್ಲದುದರ ಜೊತೆಗೆ, ಅಂತಹ ಸುಂದರ ಪ್ರಕ್ರತಿಯ ಬೀಡು, ನಿಮ್ಮ ಬೀಡು ಕೂಡ ಆಗಿರುವುದು, ನಿಮ್ಮ ಅದ್ರಷ್ಠ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಮೂರನೇ ಚರಣ ನನಗೆ ಬಹಳ ಹಿಡಿಸಿತು. ಬಾಲ್ಯದಲ್ಲಿ ಅಜ್ಜಿ ಮನೆಗೆ ಬೇಸಿಗೆ ರಜೆ ಕಳೆಯಲು ಹೋದ ದಿನಗಳು ನೆನಪಾದವು.

    ಇನ್ನು ಸುಂದರ ಕವನಗಳು ನಿಮ್ಮ ಮನದಾಳದ ಹೆಮ್ಮರದಲ್ಲಿ ಚಿಗುರುವಂತಾಗಲಿ ಎಂದು ಹಾರೈಸುವೆ.

    ಇಂತಿ
    ಸುನಿಲ್

    ReplyDelete
  4. ಸುನಿಲ್ - ತುಂಬಾ ಬಿಡುವು ಮಾಡಿಕೊಂಡು ಸವಿಸ್ತಾರವಾಗಿ ತಮ್ಮ ಅನಿಸಿಕೆ ಬರೆದಿರುವುದಕ್ಕೆ ತುಂಬು ಮನದ ಧನ್ಯವಾದಗಳು... ಹಾಗು ನಿಮ್ಮ ಹಾರೈಕೆಗೆ ನಾನು ಚಿರಋಣಿ.

    // ತೋಟೆ ಗೌಡ

    ReplyDelete