Tuesday, October 5, 2010

ಬಾ ಪ್ರೀತಿಯೇ ಬಾ

ಮನದಂಗಳದ ತುಂಬೆಲ್ಲಾ ರಂಗವಲ್ಲಿ ಬಿಡಿಸಿ
ಹೃದಯಂತರಾಳದ ತಲೆಬಾಗಿಲನು ತೆರೆದು
ಬಾಯ್ತುಂಬ ನುಡಿಮುತ್ತಿನ ಹಬ್ಬದಡಿಗೆ ಮಾಡಿ
ಕಣ್ತುಂಬ ಕಾತುರದ ತಳಿರುತೋರಣ ಕಟ್ಟಿ
ಒಲವಿನಾಗಮನದ ದಾರಿಯನ್ನೇ ಎದುರುನೋಡುತ್ತ
ಕಾದಿರುವ ಅಲಂಕಾರಿಕ ಮಂದಿರದ ಆತಿಥ್ಯಕೆ ಬಾ
ಪ್ರೀತಿಯೇ...
ಮಡಿಯಲ್ಲಿರುವ ಈ ಪೂಜಾರಿಯ ನೈವೇದ್ಯಕೆ ಬಾ

ಕೋಗಿಲೆಗೆ ಹಾಡಲು ಹರುಷದ ಹುರುಪು ತುಂಬುವ
ವಸಂತ ಋತುವಾಗಿ ಬಾ
ಇರುಳ ಕೋಣೆಯಲಿ ಕತ್ತಲ ನುಂಗಿ ಬೆಳಕ ಹರಿಸುವ
ಪುಟ್ಟ ಹಣತೆಯಾಗಿ ಬಾ
ಮೂಲೆಯಲಿ ಹಚ್ಚಿದರೂ ನಿವಾಸದ ತುಂಬೆಲ್ಲಾ ಹರಡುವ
ದೂಪದ ಸುಗಂಧವಾಗಿ ಬಾ
ರವಿಯಂತೆ ಬೇಯಿಸದೆ, ದೀಪದಂತೆ ದಹಿಸದೆ, ತಣ್ಣನೆ ಬೆಳಗುವ
ಹುಣ್ಣಿಮೆಯ ಚಂದಿರನಾಗಿ ಬಾ

ಗಾಢ ನಿದಿರೆಯಲಿ ಕರೆಯಿಲ್ಲದೆ ಸುಳಿಯುವ ಅನಿರೀಕ್ಷಿತ
ಕನಸ ಕಾರಂಜಿಯಾಗಿ ಬಾ
ಸಂಕಲನದ ಖಾಲಿ ಹಾಳೆಗಳ ಮೇಲೆ ಮೂಡುವ ಅರ್ಥಗರ್ಭಿತ
ಕಾವ್ಯ ಸಿಂಚನವಾಗಿ ಬಾ
ಕವಿಮನದಲಿ ಹಠಾತ್ ಗೋಚರಿಸುವ ಕಪೋಲಕಲ್ಪಿತ
ಭಾವ ಚಿಲುಮೆಯಾಗಿ ಬಾ
ಅಂತರಂಗವನ್ನೆಲ್ಲಾ ಸೋಸಿ ಸೃಷ್ಟಿಸಿರುವ ಈ ಕವಿತೆಗೆ ಮಾಧುರ್ಯಭರಿತ
ಸಂಗೀತ ಲಹರಿಯಾಗಿ ಬಾ

ಅಂತರಾಳದಲಿ ಅಡಗಿರುವ ತುಂಟ ಆಸೆಯ ಹೊರಗೆಳೆಯಲು
ತುಸು ಧ್ಯೆರ್ಯವಾಗಿ ಬಾ
ಹಸಿಗೋಪದಲಿ ಅಳುವ ಗೆಳತಿಯ ಮುದ್ದು ಮೊಗವರಳಿಸಲು
ಹುಸಿ ನೆವವಾಗಿ ಬಾ
ಬಳಲಿರುವ ಗೆಳತಿ ಬಳಿಬಂದು ಬಳ್ಳಿಯಂತೆ ಬಂದಿಸಿರಲು
ಮೌನದ ಹಾಡಾಗಿ ಬಾ
ಗೆಳತಿಯ ವಿರಹದ ಕಡುಗತ್ತಲೆ ಕವಿಮನವನು ಕವಿದಿರಲು
ನೆನಪಿನ ಹುಣ್ಣಿಮೆಯಾಗಿ ಬಾ

ಇಳೆಯ ತಣಿಸಲು ನೋವು ನೀಡದೆ ಇಳಿದು ಬರುವ
ಸೋನೆ ಮಳೆಯಾಗಿ ಬಾ
ಬೆವರು ಬಸಿದು ತೋಡಿದ ಬಾವಿಯ ತಳದಲಿ ಚಿಮ್ಮುವ
ಒರತೆ ಜಲವಾಗಿ ಬಾ
ಪ್ರತಿರಾತ್ರಿ ಕಂಡ ಸವಿಗನಸುಗಳ ಒಂದೊಂದಾಗಿ ನನಸಾಗಿಸುವ
ಜಾದುಗಾರನ ದಂಡವಾಗಿ ಬಾ
ಒಂದಕ್ಕೆ ಒಂದನ್ನು ಕೂಡಿಸಿದರೆ ಮೂರೆಂದು ನಿರೂಪಿಸುವ
ಶುಭ ಸಂಕಲನವಾಗಿ ಬಾ

[ಈ ಗದ್ದಲದ ಚೌಕಟ್ಟು ಬಿ ಆರ್ ಲಕ್ಷ್ಮಣ್ ರಾವ್ ರವರ "ಬಾ ಮಳೆಯೇ ಬಾ" ಎಂಬ ಸುಂದರ ಕವನದಿಂದ ಪ್ರೆರಿತಗೊಂಡಿದೆ. ಇಲ್ಲಿ ಓದಿ]

17 comments:

  1. Thumba chenngidhe... Gowdra kavidthegalu thumba chenngidhe...

    ReplyDelete
  2. gowdre..too good.. u should publish all these kavanas in a book soon:)

    ReplyDelete
  3. ಪ್ರತಿ ಸಲ ಊರಿಗೆ ಹೋಗಿ ಬಂದ ಮೇಲೆ ಒಂದು ವಿರಹದ ಕವಿತೆ ಬರುತದೆ. ಊರಲ್ಲಿ ಏನ್ ಗಡ್ಬಡ್ ಆಗಿದೆ?? ಊರಲ್ಲಿ ಯಾರೋ ನಿಮ್ಮ ಹೃದಯ ಕದ್ದಿದ್ದಾರೆ . ನಿಮ್ಮ ಪ್ರೀತಿ ಅವರಿಗೆ ತಿಳಿದಿದೆ ಎಂದು ಭಾವಿಸುತ್ತೇನೆ . ನಿಮ್ಮ ಪ್ರೀತಿ ಬೇಗನೆ ನಿಮ್ಮ ಬಳಿ ಬರಲಿ ಎಂದು ಹರೈಸುತೇನೆ.

    ReplyDelete
  4. @NK: Thanks man
    @PP: Thanks and wanna sponsor my book?
    @KP: Thanks and nothing like that, actually it was written before going home.

    ReplyDelete
  5. Suuuuuuuuuuuuper!!!!

    raaga haaki haadidre tumba chenaagide ansutte... biduvina samayakinta biduvu maadikondu oduvante ide... chennagide.. keep up the spirit..

    ReplyDelete
  6. Lovely!! I am just enjoying all your kavanas.
    The way you express is simply superb. It has been a pleasure to read ಗೌಡನ ಹುಚ್ಚು ಮನಸ್ಸಿನ ಗದ್ದಲಗಳು :)

    ReplyDelete
  7. Thanks Shree & Schumi... for taking time to read and appreciate my gaddala ;)

    ReplyDelete
  8. ಬಹಳ ಚೆನ್ನಾಗಿ, ತುಂಬಾ ಶ್ರಮವಹಿಸಿ, ವಿರಹವೇದನೆಯಿಂದ ಬಳಲಿ ಬೆಂಡಾಗಿರುವ ನಿಮ್ಮ ಕವಿ ಹೃದಯದಿಂದ,
    ವಿಚಾರಧಾರೆ ಎಂಬ ನದಿ ಹರಿದು, ಮನಸ್ಸಿನ ವಿಚಾರಗಳನ್ನು ಶಬ್ದಗಳೆಂಬ ಮುತ್ತಿನಿಂದ ಪೋಣಿಸಿ,
    ಮೂಡಿಬಂದಿರುವಂತಿದೆ ಈ ನಿಮ್ಮ ಕವನ...

    ಹೀಗೆ ಮುಂದುವರಿಯಿಲಿ ನಿಮ್ಮ ಕವಿತೆಯ ಸಾಲುಗಳು, ಬಗೆಬಗೆಯ ವಿಚಾರಗಳನ್ನರಸಿ...
    ಬೆಳೆಯಲಿ ನಿಮ್ಮೊಳಗಿನ ಕವಿ ಮನಸು ಹೆಮ್ಮರವಾಗಿ, ಪೋಷಿಸಲಿ ಕನ್ನಡಾಂಬೆಯ ಸಿರಿ
    ಎಂದು ತುಂಬು ಹೃದಯದಿಂದ ಆಶಿಸುವೆ...

    ReplyDelete
  9. ಸುನೀಲ್: ನಿನ್ನ ಪ್ರೋತ್ಸಾಹಭರಿತ ಸುಂದರ ಅನಿಸಿಕೆಗಳಿಗೆ ದನ್ಯವಾದಗಳು. ನಿಮ್ಮ ಆಶಯಗಳೆ ನನ್ನಂಥ ಪುಟ್ಟ ಗದ್ದಲ ರಚನೆಕಾರರಿಗೆ ಶ್ರೀರಕ್ಷೆ. ನಿನ್ನ ಅನಿಸಿಕೆಯಲ್ಲಿನ ಪದಗಳ ಜೋಡಣೆ ಮತ್ತು ಪ್ರಯೋಗ ನೋಡಿದರೆ, ನೀನು ಉತ್ತಮ ಕವನಗಳ ರಚಿಸಬಹುದು ಅನ್ಸುತ್ತೆ ನಂಗೆ. ಪ್ರಯತ್ನ ಪಟ್ಟು ನೋಡು.

    ReplyDelete
  10. ಗೌಡ್ರೆ, ಕವಿತೆ ತುಂಬಾ ಚೆನ್ನಾಗಿದೆ.. ಇದನ್ನೇ ಹೇಳಿ ಹೇಳಿ ನಂಗೆ ಬೋರ್ ಆಗಿದೆ ;)
    ಬೇರೇನೂ ಹೇಳಕ್ಕೆ ನಂಗೆ ಕವಿತೆ ಬರೀಲಿಕ್ಕೂ ಬರಲ್ಲ..
    ಪ್ರತಿರಾತ್ರಿ ಕಂಡ ಸವಿಗನಸುಗಳ ಒಂದೊಂದಾಗಿ ನನಸಾಗಿಸುವ ಜಾದುಗಾರನ ದಂಡವಾಗಿ ಬಾ..
    ಈ ಸಾಲು ಸಾಕು ನಂಗೆ.. !! ತುಂಬಾ ಇಷ್ಟ ಆಯ್ತು ಈ ಸಾಲು!!
    ಅಂದಹಾಗೆ, KP ಅನ್ಸಿಕೆಗಳ ಜೊತೆ ನನ್ನ ಸಹಮತ ಇದೆ.. KP ಒಂದು pattern ಗುರುತ್ಸಿದ್ದಾರೆ ನಿಮ್ ಕವನಗಳ frequency ಇಂದ..

    ReplyDelete
  11. ಥ್ಯಾಂಕ್ಸ್ ನವೀನ. ನಂಗೂ ಥ್ಯಾಂಕ್ಸ್ ಬಿಟ್ಟು ಮತ್ತೇನು ಹೇಳ್ಲಿಕ್ಕೆ ಗೊತ್ತಾಗ್ತಿಲ್ಲ!

    ReplyDelete
  12. Math:
    Bhande baruthale gowdre... don't worry...

    ReplyDelete
  13. ಗೌಡ್ರೇ..ಅಬ್ಬಬ್ಬಾ ಏನ್ ಗದ್ಲಾನ್ರಪ್ಪಾ ನಿಮ್ಮದು...ವಾರೆವ್ವಾ ಅನ್ನಬೇಕು...ಮೊದಲ ಪಾದದಲ್ಲೇ ಸಿಕ್ಸರ್ ಬಾರ್ಸಿದ್ದೀರಿ...ಚನ್ನಾಗಿದೆ ಪರಿಕಲ್ಪನೆ ಮತ್ತು ಪದಬಂಧನೆ...

    ReplyDelete
  14. @ಜಲನಯನ: ತುಂಬು ಹೃದಯದ ಧನ್ಯವಾದಗಳು..

    ReplyDelete