Tuesday, September 27, 2011

ಸಂಗೀತ


ಸಹಿಸಲಾರೆನು ನೀ ಸನಿಹವಿರದ ಸಪ್ಪೆ ಸಮಯವ
ಇರಲಾರೆನು ಸವಿಯದೆ ಅನುದಿನ ನಿನ್ನ ಕಲರವ
ನೀನೊಂದು ಅಗಾಧ ಬಲವಿರೊ ಸುಗಂಧ ಹೂವು
ನಿನ್ನ ಮಕರಂದ ಹೀರದಿದ್ದರೆಲ್ಲಿದೆ ಬಾಳಲ್ಲಿ ಚೆಲುವು?

ನಿಲ್ಲದೆ ಓಡುವ ಕಾಲನ ಕಾಲ್ಹಿಡಿದೆಳೆದು ನಿಲ್ಲಿಸಿ
ಜಗದೆಲ್ಲ ಜಂಜಾಟಗಳ ಕಣ್ಣಿಗೆ ಜವನಿಕೆ ಹೊದಿಸಿ
ಯಾವುದೆ ಗುರುದಕ್ಷಿಣೆಯಿಲ್ಲದೆ ಧ್ಯಾನಕ್ಕೆ ಜಾರಿಸಿ
ನೊಂದ ಜೀವವ ಮಡಿಲಲಿಟ್ಟು ದಣಿವಿನ ಪೊರೆ ಬಿಡಿಸುವೆ;

ನೋವು ನಲಿವಿನಲ್ಲೂ, ಮಯ್ಯಿ ಮನಸಿಗೂ,
ತಂಗಾಳಿಯಲ್ಲಿ ತೇಲಿಬಂದು ತಾಯಂತೆ ಬೆವರ ಒರಸುವೆ;
ಮಗು ಮುದುಕನೆನ್ನದೆ, ಬಡವ ಗಡವನೆನ್ನದೆ,
ಎಲ್ಲರ ಭಾವವೀಣೆಯಿಂದ ಜೀವನೋಲ್ಲಾಸ ಚಿಮ್ಮಿಸುವೆ;

ಜಗವನೆ ಮರುಳಾಗಿಸುವ ಮಾಯಾತರಳೆ
ದೇಶ ಭಾಷೆಗಳ ಎಲ್ಲೆಮೀರಿ ತಲುಪುವೆ ನೀನೆಲ್ಲರೆದೆ;
ಗಿಡ ಮರದಲ್ಲಿ, ಗಾಳಿ ನೀರಲ್ಲಿ, ಕಲ್ಲು ಮಣ್ಣಲ್ಲಿ,
ಕಾಣುವ ಮನಸೊಂದಿದ್ದರೆ ಗುಪ್ತಗಾಮಿನಿ ನೀನೆಲ್ಲದರಲ್ಲಿ;


ಕಂದಮ್ಮಂಗೆ ಅಮ್ಮನ ನಿತ್ಯಲಾಲಿಯ ಸವಿಗಾನ
ಗೆಳೆಯಂಗೆ ಗೆಳತಿಯ ಒಲವಿನ ಕೂಗೆ ರತಿಗಾನ
ಧ್ಯಾನಕೆ ಕುಳಿತ ಯೋಗಿಗೆ ಕಡುಮೌನವೇ ಸಂಗೀತ
ಕಲ್ಪನಾಲೋಕವಾಸಿ ಕವಿಗೆ ಕೇಳಿಸುವುದೆಲ್ಲವೂ ಸಂಗೀತ

5 comments:

  1. ಪ್ರೀತಿಯ ಗೌಡ್ರೆ

    ಕವನ ಸೂಪರ್ ಆಗಿದೆ :) :) ಮೊದಲ ಚರಣ ಅತ್ಯುತ್ತಮವಾಗಿದೆ. ನಿಜವಾಗಿಯೂ, ಒಬ್ಬ ಸಂಗೀತ ಆರಾಧಕ ಮಾತ್ರ ನಿಮ್ಮ ಈ ಕವನದ ಘಾಡ ಅರ್ಥವನ್ನ ಅರಿಯಬಲ್ಲರು. ನನಗಂತೂ ತುಂಬಾ ಹಿಡಿಸಿತು. ನೀವು ತಿಂಗಳಿಗೆ ಒಂದು ಕವನದ ಬದಲು, ಇನ್ನು ಜಾಸ್ತಿ ಬರೆಯಬಾರದೇಕೆ?

    ಇಂತಿ
    ಸುನಿಲ್ ಪಡಿಯಾರ್

    ReplyDelete
  2. ಧನ್ಯವಾದಗಳು ಸುನಿಲ್ - ಅದೂ ಮೊದಲನೇ ಚರಣ ಇಷ್ಟ ಪಟ್ಟಿದ್ದಕ್ಕೆ ತುಂಬ ಖುಷಿ ಆಯಿತು, ಎಲ್ಲರು ಅದನ್ನ ತಪ್ಪು ಅರ್ಥ ಮಾಡಿಕೊಳ್ಳುವ ಅನುಮಾನ ಇತ್ತು ನನಗೆ.

    ಅತೀ ಆದರೆ ಅಮೃತನೂ ವಿಷ ಅನ್ನೋ ನಂಬಿಕೆ, ಜೊತೆಗೆ ಸಮಯ ಸಿಗಬೇಕಲ್ಲ, ಸಿಕ್ರೆ ಖಂಡಿತ ಬರೆಯಲಿಕ್ಕೆ ಪ್ರಯತ್ನ ಮಾಡ್ತೇನೆ.

    ReplyDelete
  3. Gowdre..Suuuperr!!! just loved the line 'ಸಹಿಸಲಾರೆನು ನೀ ಸನಿಹವಿರದ ಸಪ್ಪೆ ಸಮಯವ' toooo good:)

    ReplyDelete
  4. gowdre thumba chennagidhe....
    gowdra gaddala
    manadigiruva maddale :)

    ReplyDelete