Sunday, August 28, 2011

ಹೀಗೇಕೆ?

ಕೆರೆಯ ಶುದ್ದ ನೀರಿಗೆ ಎಳೆದೊಯ್ಯಲು ಬಂದರೂ
ಗದ್ದೆಸಾಲಿನ ಕೆಸರಲಿ ಬಿದ್ದು ಒದ್ದಾಡುವ ಹಠವೇಕೆ ಮನವೆ?
ಗೋಮಾಳದಿ ಹುಲುಸಾದ ಹುಲ್ಲು ಮೇಯಲು ಬಿಟ್ಟರೂ
ಹೊಲದ ಪೈರು ತಿನ್ನಲು ಬೇಲಿಹಾರಿ ಓಡುವೆಯೇಕೆ ಮನವೆ?
ಬಿಸಿಬಿಸಿಯ ಕೂಳು ಬೇಯಿಸಿ ತಂದು ಹಾಕಿದರೂ
ಮಲದ ವಾಸನೆಯಿಡಿದು ಮೂಸುತ ತೆರಳುವೆಯಾಕೆ ಮನವೆ?
ತುಂಬಿದ ಕೆರೆಯಲಿ ಕೊರತೆಯಿಲ್ಲದೆ ಬದುಕುತಿದ್ದರೂ
ಸಣ್ಣ ಹಳ್ಳದ ಜಾಡು ಹಿಡಿದು ಈಜುವ ಹುಂಬತನವೇಕೆ ಮನವೆ?
ನಾಳೆಯ ಬೆಳಕಿನ ಮೇಲೆ ನೆಚ್ಚಿಕೆಯಿಡುವುದ ಬಿಟ್ಟು
ಬೆಂಕಿಯ ಮೋಹಕಿಂದು ರಾತ್ರಿಯೆ ತುತ್ತಾಗಿ ಸಾಯುವೆಯೇಕೆ ಮನವೆ?

ನಿನ್ನ ಕಣ್ಣೆದುರಿಗಿರುವ ಸಕಲ ಭಾಗ್ಯವ ಬದಿಗೊತ್ತಿ
ಇನ್ನೂ ತೆರೆಯದಿರ ಬಾಗಿಲ ಕಡೆಗೇ ಸೆಳೆಯುವೆಯೇಕೆ ಮನವೆ?
ದಾಕ್ಷಿಣ್ಯವೆ ದಾರಿದ್ರ್ಯಕೆ ದಾರಿಯೆಂದು ಅರಿವಿದ್ದರೂ
ಬೇಡದ ಬೇಳೆಯ ಬಿಡದೆ ಬೇಯಿಸುವ ಕಾಯಕವೇಕೆ ನಿನಗೆ?
ವಿಚಾರಕದಗಳೇ ಇಲ್ಲದ ಬರೀ ಆಚಾರಮನೆ ಕಟ್ಟಿ
ಅದರೊಳಗೆ ಮರಳಿ ಏಳಲಾರದಂತೆ ಮಲಗುವುದು ನೆಲೆಯೆ?
ಕಂದಕದಿಂದ ಮೇಲೇಳಲು ಸಿಕ್ಕಿರುವ ಕಣ್ಣಿಯ ಬಿಟ್ಟು
ಕಾಣದ ಕಲ್ಲು ದೇವರ ಪವಾಡಕೆ ಕಾದು ಕೊರಗುವುದು ಸರಿಯೆ?
ಭೋರ್ಗೆರೆಯುತ ಆರ್ಭಟಿಸಿ ಬರುವ ಯೋಚನಾಗಜಗಳ
ಪಳಗಿಸುವ ಅರಿವಿನ ಗಜಶಾಲೆಯ ಮಾವುತನಾಗುವುದೆಂದು ಮನವೆ?

5 comments:

  1. ಪ್ರೀತಿಯ ಗೌಡ್ರೆ

    ನಿಜವಾಗಿಯೂ ನಮ್ಮ ಮನಸ್ಸು ಗಾಳಿಯ ಹಾಗೆ. ಒಂದೊಮ್ಮೆ ಹಿಡಿತದಲ್ಲಿ ಇದೆ ಎಂಬ ಭಾವನೆ ಬಂದರೂ ಅದು ತನ್ನದೇ ಆದ ಲೋಕದಲ್ಲಿ ಇರುತ್ತದೆ. ಬಹುಷಃ ಯಾರು ತಮ್ಮ ಮನಸ್ಸಿನ ಮೇಲೆ ಹಿಡಿತ ಸಾದಿಸುವರೋ ಅವರಿಗೆ ಮಾತ್ರ ನಿಜವಾದ ಪರಿಪೂರ್ಣ ವ್ಯಕ್ತಿತ್ವ ಹೊಂದಲು ಸಾಧ್ಯ. ಓ ಮನಸೇ ನೀನು ಯಾಕಿಂಗೆ? ಪ್ರಶ್ನೆ ಉತ್ತರಿಸುವುದು ಸ್ವತಹ ಮಾನಸಿಕ ತಜ್ನನಿಗೂ ಅಸಾಧ್ಯ :)
    ತುಂಬಾ ಆಳವಾದ ವಿಚಾರಗಳನ್ನ ಪೋಣಿಸಿ ಮನಸ್ಸಿನ ದ್ವಂದ್ವಗಳನ್ನ ಶಬ್ದಗಳ ಮೂಲಕ ಅಭಿವ್ಯಕ್ತಪಡಿಸುವ ನಿಮ್ಮ ಪ್ರಯತ್ನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ಇದೇ ರೀತಿ ನಿಮ್ಮ ಕವಿ ಮನಸ್ಸು ಪಕ್ವವಾಗಲಿ, ಇಂತಹ ಹಲವಾರು ಒಳ್ಳೆಯ ಕವನಗಳು ಮೂಡಿ ಬರಲಿ ಎಂದು ಹಾರೈಸುವೆ.

    ಇಂತಿ
    ಸುನಿಲ್

    ReplyDelete
  2. Hi Gowdre,

    Looks like so many things are going on in your mind, some are answered and others are not! Good part is that you are looking for answers.

    ReplyDelete
  3. Thanks padiyar and KP for your patience in reading and giving feedback on it. Thank you both.

    ReplyDelete
  4. Simple but deep thoughts.. Very nice.

    ReplyDelete