Monday, November 8, 2010

ಗತವೈಭವವ ಪುನರ್ ಶಂಕುಸ್ಥಾಪಿಸಬಾರದೆ?

ದುಗುಡದ ಕಾರ್ಮೋಡಗಳು ಮನವ ಕವಿದಿರಲು
ಕಣ್ಣೀರಮಳೆ ಸುರಿಸಿ ಕರಗಿಸಬಾರದೆ?
ನೋವಿನ ಧಗೆಯಲಿ ಮೊಗವು ಬಳಲಿರಲು
ನಗೆಯಮೃತ ಬಡಿಸಿ ಅರಳಿಸಬಾರದೆ?

ಮೇಘಗಳ ಮರೆಯಲಿ ಚಂದಿರ ಚಣಕಾಲ ಮಾಯವಾದರೆ
ತನ್ನನಿನ್ನೆಂದೂ ಬೆಳಗಿಸನೆಂದು ಇಳೆಯು ಅಳುವುದೆ?
ಎಳೆಬಳ್ಳಿಯೊಂದು ಬಲಿತ ಗಿಡವನ್ನಾಶ್ರಯಿಸಿ ಮೇಲೇರಿದರೆ
ತನ್ನದ್ಯಾವ ಆಸರೆಯೂ ಬೇಕಿಲ್ಲವೆಂದು ಬೇರು ಬೆದರುವುದೆ?

ನವರಂಗಗಳನ್ನು ಬೆಳಕು ತನ್ನೊಳಗವಿಚಿಟ್ಟು ಮೆರೆದರೂ
ತುಂತುರುಹನಿಗಳು ಬೇಕಲ್ಲವೆ ತೋರಲು ಕಾಮನಬಿಲ್ಲು?
ಬಾಳವ್ಯೂಹದ ಪಥವ ಭೇದಿಸಿ ಮುಂದೆ ನಾ ಸಾಗುತಿದ್ದರೂ
ನಿನ್ನೋಲಿಮೆಯ ಬೆಳಕು ಬೇಕಲ್ಲವೆ ಕಾಣಲು ತೋರ್ಗಲ್ಲು?

ಸರಸದ ಸಿಹಿಬೆಲ್ಲ ಸವಿಯುವ ಹಂಬಲದಿ ಹಸಿದು ಬಂದರೆ
ವಿರಸದ ಕರಿಗಲ್ಲ ಎಡೆಯಿಟ್ಟು ಹಸಿದೆದೆಯನೇಕೆ ಕಾಡುವೆ?
ನಿನ್ನೋಲಿಮೆಮರದ ನೆರಳ ಬಯಸಿ ಬಸವಳಿದು ಬಂದರೆ
ನಲಿವಿನೆಲೆಗಳಿರದ ಬೋಳ್ಮರವಾಗಿ ಒಣಮನವನೇಕೆ ಸುಡುವೆ?

ತನ್ನೆಲ್ಲಾ ದುಮ್ಮಾನಗಳ ಗಂಟುಮೂಟೆಯ ಕ್ಷಣಕಾಲ ಕೆಳಗಿಳಿಸಿ
ಕುಪ್ಪಳಿಸಿ ಬಳಿಬಂದು ಲತೆಯಂತೆ ಬಿಗಿದಪ್ಪಿ, ಬೆರೆಯಬಾರದೆ?
ನೀನೆ ಕಲ್ಪಿಸಿ ಕಟ್ಟಿರುವ ಬೇಸರದ ಬೇಲಿಯ ಬುಡಕಡಿದುರುಳಿಸಿ
ಹಾರಿ ಬಂದು ಸೊಂಪಾದ ಎದೆಯೊಲವ ಹಸಿರ ಮೇಯಬಾರದೆ?

ಮಾತುಮಾತಿಗೂ ಮುತ್ತಿನ ಮುತ್ತಿಗೆಯಿಡುತಿದ್ದ ಆ ಗತವೈಭವವ
ಶಂಕೆಸಂಕೋಲೆಯ ಅಂಕೆಮುರಿದು ಪುನರ್ ಶಂಕುಸ್ಥಾಪಿಸಬಾರದೆ?
ನಿನಗೆಂದೇ ಮುಡಿಪಿರುವ ನನ್ನೆದೆಯಂತಃಪುರದ ಪೀಠವಾಕ್ರಮಿಸಲು
ಪ್ರೇಮರಥಕೆ ನಚ್ಚಿಕೆಯೆಂಬಶ್ವವವನೂಡಿ ಪ್ರಣಯದಾಳಿಗೈಯ್ಯಬಾರದೆ?

10 comments:

 1. ನೀವು ನಿಮ್ಮ ಪ್ರತಿಯೊಂದು ಕವನಗಳ ಮೂಲಕ ನಿಮ್ಮ ಕವಿ ಹೃದಯವನ್ನು ಚೆನ್ನಾಗಿ ಪಳಗಿಸಿಕೊಂಡಿದ್ದೀರಿ... ಸಂತೋಷ..
  ಅರ್ಥಗರ್ಭಿತವಾಗಿ, ಸುಂದರ ಪದಜೋಡನೆಗಳಿಂದ ರಚಿಸಿರುವ ನಿಮ್ಮ ಈ ಕವಿತೆ ನಿಮ್ಮ ಒಳ ಮನಸ್ಸಿನ ವಿರಹದ ಬೇಗೆಯ ದರ್ಪಣದಂತಿದೆ... :) ಇರಲಿ...
  ವರ್ತಮಾನದಲ್ಲಿ, ನೀವು ಈ ಕವಿತೆಯಲ್ಲಿರುವ ನಾಯಕನ ಹೃದಯದಂತೆ, ಪರಿಶುದ್ಧ ಒಲವಿಗಾಗಿ ಚಡಪಡಿಸದಂತಾಗಲಿ ಎಂದು ಹಾರೈಸುವೆ.. :)

  ಇಂತಿ..
  ಸುನಿಲ್

  ReplyDelete
 2. @ಸುನಿಲ್: ದನ್ಯವಾದಗಳು ಕಣೋ!

  ReplyDelete
 3. Nice one… really good Kannada words…

  ReplyDelete
 4. good... but something missing in it... :-)

  ReplyDelete
 5. @shami : Thanks... bt what is missing?? :)

  ReplyDelete
 6. ಮಾತುಮಾತಿಗೂ ಮುತ್ತಿನ ಮುತ್ತಿಗೆಯಿಡುತಿದ್ದ ಆ ಗತವೈಭವವ
  ಶಂಕೆಸಂಕೋಲೆಯ ಅಂಕೆಮುರಿದು ಪುನರ್ ಶಂಕುಸ್ಥಾಪಿಸಬಾರದೆ?

  ಇದನ್ನು ನೋಡಿದರೆ ನನಗೆ ಸ್ವಲ್ಪ ಸಂದೇಹ ಬರುತದೆ. ತಮ್ಮ ಪ್ರೀತಿ ನಿಮ್ಮಿಂದ ಸ್ವಲ್ಪ ದೂರ ಆದ ಹಾಗಿದೆ. ತಮ್ಮ ಕವನಗಳು ಮನಕ್ಕೆ ಮುಟ್ಟುವ ಹಾಗೆ ಇದೆ. ಅದರಲ್ಲಿನ ಭಾವನೆಗಳು ಅಷ್ಟೇ ನೈಜ . ನನ್ನ ಒಂದು ಸಣ್ಣ ಅಭಿಪ್ರಾಯ : ಜೀವನದಲ್ಲಿ ಪ್ರೀತಿ ಬಹಳ ಮುಖ್ಯ , ಆ ಪ್ರೀತಿ ದ್ವಿಮುಖ ಆಗಿದ್ದರೆ ಜೀವನ ಸುಲಭ, ಇಲ್ಲದ್ದಿದ್ದರೆ ...

  ReplyDelete
 7. @ಕೆಪಿ: ದನ್ಯವಾದಗಳು... ಸಂದೇಹ ಬೇಕಿಲ್ಲ... ಇದೆಲ್ಲ ನನ್ನ ಕಲ್ಪನೆಯ ಸಾಲುಗಳು... ಥ್ಯಾಂಕ್ಸ್ ನಿಮ್ಮ ಅಭಿಪ್ರಾಯಕ್ಕೆ.

  ReplyDelete
 8. Real good use of words Gowdre!!!

  ReplyDelete