Sunday, February 28, 2010

ಮಾಗಿ ಚಳಿಯಲ್ಲಿ, ಬಿಸಿ ಕಾಫೀ.

ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನನಗೆ ಅವ್ವ ಏಳು ಗಂಟೆಗೆ ಒತ್ತಾಯ ಮಾಡಿ ಏಳಿಸುತ್ತಿದ್ದಾಗೆ ನನಗೆ ಸ್ವಲ್ಪ ಕೋಪ ಬಂತು ಆದರೆ ಅದನ್ನು ತೋರಿಸಿಕೊಳ್ಳದೆ ಕಷ್ಟ ಪಟ್ಟು ಅರೆ ನಿದ್ದೆಯಲ್ಲೇ ಎದ್ದು ಕುಳಿತೆ. ಕಾಫೀ ಆರಿ ಹೋಗ್ತದೆ ಬೇಗ ಕುಡಿ ಅಂತ ಹೇಳಿ ಒಂದು ದೊಡ್ಡ ಲೋಟದಲ್ಲಿ ಕಾಫೀ ಕೊಟ್ಟರು. ಉಡುಪಿಯಲ್ಲಿ ಬಿಸಿ ನೀರಿನಂತ ಕಾಫೀ ಕುಡಿದು ಕುಡಿದು ಮರಗಟ್ಟಿ ಹೋಗಿದ್ದ ನನಗೆ, ಆ ಕಾಫೀಯನ್ನು ತಗೊಂಡು ಒಂದು ಗುಟುಕು ಎಟಕಿಸಿದ ತಕ್ಷಣ ದೇಹದ ಮೂಲೆ ಮೂಲೆಗೂ ವಿದ್ಯುತ್ ಹರಿದ ಅನುಭವ, ನಿದ್ದೆಯಲ್ಲ ಮಾಯವಾಗಿ, ಉಲ್ಲಾಸದ ದೀಪ ಹತ್ತಿಕೊಂಡು ಉರಿಯತೊಡಗಿತು. ವಯಸ್ಸಿಗೆ ಬಂದ ಗಂಡು ಮಕ್ಕಳು ಸೂರ್ಯ ನೆತ್ತಿಗೆ ಬರುವರೆಗೂ ಮಲಗ್ತರಾ?, ಈಗಾದ್ರೆ ಮನೆಗೆ ದರಿದ್ರ ಬರಲ್ವ? ಇಷ್ಟು ದೊಡ್ಡವನಾಗಿ ಹಲ್ಲು ಉಜ್ಜದೆ ಕಾಫೀ ಕುಡಿಲಿಕ್ಕೆ ನಾಚಿಕೆ ಆಗಲ್ವಾ? ಎಂದು ಅವ್ವನ ಸುಪ್ರಭಾತದ ಬಾಣಗಳು ಬಂದು ಕಿವಿಯಲ್ಲಿ ನಾಟುತಿದ್ದವು. ಅದರ ಬಗ್ಗೆ ಯೋಚನೆ ಮಾಡ ಹೋದರೆ ನನ್ನ ಬಗ್ಗೆ ನನಗೆ ಅಸಹ್ಯವಾಗುತ್ತದೆ ಎಂದು ತಿಳಿದು, ಇದರಿಂದ ತಪ್ಪಿಸಿಕೊಳ್ಳಲು ಕಾಫೀ ತಗೊಂಡು ಮನೆಯ ಹೊರಗಡೆ ಬಂದೆ.

ಊರಿನ ಪಕ್ಕದಲ್ಲೇ ಕೆರೆ ಇರುವುದರಿಂದ, ಕೆರೆಯ ನೀರಿನ ಅಲೆಗಳೆಲ್ಲಾ ಮಾಗಿಯ ಗಾಳಿಗೆ ಚಳಿಯ ಅಲೆಗಳಾಗಿ ಮಾರ್ಪಟ್ಟು , ಹವಾ ನಿಯಂತ್ರಿತ ಜೈಲಿನಲ್ಲಿ ಕೂತು ಕೂತು ಬೊಜ್ಜು ತುಂಬಿ ಜಡಗಟ್ಟಿ ಹೋದ ನನ್ನ ದೇಹಕ್ಕೆ ಅಲೆಗಳು ಗುದ್ದಿ, ಪ್ರತಿಯೊಂದು ರೋಮವನ್ನು ಬಡಿದೆಳಿಸುತಿದ್ದವು. ಇದೆ ಊರಿನಲ್ಲಿ ಹುಟ್ಟಿ ಬೆಳೆದ ನನಗೆ ಯಾವತ್ತು ಆಗದಸ್ಟು ಚಳಿ ಇವತ್ತು ಯಾಕೆ ಆಗ್ತಿದೆ ಎಂದು ಯೋಚಿಸಿದಾಗ ತಿಳಿಯಿತು, ಎಷ್ಟರ ಮಟ್ಟಿಗೆ ನನ್ನ ದೇಹ ಉಡುಪಿಯ ವಾತಾವರಣಕ್ಕೆ ಒಗ್ಗಿ ಹೋಗಿದೆ ಎಂದು. ಒಳಗೆ ಹೋಗಬೇಕು ಅನ್ನಿಸಿದರೂ, ನನ್ನ ಊರು ಎಂದು ಜಿದ್ದಿಗೆ ಬಿದ್ದು, ಮೊಂಡ ಧ್ಯೆರ್ಯ ಮಾಡಿ ಚಳಿಯ ಅಲೆಗಳಿಗೆ ಎದೆಯೊಡ್ಡಿ ರಣಕಹಳೆ ಊದಿ ಅಲ್ಲೇ ಸೆಟೆದು ನಿಂತು ಕಾಫೀ ಹೀರುವುದನ್ನು ಮುಂದುವರೆಸಿದೆ.

ಒಳಗೆ ಅವ್ವ ಸಿಂಬಳ ಎಳೆದುಕೊಂಡು ಸೌದೆ ಒಲೆಯನ್ನು ಕಬ್ಬಿಣದ ಪೈಪಿನಿಂದ ಊದಿ ಬೆಂಕಿ ಹತ್ತಿಸುತ್ತಿರುವ ಶಬ್ದ, ಪಕ್ಕದಲ್ಲಿ ಬಂಗಾರಿ (ತಮ್ಮ) ಗಾಡಿಯ ಮೂಕಿ ಎತ್ತಿ ಎತ್ತುಗಳನ್ನು ನೊಗಕ್ಕೆ ಹೆಗಲು ಕೊಡಲು ಲೊಚಗುಟ್ಟಿ ಕರೆಯುತ್ತಿರುವ ಶಬ್ದ, ಪಕ್ಕದಲ್ಲೇ ಅಣ್ಣ ಎಮ್ಮೆಯ ಮೊಲೆಗಳಿಂದ ಕರೆದ ಹಾಲು ಚೆಂಬಿಗೆ ಬೀಳುತ್ತಿರುವ ಶಬ್ದ, ಹಿಂದುಗಡೆ ಅಪ್ಪ ಕೊಟ್ಟಗೆಯಲ್ಲಿ ಕಸ ಗುಡಿಸುವಾಗಿನ ಪೊರಕೆಯ ಶಬ್ದ, ಎಮ್ಮೆಯ ಜೋರು ಅಂಬಾ, ಅದರ ಕರುವಿನ ಸಣ್ಣ ಅಂಬಾ, ಬೀದಿ ನಾಯಿ ಮರಿಗಳ ಕುಯ್ ಕುಯ್, ನಮ್ಮ ಮನೆಗೆ ನುಗ್ಗಲು ಮರೆಯಲ್ಲಿ ನಿಂತಿರುವ ಪಕ್ಕದ ಮನೆಯ ಬೆಕ್ಕಿನ ಮ್ಯಾವ್ ಮ್ಯಾವ್, ದೂರದ ಬೋರವೆಲ್ ಹತ್ತಿರ ಊರಿನ ಹೆಂಗಸರ ಬೌ ಬೌ, ಬೇವಿನ ಮರದ ಮೇಲಿನ ಪಕ್ಷಿಗಳ ಚಿಲಿಪಿಲಿ, ಮಕ್ಕಳು ಕುಂಟ-ಪಿಲ್ಲೆ ಆಡುವಾಗಿನ ಕಿರುಚಾಟ, ಯಾರೂ ಕೇಳಿಸಿಕೊಳ್ಳದಿದ್ದರೂ, ದೂರದ ದೇವಸ್ತಾನದಲ್ಲಿ ಒಡಕು ರೇಡಿಯೋ ಒಂದು ಅದರ ಪಾಡಿಗೆ ಅದು ಕಿರುಚಿಕೊಳ್ಳುತಿರುವ ಶನಿ ಮಹಾತ್ಮೆ ಎಂಬ ಹರಿಕತೆ, ಎದುರು ಮನೆಯ ಕುರಿ ದೊಡ್ಡಿ ಜಗಲಿ ಮೇಲೆ ಕುಳಿತ ಹುಡುಗಣ್ಣನ 'ಎಮ್ಮೆ ನಿನಗೆ ಸಾಟಿಯಿಲ್ಲ' ಎಂಬ ಹಾಡಿನ ಸೀಟಿ, ಅವನ ಹಿಂದೆ ಕುರಿಗಳ ಮೆಹ್ ಮೆಹ್ ಹಿನ್ನಲೆ ಸಂಗೀತ. ಈ ಎಲ್ಲ ಶಬ್ದಗಳು ಒಟ್ಟಿಗೆ ಸೇರಿ ರೆಹಮಾನ್ ಟ್ಯೂನ್ ಥರ ನನಗೆ ಕೇಳಿಸುತಿದ್ದವು. ಅದರ ಜೊತೆಗೆ ಮನೆಯ ಎದುರಿಗೆ ಕಾಣಿಸುವ ಮಡಿಲು ತುಂಬ ಹಸಿರು ತುಂಬಿದ ಹೊಲಗಳು, ಅದರಾಚೆ ಕಾಣಿಸುವ ನೀಲಗಿರಿ ಮರಗಳ ಗುಡ್ಡ. ಈಗೆ ಕೇಳುತ್ತಾ, ನೋಡುತ್ತಾ, ಕಾಫೀ ಗುಟುಕಿಸುತ್ತಾ ಅಲ್ಲೇ ನಿಂತು ಬಿಟ್ಟೆ. ಮನಸ್ಸಿಗೆ ಏನೋ ಹಿತವೆನ್ನಿಸುತಿತ್ತು.

ದಾರಿಯಲ್ಲಿ ಕೆಲವು ದೊಡ್ಡವರು ಸತೀಶ ಬೀಡಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಬಂಡಿಯಂತೆ ಕೆರೆಯ ಕಡೆಗೆ ಒಡುತಿದ್ದರು, ಮಕ್ಕಳು ಒಂದು ಕೈಯಲ್ಲಿ ಬಗರಿ ಇನ್ನೊಂದು ಕೈಯಲ್ಲಿ ಚಡ್ಡಿ ಹಿಡಿದುಕೊಂಡು ಕೆರೆಯ ಕಡೆ ಒಂದೇ ಉಸಿರಿಗೆ ಓಡುತಿದ್ದರು. ಅವರಿಗೆಲ್ಲ ಕೆರೆಯೇ ಬಕೇಟು, ಸುತ್ತಮುತ್ತಲಿನ ಹೊಲ-ಗದ್ದೆಗಳೇ ಟಾಯ್ಲೆಟ್ ಮನೆಗಳು, ಜೊತೆಗೆ ಬದುಗಳಲ್ಲಿ ಬೆಳೆದಿದ್ದ ಚಿಕ್ಕ ಮರ-ಗಿಡಗಳ ಗುತ್ತಿಗಳೇ ಅವರ ಮರ್ಯಾದೆ ಕಾಪಾಡುತಿದ್ದ ಗೋಡೆಗಳು. ಕೆಲವೊಮ್ಮೆ ಆ ಗುತ್ತಿಗಳ ಹೊಳಗಿಂದ ರಾಜ್ ಕುಮಾರ್ ಹಾಡುಗಳು ಬರುತ್ತಿರುತ್ತವೆ, ಜೊತೆಗೆ ಸಂಗೀತ ಕೂಡ ಕೇಳಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಹೆಂಗಸರಿಗೆ ಆ ಸೌಲಭ್ಯಗಳು ಇಲ್ಲದಿರುವ ಕಾರಣ ಅವರುಗಳೆಲ್ಲ ಒಂದೊಂದು ಚೆಂಬು ಹಿಡಿದುಕೊಂಡು ಒಡುತಿದ್ದರು. ಜೊತೆಗೆ ಕೆರೆಯ ಕೆಳ ಭಾಗ ಗಂಡಸರಿಗೆ ಹಾಗೂ ಮೇಲು ಭಾಗ ಹೆಂಗಸರಿಗೆ ಎಂದು ಯಾರೂ ನಿಯಮ ಮಾಡದಿದ್ರೂ ಅದನ್ನು ನಮ್ಮೊರಿನ ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದಿದ್ದರು, ಪಾಲಿಸಿಕೊಂಡು ಹೋಗುತಿದ್ದಾರೆ.

ಪಟ್ಟೆ ಚಡ್ಡಿ ಹಾಕಿಕೊಂಡು ದಾರಿಯಲ್ಲಿ ಹೋಗುತಿದ್ದ ದೊಡ್ಡಪುಟ್ಟಣ್ಣನ ಮನೆಯ ತಿಮ್ಮಪ್ಪಣ್ಣ ನನ್ನನ್ನು ನೋಡಿ ಯಾವಾಗ ಬಂದೆ ಮಗಾ ಅಂತ ಆಪ್ತತೆಯಿಂದ ಮಾತಾಡಿಸಿದರು. ನಾನು ನೆನ್ನೆ ಬಂದೆ ಅಂತ ಹೇಳಿ ಕಾಫೀಗೆ ಅಹ್ವಾನವಿತ್ತರೂ, ಹೊಲದಲ್ಲಿ ಬೇಸಾಯ ಹೂಡಿ, ನಿಲ್ಲಿಸಿ ಬಂದಿದ್ದೇನೆ ಅಂತ ಹೇಳಿ ಹೊರಟು ಹೋದರು. ನೀರಿಗೆ ಹೋಗುತಿದ್ದ ಮುದಿಯಣ್ಣನ ಹೆಂಡತಿ ಮಲ್ಲಕ್ಕ ನನ್ನನ್ನು ನೋಡಿದೊಡನೆ ದಾರಿಯಲ್ಲೇ ಕೊಡಗಳನ್ನು ಇಟ್ಟಿ , ಬಂದು ಪ್ರೀತಿಯಿಂದ ಯಾವಾಗ ಬಂದ್ಯೋ ತ್ವಾಟಿ ಅಂತ ಕೇಳಿದರು. ನಂತರ ಮಗ ದೊಡ್ಡವನಾಗಿದ್ದಾನೆ ಮಾಡುವೆ ಮಾಡು ಅಂತ ಚಾಡಿ ಹೇಳಲು ಅವ್ವನ ಹತ್ತಿರ ಹೋದರು. ತಕ್ಷಣ ಬೀದಿ ನಾಯಿಯೊಂದು ಬಂದು ಕೊಡಪಾನದೊಳಗೆ ಮೂತ್ರ ಮಾಡಿ ಹೋಯಿತು. ಅದೇ ದಾರಿಯಲ್ಲಿ ಹೋಗುತಿದ್ದ ನನ್ನ ಬಾಲ್ಯದ ಗೆಳೆಯ ಬೂದೇಶ (ಕುಯ್ಯ) ನನ್ನನ್ನು ನೋಡಿದಾಕ್ಷಣ, ಹತ್ತಿರ ಬಂದು ಏನ್ಲಾ ತ್ವಾಟ, ಎನ್ಗಿದ್ದಿಲ್ಲಾ, ಫುಲ್ ಹೊಟ್ಟೆ ಬಂದಿತಲ್ಲ ಎಂದು ಸದರದಿಂದ ಕೇಳಿ, ಅದು ಅತಿಯಾಯಿತೆಂದು ಭಾವಿಸಿ ಪರಿತಪಿಸುತಿರುವುದನ್ನು ಕಂಡು ನಾನು ಅದನ್ನು ಹೋಗಲಾಡಿಸಲೆಂದು ಏನಿಲ್ಲ ಕಣ್ಲ, ನೆನ್ನೆ ರಾತ್ರಿ ಬಂದೆ, ಬಾ ಕಾಫೀ ಕುಡಿಯುವ ಅಂತ ಕರೆದೆ, ಅವನು ಬಂದು ಕಾಫೀ ಕುಡಿಯುತ್ತ ನಿಂತ. ಎರಡು ಪುಟ್ಟ ಮಕ್ಕಳು ಬ್ರೆಡ್ ತುಂಡನ್ನು ಗೊಣ್ಣೆ ಹಾಗೂ ಮಣ್ಣಿನೊಂದಿಗೆ ನಂಚಿಕೊಂಡು ತಿನ್ನುತ್ತ, ಕೊಳಕು ಬಟ್ಟೆಯಲ್ಲಿ ಅಪ್ಪ ಅಪ್ಪ ಅಂತ ಓಡಿ ಬಂದು ಅವನನ್ನು ತಬ್ಬಿ ನಿಂತವು, ಅವಾಗಲೇ ನನಗೆ ತಿಳಿದದ್ದು, ಅವನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಅಂತ. ಆಶ್ಚರ್ಯದಿಂದ ಯಾವಾಗ ಮದ್ವೆ ಅದಲೇ, ನಂಗೆ ಕರೆಯಲೇ ಇಲ್ಲವಲ್ಲೋ ಅಂತ ಕೇಳಿದೆ. ಅದಕ್ಕವನು ಅದೊಂದು ದೊಡ್ಡ ಕತೆ, ಆಮೇಲೆ ಸಮಯ ಸಿಕ್ಕಾಗ ಹೇಳ್ತೇನೆ, ಈಗ ಅಪ್ಪನ್ನ ಸಂತೆಗೆ ಕಳುಯಿಸಲು ಹೊಲ್ತಾಕೆ ಹೋಗ್ಬೇಕು ಅಂತ ಹೇಳಿ ಎರಡು ಮಕ್ಕಳನ್ನು ಎರಡು ಕಂಕುಳಿಗೆ ಅವಚಿಕೊಂಡು ಹೊರಟು ಹೋದ. ನನ್ನ ಕಾಫೀ ಮುಗಿದು ಹೋಗಿತ್ತು.

ಮತ್ತೆ ಇನ್ನೊದು ಲೋಟ ಕಾಫೀ ತರಿಸಿಕೊಂಡು ಕುಡಿಯುತ್ತ ಅಲ್ಲೇ ನಿಂತಿದ್ದ ನಾನು ಲಂಗ-ದಾವಣಿ ಧರಿಸಿ ಬರುತಿದ್ದ ದಾಸಪ್ಪನ ಮನೆ ಬೀರಣ್ಣನ ಮಗಳು ನೀರಿಗೆ ಬರುತ್ತಿರುವುದನ್ನು ನೋಡಿದೆ, ಅವಳ ಹೆಸರು ಸರಿಯಾಗಿ ನೆನಪಿಗೆ ಬರ್ತಾ ಇಲ್ಲ. ನಾನು ಹತ್ತನೇ ತರಗತಿ ಓದುತಿದ್ದಾಗ ಅವಳು ಐದನೇ ತರಗತಿಗೆ ಸೇರಿದ್ದಳು. ತುಂಬ ಮುದ್ದಾದ ಹುಡುಗಿ. ಶಾಲೆಗೇ ಹೋಗುವಾಗ ಕೆಲವೊಮ್ಮೆ ನನ್ನ ಹೀರೋ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೋಗುತಿದ್ದೆ, ನನ್ನ ಸ್ನೇಹಿತರೆಲ್ಲ ತುಂಬ ಛೇಡಿಸುತಿದ್ದರು. ನಮ್ಮ ಊರಿನಲ್ಲಿ ಹತ್ತನೇ ತರಗತಿಯವರೆಗೂ ಓದಿದ ಬೆರಳೆಣಿಕೆಯಷ್ಟು ಹುಡುಗಿಯರಲ್ಲಿ ಇವಳು ಒಬ್ಬಳು. ಆದರೆ ಅವಳು ಕಾಲೇಜು ಮೆಟ್ಟಿಲು ಹತ್ತಿರಲಿಲ್ಲ. ಲಂಗ-ದಾವಣಿ ತೊಟ್ಟಿರುವ ಹಳ್ಳಿ ಹುಡುಗಿಯರನ್ನು ನೋಡಿದಾಗ ಹುಟ್ಟುವ ಅಸೆಗಳಿಗೂ, ಪಟ್ಟಣದಲ್ಲಿ ಪಾಶ್ಚಿಮಾತ್ಯರ ಅನುಕರಣೀಯ ಸೂಗಿಗೆ ಬಿದ್ದು, ದೇಹದ ಉಬ್ಬು ತಗ್ಗುಗಳನ್ನು ತೋರಿಸಲೆಂದೇ ಮೈಗೆ ಅಂಟಿಕೊಂಡಿರುವ ಅರಿವೆಯಂತ ಬಟ್ಟೆಗಳನ್ನು ತೊಡುವ ಹುಡುಗಿಯರನ್ನು ನೋಡಿದಾಗ ಹುಟ್ಟುವ ಆಸೆಗಳಿಗೂ ಎಸ್ಟೊಂದು ವ್ಯತ್ಯಾಸ ಇದೆ ಎಂದು ಯೋಚನೆ ಮಾಡಿ ಆಶ್ಚರ್ಯವಾಯಿತು. ಅದಕ್ಕೆ ಕಾರಣ ಆ ರೀತಿ ಬಟ್ಟೆ ತೊಡುವ ಹುಡುಗಿಯರೋ ಅಥವಾ ಹುಡುಗಿಯರು ಮಾತ್ರ ಗೊಡ್ಡು ಆದರ್ಶಗಳನ್ನು ಪಾಲಿಸಬೇಕೆಂಬ ನನ್ನ ಹುಚ್ಚು ಮನಸಿನ ಸಣ್ಣತನದ ಯೋಚನೆಗಳು ಈ ರೀತಿ ಆಸೆಗಳು ಬರುವ ಹಾಗೆ ನೋಡಿಕೊಳ್ಳುತ್ತದೋ?, ತಿಳಿಯಲಾಗದೆ ಆ ಯೋಚನೆಯನ್ನು ಅಲ್ಲೇ ನಿಲ್ಲಿಸುವುದು ಒಳ್ಳೆಯದು ಅನ್ನಿಸಿತು. ಜೊತೆಗೆ 'ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎಂಬ ನುಡಿಗಟ್ಟು, ಇಂದಿನ ವಾಸ್ತವದಲ್ಲಿ, ಎಷ್ಟು ಅರ್ಥ ಹೀನವಾಗಿದೆ ಎಂದು ನೆನೆದು ನಗು ಬಂತು. ಅದನ್ನು ನೋಡಿದ ಹುಡುಗಿ, ನಾನು ಅವಳನ್ನು ನೋಡಿ ನಗುತಿದ್ದೇನೆ ಎಂದು ಭಾವಿಸಿ ನಾಚಿ ನೀರಾಗಿ, ತಲೆ ತಗ್ಗಿಸಿ, ಎದೆ ಉಬ್ಬಿಸಿ, ಲಜ್ಜೆಯನ್ನು ಹೊತ್ತು, ವಿನಯವನ್ನು ಅವಚಿ, ಬಳುಕುತ್ತಾ ಹೋದಳು. ನನ್ನ ಎರಡನೇ ಲೋಟದ ಕಾಫೀ ಕೂಡ ಮುಗಿದು ಹೋಗಿತ್ತು. ಕಸದ ಮಂಕರಿ ಹೊರಿಸಲು ಅಪ್ಪ ಕೊಟ್ಟಗೆಯಲ್ಲಿ ಕರೆದಿದ್ದಕ್ಕೆ, ನಾನು ಮನೆಯ ಹಿಂದೆ ಹೋದೆ.

// ಗೌಡ

2 comments:

  1. ನನಗೆ "ಸತೀಶ" ಬೀಡಿ ಹೆಸರು ಕೇಳಿ ಒಂತರ ನಗು ಬಂತು. ಅಂದ ಹಾಗೆ "ಮಾಗಿ" ಅಂದರೇನು? ನನಗೆ ನಿಮ್ಮ ಭಾಷೆಯ ಸೊಗಡು ತುಂಬಾ ಖುಷಿ ತಂತು. ಬೀರನ್ನನ ಮಗಳು ನಿಮ್ಮನು ನೋಡಿ ನಾಚಿ ನೀರಾಗುವುದನ್ನು ನೋಡಿದರೆ ಸ್ವಲ್ಪ ಸಂದೇಹ ಬರುತ್ತದೆ :) :)

    ReplyDelete
  2. superb description Thote.. Reading your blog was like a virtual visit to ur village:)

    ReplyDelete