Wednesday, December 1, 2010

ಮಜ್ಜನ

ಓ ಮನವೆ, ಆಜನ್ಮಕಾಲ ನಖಶಿಖಾಂತ ಅಂಟಿರುವ ಕೊಳೆ
ಕೊಳೆತು ನಾರುವ ಮುನ್ನವೆಚ್ಚೆತ್ತು ಕೊಚ್ಚಿ ತೊಳೆದುಬಿಡು!
ಬಾಳಲಿ ಒಮ್ಮೆಯಾದರೂ ಜ್ಞಾನಮಜ್ಜನಗ್ಯೆದು ಮಡಿಯಾಗಿ
ಚೇತನಕಾಂತಿಗೆ ಕವಿದಿರುವ ಜಡತೆಯ ಜವನಿಕೆ ಸರಿಸಿಬಿಡು!  
ಕಂಡ ಕಂಡ ಕಲ್ ದೇವೆರಿಗೆ ಮರುಳುಕಿಂಕರನಾಗುವುದ ಬಿಟ್ಟು
ದೇವರದೇವನಾದ ಅಂತರಾತ್ಮನಿಂದಾ ಸತ್ಯದೀಕ್ಷೆ ಪಡೆದುಬಿಡು!

ದುರ್ವಿಚಾರಭರಿತ ಆಚಾರಗಳ ಗ್ರಹಣದ ಮಬ್ಬಲಿ
ಹಿರಿಯರು ಅರಿಯದೆ ಹಣೆಗಿಟ್ಟ ಮೌಡ್ಯತೆಯ ಮಸಿ!
ಯೌವನದ ಮರೆಯಲಿ, ವೇಷಗಳ ಸ್ಮಶಾನದಲಿ
ಬೆತ್ತಲಾಗಿ ಬಣ್ಣ ಬಳಿದುಕೊಳ್ಳುವಾಗಂಟಿದ ಬೂದಿ!
ಕೊಳೆಗಳೆಲ್ಲ ಕೊಳೆತು ಚಿತ್ತವೊಂದು ಗೆದ್ದಲು ಹಿಡಿದ ಹುತ್ತವಾಗಿ
ವಿಷಸರ್ಪಗಳು ಬಂದು ಸೇರುವ ಮುನ್ನ ಉಜ್ಜಿ ತೊಳೆದುಬಿಡು!

ಕಾಣುವ ಕಂಗಳಲ್ ಕುರುಡುಕಾಮದ ಪಿಸರು;
ಕೇಳುವ ಕಿವಿಗಳಲ್ ಕಿವುಡಾದರ್ಶಗಳ ಗುಗ್ಗೆ;
ನುಡಿಯುವ ನಾಲಿಗೆಯಲ್ ಅನಾಚಾರದ ಪಾಚಿ;
ತೋರುವ ಮೊಗದಲ್ ದುರಹಂಕಾರದ ದೂಳು;
ಈಗೆ, ಜ್ಞಾನಸುಧೆ ಒಳಹೊರ ಹರಿವ ಕಾಲುವೆಗಳೆಲ್ಲ ಕಲ್ಮಶಗೊಂಡು
ಗುಂಡಿಗೆಯು ಕೊಳಚೆಗುಂಡಿಯಾಗುವ ಮುನ್ನ ಕೊಚ್ಚಿ ತೊಳೆದುಬಿಡು!

Monday, November 8, 2010

ಗತವೈಭವವ ಪುನರ್ ಶಂಕುಸ್ಥಾಪಿಸಬಾರದೆ?

ದುಗುಡದ ಕಾರ್ಮೋಡಗಳು ಮನವ ಕವಿದಿರಲು
ಕಣ್ಣೀರಮಳೆ ಸುರಿಸಿ ಕರಗಿಸಬಾರದೆ?
ನೋವಿನ ಧಗೆಯಲಿ ಮೊಗವು ಬಳಲಿರಲು
ನಗೆಯಮೃತ ಬಡಿಸಿ ಅರಳಿಸಬಾರದೆ?

ಮೇಘಗಳ ಮರೆಯಲಿ ಚಂದಿರ ಚಣಕಾಲ ಮಾಯವಾದರೆ
ತನ್ನನಿನ್ನೆಂದೂ ಬೆಳಗಿಸನೆಂದು ಇಳೆಯು ಅಳುವುದೆ?
ಎಳೆಬಳ್ಳಿಯೊಂದು ಬಲಿತ ಗಿಡವನ್ನಾಶ್ರಯಿಸಿ ಮೇಲೇರಿದರೆ
ತನ್ನದ್ಯಾವ ಆಸರೆಯೂ ಬೇಕಿಲ್ಲವೆಂದು ಬೇರು ಬೆದರುವುದೆ?

ನವರಂಗಗಳನ್ನು ಬೆಳಕು ತನ್ನೊಳಗವಿಚಿಟ್ಟು ಮೆರೆದರೂ
ತುಂತುರುಹನಿಗಳು ಬೇಕಲ್ಲವೆ ತೋರಲು ಕಾಮನಬಿಲ್ಲು?
ಬಾಳವ್ಯೂಹದ ಪಥವ ಭೇದಿಸಿ ಮುಂದೆ ನಾ ಸಾಗುತಿದ್ದರೂ
ನಿನ್ನೋಲಿಮೆಯ ಬೆಳಕು ಬೇಕಲ್ಲವೆ ಕಾಣಲು ತೋರ್ಗಲ್ಲು?

ಸರಸದ ಸಿಹಿಬೆಲ್ಲ ಸವಿಯುವ ಹಂಬಲದಿ ಹಸಿದು ಬಂದರೆ
ವಿರಸದ ಕರಿಗಲ್ಲ ಎಡೆಯಿಟ್ಟು ಹಸಿದೆದೆಯನೇಕೆ ಕಾಡುವೆ?
ನಿನ್ನೋಲಿಮೆಮರದ ನೆರಳ ಬಯಸಿ ಬಸವಳಿದು ಬಂದರೆ
ನಲಿವಿನೆಲೆಗಳಿರದ ಬೋಳ್ಮರವಾಗಿ ಒಣಮನವನೇಕೆ ಸುಡುವೆ?

ತನ್ನೆಲ್ಲಾ ದುಮ್ಮಾನಗಳ ಗಂಟುಮೂಟೆಯ ಕ್ಷಣಕಾಲ ಕೆಳಗಿಳಿಸಿ
ಕುಪ್ಪಳಿಸಿ ಬಳಿಬಂದು ಲತೆಯಂತೆ ಬಿಗಿದಪ್ಪಿ, ಬೆರೆಯಬಾರದೆ?
ನೀನೆ ಕಲ್ಪಿಸಿ ಕಟ್ಟಿರುವ ಬೇಸರದ ಬೇಲಿಯ ಬುಡಕಡಿದುರುಳಿಸಿ
ಹಾರಿ ಬಂದು ಸೊಂಪಾದ ಎದೆಯೊಲವ ಹಸಿರ ಮೇಯಬಾರದೆ?

ಮಾತುಮಾತಿಗೂ ಮುತ್ತಿನ ಮುತ್ತಿಗೆಯಿಡುತಿದ್ದ ಆ ಗತವೈಭವವ
ಶಂಕೆಸಂಕೋಲೆಯ ಅಂಕೆಮುರಿದು ಪುನರ್ ಶಂಕುಸ್ಥಾಪಿಸಬಾರದೆ?
ನಿನಗೆಂದೇ ಮುಡಿಪಿರುವ ನನ್ನೆದೆಯಂತಃಪುರದ ಪೀಠವಾಕ್ರಮಿಸಲು
ಪ್ರೇಮರಥಕೆ ನಚ್ಚಿಕೆಯೆಂಬಶ್ವವವನೂಡಿ ಪ್ರಣಯದಾಳಿಗೈಯ್ಯಬಾರದೆ?

Monday, October 25, 2010

ಕನ್ನಡಕೃಷಿ

ಕರುನಾಡ ನಲ್ಮೆಯ ಸಹೋದರರೆಲ್ಲ ಬನ್ನಿರಿ
ಕನ್ನಡಕೃಷಿ ಮಾಡಲು ಕಂಕಣ ಕಟ್ಟಿ ನಿಲ್ಲೋಣ!
ನಮ್ ಹಿರಿಯರು ಕೂಡಿಸಿಟ್ಟ ಸಮೃದ್ದ ಫಸಲ್ ಉಂಡು
ಬರುವ ಪೀಳಿಗೆಗಿನ್ನೂ ಆರೋಗ್ಯ ಬೆಳೆ ಬೆಳೆಯೋಣ!

ಫಲವತ್ತತೆಯ ಆಗರವಾದ ಈ ನಾಡ ಮಣ್ಣಲಿ
ಹಗಲಿರುಳು ಒಲವ ಬೆವರ್ ಸುರಿಸಿ ದುಡಿಯೋಣ
ಕರುನಾಡ ಸರ್ವರೂ ಸುಮತಿವಂತರಾಗಿ
ಕನ್ನಡಮ್ಮನ ಸಿರಿಯ ಪಣತವ ತುಂಬಿಸೋಣ

ಜಾತಿ ಮತಗಳೆಂಬ ನಂಜಿಡುವ ಹೆಮ್ಮರಗಳ
ಬುಡಸಮೇತ ಕಿತ್ತು, ಬೆಂಕಿಯಲಿ ದಹಿಸೋಣ
ಕರುನಾಡ ನೆಲವನು ಹಸನಗೊಳಿಸಿ
ಕನ್ನಡಾಭಿಮಾನದ ಗಟ್ಟಿಬೀಜ ಬಿತ್ತೋಣ

ಪ್ರೀತಿ ನೆಚ್ಚಿಕೆಗಳ ಸಾವಯವ ಗೊಬ್ಬರ ಸುರಿದು
ಭಾವೈಕ್ಯತೆ ಸರ್ವೋದಯಗಳ ನೀರು ಹರಿಸೋಣ
ಅಸ್ಪೃಶ್ಯತೆ ಭ್ರಷ್ಟಾಚಾರಗಳೆಂಬ ಕಳೆ ಕಳೆದು
ಅಸೂಯೆ ಅಜ್ಞಾನಗಳೆಂಬ ಕ್ರಿಮಿ ಕೊಲ್ಲೋಣ

ಕನ್ನಡಮ್ಮನ ಎದೆಯ ಸುಧೆಯುಂಡು ಬೆಳೆದು
ಜಾಗತೀಕರಣದ ಬಿರುಗಾಳಿಗೆ ಸಿಕ್ಕಿ ತೂರಿಹೋದರೂ
ಅಲ್ಲಿಯ ಮಣ್ಣಲ್ಲೂ ಕನ್ನಡ ಕೃಷಿ ಮಾಡಿ
ಜಗದಗಲಕ್ಕೂ ಕನ್ನಡದ ಕಂಪನ್ನು ಪಸರಿಸೋಣ!

ಕೊಯ್ಲು ಮಾಡಿದ ಫಸಲ ಕನ್ನಡಮ್ಮನ ಮುಡಿಗರ್ಪಿಸಿ
ಕನ್ನಡದ ಕಲಿಗಳೆಲ್ಲ ಸೇರಿ ಸುಗ್ಗಿ ಜಾತ್ರೆ ಮಾಡೋಣ
ರಂಗುರಂಗಿನ ಕನ್ನಡ ಪುಷ್ಪಗಳ ಮಕರಂದ ಸವಿದು
ಕನ್ನಡಾಂಬೆಯ ತೇರು ಎಳೆಯಲು ಹೆಗಲು ಕೊಡೋಣ!

Tuesday, October 5, 2010

ಬಾ ಪ್ರೀತಿಯೇ ಬಾ

ಮನದಂಗಳದ ತುಂಬೆಲ್ಲಾ ರಂಗವಲ್ಲಿ ಬಿಡಿಸಿ
ಹೃದಯಂತರಾಳದ ತಲೆಬಾಗಿಲನು ತೆರೆದು
ಬಾಯ್ತುಂಬ ನುಡಿಮುತ್ತಿನ ಹಬ್ಬದಡಿಗೆ ಮಾಡಿ
ಕಣ್ತುಂಬ ಕಾತುರದ ತಳಿರುತೋರಣ ಕಟ್ಟಿ
ಒಲವಿನಾಗಮನದ ದಾರಿಯನ್ನೇ ಎದುರುನೋಡುತ್ತ
ಕಾದಿರುವ ಅಲಂಕಾರಿಕ ಮಂದಿರದ ಆತಿಥ್ಯಕೆ ಬಾ
ಪ್ರೀತಿಯೇ...
ಮಡಿಯಲ್ಲಿರುವ ಈ ಪೂಜಾರಿಯ ನೈವೇದ್ಯಕೆ ಬಾ

ಕೋಗಿಲೆಗೆ ಹಾಡಲು ಹರುಷದ ಹುರುಪು ತುಂಬುವ
ವಸಂತ ಋತುವಾಗಿ ಬಾ
ಇರುಳ ಕೋಣೆಯಲಿ ಕತ್ತಲ ನುಂಗಿ ಬೆಳಕ ಹರಿಸುವ
ಪುಟ್ಟ ಹಣತೆಯಾಗಿ ಬಾ
ಮೂಲೆಯಲಿ ಹಚ್ಚಿದರೂ ನಿವಾಸದ ತುಂಬೆಲ್ಲಾ ಹರಡುವ
ದೂಪದ ಸುಗಂಧವಾಗಿ ಬಾ
ರವಿಯಂತೆ ಬೇಯಿಸದೆ, ದೀಪದಂತೆ ದಹಿಸದೆ, ತಣ್ಣನೆ ಬೆಳಗುವ
ಹುಣ್ಣಿಮೆಯ ಚಂದಿರನಾಗಿ ಬಾ

ಗಾಢ ನಿದಿರೆಯಲಿ ಕರೆಯಿಲ್ಲದೆ ಸುಳಿಯುವ ಅನಿರೀಕ್ಷಿತ
ಕನಸ ಕಾರಂಜಿಯಾಗಿ ಬಾ
ಸಂಕಲನದ ಖಾಲಿ ಹಾಳೆಗಳ ಮೇಲೆ ಮೂಡುವ ಅರ್ಥಗರ್ಭಿತ
ಕಾವ್ಯ ಸಿಂಚನವಾಗಿ ಬಾ
ಕವಿಮನದಲಿ ಹಠಾತ್ ಗೋಚರಿಸುವ ಕಪೋಲಕಲ್ಪಿತ
ಭಾವ ಚಿಲುಮೆಯಾಗಿ ಬಾ
ಅಂತರಂಗವನ್ನೆಲ್ಲಾ ಸೋಸಿ ಸೃಷ್ಟಿಸಿರುವ ಈ ಕವಿತೆಗೆ ಮಾಧುರ್ಯಭರಿತ
ಸಂಗೀತ ಲಹರಿಯಾಗಿ ಬಾ

ಅಂತರಾಳದಲಿ ಅಡಗಿರುವ ತುಂಟ ಆಸೆಯ ಹೊರಗೆಳೆಯಲು
ತುಸು ಧ್ಯೆರ್ಯವಾಗಿ ಬಾ
ಹಸಿಗೋಪದಲಿ ಅಳುವ ಗೆಳತಿಯ ಮುದ್ದು ಮೊಗವರಳಿಸಲು
ಹುಸಿ ನೆವವಾಗಿ ಬಾ
ಬಳಲಿರುವ ಗೆಳತಿ ಬಳಿಬಂದು ಬಳ್ಳಿಯಂತೆ ಬಂದಿಸಿರಲು
ಮೌನದ ಹಾಡಾಗಿ ಬಾ
ಗೆಳತಿಯ ವಿರಹದ ಕಡುಗತ್ತಲೆ ಕವಿಮನವನು ಕವಿದಿರಲು
ನೆನಪಿನ ಹುಣ್ಣಿಮೆಯಾಗಿ ಬಾ

ಇಳೆಯ ತಣಿಸಲು ನೋವು ನೀಡದೆ ಇಳಿದು ಬರುವ
ಸೋನೆ ಮಳೆಯಾಗಿ ಬಾ
ಬೆವರು ಬಸಿದು ತೋಡಿದ ಬಾವಿಯ ತಳದಲಿ ಚಿಮ್ಮುವ
ಒರತೆ ಜಲವಾಗಿ ಬಾ
ಪ್ರತಿರಾತ್ರಿ ಕಂಡ ಸವಿಗನಸುಗಳ ಒಂದೊಂದಾಗಿ ನನಸಾಗಿಸುವ
ಜಾದುಗಾರನ ದಂಡವಾಗಿ ಬಾ
ಒಂದಕ್ಕೆ ಒಂದನ್ನು ಕೂಡಿಸಿದರೆ ಮೂರೆಂದು ನಿರೂಪಿಸುವ
ಶುಭ ಸಂಕಲನವಾಗಿ ಬಾ

[ಈ ಗದ್ದಲದ ಚೌಕಟ್ಟು ಬಿ ಆರ್ ಲಕ್ಷ್ಮಣ್ ರಾವ್ ರವರ "ಬಾ ಮಳೆಯೇ ಬಾ" ಎಂಬ ಸುಂದರ ಕವನದಿಂದ ಪ್ರೆರಿತಗೊಂಡಿದೆ. ಇಲ್ಲಿ ಓದಿ]

Friday, September 17, 2010

ಪ್ರೇಮೋದಯ



ಎದೆಬಡಿತದ ಗತಿಯೇಕೋ ಇಂದು ಮಿತಿಮೀರುತಿದೆ
ಬರಡು ಬಾಳಲಿ ಒಲವಿನ ಸುರಿಮಳೆಯಾಗುವ ಮುನ್ಸೂಚನೆಗೊ?
ಇಷ್ಟು ದಿವಸ ಮಾಡಿದ ಪ್ರೀತಿಯ ಜಪತಪಗಳ ಮೋಡಿಗೆ
ಮನಸೋತ ಮನದ ಮೆರವಣಿಗೆಯಾಗಮನದ ದಿಕ್ಸೂಚನೆಗೊ?
ನೂರಾರು ಗುರುಗಳಿಂದ ಕಲಿತ ನಾಲ್ಕಾರು ಪದಗಳು ನಿನ್ನ ಕಂಡೊಡನೆ
ಭಾವ ಹೊತ್ತು, ಸಾಲಾಗಿ ನಿಂತು, ಕಟ್ಟುವ ಗೀತಗರ್ಭದ ಶುಭಸೂಚನೆಗೊ?

ತನುವಿಗೆ ವಯ್ಯಾರದ ಸೀರೆಯುಟ್ಟು, ಎದೆಗೆ ಒಲವಾಭರಣ ತೊಟ್ಟು,
ಮೋರೆಗೆ ಲಜ್ಜೆಯಲಂಕಾರ ಮಾಡಿ ಪ್ರತಿರಾತ್ರಿ ಕನಸಲಿ ಕಾಡುವ ಕನ್ನಿಕೆಯೇ
ಸ್ವಪ್ನಮೇಘಮಾಲೆ ಹಿಡಿದು ಕಾದಿರುವೆ, ಸುರಿಸಲು ಒಲವಿನ ಜಡಿಮಳೆ
ತಣಿಯಲು ತಯಾರಿ ಮಾಡಿಕೊ, ಅನುರಾಗದ ಬೊಗಸೆಯೊಡ್ಡಿ;
ಮುಟ್ಟಿದರೆ ಸಾಕು ಮುಟ್ಟಾಗದ ತುಂಬು ಮೊಗ್ಗು ನೀನು; 
ಮುಟ್ಟದಯೆ ಪರಾಗಸ್ಪರ್ಶ ಮಾಡಬಲ್ಲ ತುಂಟ ದುಂಬಿ ನಾನು; 

ನಡೆಯುತಿರೆ ನಿನ್ನ ಸಂಗಡ, ಮುಸ್ಸಂಜೆ ಹೊತ್ತಿನಲಿ
ಪಿಸುಮಾತಿನ ಸುಳಿವು ನೀಡಿ ಸೆಳೆಯುತಿರುವೆ ಸನಿಹಕೆ;
ನಿನ್ನ ನಡುವೇರಿ ಕುಳಿತಿದೆ ಈ ನನ್ನ ಕೈ ಕೇಳದೆ ಯಾರ ಮಾತು
ಕೇಳದೇನೆ ಹಾಕಿರುವೆ ಒಪ್ಪಿಗೆಯ ಸಹಿ, ನೀನೂ ಹುಸಿಗೋಪದಲಿ;
ಸಂಜೆ ತಂಗಾಳಿಯ ಮಾತು ಕೇಳಿದ ನಿನ್ನಯ ನೀಳ ಕೇಶರಾಶಿ
ನನ್ನಯ ಕೆನ್ನೆಗೆ ಚುಂಬಿಸಿ, ಕಂಪಿನ ಮತ್ತೇರಿಸಿ, ಮಾತನ್ನೆ ಮರೆಸಿದೆ;

ಕುಳಿತಿರೆ ನಿನ್ನ ಸನಿಹದಲಿ, ಸಾಗರದ ತೀರದಲಿ
ಬಾರದು ಎಂದೂ ಅಭಾವ ಈ ಕವಿ ಕಲ್ಪನೆಯ ಮೇವಿಗೆ
ತೀರದು ಮೂಕಮನಗಳ ನಯನ ಸಂಭಾಷಣೆಯ ದಾಹ;
ನಮ್ಮ ಪ್ರೇಮೋದಯವ ಕಂಡ ಆ ದಿನಕರನು  
ಕರುಬಿ ಕಿಚ್ಚಿನ ಕೆಂಡ ಕಾರಿ ಮುಗಿಲನೆ ಕೆಂಪೇರಿಸುತಿಹನು
ಜೋರಾಗಿ ಜಾರುತಿಹನು ಮುಳುಗಿ ಮರೆಯಾಗಲು;

Tuesday, August 24, 2010

ಅಕ್ಕ-ತಂಗಿ


ಎಲ್ಲಾ ಮಹಾಮತಿಯರಸರ ಹಾಗೆ ವಿಷಯದಾಳ ಅರಿಯುವ ಬದಲಾಗಿ
ತರಾತುರಿಯಲಿ ಅವರವರ ಜೊಳ್ಳು ಆದರ್ಶಭರಿತ ತಕ್ಕಡಿಯಲಿ ತೂಗಿ
ಉಳಿದ ಹಾಳೂರಿನ ಗೌಡನಂತೆ ಇಲ್ಲಸಲ್ಲದ ಹಳಸು ತೀರ್ಪು ನೀಡದೆ
ತಾಸುಗಟ್ಟಲೆ ಜೊತೆಯಲ್ಲಿ ಸುಮ್ಮನೆ ಕೂತು ಒರಗಲು ಹೆಗಲು ಕೊಟ್ಟು
ತಾಯಿ ತನ್ನ ಮಗುವಿನ ಮೊದಲ ತೊದಲು ನುಡಿಗಳನ್ನು ಆಲಿಸಿದಂತೆ
ಯಾರಿಗೂ ಹೇಳಲಾಗದ ಕಷ್ಟಕಾರ್ಪಣ್ಯಗಳ ಪಟ್ಟಿಯನ್ನು ಹೃದಯವನ್ನರಳಿಸಿ ಕೇಳಿ
ಮರುಮಾತಡದೆ ಮೂಕನೋಟದಲೆ ತರ್ಕ ಮಾಡಿ ದುಗುಡವನ್ನೋಡಿಸಿ
ತಲೆಹೋಗುವಂತದ್ದೇನು ನಡೆದೇ ಇಲ್ಲವೆನ್ನುವಂತೆ ಮೊಗವರಳಿಸಿ ನಸುನಗುತ್ತ
ಅಕ್ಕರೆಯಿಂದ ತನ್ನೆದೆಗವಚಿ ಸೆರಗಿನಿಂದ ಮೋರೆಯ ದಣಿವನ್ನೊರೆಸುತ್ತ
ತಲೆಯನ್ನು ನೇವರಿಸಿ ಹಣೆಗೆ ಮುತ್ತಿಟ್ಟು ಈ ಹಾಳು ಜೀವನವೇ ಇಷ್ಟೆಂದು ತಿಳಿಹೇಳಿ
ಮುದುಡಿದ ಮನಸನ್ನು ಗಾಳಿಪಟ ಮಾಡಿ ಹಾರಿಸಿದವಳು ನೀನೇ... ನನ್ನ ಅಕ್ಕಯ್ಯ...

ಸರಿತಪ್ಪುಗಳ ಆತ್ಮವಿಮರ್ಶೆ ಮಾಡಿಕೊಳ್ಳಲು ಕೂಡ ಸಿಗದೇ ಪುರುಸೊತ್ತು
ಯಾಂತ್ರಿಕವಾಗಿರುವ ಕರ್ಮಗಳ ಅರ್ಥಗರ್ಭಿತ ಧ್ಯೇಯಗಳೆಲ್ಲಾ ಸತ್ತು
ಈ ಬದುಕಿನ ಅವಿರತ ಅಸಂಖ್ಯ ಜಂಜಾಟಗಳ ತುಲನೆಯಿಂದ ಬೇಸತ್ತು
ಈ ಬದುಕು ಕವಲುದಾರಿಯಲ್ಲಿ ಸಾಗುತಿರುವ ವ್ಯಥೆಯ ಶಿಖರದಲ್ಲೇ ಇದ್ದರೂ
ಭರಸಿಡುಕಿನ ಸಾಗರದಲ್ಲೇ ಇದ್ದರೂ, ಭಾವದಭಾವದ ಮರುಭೂಮಿಯಲ್ಲೇ ಇದ್ದರೂ
ನಿನ್ನ ಅಂತರಾಳದಲ್ಲಿ ಮೂಡಿದ ನಗುವಿನ ಕಿರಣಗಳು ಸೋಕಿದರೆ ಸಾಕು
ಆ ಪುಟ್ಟ ತೋಳುಗಳ ಮನಸಾರೆ ಆಲಿಂಗನದ ಸ್ಪರ್ಶ ತಾಕಿದರೆ ಸಾಕು 
ಸಿಡುಕಿನ ಭಾರೀ ಮಂಜುಗಡ್ಡೆ ಕರಗಿ ಅನುರಾಗದ ಪನ್ನೀರಾಗಿ ಹರಿದು
ನನ್ನೆದೆಯ ಭಾವನೆಗಳ ಕೆರೆಯು ತುಂಬಿ ಒಲವಿನ ಕೋಡಿ ಸುರಿದು
ಹೃದಯದ ಬಯಲಿನ ತುಂಬೆಲ್ಲಾ ಸೊಂಪಾದ ಪ್ರೀತಿಯ ಫಸಲು ಬೆಳೆದು
ಸಾಗುತಿರುವ ಈ ಬಾಳ ದಾರಿಯ ಹಚ್ಚಹಸುರಾಗಿಸಿದವಳು ನೀನೇ... ನನ್ನ ತಂಗ್ಯವ್ವ...

ಭರ ಭರನೆ ದೊಡ್ಮನುಷ್ಯನಾಗುವ ಹುನ್ನಾರದ ತುರಗವನ್ನೇರಿ
ದೊಡ್ಡ ದೊಡ್ಡ ಕನಸುಗಳ ಸಾಕಾರದ ಅಶ್ವಮೇಧಯಾಗಕೆ ಹೊರಟು
ನನಗರಿಯದೆ ನನ್ನೊಳಗಿನ ಹುಡುಗಾಟಿಕೆಯ ಎಳೆಮನದ ಗಿಣಿಯ
ಗೊಡ್ಡು ಗುರಿಗಳ ಸರಳುಗಳ ಹಿಂದೆ ಮುಲಾಜಿಲ್ಲದೆ ಬಂದಿಯಾಗಿಸಿರುವೆ
ಆ ನಿರಪರಾಧಿ ಅತಂತ್ರ ಗಿಳಿಯ ಚಣಕಾಲವಾದರೂ ಸ್ವತಂತ್ರಗೊಳಿಸಿ
ಜೊತೆಯಲಿ ಸ್ವಚ್ಛಂದ ಬಾನಿಗೆ ಹಾರಿಸಿ ಸ್ವೇಚ್ಛ ಚಿತ್ತಾರ ಬಿಡಿಸಬಲ್ಲವರು ನೀವೇ;
ಹುಣ್ಣಿಮೆಯ ರಾತ್ರಿಯಲಿ ಪ್ರೀತಿಯ ಕಣ್ಮುಚ್ಚಿ ಸಾಗುತಿದ್ದ ಈ ಹುಂಬನಿಗೆ
ಪ್ರೀತಿಯ ಒಳಗಣ್ಣ ತೆರೆಸಿ, ಬೆಳದಿಂಗಳ ಸೌಂದರ್ಯ ತೋರಿಸಿ
ತೋಚಿದ ದಾರಿಯಲಿ ಸಾಗುತಿದ್ದ ನನಗೆ ಉತ್ತಮ ದಿಕ್ಕನ್ನು ಸೂಚಿಸಿ
ನಾಲ್ಕು ದಿನದ ಬಾಳಲಿ ಪ್ರೀತಿಯ ಕೊಟ್ಟುಣ್ಣುವುದರ ಅರಿವು ಮೂಡಿಸಿ
ಬಾಳ ಧಗೆಯ ಪಯಣದಲಿ ತಂಬೆಲರಂತೆ ಜೊತೆಗಿರುವವರು ನೀವೇ... ನನ್ನ ಸೋದರಿಯರೆ... 

// ಪ್ರೀತಿಯ ಸೋದರ

Monday, July 26, 2010

ನಿನಗ್ಯಾಕೆ ಇಷ್ಟೊಂದು ಕಾತುರ?


ನನ್ನೊಳಗಿನ ಕವಿಯ ಅಣಕಿಸುತಿದೆ 
ನಿನ್ನಯ ಚಂಗಲು ನೋಟದ ಮೂಕ ಮಾತು
ನನ್ನೊಳಗಿನ ರಸಿಕನ ಕಿಚಾಯಿಸುತಿದೆ 
ನಿನ್ನಯ ನವಯೌವನದಿ ತುಂಬಿದೆದೆಯ ಸಿರಿ 
ನನ್ನೊಳಗಿನ ದುಂಬಿಯ ಕೆಣಕುತಿದೆ 
ನಿನ್ನಯ ಅಧರದ ಮಧುಮತ್ತ ಮಕರಂದ
ನನ್ನೊಳಗಿನ ಕಾಮಾಸುರನಿಗೆ ರಸದೆಡೆಯಾಗಲು 
ನಿನಗ್ಯಾಕೆ ಇಷ್ಟೊಂದು ಕಾತುರ

ವಿರಹದ ಬೇಸಿಗೆಯಲಿ ಬೆಂದು ಬೆಂಡಾದ ಬೆತ್ತಲೆ ಭೂಮಿಯಂತೆ
ತಣಿಯಲು ಕಾದಿರುವೆಯ ನನ್ನಯ ಪ್ರೀತಿಯ ಮುಂಗಾರು ಮಳೆಗಾಗಿ
ಒಂಟಿತನದ ಕೆಸರಲೆ ಬೆಳೆದು ನಿಂತಿರುವ ತಾವರೆ ಮೊಗ್ಗಿನಂತೆ
ಅರಳಲು ಕಾದಿರುವೆಯ ಈ ರವಿಯ ಬಾಹು ಬಂಧನದ ಕಾವಿಗಾಗಿ
ಶೃಂಗಾರದ ಸಕಲ ರಾಗಗಳ ತನ್ನೊಳಗೆ ಬಚ್ಚಿಟ್ಟ ಕೊಳಲಿನಂತೆ
ನುಡಿಯಲು ಕಾದಿರುವೆಯ ಈ ಮಾಂತ್ರಿಕನ ಅನುರಾಗದ ಸ್ಪರ್ಶಕ್ಕಾಗಿ
ಬಯಕೆಗಳ ಬೆಳೆ ಬೆಳೆದು ಫಸಲು ಕೊಯ್ಲಿಗೆ ಬಂದಿರುವ ಹೊಲದಂತೆ
ಅರ್ಪಿಸಲು ಕಾದಿರುವೆಯ ಈ ರೈತನ ಸುಗ್ಗಿಯ ಕಾಲದ ಹಿಗ್ಗಿಗಾಗಿ

ಕುಡಿಸದೆ ಮತ್ತೇರಿಸುವ ಗಮ್ಮತ್ತು ನಿನ್ನ ಮೈಮಾಟಕ್ಕಿದೆ
ಕೂತಲ್ಲೆ ಸೆಳೆಯುವ ಕಿಮ್ಮತ್ತು ನಿನ್ನ ಕಣ್ಣೋಟಕ್ಕಿದೆ
ಮುಟ್ಟದೆ ಮುದ್ದಾಡುವ ತಾಕತ್ತು ನಿನ್ನ ಒಡನಾಟಕ್ಕಿದೆ
ಬಲೆಯಿಲ್ಲದೆ ಬಂಧಿಸುವ ಮಸಲತ್ತು ನಿನ್ನ ಮನದ ತೊಳಲಾಟಕ್ಕಿದೆ
ಬಿಂಕದ ಭಂಗಿಗಳಿಂದಲೇ ನನ್ನ ನೆಮ್ಮದಿಗೆ ಭಂಗ ತರುತ್ತಿರುವೆ 
ವಯ್ಯಾರದ ನಡಿಗೆಯ ಹಾವ ಭಾವಗಳಿಂದ ನನ್ನ ಸಂಗ ಬಯಸುತ್ತಿರುವೆ
ನಿನ್ನೆದೆ ಕೆರೆಯ ಕಾಮನೆಗಳಿಂದ ತುಂಬಿ ನಯನಗಳಲ್ಲಿ ಕೋಡಿ ಹರಿಸುತ್ತಿರುವೆ 
ನನ್ನಯ ಪ್ರಾಯ ನೆಟ್ಟಗೆ ಬಲಿಯುವ ಮುಂಚೇನೆ ಪ್ರಣಯಕ್ಕೆ ಬಲಿ ತರವೆ

ಎಲ್ಲದನ್ನು ಪೂರ್ವ ಪರಿಣಿತಿ ಪಡೆದೆ ಮಾಡಬೇಕೆಂದೇನಿಲ್ಲ
ತಗ್ಗಿರುವಡೆಗೆ ನೀರು ಹರಿಯುವುದು ಪ್ರಕೃತಿ ನಿಯಮ 
ಎಲ್ಲವನ್ನು ಮೊದಲೇ ಕಲಿತು ಅರಿತು ಮಾಡಬೇಕೆಂದೇನಿಲ್ಲ
ಕಾಯಕವೆ ಕೈಲಾಸ ಎಂದು ದುಡಿವುದು ಧರ್ಮದ ಮೂಲ ನಿಯಮ
ಎಲ್ಲದಕ್ಕೂ ಸೋಲು ಗೆಲುವುಗಳ ಲೆಕ್ಕ ಹಾಕಬೇಕೆಂದಿಲ್ಲ
ಫಲಿತಾಂಶಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯವೆಂಬುದು ಜನರ ನಿಯಮ 
ಎಲ್ಲದಕ್ಕೂ ಲಾಭ ನಷ್ಟದ ತೂಕ ಹಾಕಬೇಕೆಂದಿಲ್ಲ
ಮಾಡುವ ಕರ್ಮದಲಿ ಸಂತೃಪ್ತಿಯಿರಬೇಕೆಂಬುದು ನಿನ್ನಯ ನಿಯಮ 
ಎಲ್ಲದಕ್ಕೂ ಸರಿ ತಪ್ಪಿನ ಅಳತೆ ಮಾಡಬೇಕೆಂದೇನಿಲ್ಲ
ನಿರ್ಧಾರ ಅವರವರ ಜ್ಞಾನಕ್ಕನುಸಾರವಾಗಿರುತ್ತದೆಂಬುದು ನನ್ನಯ ನಿಯಮ 
ಆದರೂ ಏಕೋ ಕಾಣೆ ಹೆದರಿಕೆ ಶುರು ಮಾಡಲು ಬಾಳ ಈ ಹೊಸ ಆಯಾಮ 


Tuesday, June 8, 2010

ಅವ್ವಾ




ಧರಣಿಗೆ ಎಂದಾದರೂ ತೀರಿಸಲಾದೀತೆ ರವಿಯ ಋಣವ
ಮೀನಿಗೆ ಬಹುಕಾಲ ಬದುಕಲಾದೀತೆ ನೀರನು ಧಿಕ್ಕರಿಸಿ
ಹೆಮ್ಮರವೇ ಆದರೂ ಅರೆಕ್ಷಣ ಮರೆಯಲಾದೀತೆ ಧರೆಯಾಸರೆ
ನಿನ್ನ ಹೆಸರಿಲ್ಲದ ನನ್ನ ಉಸಿರು ಕೊನೆಯುಸಿರಾಗಲಿ ಕಣವ್ವ

ನನ್ನೆದೆ ತೋಟದ ಪ್ರೀತಿಯ ಹಸುರಿನ ಹೊನಲು ನೀನವ್ವ
ನನ್ನ ಮನದ ಮುಗಿಲಲಿ ಉದಯಿಸುವ ಬೆಳಕಿನ ಕಿರಣ ನೀನವ್ವ

ದೇವರೇ ಲಂಚಕ್ಕೆ ಕೈಯೊಡ್ಡುವ ಈ ಭ್ರಷ್ಟ ನಾಡಲಿ
ನಿಸ್ವಾರ್ಥ ಸಿಗುವ ಏಕೈಕ ತಾಣ ನಿನ್ನೆದೆಗೂಡು ಕಣವ್ವ
ಮಾನವರೆಲ್ಲಾ ದಾನವರಾಗಿರೊ ಈ ದುಷ್ಟ ನಾಡಲಿ
ನೆಮ್ಮದಿ ಸಿಗುವ ಏಕೈಕ ತಾಣ ನಿನ್ನೊಡಲು ಕಣವ್ವ

ಯಾರ ಮನೆಯಲ್ಲಾದರು ಹಬ್ಬದಡಿಗೆ ಮಾಡಿದ್ದರೆ ಸಾಕು
ಹೊಂಚಾಕಿ ಬೇಡಿ ಪಡೆದು, ಸೆರಗಿನಲ್ಲಿ ಬಚ್ಚಿಟ್ಟು ತಂದು
ನನಗೆ ತುತ್ತಿಟ್ಟು, ತಾನು ಮಾತ್ರ ಬರೀ ಹೊಟ್ಟೆಯಲಿ ಮಲಗಿ
ಮಗ ಬೆಳೆದು ದೊಡ್ದಮನುಷ್ಯನಾಗುವ ಕನಸು ಕಂಡ
ಜಗತ್ತಿನ ಅತೀದೊಡ್ಡ ಕರುಣಾಮಯಿ ತಿರುಕಿ ನೀನವ್ವ

ವರುಷಗಳಿಂದ ಇರುವುದೊಂದೇ ಸೀರೆ ನೀ ತೊಡುತಿದ್ದರೂ
ಕೂಲಿ ಮಾಡಿ, ನನಗೆ ಮಾತ್ರ ನವನವೀನ ಉಡುಪು ತೊಡಿಸಿ
ಕಾಲಾವಾದಿ ಬರಿಗಾಲಿನಲ್ಲಿ ಕಲ್ಲುಮುಳ್ಳು ನೀ ತುಳಿಯುತಲಿದ್ದರೂ
ತನ್ನ ತಾಳಿಯನ್ನೇ ಗಿರವಿ ಇಟ್ಟು, ನನ್ನ ಪಾದ ಸಂರಕ್ಷಿಸಿ
ಕಡುಬಡತನದಲ್ಲೂ ಕುಂದುಕೊರತೆಗಳನ್ನು ನೀಗಿದ ಸಿರಿವಂತೆ ನೀನವ್ವ

ಓದುವುದು ಬರೆಯುವುದು ನೀ ಅರಿಯದೆ ಇದ್ದರೂ
ತನ್ನ ಮಗ ಮಾತ್ರ ನಾಲ್ಕಕ್ಷರ ಕಲಿತೇ ತೀರಬೇಕು
ಕಲಿತು, ನಾಲ್ಕಾರು ಜನರ ಬಾಳು ಬೆಳಗಬೇಕು
ಎಂಬ ಧೃಡವಾದ ಹುಚ್ಚು ಹಂಬಲದ ಕಾರ್ಯಸಿದ್ಧಿಯಲ್ಲಿ
ತಪ್ಪು ತಪ್ಪು ಅಕ್ಷರಗಳನ್ನೇ ಮತ್ತೆ ಮತ್ತೆ ತಿದ್ದಿಸಿದ
ನನ್ನ ಪಾಲಿನ ಮರೆಯಲಾಗದ ಮೊದಲ ಗುರು ನೀನವ್ವ

ಉರಿಯುವ ಬಿಸಿಲಲಿ, ಕೊರೆಯುವ ಚಳಿಯಲಿ,
ಸುರಿಯುವ ಮಳೆಯಲಿ, ಹಗಲಿರುಳು ಬೆವರು ಹರಿಸಿ
ತನ್ನೆದೆ ಮೇಲಿಂದ ಕೆಳಗಿಳಿಸದೆ ಜೋಪಾನ ಮಾಡಿ
ನನ್ನನ್ನು ಕಾಪಾಡುವುದಕ್ಕೆ ನಿನ್ನ ಜೀವನ ಮುಡಿಪಿಟ್ಟ
ನನ್ನ ಬೆಳೆಸುವುದನ್ನೇ ನಿನ್ನ ಜೀವನದ ಗುರಿಯಾಗಿಸಿಟ್ಟ
ನೀನೊಬ್ಬಳೆ ನನ್ನೆದೆಯ ಗುಡಿಯಲ್ಲಿ ಪೂಜೆಗರ್ಹ ಅಧಿದೇವತೆ ಕಣವ್ವ

Thursday, May 13, 2010

ಹೋಗಿ ಬಾ ಗೆಳತಿ

ಸಂಧರ್ಬ : SFO Airport ನಲ್ಲಿ ಒಬ್ಬ ಹುಡುಗ  ತನ್ನ ಗೆಳತಿಯನ್ನ ಎಲ್ಲಿಗೋ (ತವರಿಗೆ?) ಕಳಿಸಲು ಬಂದು ವಿದಾಯ ಹೇಳುತಿದ್ದಾಗ...  ನಾನು ಕಂಡ ಆ ಜೋಡಿಯ ಭಾವನೆಗಳನ್ನು, ನನ್ನ ಕಲ್ಪನೆಯ ಕಣ್ಣಿನ ಕ್ಯಾಮೆರಾದಿಂದ ಈ ಕವಿತೆಯ ರೂಪದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ.



ಪ್ರೀತಿಯ ಮಹಾಸಾಗರದ ನಡುವೆ 
ಅಗಲಿಕೆಯ ಮರುಭೂಮಿ ಕಂಡ 
ಹೃದಯ ಹೆದರಿ ನಡುಗುತಿದೆ
ವಿರಹದ ಬಿರುಗಾಳಿಗೆ ಸಿಗುವ ಭಯದಲಿ
ಮನವು ದಿಕ್ಕಾಪಾಲಾಗಿ ಓಡುತಿದೆ
ನೀನಿಲ್ಲದೆ ನನ್ನ ಈ ಬಾಳಿನ ಪಯಣ
ಒಂದು ಹೆಜ್ಜೆಯೂ ಮುಂದೆ ಸಾಗದು

ಬಾ ಬಿಗಿಯಾಗಿ ಅಪ್ಪಿಕೋ, ಹೊರಡುವ ಮುನ್ನ
ಈ ದೇಹದಿಂದ ಚೇತನ ಜಾರುವ ಮುನ್ನ
ತುಟಿಗಳಿಗೊಮ್ಮೆ ಸಿಹಿಯಾದ ಮುತ್ತಿಡು, ತೆರಳುವ ಮುನ್ನ
ನನ್ನಲ್ಲಿ ಉತ್ಸಾಹದ ಚಿಲುಮೆ ಬತ್ತುವ ಮುನ್ನ
ಪ್ರೀತಿಯ ಎರಡು ಮಾತಾಡು, ಅಗಲುವ ಮುನ್ನ
ನನ್ನ ಒಲವಿನ ಸ್ವರಪೆಟ್ಟಿಗೆ ಚೂರಾಗುವ ಮುನ್ನ

ನೀನಿಲ್ಲದೆ ನಾನು, ರೆಕ್ಕೆ ಇಲ್ಲದ ಹಕ್ಕಿ,
ಹೂಗಳೇ ಇಲ್ಲದ ತೋಟದ ದುಂಬಿ
ಉಸಿರೇ ಬಾರದು ಹೇಳಲು,
ಹೋಗಿ ಬಾ ಗೆಳತಿ ಎಂದೂ 
ಆದರೂ ಹೇಳದೆ ವಿಧಿಯಿಲ್ಲ 
ಬೇಗ ಮರಳಿ ಬಾ ಗೆಳತಿ,
ಕಾಯುವೆ ಒಂದೇ ಉಸಿರಲಿ
ನೀರಿಗಾಗಿ ಒದ್ದಾಡುವ ಮೀನಾಗಿ

Tuesday, April 6, 2010

ನಾನ್ಯಾಕೆ ಹಾಳಾಗಿ ಹೋದೆ?

ಗೆಳೆಯರ ಬಳಗದಲಿ ಕೂಡಿ
ಸಕಲ ವಿದ್ಯಾ ಪರಿಣಿತನೆಂದು ಚೋಡಿ
ಮೂರು ಲೋಕದ ಅಧಿನಾಯಕನಂತಿದ್ದ ನನಗೆ,
ನಿನ್ನ ಪುಟ್ಟ ಹೃದಯವ
ನನಗರಿಯದೆ ನನ್ನಲ್ಲಿ ಅಡಗಿಸಿ
ಹೃದಯದ ಚೋರನೆಂಬ ಅಪವಾದ ಹೊರಿಸಿ
ಸೆರೆಯಾಳು ಮಾಡಿ,
ಹೃದಯದ ಕೊಣೆಯಲ್ಲಿ ಬಂಧಿಸಿ
ಘೋರ ಒಂಟಿತನದ ಸುಳಿಯಲ್ಲಿ ಸಿಕ್ಕಿಸಿದ
ಕರುಣೆಯೇ ಇಲ್ಲದ ಪ್ರೀತಿಯ ಮಾಯೆ ನೀನು

ಹೊಟ್ಟೆ ಭಿರಿಯುವವರೆಗೆ ಮುದ್ದೆ ತಿಂದು
ಗೊರಕೆ ಬರುವ ಹಾಗೆ ನಿದ್ದೆ ಮಾಡಿ
ಕುಂಬಕರ್ಣನಂತಿದ್ದ ನನಗೀಗ
ನಿದ್ದೆ ಮುದ್ದೆ ಬಲು ದೂರ
ರಾತ್ರಿಯೆಲ್ಲ ಆಕಾಶ ನೋಡುವ ಹುಡುಗಾಟ
ಒಲವಿನ ಸಂದೇಶಗಳ ನಿರೀಕ್ಷೆಯ ಕಾದಾಟ
ಮನದಲ್ಲಿ ಹಲವು ಆಸೆಗಳ ಕಚ್ಚಾಟ
ಹಾಳು ಪ್ರೇಮ ಗೀತೆಗಳ ಗೀಚಾಟ
ಕಾರಣವಿಲ್ಲದೆ ತನ್ನಷ್ಟಕ್ಕೆ ತಾನೇ ನಗುವ ಹುಚ್ಚಾಟ
ನಿದಿರೆ ಹಸಿವಿಗೆ ಲಂಚ ಕೊಟ್ಟು
ಯೋಚನಾ ಲಹರಿಯನ್ನು ತನ್ನೆಡೆಗೆ ಸೆಳೆದು
ಹಿತವಾದ ನೋವು ಕೊಟ್ಟ ಮಾಯಗಾತಿ ನೀನು

ನೂರಾರು ಭಾರಿ ಕೇಳಿ,
ಎಂದೋ ಮರೆತು ಹೋದ
ಹಳೆಯ ಚಿತ್ರ ಗೀತೆಗಳು,
ಇಂದೇಕೋ ಮನ ಕಲಕುತ್ತಿವೆ
ಹಳೆ ರಾಗಗಳು ಹೊಸ ಮಾಧುರ್ಯದೊಂದಿಗೆ
ಹಳೆ ಸಾಲುಗಳು ಹೊಸ ಅರ್ಥಗಳೊಂದಿಗೆ
ಹಳೆ ದೃಶ್ಯಗಳು ಹೊಸ ಪಾತ್ರಧಾರಿಗಳೊಂದಿಗೆ
ನೇರವಾಗಿ ಹೃದಯದ ಗರ್ಭಗುಡಿ ತಲುಪಿ
ಅಪರೂಪದ ವ್ಯಾಮೋಹವ ಬಡಿದೆಬ್ಬಿಸಿವೆ
ಈ ಹಳೆ ಗೀತೆಗಳಿಗೆ ಶಸ್ತ್ರ ಚಿಕತ್ಸೆ ಮಾಡಿ
ಹೊಸ ಭಾವಗಳನ್ನು ತುರುಕಿದ ವ್ಯೆದ್ಯೇ ನೀನು

Sunday, February 28, 2010

ಮಾಗಿ ಚಳಿಯಲ್ಲಿ, ಬಿಸಿ ಕಾಫೀ.

ದಿನಾ ಬೆಳಗ್ಗೆ ಒಂಬತ್ತು ಗಂಟೆಗೆ ಏಳುವುದನ್ನು ಅಭ್ಯಾಸ ಮಾಡಿಕೊಂಡಿದ್ದ ನನಗೆ ಅವ್ವ ಏಳು ಗಂಟೆಗೆ ಒತ್ತಾಯ ಮಾಡಿ ಏಳಿಸುತ್ತಿದ್ದಾಗೆ ನನಗೆ ಸ್ವಲ್ಪ ಕೋಪ ಬಂತು ಆದರೆ ಅದನ್ನು ತೋರಿಸಿಕೊಳ್ಳದೆ ಕಷ್ಟ ಪಟ್ಟು ಅರೆ ನಿದ್ದೆಯಲ್ಲೇ ಎದ್ದು ಕುಳಿತೆ. ಕಾಫೀ ಆರಿ ಹೋಗ್ತದೆ ಬೇಗ ಕುಡಿ ಅಂತ ಹೇಳಿ ಒಂದು ದೊಡ್ಡ ಲೋಟದಲ್ಲಿ ಕಾಫೀ ಕೊಟ್ಟರು. ಉಡುಪಿಯಲ್ಲಿ ಬಿಸಿ ನೀರಿನಂತ ಕಾಫೀ ಕುಡಿದು ಕುಡಿದು ಮರಗಟ್ಟಿ ಹೋಗಿದ್ದ ನನಗೆ, ಆ ಕಾಫೀಯನ್ನು ತಗೊಂಡು ಒಂದು ಗುಟುಕು ಎಟಕಿಸಿದ ತಕ್ಷಣ ದೇಹದ ಮೂಲೆ ಮೂಲೆಗೂ ವಿದ್ಯುತ್ ಹರಿದ ಅನುಭವ, ನಿದ್ದೆಯಲ್ಲ ಮಾಯವಾಗಿ, ಉಲ್ಲಾಸದ ದೀಪ ಹತ್ತಿಕೊಂಡು ಉರಿಯತೊಡಗಿತು. ವಯಸ್ಸಿಗೆ ಬಂದ ಗಂಡು ಮಕ್ಕಳು ಸೂರ್ಯ ನೆತ್ತಿಗೆ ಬರುವರೆಗೂ ಮಲಗ್ತರಾ?, ಈಗಾದ್ರೆ ಮನೆಗೆ ದರಿದ್ರ ಬರಲ್ವ? ಇಷ್ಟು ದೊಡ್ಡವನಾಗಿ ಹಲ್ಲು ಉಜ್ಜದೆ ಕಾಫೀ ಕುಡಿಲಿಕ್ಕೆ ನಾಚಿಕೆ ಆಗಲ್ವಾ? ಎಂದು ಅವ್ವನ ಸುಪ್ರಭಾತದ ಬಾಣಗಳು ಬಂದು ಕಿವಿಯಲ್ಲಿ ನಾಟುತಿದ್ದವು. ಅದರ ಬಗ್ಗೆ ಯೋಚನೆ ಮಾಡ ಹೋದರೆ ನನ್ನ ಬಗ್ಗೆ ನನಗೆ ಅಸಹ್ಯವಾಗುತ್ತದೆ ಎಂದು ತಿಳಿದು, ಇದರಿಂದ ತಪ್ಪಿಸಿಕೊಳ್ಳಲು ಕಾಫೀ ತಗೊಂಡು ಮನೆಯ ಹೊರಗಡೆ ಬಂದೆ.

ಊರಿನ ಪಕ್ಕದಲ್ಲೇ ಕೆರೆ ಇರುವುದರಿಂದ, ಕೆರೆಯ ನೀರಿನ ಅಲೆಗಳೆಲ್ಲಾ ಮಾಗಿಯ ಗಾಳಿಗೆ ಚಳಿಯ ಅಲೆಗಳಾಗಿ ಮಾರ್ಪಟ್ಟು , ಹವಾ ನಿಯಂತ್ರಿತ ಜೈಲಿನಲ್ಲಿ ಕೂತು ಕೂತು ಬೊಜ್ಜು ತುಂಬಿ ಜಡಗಟ್ಟಿ ಹೋದ ನನ್ನ ದೇಹಕ್ಕೆ ಅಲೆಗಳು ಗುದ್ದಿ, ಪ್ರತಿಯೊಂದು ರೋಮವನ್ನು ಬಡಿದೆಳಿಸುತಿದ್ದವು. ಇದೆ ಊರಿನಲ್ಲಿ ಹುಟ್ಟಿ ಬೆಳೆದ ನನಗೆ ಯಾವತ್ತು ಆಗದಸ್ಟು ಚಳಿ ಇವತ್ತು ಯಾಕೆ ಆಗ್ತಿದೆ ಎಂದು ಯೋಚಿಸಿದಾಗ ತಿಳಿಯಿತು, ಎಷ್ಟರ ಮಟ್ಟಿಗೆ ನನ್ನ ದೇಹ ಉಡುಪಿಯ ವಾತಾವರಣಕ್ಕೆ ಒಗ್ಗಿ ಹೋಗಿದೆ ಎಂದು. ಒಳಗೆ ಹೋಗಬೇಕು ಅನ್ನಿಸಿದರೂ, ನನ್ನ ಊರು ಎಂದು ಜಿದ್ದಿಗೆ ಬಿದ್ದು, ಮೊಂಡ ಧ್ಯೆರ್ಯ ಮಾಡಿ ಚಳಿಯ ಅಲೆಗಳಿಗೆ ಎದೆಯೊಡ್ಡಿ ರಣಕಹಳೆ ಊದಿ ಅಲ್ಲೇ ಸೆಟೆದು ನಿಂತು ಕಾಫೀ ಹೀರುವುದನ್ನು ಮುಂದುವರೆಸಿದೆ.

ಒಳಗೆ ಅವ್ವ ಸಿಂಬಳ ಎಳೆದುಕೊಂಡು ಸೌದೆ ಒಲೆಯನ್ನು ಕಬ್ಬಿಣದ ಪೈಪಿನಿಂದ ಊದಿ ಬೆಂಕಿ ಹತ್ತಿಸುತ್ತಿರುವ ಶಬ್ದ, ಪಕ್ಕದಲ್ಲಿ ಬಂಗಾರಿ (ತಮ್ಮ) ಗಾಡಿಯ ಮೂಕಿ ಎತ್ತಿ ಎತ್ತುಗಳನ್ನು ನೊಗಕ್ಕೆ ಹೆಗಲು ಕೊಡಲು ಲೊಚಗುಟ್ಟಿ ಕರೆಯುತ್ತಿರುವ ಶಬ್ದ, ಪಕ್ಕದಲ್ಲೇ ಅಣ್ಣ ಎಮ್ಮೆಯ ಮೊಲೆಗಳಿಂದ ಕರೆದ ಹಾಲು ಚೆಂಬಿಗೆ ಬೀಳುತ್ತಿರುವ ಶಬ್ದ, ಹಿಂದುಗಡೆ ಅಪ್ಪ ಕೊಟ್ಟಗೆಯಲ್ಲಿ ಕಸ ಗುಡಿಸುವಾಗಿನ ಪೊರಕೆಯ ಶಬ್ದ, ಎಮ್ಮೆಯ ಜೋರು ಅಂಬಾ, ಅದರ ಕರುವಿನ ಸಣ್ಣ ಅಂಬಾ, ಬೀದಿ ನಾಯಿ ಮರಿಗಳ ಕುಯ್ ಕುಯ್, ನಮ್ಮ ಮನೆಗೆ ನುಗ್ಗಲು ಮರೆಯಲ್ಲಿ ನಿಂತಿರುವ ಪಕ್ಕದ ಮನೆಯ ಬೆಕ್ಕಿನ ಮ್ಯಾವ್ ಮ್ಯಾವ್, ದೂರದ ಬೋರವೆಲ್ ಹತ್ತಿರ ಊರಿನ ಹೆಂಗಸರ ಬೌ ಬೌ, ಬೇವಿನ ಮರದ ಮೇಲಿನ ಪಕ್ಷಿಗಳ ಚಿಲಿಪಿಲಿ, ಮಕ್ಕಳು ಕುಂಟ-ಪಿಲ್ಲೆ ಆಡುವಾಗಿನ ಕಿರುಚಾಟ, ಯಾರೂ ಕೇಳಿಸಿಕೊಳ್ಳದಿದ್ದರೂ, ದೂರದ ದೇವಸ್ತಾನದಲ್ಲಿ ಒಡಕು ರೇಡಿಯೋ ಒಂದು ಅದರ ಪಾಡಿಗೆ ಅದು ಕಿರುಚಿಕೊಳ್ಳುತಿರುವ ಶನಿ ಮಹಾತ್ಮೆ ಎಂಬ ಹರಿಕತೆ, ಎದುರು ಮನೆಯ ಕುರಿ ದೊಡ್ಡಿ ಜಗಲಿ ಮೇಲೆ ಕುಳಿತ ಹುಡುಗಣ್ಣನ 'ಎಮ್ಮೆ ನಿನಗೆ ಸಾಟಿಯಿಲ್ಲ' ಎಂಬ ಹಾಡಿನ ಸೀಟಿ, ಅವನ ಹಿಂದೆ ಕುರಿಗಳ ಮೆಹ್ ಮೆಹ್ ಹಿನ್ನಲೆ ಸಂಗೀತ. ಈ ಎಲ್ಲ ಶಬ್ದಗಳು ಒಟ್ಟಿಗೆ ಸೇರಿ ರೆಹಮಾನ್ ಟ್ಯೂನ್ ಥರ ನನಗೆ ಕೇಳಿಸುತಿದ್ದವು. ಅದರ ಜೊತೆಗೆ ಮನೆಯ ಎದುರಿಗೆ ಕಾಣಿಸುವ ಮಡಿಲು ತುಂಬ ಹಸಿರು ತುಂಬಿದ ಹೊಲಗಳು, ಅದರಾಚೆ ಕಾಣಿಸುವ ನೀಲಗಿರಿ ಮರಗಳ ಗುಡ್ಡ. ಈಗೆ ಕೇಳುತ್ತಾ, ನೋಡುತ್ತಾ, ಕಾಫೀ ಗುಟುಕಿಸುತ್ತಾ ಅಲ್ಲೇ ನಿಂತು ಬಿಟ್ಟೆ. ಮನಸ್ಸಿಗೆ ಏನೋ ಹಿತವೆನ್ನಿಸುತಿತ್ತು.

ದಾರಿಯಲ್ಲಿ ಕೆಲವು ದೊಡ್ಡವರು ಸತೀಶ ಬೀಡಿಯನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಬಂಡಿಯಂತೆ ಕೆರೆಯ ಕಡೆಗೆ ಒಡುತಿದ್ದರು, ಮಕ್ಕಳು ಒಂದು ಕೈಯಲ್ಲಿ ಬಗರಿ ಇನ್ನೊಂದು ಕೈಯಲ್ಲಿ ಚಡ್ಡಿ ಹಿಡಿದುಕೊಂಡು ಕೆರೆಯ ಕಡೆ ಒಂದೇ ಉಸಿರಿಗೆ ಓಡುತಿದ್ದರು. ಅವರಿಗೆಲ್ಲ ಕೆರೆಯೇ ಬಕೇಟು, ಸುತ್ತಮುತ್ತಲಿನ ಹೊಲ-ಗದ್ದೆಗಳೇ ಟಾಯ್ಲೆಟ್ ಮನೆಗಳು, ಜೊತೆಗೆ ಬದುಗಳಲ್ಲಿ ಬೆಳೆದಿದ್ದ ಚಿಕ್ಕ ಮರ-ಗಿಡಗಳ ಗುತ್ತಿಗಳೇ ಅವರ ಮರ್ಯಾದೆ ಕಾಪಾಡುತಿದ್ದ ಗೋಡೆಗಳು. ಕೆಲವೊಮ್ಮೆ ಆ ಗುತ್ತಿಗಳ ಹೊಳಗಿಂದ ರಾಜ್ ಕುಮಾರ್ ಹಾಡುಗಳು ಬರುತ್ತಿರುತ್ತವೆ, ಜೊತೆಗೆ ಸಂಗೀತ ಕೂಡ ಕೇಳಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಹೆಂಗಸರಿಗೆ ಆ ಸೌಲಭ್ಯಗಳು ಇಲ್ಲದಿರುವ ಕಾರಣ ಅವರುಗಳೆಲ್ಲ ಒಂದೊಂದು ಚೆಂಬು ಹಿಡಿದುಕೊಂಡು ಒಡುತಿದ್ದರು. ಜೊತೆಗೆ ಕೆರೆಯ ಕೆಳ ಭಾಗ ಗಂಡಸರಿಗೆ ಹಾಗೂ ಮೇಲು ಭಾಗ ಹೆಂಗಸರಿಗೆ ಎಂದು ಯಾರೂ ನಿಯಮ ಮಾಡದಿದ್ರೂ ಅದನ್ನು ನಮ್ಮೊರಿನ ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದಿದ್ದರು, ಪಾಲಿಸಿಕೊಂಡು ಹೋಗುತಿದ್ದಾರೆ.

ಪಟ್ಟೆ ಚಡ್ಡಿ ಹಾಕಿಕೊಂಡು ದಾರಿಯಲ್ಲಿ ಹೋಗುತಿದ್ದ ದೊಡ್ಡಪುಟ್ಟಣ್ಣನ ಮನೆಯ ತಿಮ್ಮಪ್ಪಣ್ಣ ನನ್ನನ್ನು ನೋಡಿ ಯಾವಾಗ ಬಂದೆ ಮಗಾ ಅಂತ ಆಪ್ತತೆಯಿಂದ ಮಾತಾಡಿಸಿದರು. ನಾನು ನೆನ್ನೆ ಬಂದೆ ಅಂತ ಹೇಳಿ ಕಾಫೀಗೆ ಅಹ್ವಾನವಿತ್ತರೂ, ಹೊಲದಲ್ಲಿ ಬೇಸಾಯ ಹೂಡಿ, ನಿಲ್ಲಿಸಿ ಬಂದಿದ್ದೇನೆ ಅಂತ ಹೇಳಿ ಹೊರಟು ಹೋದರು. ನೀರಿಗೆ ಹೋಗುತಿದ್ದ ಮುದಿಯಣ್ಣನ ಹೆಂಡತಿ ಮಲ್ಲಕ್ಕ ನನ್ನನ್ನು ನೋಡಿದೊಡನೆ ದಾರಿಯಲ್ಲೇ ಕೊಡಗಳನ್ನು ಇಟ್ಟಿ , ಬಂದು ಪ್ರೀತಿಯಿಂದ ಯಾವಾಗ ಬಂದ್ಯೋ ತ್ವಾಟಿ ಅಂತ ಕೇಳಿದರು. ನಂತರ ಮಗ ದೊಡ್ಡವನಾಗಿದ್ದಾನೆ ಮಾಡುವೆ ಮಾಡು ಅಂತ ಚಾಡಿ ಹೇಳಲು ಅವ್ವನ ಹತ್ತಿರ ಹೋದರು. ತಕ್ಷಣ ಬೀದಿ ನಾಯಿಯೊಂದು ಬಂದು ಕೊಡಪಾನದೊಳಗೆ ಮೂತ್ರ ಮಾಡಿ ಹೋಯಿತು. ಅದೇ ದಾರಿಯಲ್ಲಿ ಹೋಗುತಿದ್ದ ನನ್ನ ಬಾಲ್ಯದ ಗೆಳೆಯ ಬೂದೇಶ (ಕುಯ್ಯ) ನನ್ನನ್ನು ನೋಡಿದಾಕ್ಷಣ, ಹತ್ತಿರ ಬಂದು ಏನ್ಲಾ ತ್ವಾಟ, ಎನ್ಗಿದ್ದಿಲ್ಲಾ, ಫುಲ್ ಹೊಟ್ಟೆ ಬಂದಿತಲ್ಲ ಎಂದು ಸದರದಿಂದ ಕೇಳಿ, ಅದು ಅತಿಯಾಯಿತೆಂದು ಭಾವಿಸಿ ಪರಿತಪಿಸುತಿರುವುದನ್ನು ಕಂಡು ನಾನು ಅದನ್ನು ಹೋಗಲಾಡಿಸಲೆಂದು ಏನಿಲ್ಲ ಕಣ್ಲ, ನೆನ್ನೆ ರಾತ್ರಿ ಬಂದೆ, ಬಾ ಕಾಫೀ ಕುಡಿಯುವ ಅಂತ ಕರೆದೆ, ಅವನು ಬಂದು ಕಾಫೀ ಕುಡಿಯುತ್ತ ನಿಂತ. ಎರಡು ಪುಟ್ಟ ಮಕ್ಕಳು ಬ್ರೆಡ್ ತುಂಡನ್ನು ಗೊಣ್ಣೆ ಹಾಗೂ ಮಣ್ಣಿನೊಂದಿಗೆ ನಂಚಿಕೊಂಡು ತಿನ್ನುತ್ತ, ಕೊಳಕು ಬಟ್ಟೆಯಲ್ಲಿ ಅಪ್ಪ ಅಪ್ಪ ಅಂತ ಓಡಿ ಬಂದು ಅವನನ್ನು ತಬ್ಬಿ ನಿಂತವು, ಅವಾಗಲೇ ನನಗೆ ತಿಳಿದದ್ದು, ಅವನಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ ಅಂತ. ಆಶ್ಚರ್ಯದಿಂದ ಯಾವಾಗ ಮದ್ವೆ ಅದಲೇ, ನಂಗೆ ಕರೆಯಲೇ ಇಲ್ಲವಲ್ಲೋ ಅಂತ ಕೇಳಿದೆ. ಅದಕ್ಕವನು ಅದೊಂದು ದೊಡ್ಡ ಕತೆ, ಆಮೇಲೆ ಸಮಯ ಸಿಕ್ಕಾಗ ಹೇಳ್ತೇನೆ, ಈಗ ಅಪ್ಪನ್ನ ಸಂತೆಗೆ ಕಳುಯಿಸಲು ಹೊಲ್ತಾಕೆ ಹೋಗ್ಬೇಕು ಅಂತ ಹೇಳಿ ಎರಡು ಮಕ್ಕಳನ್ನು ಎರಡು ಕಂಕುಳಿಗೆ ಅವಚಿಕೊಂಡು ಹೊರಟು ಹೋದ. ನನ್ನ ಕಾಫೀ ಮುಗಿದು ಹೋಗಿತ್ತು.

ಮತ್ತೆ ಇನ್ನೊದು ಲೋಟ ಕಾಫೀ ತರಿಸಿಕೊಂಡು ಕುಡಿಯುತ್ತ ಅಲ್ಲೇ ನಿಂತಿದ್ದ ನಾನು ಲಂಗ-ದಾವಣಿ ಧರಿಸಿ ಬರುತಿದ್ದ ದಾಸಪ್ಪನ ಮನೆ ಬೀರಣ್ಣನ ಮಗಳು ನೀರಿಗೆ ಬರುತ್ತಿರುವುದನ್ನು ನೋಡಿದೆ, ಅವಳ ಹೆಸರು ಸರಿಯಾಗಿ ನೆನಪಿಗೆ ಬರ್ತಾ ಇಲ್ಲ. ನಾನು ಹತ್ತನೇ ತರಗತಿ ಓದುತಿದ್ದಾಗ ಅವಳು ಐದನೇ ತರಗತಿಗೆ ಸೇರಿದ್ದಳು. ತುಂಬ ಮುದ್ದಾದ ಹುಡುಗಿ. ಶಾಲೆಗೇ ಹೋಗುವಾಗ ಕೆಲವೊಮ್ಮೆ ನನ್ನ ಹೀರೋ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೋಗುತಿದ್ದೆ, ನನ್ನ ಸ್ನೇಹಿತರೆಲ್ಲ ತುಂಬ ಛೇಡಿಸುತಿದ್ದರು. ನಮ್ಮ ಊರಿನಲ್ಲಿ ಹತ್ತನೇ ತರಗತಿಯವರೆಗೂ ಓದಿದ ಬೆರಳೆಣಿಕೆಯಷ್ಟು ಹುಡುಗಿಯರಲ್ಲಿ ಇವಳು ಒಬ್ಬಳು. ಆದರೆ ಅವಳು ಕಾಲೇಜು ಮೆಟ್ಟಿಲು ಹತ್ತಿರಲಿಲ್ಲ. ಲಂಗ-ದಾವಣಿ ತೊಟ್ಟಿರುವ ಹಳ್ಳಿ ಹುಡುಗಿಯರನ್ನು ನೋಡಿದಾಗ ಹುಟ್ಟುವ ಅಸೆಗಳಿಗೂ, ಪಟ್ಟಣದಲ್ಲಿ ಪಾಶ್ಚಿಮಾತ್ಯರ ಅನುಕರಣೀಯ ಸೂಗಿಗೆ ಬಿದ್ದು, ದೇಹದ ಉಬ್ಬು ತಗ್ಗುಗಳನ್ನು ತೋರಿಸಲೆಂದೇ ಮೈಗೆ ಅಂಟಿಕೊಂಡಿರುವ ಅರಿವೆಯಂತ ಬಟ್ಟೆಗಳನ್ನು ತೊಡುವ ಹುಡುಗಿಯರನ್ನು ನೋಡಿದಾಗ ಹುಟ್ಟುವ ಆಸೆಗಳಿಗೂ ಎಸ್ಟೊಂದು ವ್ಯತ್ಯಾಸ ಇದೆ ಎಂದು ಯೋಚನೆ ಮಾಡಿ ಆಶ್ಚರ್ಯವಾಯಿತು. ಅದಕ್ಕೆ ಕಾರಣ ಆ ರೀತಿ ಬಟ್ಟೆ ತೊಡುವ ಹುಡುಗಿಯರೋ ಅಥವಾ ಹುಡುಗಿಯರು ಮಾತ್ರ ಗೊಡ್ಡು ಆದರ್ಶಗಳನ್ನು ಪಾಲಿಸಬೇಕೆಂಬ ನನ್ನ ಹುಚ್ಚು ಮನಸಿನ ಸಣ್ಣತನದ ಯೋಚನೆಗಳು ಈ ರೀತಿ ಆಸೆಗಳು ಬರುವ ಹಾಗೆ ನೋಡಿಕೊಳ್ಳುತ್ತದೋ?, ತಿಳಿಯಲಾಗದೆ ಆ ಯೋಚನೆಯನ್ನು ಅಲ್ಲೇ ನಿಲ್ಲಿಸುವುದು ಒಳ್ಳೆಯದು ಅನ್ನಿಸಿತು. ಜೊತೆಗೆ 'ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ' ಎಂಬ ನುಡಿಗಟ್ಟು, ಇಂದಿನ ವಾಸ್ತವದಲ್ಲಿ, ಎಷ್ಟು ಅರ್ಥ ಹೀನವಾಗಿದೆ ಎಂದು ನೆನೆದು ನಗು ಬಂತು. ಅದನ್ನು ನೋಡಿದ ಹುಡುಗಿ, ನಾನು ಅವಳನ್ನು ನೋಡಿ ನಗುತಿದ್ದೇನೆ ಎಂದು ಭಾವಿಸಿ ನಾಚಿ ನೀರಾಗಿ, ತಲೆ ತಗ್ಗಿಸಿ, ಎದೆ ಉಬ್ಬಿಸಿ, ಲಜ್ಜೆಯನ್ನು ಹೊತ್ತು, ವಿನಯವನ್ನು ಅವಚಿ, ಬಳುಕುತ್ತಾ ಹೋದಳು. ನನ್ನ ಎರಡನೇ ಲೋಟದ ಕಾಫೀ ಕೂಡ ಮುಗಿದು ಹೋಗಿತ್ತು. ಕಸದ ಮಂಕರಿ ಹೊರಿಸಲು ಅಪ್ಪ ಕೊಟ್ಟಗೆಯಲ್ಲಿ ಕರೆದಿದ್ದಕ್ಕೆ, ನಾನು ಮನೆಯ ಹಿಂದೆ ಹೋದೆ.

// ಗೌಡ

Sunday, January 31, 2010

ನಾನೊಬ್ಬ ನಿರಪರಾಧಿ ಗೆಳತಿ

ಸಹ್ಯಾದ್ರಿ ಕಣಿವೆಯ ತಪ್ಪಲಿನಲ್ಲಿ
ಧರೆಯನ್ನೇ ಮಧು ಮಂಚ ಮಾಡಿ
ತಿಂಗಳ ಬೆಳಕಿನ ಉಡುಪಿನಲ್ಲಿ
ನೀಲಿ ಮುಗಿಲಿನ ಚಾದರದಡಿ
ಹಸಿರು ಹುಲ್ಲಿನ ಹಾಸಿಗೆಯ ಮೇಲೆ
ಸೋಲು ಗೆಲುವುಗಳ ಹಂಗಿಲ್ಲದ್ದೆ ಆಡುತಿರುವ
ಆಟ ಇದು, ಪ್ರಣಯದೂಟ ಇದು.

ಸಿರಿಗಂಧ ಮರಗಳ ಸುಗಂಧ
ಗಾಳಿ, ಜಲಪಾತ, ಪಕ್ಷಿಗಳ ಜುಗಲ್ಬಂದಿ ಸಂಗೀತ
ಚಂದಿರನ ಬೆಳಕು, ಮರಗಳ ನೆರಳ್ಗತ್ತಲಿನ ಚಿತ್ತಾರ
ಬೆಂಕಿ ಹುಳಗಳ ದೀಪಾಲಂಕಾರಗಳ
ನಡುವೆ ರೀತಿ ರಿವಾಜುಗಳಿಲ್ಲದೆ ನಡೆಯುತಿರುವ
ಆಟ ಇದು, ರಸ ಕ್ರೀಡೆ ಇದು.

ಮರಗಳು ಬೀಸುತ್ತಿವೆ ಚಾಮರ ದಣಿವಾರಿಸಲು
ಮಂಜಿನ ಹನಿಗಳು ಬೆರೆಯುತ್ತಿವೆ ಬಿಸಿ ಬೆವರಿನೊಂದಿಗೆ
ತನ್ನ ಮುದ್ದು ಮಗ ನೋಡಿ ಹಾಳಾಗಬಾರದೆಂದು,
ಕರಿಮೋಡಗಳ ಪರದೆಯಿಂದ
ಮರೆ ಮಾಡುತಿದ್ದಾಳೆ ಚಂದಿರನ ಅಮ್ಮ
ಪ್ರಕೃತಿ ಮಾತೆಯ ಮಡಿಲಿನಲ್ಲಿ
ಯಾವುದೆ ನೀತಿ ನಿಯಮಗಳಿಲ್ಲದೆ ನಡೆಯುತ್ತಿರುವ
ಆಟ ಇದು, ಕಾಮಣ್ಣ ಆಡಿಸುತ್ತಿರುವ ಬಡಿದಾಟ ಇದು.

ನಮ್ಮ ಯೋಗಭ್ಯಾಸವನ್ನು ಕದ್ದು ನೋಡಿದ
ನವಿಲೊಂದು ಭಾವೋದ್ರೇಕಗೊಂಡು
ಕುಣಿದು, ಕೂಗಿ ಕರೆಯುತ್ತಿದೆ ತನ್ನ ನಲ್ಲೆಯನ್ನು
ನಾಚಿದ ಮೊಲವೊಂದು ಓಡುತಿದೆ
ಜೀವನದಲಿ ಬೇಸತ್ತ ಒಂದು ಇರುವೆ ಮುಕ್ತಿ ಪಡೆಯಲು
ನಮ್ಮ ಬೆನ್ನಿನಡಿ ಸಿಕ್ಕಿ ಆತ್ಮಹತ್ಯೆ ಮಾಡಿಕೊಳ್ಳುತಿದೆ
ಸೋಲು ಗೆಲುವುಗಳಿಲ್ಲದ ಈ ಆಟಕ್ಕೆ ತೀರ್ಪುಗಾರನಾದ
ಗೂಬೆಯೊಂದು ಎವೆಯಿಕ್ಕದೆ ನೋಡುತ್ತಿದೆ
ಇಷ್ಟೆಲ್ಲಾ ಆದರೂ, ಲೋಕದ ಪರಿವೆ ಇಲ್ಲದೆ ನಡೆಯುತಿರುವ
ಆಟ ಇದು, ರಸಿಕರ ಶೃಂಗಾರದಾಟ ಇದು.

ಗೆಳತಿ, ನಿದ್ದೆಯಲಿ ನಾನು ಲೀನವಾಗಿರುವಾಗ
ನಿದಿರಾ ದೇವತೆಯ ಕಟಾಕ್ಷದಿಂದ
ನನ್ನ ಅವತಾರ ಪ್ರವೇಶ ಮಾಡಿ
ರಸಿಕ ಕನಸು ನಿನ್ನೊಂದಿಗೆ ಆಡುತ್ತಿರುವ
ಆಟ ಇದು, ಕನಸಿನ ಆಟ ಇದು.

ನಾನೊಬ್ಬ ನಿರಪರಾಧಿ ಗೆಳತಿ
ನನ್ನ ರೂಪವನ್ನು ಕನಸಿಗೊಪ್ಪಿಸಿ
ಅಶರೀರ ದೃಷ್ಟಿಯಿಂದ, ವಿಧಿಯಿಲ್ಲದೇ
ನೋಡುತ್ತಿರುವ ಮೂಕಪ್ರೇಕ್ಷಕ ನಾನು
ಆದರೆ ದಯಮಾಡಿ ತಿಳಿಸು ಗೆಳತಿ
ನಿನ್ನ ಸಹಕಾರ ಕನಸಿನಲಿ ಮಾತ್ರ ಯಾಕೆ?

Tuesday, January 19, 2010

ಹೊಸ ಕವಿತೆಯ ಪರಿಚಯ

ನಿನ್ನಯ ಪ್ರೀತಿಯ ಉಸಾಬರಿಯೆ
ನನ್ನಯ ಪ್ರತಿನಿತ್ಯದ ಕಸುಬು
ನಿನ್ನಯ ಒಲವಿನ ಭಿಕ್ಷೆಯೆ
ನನ್ನಯ ಜೀತದ ಕೂಲಿ
ನಿನ್ನಯ ಅನುರಾಗದ ಪರಮ್ಮಾನ್ನವೆ
ನನ್ನಯ ಮೂರೊತ್ತಿನ ಕೂಳು

ನೀ ಎದುರಿದ್ದರೆ ನನ್ನ್ನೇ ನಾ ಮರೆವೆ
ನೀ ಮರೆಯಾದರೆ ಕಣ್ತುಂಬ ನೀನೆ ಕಾಣುವೆ
ಹಗಲೆಲ್ಲಾ ಮಾತಾಡುವೆ ಮೌನದಲಿ
ಇರುಳೆಲ್ಲಾ ಪ್ರೀತಿಸುವೆ ಕನಸಿನಲಿ

ಎದೆಯೊಳಗೊಮ್ಮೆ ಅನಿರೀಕ್ಷಿತ ದಾಳಿ ಮಾಡು
ಬಂಧಿಸುವೆ ಕವಿತೆಯೊಳಗೆ
ಮನಸಿನೊಳಗೊಮ್ಮೆ ದಾರಿತಪ್ಪಿ ಭೇಟಿ ನೀಡು
ಕಟ್ಟಿಹಾಕುವೆ ರಾಗದೊಳಗೆ
ಕನಸಿನೊಳಗೊಮ್ಮೆ ಅರಿವಿಲ್ಲದೆ ಇಳಿದು ನೋಡು
ಬಚ್ಚಿಡುವೆ ಚಿತ್ರಪಟದೊಳಗೆ

ನೀ ಮೌನದಲಿ ಮಾತಾಡಲು
ಹೊಸ ಭಾಷೆಯ ಉದಯ
ಕಿವಿಯಲಿ ನೀ ಪಿಸುಗುಡಲು
ಹೊಸ ರಾಗದ ಆರಂಭ
ದಿಟ್ಟಿಸಿ ನೋಡಲು ನೀ
ಹೊಸ ಕವಿತೆಯ ಪರಿಚಯ
ನೀ ಸನಿಹ ಕುಳಿತಿರಲು
ಹೊಸ ಲೋಕದ ಸೃಷ್ಟಿ
ದಿನವಿಡೀ ನೀ ಜೊತೆಗಿರಲು
ದಿನದ ತಾಸುಗಳ ಅಭಾವ

Monday, January 4, 2010

ಹನಿಗವನಗಳು

ಕಾಯಕವೇ ಕೈಲಾಸ
ಎಂದು ನಂಬಿದರೆ ಕೈ ಲಾಸೇ


ಇಂದು ತಡೆದುಕೊಳ್ಳಲಾರದೆ ಚಟ,

ಕುಡಿದರೆ ಸಾರಾಯಿ.

ನಾಳೆ ತಡೆಯಲು ಚಟ್ಟ ,

ಕುಡಿಯಬೇಕಾಗುತ್ತದೆ ದವಾಯಿ

ಕೆಲವರು ದುಡಿಯುತ್ತಾರೆ
ಜಾಬ್ ತೃಪ್ತಿಗೆ
ಮತ್ತೆ ಕೆಲವರು
ಜೇಬ್ ತೃಪ್ತಿಗೆ


ಹಿಂದೆ ಪ್ರೀತಿ ಮಾಡಿದರೆ

ಹೋಗುತಿತ್ತು ಪ್ರಾಣ

ಇಂದು ಪ್ರೀತಿ ಮಾಡಿದರೆ

ಹೋಗುತ್ತೆ ತ್ರಾಣ

ಹಿಂದೆ ಹಿರಿಯರು ಹೇಳುತಿದ್ದರು
ಉಬ್ಬು ತಗ್ಗುಗಳನ್ನು ನೋಡಿ
ನಡೆದರೆ ಬೀಳುವುದಿಲ್ಲ ಹಳ್ಳಕ್ಕೆ,
ಆದರೆ ಇಂದು ನಾವು ಅವುಗಳನ್ನೇ
ನೋಡಿ ಬೀಳುತ್ತೇವೆ ಹಳ್ಳಕ್ಕೆ


ಮದುವೆಯ ಮೊದಲು

ಪ್ರತಿಯೊಬ್ಬ ಹುಡುಗನು ಕವಿ

ಮದುವೆಯ ನಂತರ

ಅವನಿಗೆಂದೂ ಕೇಳಿಸದು ಕಿವಿ

ಮಾಡಿರುವೆಯೊಂದು ಸಂಕಲ್ಪ
ಹೊಸ ವರುಷಕೆ
ಮಾಡದಿರಲು ಯಾವುದೇ ಸಂಕಲ್ಪ
ಈ ವರುಷಕೆ

Friday, January 1, 2010

ಎತ್ತ ಸಾಗಿದೆ ಪಯಣ?

ಹೊಸ ವರ್ಷದ ನವೋದಯದಂದು
ಮನವೇಕೊ ಕೇಳುತಿದೆ,
ಎತ್ತ ಸಾಗಿದೆ ಪಯಣ?

ಸ್ನೇಹ ಪ್ರೀತಿಯ ಅತೀರೇಕದಲಿ
ಕೇಳಿಸದಾಗಿದೆ ಹೃದಯದ ಒಳದನಿ
ಮೇಲು ಕೀಳಿನ ಬಡಿದಾಟದಲಿ
ಅರ್ಥಹೀನವಾಗಿದೆ ಮನದ ಪಿಸುಮಾತು
ಪ್ರೇಮ ಕಾಮದ ಹುಡುಕಾಟದಲಿ
ಕಳೆದುಹೋಗಿದೆ ಹರೆಯ
ದ್ವೇಷ ಅಸೂಯೆ ಸಾಧಿಸುವಲಿ
ಕೊಲೆಯಾಗಿದೆ ಮನವ್ಯೆಶಾಲ್ಯತೆ
ಸರಿ ತಪ್ಪಿನ ಜಂಜಾಟದಲಿ
ಮಂಕು ಹಿಡಿದಿದೆ ಪ್ರಭುದ್ದತೆಗೆ
ಲಾಭ ನಷ್ಟದ ಲೆಕ್ಕಾಚಾರದಲಿ
ಶೂನ್ಯವಾಗಿದೆ ಪ್ರಾಮಾಣಿಕತೆ
ಬಡವ ಸಿರಿವಂತನೆಂಬ ತಾರತಮ್ಯದಲಿ
ಕಾಣದಾಗಿದೆ ನೆಮ್ಮದಿ
ಹಣ ಆಸ್ತಿ ಸಂಪಾದನೆಯಲಿ
ವಂಚನೆಯಾಗಿದೆ ಆತ್ಮಸಾಕ್ಷಿಗೆ
ಕೆಲಸ ನಿದ್ದೆಗಳ ತಲ್ಲೀನತೆಯಲಿ
ಮರೀಚಿಕೆಯಾಗಿದೆ ಏಕಾಂತ
ಗಳಿಸಿ ಕಳೆಯೋ ಸಡಗರದಲಿ
ಸಿಗದಾಗಿದೆ ಸಾರ್ಥಕತೆ
ನೆನ್ನೆ ನಾಳೆಗಳ ಯೋಚನೆಯಲಿ
ರುಚಿಸದಾಗಿದೆ ಇಂದಿನ ವಾಸ್ತವತೆ
ಹುಟ್ಟು ಸಾವಿನ ಹೆಣಗಾಟದಲಿ
ಕವಲೊಡೆದಿದೆ ಜೀವನದ ಉದ್ದೇಶ

ಹೊಸ ವರ್ಷದ ನವೋದಯದಂದು
ಮನವೇಕೊ ಕೊರಗುತಿದೆ,
ಎತ್ತ ಸಾಗಿದೆ ಪಯಣ?