Friday, May 27, 2011

ಓ ಗೋಮುಖವ್ಯಾಘ್ರಗಳೆ ಕೇಳಿ


ಬಿಡುವಿಲ್ಲದೆ ಬೆವರ ಬೆರೆಸಿ ನಾ ದುಡಿದನ್ನವನುಂಡು
ಬದುಕ ನೀಡಿದ ಈ ಬಡವನುಡುಗೊರೆಯ ಮೆಚ್ಚಿಕೊಂಡು
ನನಗೇ ಅಸ್ಪೃಶ್ಯನೆಂಬ ಬಿರುದಿಟ್ಟು ಋಣ ತೀರಿಸಿರುವ

ಇಲ್ಲಸಲ್ಲದ ಸ್ವಕಾರ್ಯಸಿದ್ದಿ ಧರ್ಮವ ಮೇಲೆತ್ತಿ
ಏನೂ ಅರಿಯದ ಮತಿಗೆ ಮೂಢಮಸಿಯ ಮೆತ್ತಿ
ನಾ ಬೆಳೆದನ್ನಕೆ ನನ್ನನ್ನೆ ಭಿಕ್ಷುಕನನ್ನಾಗಿ ಮಾಡಿರುವ

ವಿದ್ಯಾಬುದ್ಧಿಯಾರ್ಜನೆಯಿಂದ ನಯವಾಗಿ ವಂಚಿಸಿ
ಸಕಲ ಸುಖಸನ್ಮಾನಗಳಿಂದ ಸದಾ ದೂರವಿರಿಸಿ
ನನ್ನ ದಣಿವಿನುರಿಯಲ್ಲಿ ನಿಮ್ಮ ಬೇಳೆ ಬೇಯಿಸುತಿರುವ

ಓ ಗೋಮುಖವ್ಯಾಘ್ರಗಳೆ ಇನ್ನಾದರೂ ಸಾಕುಮಾಡಿ
ಕುಳಿತ ಕೊಂಬೆಗೆ ಕೊಡಲಿ ಹಾಕುವ ದುರ್ನಿಪುಣತೆ
ಹಾಲಿಗಾಗಿ ಗೋವಿನ ಕೆಚ್ಚಲು ಕುಯ್ಯುವ ದುರ್ನಡತೆ

ನನ್ನ ಧಿಕ್ಕಾರವಿದೆ ನಿಮ್ಮ ಅಂಧಧರ್ಮದ ಕುತಂತ್ರನೀತಿಗೆ
ನೇರ ಉತ್ತರವಿದೆ ನಿಮ್ಮ ಸಹಿಸಲಸಾಧ್ಯ ಹುಂಬದರ್ಪಕೆ
ಇನ್ನು ಸಲ್ಲದು ನಿಮ್ಮ ಭಗವಂತನಾಮ ಭಯೋತ್ಪಾದನೆ