Monday, October 1, 2012

ಮುಟ್ಟಾಳ

ಮುಟ್ಟಾಳನೊ ನಾನು ಮುಟ್ಟಾಳ
ಎಡಬಿಡಂಗಿ ಮನಸಿನ ಎಡವಟ್ಟು ಮುಟ್ಟಾಳ! 

ಎಲ್ಲೂ ಕಾಣದ 
ಎಂದೂ ಸಿಗದ 
ದೇವರನು ಕಲ್ಲಿನಲ್ಲಿ ಕಲ್ಪಿಸಿ 
ಹೂವು ಪ್ರಾಣಿಗಳ ಬಲಿಗೊಡದೆ 
ಹುಚ್ಚು ಆದರ್ಶಕೆ ನೆಮ್ಮದಿಯ ಮಾರಿಕೊಂಡ ಮುಟ್ಟಾಳ!

ಯಾವುದೆ ನಿರ್ಬಂಧವಿಲ್ಲದ 
ಯಾವುದೆ ಸ್ವಾರ್ಥವಿಲ್ಲದ 
ಪುಟ್ಟ ಪ್ರೀತಿಯ ಹುಡುಕಲು ಹೋಗಿ 
ಇದ್ದ ಮೂತಿಯ ಸುಟ್ಟುಕೊಂಡು ಬಂದು 
ಕುಳಿತು ಕೊರಗಿ ಕವಿಯಾಗ ಹೊರಟಿರೊ ಮುಟ್ಟಾಳ!

ಹೇಳೋದು ಒಂದು 
ಮಾಡೋದು ಮತ್ತೊಂದು 
ಸಿದ್ದಾಂತಗಳನೆಲ್ಲ ಬಾಯಲ್ಲೆ ಅಗಿದುಗಿದು 
ಮಲವನೆ ಮತ್ತೆ ಮತ್ತೆ ಬಯಸಿ ತಿಂದು 
ತನಗೆ ತಾನೇ ಮೋಸ ಮಾಡಿಕೊಳ್ಳಬಲ್ಲ ಚತುರ ಮುಟ್ಟಾಳ!

ಆ ಕ್ಷಣ ಒಂದು 
ಈ ಕ್ಷಣ ಇನ್ನೊಂದು 
ಆಸೆ ಕುದುರೆಗಳ ಬೆನ್ನೇರಿ ಹೋಗಿ 
ತಿರುಗಿ ತಿರುಗಿ ಬಂದು ಅಲ್ಲೇ ಬಿದ್ದರೂ 
ಬಿಡದೆ ಮತ್ತೆ ಮತ್ತೆ ಹೊರಡುವ ಛಲದಂಕ ಮುಟ್ಟಾಳ!

ಮುಟ್ಟಾಳನೊ ನಾನು ಮುಟ್ಟಾಳ
ಎಡಬಿಡಂಗಿ ಮನಸಿನ ಎಡವಟ್ಟು ಮುಟ್ಟಾಳ! 

Monday, September 10, 2012

ಗೂಡೊಂದ ಕಟ್ಟುವ ಬಾ

ಯಾವ ಅಡೆತಡೆಯ ಸಗ್ಗಿಲ್ಲದೆ
ಗಾಳಿ ತೂರಿದೆಡೆಗೆ ಹಾರುತಿದ್ದ
ನಿರ್ಮಲ ಆಗಸದ ಒಂಟಿಹಕ್ಕಿ ನಾನು
ಚೈತ್ರಮಾಸದ ನಿನ್ನರಿಕೆಯ ಕೇಳಿಬಂದೆ
ಜೊತೆಗೂಡಿ ಗೂಡೊಂದ ಕಟ್ಟಿ ಆಡುವ ಬಾ!

ಫಲವತ್ತಾದ ನನ್ನೆದೆಯ ತೋಟದಲಿ
ಬಗೆಬಗೆಯ ಹೂವುಗಳ ಬೆಳೆದಿರಿಸಿರುವೆ
ಬಂದು ನಿನ್ನಯ ಸುಂದರ ಮುಡಿಗೇರಿಸಿ
ನನ್ನಯ ಸ್ವಪ್ನಸ್ವರ್ಗವ ಇಲ್ಲಿಯೆ ನಿರ್ಮಿಸಿ
ಹೂತೋಟದ ಸಿಹಿಕಂಪನು ಪಸರಿಸು ಬಾ!

ಮೊಗ್ಗೊಂದು ಎದೆಭಾರ ತಗ್ಗಿಸಲು
ಬಾಯಾರಿದ ದುಂಬಿಗೆ ಜೇನೆರೆದಂತೆ
ನನ್ನ ಸಂಗೀತದ ಒಂಟಿತನ ಒಡೆದು
ಕೂಡಿ ಹಾಡಲು ಬಂದ ಗಾಯಕಿ ನೀನು
ನನ್ನ ತಾಳಕೆ ನಿನ್ನ ಸ್ವರವ ಸೇರಿಸಿ ಹಾಡು ಬಾ!

ನಾ ನಿನ್ನ ಒಡೆಯನೂ ಅಲ್ಲ
ನೀ ನನ್ನ ಸೇವಕಿಯೂ ಅಲ್ಲ
ನಿನ್ನ ಮುದ್ದಾದ ಮುಗ್ದತೆಯ ಹಾಲಿಗೆ
ನನ್ನ ಹುಚ್ಚಾಟದ ಸಕ್ಕರೆಯ ಸುರಿದು
ಇಬ್ಬರೂ ಸಮನಾಗಿ ಸವಿದು ಹಿಗ್ಗುವ ಬಾ!

ಕವಿತೆ ಕಟ್ಟುವ ಚಟಕೆ ತಿಳಿಯದೆ ಬಿದ್ದು
ಹೊರಗಣ್ಣಿಗೆ ಕಂಡಹಾಗೆ ಬರೆಯುತಿರುವೆ
ಜೊಳ್ಳಾಗಿ ಗೀಚುವುದ ನೀಬಂದು ನಿಲ್ಲಿಸಿ
ಎದೆಯೋಳಗಿಳಿದು ಭಾವದೀಪ ಬೆಳಗಿಸಿ
ನನ್ನನೂ ಕವಿಯಾಗಿಸಿ ಸಂಕಲನದ ಮುಖಪುಟವೇರು ಬಾ! 

Thursday, August 23, 2012

ಜಗದೇಕದೇವಿ

ನನ್ನ ಕವಿತೆಗಳ ಕಾರಣ ನೀನು
ನನ್ನ ಕವಿತೆಗಳ ಹೂರಣ ನೀನು 
ನಾನು ಅಟ್ಟು ಎಡೆಯಿಟ್ಟ ಕವಿತೆಗಳ 
ಅರ್ಪಿಸಿಕೊಳ್ಳೋ ಜಗದೇಕದೇವಿ ನೀನು
ನೀನಾಗೆ ನನ್ನಿಂದ ದೂರಾದ ನಂತರ 
ನನ್ನ ಕವಿತೆಗಳೆಲ್ಲ ಶವಾಗಾರದ ತೋರಣ! 

ಕಾಣದ ಕನಸನು ಕಣ್ಣಿಗೆ ತೋರಿಸಿ 
ಬಣ್ಣದ ಭಾವನೆಗಳ ಮಳೆ ಸುರಿಸಿ 
ಬೇಡದ ಬಯಕೆಗಳ ಬಡಿದೆಬ್ಬಿಸಿ 
ಬಿಸಿಯುಸಿರಲೆ ನಶೆಯ ಮೈಗೇರಿಸಿ
ಮದವೇರಿದ ಮನದ ಮದವಡಗಿಸದೆ 
ಬದುಕನೆ ಲೂಟಿ ಮಾಡಲು ಬಿಟ್ಟು ಹೋದೆಯಾ?  

ನನ್ನೆದೆ ಹೊಲವ ಒಪ್ಪ ಮಾಡಿ 
ಹದನೋಡಿ ಒಲವ ಬೀಜ ಬಿತ್ತಿ 
ಒಂದೊಳ್ಳೆ ಪ್ರೀತಿಯ ಹೂವ ಬೆಳೆದು 
ಮುಡಿಗೆ ಮುಡಿಯದೇ ಮರೆಯಾದೆ 
ಅರಳಿ ನಿಂತ ಹೂವ ನಾನೇನ ಮಾಡಲಿ? 
ಯಾವ ಕಲ್ಲು ದೇವರಿಗೆ ಬಲಿಯಾಗಿ ನೀಡಲಿ?

Monday, August 13, 2012

ಕಡುಬೇಸಿಗೆ

ಮರೆವುಗಳ ಮರೆಮಾಚಿ 
ಕಾರಣಗಳ ಕೈಗೆಟುಕದಂತೆ 
ಎದೆಯಾಳದಿ ಅವಿಚಿಟ್ಟಿದ್ದ
ಪ್ರೀತಿಯ ಹಸಿನೆನಪುಗಳು 
ಒಮ್ಮೆಲೆ ಒಣಗಿ ಹೊತ್ತಿ ಉರಿದು 
ಎದೆಯನೇ ಕಿಚ್ಚಿಗೀಡು ಮಾಡಿವೆ!

ಅಂದು ಕನಸಲಿ ತಪ್ಪಿ ಕರೆದರೂ 
ಕಾದು ಓಗೊಟ್ಟು ಓಡಿಬರುತಿದ್ದೆ, 
ಇಂದು ಕೂಗಿ ಕೂಗಿ ಕರೆದರೂ 
ತಿರುಗಿ ನೋಡದೆ ಹೊರಟಿರುವೆ.
ಜೀವಕೆ ಜೀವ ಬೆಸೆದ ಪ್ರೀತಿಯೇ 
ಸವೆದು ನಶಿಸಿದೆ ನಮ್ಮ ತಿಕ್ಕಾಟದಲಿ!

ಅಂದು ಸಮಯ ಸಿಕ್ಕರೆ ಸಾಕು 
ಉಬ್ಬಿ ಮಳೆಯಂತೆ ಸುರಿಯುತಿದ್ದ
ನನ್ನ ಪ್ರೀತಿಯ ಕವಿತೆಗಳು 
ಇಂದು ರಾತ್ರಿಯಿಡೀ ಕಾದು ಕುಳಿತರೂ 
ಯಾವ ಮಿಂಚು ಗುಡುಗಿನ ಸುಳಿವು ನೀಡದೆ 
ಬಾಳಲಿ ಕಡುಬೇಸಿಗೆಯ ನೆನಪಿಸುತಿವೆ!

Wednesday, July 25, 2012

ನಾ ಕವಿಯಲ್ಲ

ನಾನೇನು ಬರಿಯೆ ಕಲ್ಲಿನಲ್ಲೂ
ಶಿಲೆಯ ಕಾಣೋ ಕವಿಯೇನಲ್ಲ
ಆದರೂ ಕಂಡ ಕಂಡಲ್ಲೆಲ್ಲಾ
ಕೇವಲ ನಿನ್ನದೇ ಪ್ರತಿರೂಪ!

ಹೊನ್ನನ್ನು ಮಣ್ಣೆಂದು ಬಿಸಾಡೊ
ವೇದಾಂತಿಯೂ ಕೂಡ ನಾನಲ್ಲ
ಆದರೂ ನಿನ್ನೊಲವಿನ ಮುಂದೆ
ಮತ್ತೆಲ್ಲ ತೀರಾನೆ ತೃಣರೂಪ!

ಬದುಕಿಗೆ ಸಕಲವೂ ಒಲವೆಂದೂ
ಗೊಣಗೊ ಆದರ್ಶವೂ ನನಗಿಲ್ಲ
ಆದರೂ ನೀ ದೂರಾದ ನಂತರ
ಕಾಣದಾಗಿದೆ ಬದುಕಿಗೆ ಕಾರಣ!

ಎಂದೆಂದೂ ನನ್ನ ಕಣ್ಣ ಕನ್ನಡಿಯಲಿ
ಮಿನುಗುವ ನಿನ್ನಯ ಪ್ರತಿಬಿಂಬವು
ಇಂದೇಕೋ ಕಣ್ಣೀರಿನಲಿ ಕರಗಿಹೋಗಿ
ಕಣ್ಣನೆ ತೊರೆಯುತಿರುವುದು ಸರಿಯೆ?

ದಿನವಿಡೀ ಮೌನದಲೆ ಜಗಳವಾಡಿ
ಸೊಲ್ಲೆತ್ತದೆ ಸಂಜೆಗೆ ರಾಜಿಯಾಗಿ
ತುಟಿಗಳಲ್ಲೆ ಬರೆದ ಮುಚ್ಚಳಿಕೆಯ
ಮುರಿದು ದೂರಾಗುತಿರುವುದು ಸರಿಯೆ?

ಬಯಸಿಯೆ ಬರಡಾಗಿ ಹೋದರೂ
ಕಡೆಗಣಿಸಿ ಬಲುದೂರ ಸರಿದರೂ
ನೀನೆನ್ನ ಭಾವನದಿಗೆ ಸಾಗರ
ಬತ್ತುವವರೆಗೂ ಹರಿವೆ ನಿನ್ನೆಡೆಗೆ!