Friday, May 27, 2011

ಓ ಗೋಮುಖವ್ಯಾಘ್ರಗಳೆ ಕೇಳಿ


ಬಿಡುವಿಲ್ಲದೆ ಬೆವರ ಬೆರೆಸಿ ನಾ ದುಡಿದನ್ನವನುಂಡು
ಬದುಕ ನೀಡಿದ ಈ ಬಡವನುಡುಗೊರೆಯ ಮೆಚ್ಚಿಕೊಂಡು
ನನಗೇ ಅಸ್ಪೃಶ್ಯನೆಂಬ ಬಿರುದಿಟ್ಟು ಋಣ ತೀರಿಸಿರುವ

ಇಲ್ಲಸಲ್ಲದ ಸ್ವಕಾರ್ಯಸಿದ್ದಿ ಧರ್ಮವ ಮೇಲೆತ್ತಿ
ಏನೂ ಅರಿಯದ ಮತಿಗೆ ಮೂಮಸಿಯ ಮೆತ್ತಿ
ನಾ ಬೆಳೆದನ್ನಕೆ ನನ್ನನ್ನೆ ಭಿಕ್ಷುಕನನ್ನಾಗಿ ಮಾಡಿರುವ

ವಿದ್ಯಾಬುದ್ಧಿಯಾರ್ಜನೆಯಿಂದ ನಯವಾಗಿ ವಂಚಿಸಿ
ಸಕಲ ಸುಖಸನ್ಮಾನಗಳಿಂದ ಸದಾ ದೂರವಿರಿಸಿ
ನನ್ನ ದಣಿವಿನುರಿಯಲ್ಲಿ ನಿಮ್ಮ ಬೇಳೆ ಬೇಯಿಸುತಿರುವ

ಓ ಗೋಮುಖವ್ಯಾಘ್ರಗಳೆ ಇನ್ನಾದರೂ ಸಾಕುಮಾಡಿ
ಕುಳಿತ ಕೊಂಬೆಗೆ ಕೊಡಲಿ ಹಾಕುವ ದುರ್ನಿಪುಣತೆ
ಹಾಲಿಗಾಗಿ ಗೋವಿನ ಕೆಚ್ಚಲು ಕುಯ್ಯುವ ದುರ್ನಡತೆ

ನನ್ನ ಧಿಕ್ಕಾರವಿದೆ ನಿಮ್ಮ ಅಂಧರ್ಮದ ಕುತಂತ್ರನೀತಿಗೆ
ನೇರ ಉತ್ತರವಿದೆ ನಿಮ್ಮ ಸಹಿಸಲಸಾಧ್ಯ ಹುಂಬದರ್ಪಕೆ
ನ್ನು ಸಲ್ಲದು ನಿಮ್ಮ ಭಗವಂತನಾಮ ಭಯೋತ್ಪಾದನೆ

Monday, April 18, 2011

ಆರಂಬಕಾರ

ಹಗಲಿರುಳು ನೆರಳುನಿದ್ದೆಯ ಮೆಟ್ಟಿ, ಹೊಟ್ಟೆಬಟ್ಟೆಯ ಕಟ್ಟಿ,
ಸುಖಸನ್ಮಾನಗಳಿಗಾಶಿಸದೆ, ಜಾತಿಮತಗಳ ಭೇದವೆಣಿಸದೆ
ಜಗದೆಲ್ಲರ ಹಸಿವಾಗ್ನಿಯ ತನ್ನ ಬೆವರಿಂದ ನಂದಿಸುವಾತ
ಪರಮಪೂಜ್ಯ ಶ್ರೀಸಾಮಾನ್ಯನಲ್ಲವೆ? ಈ ಅನ್ನಧಾತ;

ಅನ್ಯಜೀವಿಗಳನ್ಯವೆನ್ನದೆ ಬಳಗದೊಳಕೂಡಿ ಬಾಳೊ ಬುದ್ದ
ಕಲ್ಮಣ್ಣಲೂ, ಗಿಡಮರದಲೂ ಪ್ರತ್ಯಕ್ಷ ದೇವರ ಕಾಣೊ ಸಿದ್ದ
ನೇಗಿಲಕೆಲಸದಿ ಕೈಲಾಸವ ಕಾಣೊ ಕರ್ಮಯೋಗಿ
ಭುವಿಯಲುತ್ತಮ ಧರ್ಮಿಷ್ಠನಲ್ಲವೆ? ಈ ನೇಗಿಲಯೋಗಿ;

ನೇಗಿಲಿಡಿದು ಜೀವಂತ ಚಿತ್ತಾರ ಬಿಡಿಸೊ ಭೂಚಿತ್ರಕಾರ
ನಿಸರ್ಗದ ಮಿಡಿತಕ್ಕನುಸಾರ ಉಸಿರಾಡೊ ಹಾಡುಗಾರ
ಕಸದಿಂರಸವ, ಮಣ್ಣಿಂದನ್ನವ ಸೃಷ್ಟಿಸಬಲ್ಲ ಜಾದುಗಾರ
ಗಂಧದೆದೆಯ ಜೀವನಕಲಾವಲ್ಲಭನಲ್ಲವೆ? ಈ ಆರಂಬಕಾರ;

ಹಸಿವಿಗಿಂತ ನರಕಶಿಕ್ಷೆಯಿಲ್ಲ, ಅನ್ನಧಾತನಿಗಿಂತ ಧಾತನಿಲ್ಲ
ಇವನಿಲ್ಲದೆ ಜಗನೆಡೆಯದೊ, ಇವನೆಡೆಗೆ ಭಕ್ತಿ ತೋರೊ;
ಅನ್ನ ನೀಡುವ ಕೈ ಸಣಕಲಾದರೆ, ಜಗವೆ ಬಡಕಲು ತಿಳಿಯೊ
ಇವನಳಿವಲಿ ಮನುಕುಲದಳಿವಡಗಿದೆ, ಇದನರಿತು ಬಾಳೊ;

Friday, March 25, 2011

ಹೇಳಲೇಬೇಡ ಗೆಳತಿ

ನೀನೆಂದೂ ಹೇಳಲೆಬೇಡ ಗೆಳತಿ, ನಿನ್ನ ಹೆಸರ
ಯಾವ ಪದಬಂಧದ ಹಂಗಿಗೂ ಎಟುಕದ ಚೆಲುವು ನಿನ್ನದು!
ನಾನೆಂದೂ ಕೇಳುವುದೆ ಇಲ್ಲ ಒಡತಿ, ನಿನ್ನ ಕುಲ
ಯಾವ ಕುಲಕರ್ತೃವಿನ ನಿಲುವಿಗೂ ನಿಲುಕದ ಪ್ರೀತಿ ನಮ್ಮದು!

ನಿನ್ನ ಪೂರ್ವಾಪರದ ಹಾದಿ ಅರಿತು ಆಗಬೇಕಾಗಿರುವುದೆನಿಲ್ಲ
ಈ ಗೌಡಶಕದಿ ಎಂದೆಂದೂ ಹೂವಹಾದಿಯಲ್ಲೇ ನಿನ್ನ ಪಯಣ!
ನಿನ್ನ ಊರುಕೇರಿಯ ಕಥೆ ಕೇಳದೆ ಕಳೆದುಕೊಳ್ಳುವುದೆನಿಲ್ಲ
ಮುಂದೆ ನೀನೆಂದೆಂದು ನನ್ನೆದೆಯಂತಃಪುರದ ಖಾಯಂನಿವಾಸಿ!

ನಾ ಮೀಟಿದ ಭಾವಕೆ, ನೀ ಹಾಡದಿದ್ದರೂ ಬಯಕೆಗೀತೆ
ನಾ ಬಿಡದೆ ಆಲಿಸಬಲ್ಲೆ ನಿನ್ನೆದೆಬಡಿತದ ನಾದಸುಧೆಯೊಳಗೆ!
ನಾ ನುಡಿಸಿದ ತಾಳಕೆ, ನೀ ಕುಣಿಯದಿದ್ದರೂ ಲಜ್ಜೆಕುಣಿತ
ನಾ ನಿಂತಲ್ಲೇ ಕಾಣಬಲ್ಲೆ ನಿನ್ನ ಕಣ್ಣಂಚಿನ ಸ್ಫುಟಸಂಚಿನೊಳಗೆ!

ಕಣ್ ಮುಚ್ಚಿದ ಕತ್ತಲಲ್ಲೂ ಮಿಂಚಂತೆ ನೀನೆ ಕಾಡುವಾಗ
ದರುಶನಕೆ ಯಾಕೆ ನೀಡಲಿ ಅಂತೆಕಂತೆಯ ಕಪ್ಪಕಾಣಿಕೆ?
ಇರುವ ನಿಜಜನುಮದಲ್ಲೇ ನಮ್ಮೆಲ್ಲ ವ್ಯವಹಾರಗಳ ಮುಗಿಸದೆ
ಏಳೇಳು ಜನುಮಕ್ಕೂ ಕರುಣಿಸಲು ದೇವರಿಗೇಕೆ ಬಿಸಿಬೇಡಿಕೆ?

ದೃಷ್ಟಿಬಾಣಗಳ ಸುರಿಮಳೆಗೈದು ಕಾಡಬೇಡವೆ ಕನ್ನಿಕೆಯೇ  
ಮೊದಲ ಬಾಣಕೆ ಖುದ್ದಾಗಿ ಖುಷಿಯಿಂದಲೆ ಶರಣಾಗಿರುವೆ!
ನಿನ್ನ ನಾಜೂಕಿನ ನೀಳ ತೋಳ್ಗಳಿಂದ ಬಿಗಿಯಾಗಿ ಬಂಧಿಸಿ
ನಿನ್ನೆದೆಗೂಡಲಿ ಕೂಡಿಹಾಕು, ಹಾಯಾಗಿ ಸೆರೆಯಾಳಾಗಿರುವೆ!

Monday, February 7, 2011

ಪ್ರೀತಿಯಾರಾಧಕ

ಸೌಂದರ್ಯವೆ ಜಗಕೆ ಮೂಲದೇವರೆಂದರೆ
ನಿನಗಿಂತ ಮಿಗಿಲಾದ ದೇವತೆ ಎನಗಿಲ್ಲ;
ಧ್ಯಾನವೊಂದೆ ಜೀವಕೆ ಮುಕ್ತಿಮಾರ್ಗವೆಂದರೆ
ನನ್ನನ್ನ ಮೀರಿಸುವ ಯೋಗಿಯ ಕಂಡಿಲ್ಲ;

ಒಂಟಿಬಾಳಿನ ಬವಣೆ ನೀಗಲು ವರವಾಗಿ ನೀ ಬಂದು
ಬ್ರಹ್ಮ ನನ್ನೊಳಗವತರಿಸುವರೆಗೂ ಬಿಡದೆ ಮುದ್ದಾಡು;
ನಾನಟ್ಟಿಟ್ಟ ರಸದೆಡೆಯ ನೈವೇದ್ಯವ ನೀ ಸವಿದು
ಹಸಿದ ಭಕ್ತನ ಬಯಕೆಗಳ ಉಪವಾಸಕೆ ಅಂತ್ಯಹಾಡು;

ಸರಸದಲಿ ಬೆಂದು, ರಸಸಮಾಧಿಯಲಿ ಮಿಂದು
ಹರಯವೆಂಬ ಹರಕೆ ಅರ್ಪಿಸಿ ಹಾಡೊ ದಾಸನಿವ;
ಮುತ್ತಿನಲಿ ಸಿಂಗರಿಸಿ, ಲಾವಣ್ಯಮಂತ್ರ ಜಪಿಸಿ
ಪ್ರಣಯಾಭಿಷೇಕದ ಅರ್ಚನೆಮಾಡೊ ಶರಣನಿವ;

ಕಾಮಕಮ್ಮಟದಿ ನನ್ನ ಕಸರತ್ತಿನ ಕುಶಲತೆಗೆ ಕರಗಿ
ಆ ರಮಿಸುವ ಪರಿಯ ಪರಿಧಿಗೆ ಬೆಕ್ಕಸ ಬೆರಗಾಗಿ
ನೀ ಕಣ್ಣಲ್ಲೇ ಕರುಣಿಸಿದ ಕಾಮೇಶ್ವರಜ್ಯೋತಿಯ
ಆರದ ಹಾಗೆ ಸದಾಕಾಪಾಡೊ ಕರ್ಮಯೋಗಿಯಿವ;

Wednesday, January 5, 2011

ಕಾದಿರುವೆ ಬಾರೊ ಮಹಾಗುರುವೆ


ಎಲ್ಲಿರುವೆಯೋ ಎನ್ನ ಮಹಾಗುರುವೆ, ಕಾದಿರುವೆ ನಿನಗಾಗಿ
ಮನಸೆಂಬ ಹೋರಿಯ ತಿದ್ದಿ, ಬೇಸಾಯದೆತ್ತು ಮಾಡುಬಾರೊ ರೈತನೆ;
ದಿಕ್ಕೆಟ್ಟು ಕೂತಿರುವೆನ್ನ ಎದೆಯೊಳಗಡಗಿರುವ ಚೈತನ್ಯದೀಪಕೆ
ಜ್ಞಾನದ ಕಿಡಿಯಿಟ್ಟು ಬೆಳಗಿಸಿ, ಚರಮಮುಕ್ತಿಯಡೆಗಟ್ಟುಬಾರೊ ದೇವನೆ;

ಒಳಗಡಗಿರುವ ಸುಂದರಶಿಲೆಯ ಅಲ್ಪಕಲ್ಪನೆಯು ಇಲ್ಲದೆ
ನಶ್ವರಕಾಮನೆಗಳ ದಂಡಿನ ಕಾಲ್ತುಳಿತಕೆ ಸಿಕ್ಕಿ ಸವೆದು
ಚಕಾರವೆತ್ತದೆ ವಿಕಾರವಾಗುತಿರುವೀ ನಿರಾಕಾರ ಬಂಡೆಗೆ
ಜ್ಞಾನದುಳಿಪೆಟ್ಟು ಕೊಟ್ಟು, ವಿರಕ್ತಮೂರ್ತಿಯಾಕಾರ ಕಡೆದು
ಕಾಲಲ್ತುಳಿತಿರುವ ಕಾಮನೆಗಳು ಕೈಮುಗಿವಂತೆ ಮಾಡುಬಾರೊ ಶಿಲ್ಪಿಯೆ!

ದಿಕ್ಕುದೆಸೆಯಿಲ್ಲದೆ ತೆವಳುತಿರುವೀ ಸಂಸಾರಸಾಗರದಲಿ
ಸರ್ವೆಂದ್ರಿಯಗಳ ಎಂದೂ ಮುಗಿಯದ ಮೋಹದಲೆಗಳು
ಮೇಲೆತ್ತುವಂತೆ ತೋರಿ, ಸಂಪೂರ್ಣ ಮುಳಿಗಿಸಿ
ಈಜಿ ಮರಳಲಾಗದ ತೀರಕೆ ಸೆಳೆದೊಯ್ಯುವ ಮುನ್ನ
ಆಪತ್ ಭಾಂಧವನಾಗಿ ಬಂದು, ಬಿಡಿಸಿ ಎಳೆದೊಯ್ಯುಬಾರೊ ಅಂಬಿಗ!

ಋಷಿಯ ದನಿಯಾಗಿ ಬಾರೊ, ಗುಡಿಯ ಕಲ್ಲಾಗಿ ಬಾರೊ,
ಕಬ್ಬದ ರಸವಾಗಿ ಬಾರೊ, ಕಥೆಯ ಪಾತ್ರವಾಗಿ ಬಾರೊ,
ಹಸಿವ ನೋವಾಗಿ ಬಾರೊ, ಬೇಸವ ಬಾಂಧವ್ಯವಾಗಿ ಬಾರೊ,
ಸದ್ಯ ಹೇಗಾದರೂ ಬಾರೊ, ಬರದೆ ಮಾತ್ರ ಕಾಡಿಸಬೇಡ;
ದಾಕ್ಷಿಣ್ಯನೆರೆಯಲಿ ಕೊಚ್ಚಿಹೋಗುತಿರುವೆನಗೆ ಭಾವದಾಸರೆಯಾಗಿ
ಗೊಂದಲಗದ್ದೆಯಿಂದ ಎದ್ದೇಳಲು ನಿನ್ನ ತೋಳ್ಗಳ ನೀಡುಬಾರೊ ತೆತ್ತಿಗ!