Tuesday, August 24, 2010

ಅಕ್ಕ-ತಂಗಿ


ಎಲ್ಲಾ ಮಹಾಮತಿಯರಸರ ಹಾಗೆ ವಿಷಯದಾಳ ಅರಿಯುವ ಬದಲಾಗಿ
ತರಾತುರಿಯಲಿ ಅವರವರ ಜೊಳ್ಳು ಆದರ್ಶಭರಿತ ತಕ್ಕಡಿಯಲಿ ತೂಗಿ
ಉಳಿದ ಹಾಳೂರಿನ ಗೌಡನಂತೆ ಇಲ್ಲಸಲ್ಲದ ಹಳಸು ತೀರ್ಪು ನೀಡದೆ
ತಾಸುಗಟ್ಟಲೆ ಜೊತೆಯಲ್ಲಿ ಸುಮ್ಮನೆ ಕೂತು ಒರಗಲು ಹೆಗಲು ಕೊಟ್ಟು
ತಾಯಿ ತನ್ನ ಮಗುವಿನ ಮೊದಲ ತೊದಲು ನುಡಿಗಳನ್ನು ಆಲಿಸಿದಂತೆ
ಯಾರಿಗೂ ಹೇಳಲಾಗದ ಕಷ್ಟಕಾರ್ಪಣ್ಯಗಳ ಪಟ್ಟಿಯನ್ನು ಹೃದಯವನ್ನರಳಿಸಿ ಕೇಳಿ
ಮರುಮಾತಡದೆ ಮೂಕನೋಟದಲೆ ತರ್ಕ ಮಾಡಿ ದುಗುಡವನ್ನೋಡಿಸಿ
ತಲೆಹೋಗುವಂತದ್ದೇನು ನಡೆದೇ ಇಲ್ಲವೆನ್ನುವಂತೆ ಮೊಗವರಳಿಸಿ ನಸುನಗುತ್ತ
ಅಕ್ಕರೆಯಿಂದ ತನ್ನೆದೆಗವಚಿ ಸೆರಗಿನಿಂದ ಮೋರೆಯ ದಣಿವನ್ನೊರೆಸುತ್ತ
ತಲೆಯನ್ನು ನೇವರಿಸಿ ಹಣೆಗೆ ಮುತ್ತಿಟ್ಟು ಈ ಹಾಳು ಜೀವನವೇ ಇಷ್ಟೆಂದು ತಿಳಿಹೇಳಿ
ಮುದುಡಿದ ಮನಸನ್ನು ಗಾಳಿಪಟ ಮಾಡಿ ಹಾರಿಸಿದವಳು ನೀನೇ... ನನ್ನ ಅಕ್ಕಯ್ಯ...

ಸರಿತಪ್ಪುಗಳ ಆತ್ಮವಿಮರ್ಶೆ ಮಾಡಿಕೊಳ್ಳಲು ಕೂಡ ಸಿಗದೇ ಪುರುಸೊತ್ತು
ಯಾಂತ್ರಿಕವಾಗಿರುವ ಕರ್ಮಗಳ ಅರ್ಥಗರ್ಭಿತ ಧ್ಯೇಯಗಳೆಲ್ಲಾ ಸತ್ತು
ಈ ಬದುಕಿನ ಅವಿರತ ಅಸಂಖ್ಯ ಜಂಜಾಟಗಳ ತುಲನೆಯಿಂದ ಬೇಸತ್ತು
ಈ ಬದುಕು ಕವಲುದಾರಿಯಲ್ಲಿ ಸಾಗುತಿರುವ ವ್ಯಥೆಯ ಶಿಖರದಲ್ಲೇ ಇದ್ದರೂ
ಭರಸಿಡುಕಿನ ಸಾಗರದಲ್ಲೇ ಇದ್ದರೂ, ಭಾವದಭಾವದ ಮರುಭೂಮಿಯಲ್ಲೇ ಇದ್ದರೂ
ನಿನ್ನ ಅಂತರಾಳದಲ್ಲಿ ಮೂಡಿದ ನಗುವಿನ ಕಿರಣಗಳು ಸೋಕಿದರೆ ಸಾಕು
ಆ ಪುಟ್ಟ ತೋಳುಗಳ ಮನಸಾರೆ ಆಲಿಂಗನದ ಸ್ಪರ್ಶ ತಾಕಿದರೆ ಸಾಕು 
ಸಿಡುಕಿನ ಭಾರೀ ಮಂಜುಗಡ್ಡೆ ಕರಗಿ ಅನುರಾಗದ ಪನ್ನೀರಾಗಿ ಹರಿದು
ನನ್ನೆದೆಯ ಭಾವನೆಗಳ ಕೆರೆಯು ತುಂಬಿ ಒಲವಿನ ಕೋಡಿ ಸುರಿದು
ಹೃದಯದ ಬಯಲಿನ ತುಂಬೆಲ್ಲಾ ಸೊಂಪಾದ ಪ್ರೀತಿಯ ಫಸಲು ಬೆಳೆದು
ಸಾಗುತಿರುವ ಈ ಬಾಳ ದಾರಿಯ ಹಚ್ಚಹಸುರಾಗಿಸಿದವಳು ನೀನೇ... ನನ್ನ ತಂಗ್ಯವ್ವ...

ಭರ ಭರನೆ ದೊಡ್ಮನುಷ್ಯನಾಗುವ ಹುನ್ನಾರದ ತುರಗವನ್ನೇರಿ
ದೊಡ್ಡ ದೊಡ್ಡ ಕನಸುಗಳ ಸಾಕಾರದ ಅಶ್ವಮೇಧಯಾಗಕೆ ಹೊರಟು
ನನಗರಿಯದೆ ನನ್ನೊಳಗಿನ ಹುಡುಗಾಟಿಕೆಯ ಎಳೆಮನದ ಗಿಣಿಯ
ಗೊಡ್ಡು ಗುರಿಗಳ ಸರಳುಗಳ ಹಿಂದೆ ಮುಲಾಜಿಲ್ಲದೆ ಬಂದಿಯಾಗಿಸಿರುವೆ
ಆ ನಿರಪರಾಧಿ ಅತಂತ್ರ ಗಿಳಿಯ ಚಣಕಾಲವಾದರೂ ಸ್ವತಂತ್ರಗೊಳಿಸಿ
ಜೊತೆಯಲಿ ಸ್ವಚ್ಛಂದ ಬಾನಿಗೆ ಹಾರಿಸಿ ಸ್ವೇಚ್ಛ ಚಿತ್ತಾರ ಬಿಡಿಸಬಲ್ಲವರು ನೀವೇ;
ಹುಣ್ಣಿಮೆಯ ರಾತ್ರಿಯಲಿ ಪ್ರೀತಿಯ ಕಣ್ಮುಚ್ಚಿ ಸಾಗುತಿದ್ದ ಈ ಹುಂಬನಿಗೆ
ಪ್ರೀತಿಯ ಒಳಗಣ್ಣ ತೆರೆಸಿ, ಬೆಳದಿಂಗಳ ಸೌಂದರ್ಯ ತೋರಿಸಿ
ತೋಚಿದ ದಾರಿಯಲಿ ಸಾಗುತಿದ್ದ ನನಗೆ ಉತ್ತಮ ದಿಕ್ಕನ್ನು ಸೂಚಿಸಿ
ನಾಲ್ಕು ದಿನದ ಬಾಳಲಿ ಪ್ರೀತಿಯ ಕೊಟ್ಟುಣ್ಣುವುದರ ಅರಿವು ಮೂಡಿಸಿ
ಬಾಳ ಧಗೆಯ ಪಯಣದಲಿ ತಂಬೆಲರಂತೆ ಜೊತೆಗಿರುವವರು ನೀವೇ... ನನ್ನ ಸೋದರಿಯರೆ... 

// ಪ್ರೀತಿಯ ಸೋದರ

Monday, July 26, 2010

ನಿನಗ್ಯಾಕೆ ಇಷ್ಟೊಂದು ಕಾತುರ?


ನನ್ನೊಳಗಿನ ಕವಿಯ ಅಣಕಿಸುತಿದೆ 
ನಿನ್ನಯ ಚಂಗಲು ನೋಟದ ಮೂಕ ಮಾತು
ನನ್ನೊಳಗಿನ ರಸಿಕನ ಕಿಚಾಯಿಸುತಿದೆ 
ನಿನ್ನಯ ನವಯೌವನದಿ ತುಂಬಿದೆದೆಯ ಸಿರಿ 
ನನ್ನೊಳಗಿನ ದುಂಬಿಯ ಕೆಣಕುತಿದೆ 
ನಿನ್ನಯ ಅಧರದ ಮಧುಮತ್ತ ಮಕರಂದ
ನನ್ನೊಳಗಿನ ಕಾಮಾಸುರನಿಗೆ ರಸದೆಡೆಯಾಗಲು 
ನಿನಗ್ಯಾಕೆ ಇಷ್ಟೊಂದು ಕಾತುರ

ವಿರಹದ ಬೇಸಿಗೆಯಲಿ ಬೆಂದು ಬೆಂಡಾದ ಬೆತ್ತಲೆ ಭೂಮಿಯಂತೆ
ತಣಿಯಲು ಕಾದಿರುವೆಯ ನನ್ನಯ ಪ್ರೀತಿಯ ಮುಂಗಾರು ಮಳೆಗಾಗಿ
ಒಂಟಿತನದ ಕೆಸರಲೆ ಬೆಳೆದು ನಿಂತಿರುವ ತಾವರೆ ಮೊಗ್ಗಿನಂತೆ
ಅರಳಲು ಕಾದಿರುವೆಯ ಈ ರವಿಯ ಬಾಹು ಬಂಧನದ ಕಾವಿಗಾಗಿ
ಶೃಂಗಾರದ ಸಕಲ ರಾಗಗಳ ತನ್ನೊಳಗೆ ಬಚ್ಚಿಟ್ಟ ಕೊಳಲಿನಂತೆ
ನುಡಿಯಲು ಕಾದಿರುವೆಯ ಈ ಮಾಂತ್ರಿಕನ ಅನುರಾಗದ ಸ್ಪರ್ಶಕ್ಕಾಗಿ
ಬಯಕೆಗಳ ಬೆಳೆ ಬೆಳೆದು ಫಸಲು ಕೊಯ್ಲಿಗೆ ಬಂದಿರುವ ಹೊಲದಂತೆ
ಅರ್ಪಿಸಲು ಕಾದಿರುವೆಯ ಈ ರೈತನ ಸುಗ್ಗಿಯ ಕಾಲದ ಹಿಗ್ಗಿಗಾಗಿ

ಕುಡಿಸದೆ ಮತ್ತೇರಿಸುವ ಗಮ್ಮತ್ತು ನಿನ್ನ ಮೈಮಾಟಕ್ಕಿದೆ
ಕೂತಲ್ಲೆ ಸೆಳೆಯುವ ಕಿಮ್ಮತ್ತು ನಿನ್ನ ಕಣ್ಣೋಟಕ್ಕಿದೆ
ಮುಟ್ಟದೆ ಮುದ್ದಾಡುವ ತಾಕತ್ತು ನಿನ್ನ ಒಡನಾಟಕ್ಕಿದೆ
ಬಲೆಯಿಲ್ಲದೆ ಬಂಧಿಸುವ ಮಸಲತ್ತು ನಿನ್ನ ಮನದ ತೊಳಲಾಟಕ್ಕಿದೆ
ಬಿಂಕದ ಭಂಗಿಗಳಿಂದಲೇ ನನ್ನ ನೆಮ್ಮದಿಗೆ ಭಂಗ ತರುತ್ತಿರುವೆ 
ವಯ್ಯಾರದ ನಡಿಗೆಯ ಹಾವ ಭಾವಗಳಿಂದ ನನ್ನ ಸಂಗ ಬಯಸುತ್ತಿರುವೆ
ನಿನ್ನೆದೆ ಕೆರೆಯ ಕಾಮನೆಗಳಿಂದ ತುಂಬಿ ನಯನಗಳಲ್ಲಿ ಕೋಡಿ ಹರಿಸುತ್ತಿರುವೆ 
ನನ್ನಯ ಪ್ರಾಯ ನೆಟ್ಟಗೆ ಬಲಿಯುವ ಮುಂಚೇನೆ ಪ್ರಣಯಕ್ಕೆ ಬಲಿ ತರವೆ

ಎಲ್ಲದನ್ನು ಪೂರ್ವ ಪರಿಣಿತಿ ಪಡೆದೆ ಮಾಡಬೇಕೆಂದೇನಿಲ್ಲ
ತಗ್ಗಿರುವಡೆಗೆ ನೀರು ಹರಿಯುವುದು ಪ್ರಕೃತಿ ನಿಯಮ 
ಎಲ್ಲವನ್ನು ಮೊದಲೇ ಕಲಿತು ಅರಿತು ಮಾಡಬೇಕೆಂದೇನಿಲ್ಲ
ಕಾಯಕವೆ ಕೈಲಾಸ ಎಂದು ದುಡಿವುದು ಧರ್ಮದ ಮೂಲ ನಿಯಮ
ಎಲ್ಲದಕ್ಕೂ ಸೋಲು ಗೆಲುವುಗಳ ಲೆಕ್ಕ ಹಾಕಬೇಕೆಂದಿಲ್ಲ
ಫಲಿತಾಂಶಕ್ಕಿಂತ ಪಾಲ್ಗೊಳ್ಳುವಿಕೆ ಮುಖ್ಯವೆಂಬುದು ಜನರ ನಿಯಮ 
ಎಲ್ಲದಕ್ಕೂ ಲಾಭ ನಷ್ಟದ ತೂಕ ಹಾಕಬೇಕೆಂದಿಲ್ಲ
ಮಾಡುವ ಕರ್ಮದಲಿ ಸಂತೃಪ್ತಿಯಿರಬೇಕೆಂಬುದು ನಿನ್ನಯ ನಿಯಮ 
ಎಲ್ಲದಕ್ಕೂ ಸರಿ ತಪ್ಪಿನ ಅಳತೆ ಮಾಡಬೇಕೆಂದೇನಿಲ್ಲ
ನಿರ್ಧಾರ ಅವರವರ ಜ್ಞಾನಕ್ಕನುಸಾರವಾಗಿರುತ್ತದೆಂಬುದು ನನ್ನಯ ನಿಯಮ 
ಆದರೂ ಏಕೋ ಕಾಣೆ ಹೆದರಿಕೆ ಶುರು ಮಾಡಲು ಬಾಳ ಈ ಹೊಸ ಆಯಾಮ 


Tuesday, June 8, 2010

ಅವ್ವಾ




ಧರಣಿಗೆ ಎಂದಾದರೂ ತೀರಿಸಲಾದೀತೆ ರವಿಯ ಋಣವ
ಮೀನಿಗೆ ಬಹುಕಾಲ ಬದುಕಲಾದೀತೆ ನೀರನು ಧಿಕ್ಕರಿಸಿ
ಹೆಮ್ಮರವೇ ಆದರೂ ಅರೆಕ್ಷಣ ಮರೆಯಲಾದೀತೆ ಧರೆಯಾಸರೆ
ನಿನ್ನ ಹೆಸರಿಲ್ಲದ ನನ್ನ ಉಸಿರು ಕೊನೆಯುಸಿರಾಗಲಿ ಕಣವ್ವ

ನನ್ನೆದೆ ತೋಟದ ಪ್ರೀತಿಯ ಹಸುರಿನ ಹೊನಲು ನೀನವ್ವ
ನನ್ನ ಮನದ ಮುಗಿಲಲಿ ಉದಯಿಸುವ ಬೆಳಕಿನ ಕಿರಣ ನೀನವ್ವ

ದೇವರೇ ಲಂಚಕ್ಕೆ ಕೈಯೊಡ್ಡುವ ಈ ಭ್ರಷ್ಟ ನಾಡಲಿ
ನಿಸ್ವಾರ್ಥ ಸಿಗುವ ಏಕೈಕ ತಾಣ ನಿನ್ನೆದೆಗೂಡು ಕಣವ್ವ
ಮಾನವರೆಲ್ಲಾ ದಾನವರಾಗಿರೊ ಈ ದುಷ್ಟ ನಾಡಲಿ
ನೆಮ್ಮದಿ ಸಿಗುವ ಏಕೈಕ ತಾಣ ನಿನ್ನೊಡಲು ಕಣವ್ವ

ಯಾರ ಮನೆಯಲ್ಲಾದರು ಹಬ್ಬದಡಿಗೆ ಮಾಡಿದ್ದರೆ ಸಾಕು
ಹೊಂಚಾಕಿ ಬೇಡಿ ಪಡೆದು, ಸೆರಗಿನಲ್ಲಿ ಬಚ್ಚಿಟ್ಟು ತಂದು
ನನಗೆ ತುತ್ತಿಟ್ಟು, ತಾನು ಮಾತ್ರ ಬರೀ ಹೊಟ್ಟೆಯಲಿ ಮಲಗಿ
ಮಗ ಬೆಳೆದು ದೊಡ್ದಮನುಷ್ಯನಾಗುವ ಕನಸು ಕಂಡ
ಜಗತ್ತಿನ ಅತೀದೊಡ್ಡ ಕರುಣಾಮಯಿ ತಿರುಕಿ ನೀನವ್ವ

ವರುಷಗಳಿಂದ ಇರುವುದೊಂದೇ ಸೀರೆ ನೀ ತೊಡುತಿದ್ದರೂ
ಕೂಲಿ ಮಾಡಿ, ನನಗೆ ಮಾತ್ರ ನವನವೀನ ಉಡುಪು ತೊಡಿಸಿ
ಕಾಲಾವಾದಿ ಬರಿಗಾಲಿನಲ್ಲಿ ಕಲ್ಲುಮುಳ್ಳು ನೀ ತುಳಿಯುತಲಿದ್ದರೂ
ತನ್ನ ತಾಳಿಯನ್ನೇ ಗಿರವಿ ಇಟ್ಟು, ನನ್ನ ಪಾದ ಸಂರಕ್ಷಿಸಿ
ಕಡುಬಡತನದಲ್ಲೂ ಕುಂದುಕೊರತೆಗಳನ್ನು ನೀಗಿದ ಸಿರಿವಂತೆ ನೀನವ್ವ

ಓದುವುದು ಬರೆಯುವುದು ನೀ ಅರಿಯದೆ ಇದ್ದರೂ
ತನ್ನ ಮಗ ಮಾತ್ರ ನಾಲ್ಕಕ್ಷರ ಕಲಿತೇ ತೀರಬೇಕು
ಕಲಿತು, ನಾಲ್ಕಾರು ಜನರ ಬಾಳು ಬೆಳಗಬೇಕು
ಎಂಬ ಧೃಡವಾದ ಹುಚ್ಚು ಹಂಬಲದ ಕಾರ್ಯಸಿದ್ಧಿಯಲ್ಲಿ
ತಪ್ಪು ತಪ್ಪು ಅಕ್ಷರಗಳನ್ನೇ ಮತ್ತೆ ಮತ್ತೆ ತಿದ್ದಿಸಿದ
ನನ್ನ ಪಾಲಿನ ಮರೆಯಲಾಗದ ಮೊದಲ ಗುರು ನೀನವ್ವ

ಉರಿಯುವ ಬಿಸಿಲಲಿ, ಕೊರೆಯುವ ಚಳಿಯಲಿ,
ಸುರಿಯುವ ಮಳೆಯಲಿ, ಹಗಲಿರುಳು ಬೆವರು ಹರಿಸಿ
ತನ್ನೆದೆ ಮೇಲಿಂದ ಕೆಳಗಿಳಿಸದೆ ಜೋಪಾನ ಮಾಡಿ
ನನ್ನನ್ನು ಕಾಪಾಡುವುದಕ್ಕೆ ನಿನ್ನ ಜೀವನ ಮುಡಿಪಿಟ್ಟ
ನನ್ನ ಬೆಳೆಸುವುದನ್ನೇ ನಿನ್ನ ಜೀವನದ ಗುರಿಯಾಗಿಸಿಟ್ಟ
ನೀನೊಬ್ಬಳೆ ನನ್ನೆದೆಯ ಗುಡಿಯಲ್ಲಿ ಪೂಜೆಗರ್ಹ ಅಧಿದೇವತೆ ಕಣವ್ವ

Thursday, May 13, 2010

ಹೋಗಿ ಬಾ ಗೆಳತಿ

ಸಂಧರ್ಬ : SFO Airport ನಲ್ಲಿ ಒಬ್ಬ ಹುಡುಗ  ತನ್ನ ಗೆಳತಿಯನ್ನ ಎಲ್ಲಿಗೋ (ತವರಿಗೆ?) ಕಳಿಸಲು ಬಂದು ವಿದಾಯ ಹೇಳುತಿದ್ದಾಗ...  ನಾನು ಕಂಡ ಆ ಜೋಡಿಯ ಭಾವನೆಗಳನ್ನು, ನನ್ನ ಕಲ್ಪನೆಯ ಕಣ್ಣಿನ ಕ್ಯಾಮೆರಾದಿಂದ ಈ ಕವಿತೆಯ ರೂಪದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ.



ಪ್ರೀತಿಯ ಮಹಾಸಾಗರದ ನಡುವೆ 
ಅಗಲಿಕೆಯ ಮರುಭೂಮಿ ಕಂಡ 
ಹೃದಯ ಹೆದರಿ ನಡುಗುತಿದೆ
ವಿರಹದ ಬಿರುಗಾಳಿಗೆ ಸಿಗುವ ಭಯದಲಿ
ಮನವು ದಿಕ್ಕಾಪಾಲಾಗಿ ಓಡುತಿದೆ
ನೀನಿಲ್ಲದೆ ನನ್ನ ಈ ಬಾಳಿನ ಪಯಣ
ಒಂದು ಹೆಜ್ಜೆಯೂ ಮುಂದೆ ಸಾಗದು

ಬಾ ಬಿಗಿಯಾಗಿ ಅಪ್ಪಿಕೋ, ಹೊರಡುವ ಮುನ್ನ
ಈ ದೇಹದಿಂದ ಚೇತನ ಜಾರುವ ಮುನ್ನ
ತುಟಿಗಳಿಗೊಮ್ಮೆ ಸಿಹಿಯಾದ ಮುತ್ತಿಡು, ತೆರಳುವ ಮುನ್ನ
ನನ್ನಲ್ಲಿ ಉತ್ಸಾಹದ ಚಿಲುಮೆ ಬತ್ತುವ ಮುನ್ನ
ಪ್ರೀತಿಯ ಎರಡು ಮಾತಾಡು, ಅಗಲುವ ಮುನ್ನ
ನನ್ನ ಒಲವಿನ ಸ್ವರಪೆಟ್ಟಿಗೆ ಚೂರಾಗುವ ಮುನ್ನ

ನೀನಿಲ್ಲದೆ ನಾನು, ರೆಕ್ಕೆ ಇಲ್ಲದ ಹಕ್ಕಿ,
ಹೂಗಳೇ ಇಲ್ಲದ ತೋಟದ ದುಂಬಿ
ಉಸಿರೇ ಬಾರದು ಹೇಳಲು,
ಹೋಗಿ ಬಾ ಗೆಳತಿ ಎಂದೂ 
ಆದರೂ ಹೇಳದೆ ವಿಧಿಯಿಲ್ಲ 
ಬೇಗ ಮರಳಿ ಬಾ ಗೆಳತಿ,
ಕಾಯುವೆ ಒಂದೇ ಉಸಿರಲಿ
ನೀರಿಗಾಗಿ ಒದ್ದಾಡುವ ಮೀನಾಗಿ

Tuesday, April 6, 2010

ನಾನ್ಯಾಕೆ ಹಾಳಾಗಿ ಹೋದೆ?

ಗೆಳೆಯರ ಬಳಗದಲಿ ಕೂಡಿ
ಸಕಲ ವಿದ್ಯಾ ಪರಿಣಿತನೆಂದು ಚೋಡಿ
ಮೂರು ಲೋಕದ ಅಧಿನಾಯಕನಂತಿದ್ದ ನನಗೆ,
ನಿನ್ನ ಪುಟ್ಟ ಹೃದಯವ
ನನಗರಿಯದೆ ನನ್ನಲ್ಲಿ ಅಡಗಿಸಿ
ಹೃದಯದ ಚೋರನೆಂಬ ಅಪವಾದ ಹೊರಿಸಿ
ಸೆರೆಯಾಳು ಮಾಡಿ,
ಹೃದಯದ ಕೊಣೆಯಲ್ಲಿ ಬಂಧಿಸಿ
ಘೋರ ಒಂಟಿತನದ ಸುಳಿಯಲ್ಲಿ ಸಿಕ್ಕಿಸಿದ
ಕರುಣೆಯೇ ಇಲ್ಲದ ಪ್ರೀತಿಯ ಮಾಯೆ ನೀನು

ಹೊಟ್ಟೆ ಭಿರಿಯುವವರೆಗೆ ಮುದ್ದೆ ತಿಂದು
ಗೊರಕೆ ಬರುವ ಹಾಗೆ ನಿದ್ದೆ ಮಾಡಿ
ಕುಂಬಕರ್ಣನಂತಿದ್ದ ನನಗೀಗ
ನಿದ್ದೆ ಮುದ್ದೆ ಬಲು ದೂರ
ರಾತ್ರಿಯೆಲ್ಲ ಆಕಾಶ ನೋಡುವ ಹುಡುಗಾಟ
ಒಲವಿನ ಸಂದೇಶಗಳ ನಿರೀಕ್ಷೆಯ ಕಾದಾಟ
ಮನದಲ್ಲಿ ಹಲವು ಆಸೆಗಳ ಕಚ್ಚಾಟ
ಹಾಳು ಪ್ರೇಮ ಗೀತೆಗಳ ಗೀಚಾಟ
ಕಾರಣವಿಲ್ಲದೆ ತನ್ನಷ್ಟಕ್ಕೆ ತಾನೇ ನಗುವ ಹುಚ್ಚಾಟ
ನಿದಿರೆ ಹಸಿವಿಗೆ ಲಂಚ ಕೊಟ್ಟು
ಯೋಚನಾ ಲಹರಿಯನ್ನು ತನ್ನೆಡೆಗೆ ಸೆಳೆದು
ಹಿತವಾದ ನೋವು ಕೊಟ್ಟ ಮಾಯಗಾತಿ ನೀನು

ನೂರಾರು ಭಾರಿ ಕೇಳಿ,
ಎಂದೋ ಮರೆತು ಹೋದ
ಹಳೆಯ ಚಿತ್ರ ಗೀತೆಗಳು,
ಇಂದೇಕೋ ಮನ ಕಲಕುತ್ತಿವೆ
ಹಳೆ ರಾಗಗಳು ಹೊಸ ಮಾಧುರ್ಯದೊಂದಿಗೆ
ಹಳೆ ಸಾಲುಗಳು ಹೊಸ ಅರ್ಥಗಳೊಂದಿಗೆ
ಹಳೆ ದೃಶ್ಯಗಳು ಹೊಸ ಪಾತ್ರಧಾರಿಗಳೊಂದಿಗೆ
ನೇರವಾಗಿ ಹೃದಯದ ಗರ್ಭಗುಡಿ ತಲುಪಿ
ಅಪರೂಪದ ವ್ಯಾಮೋಹವ ಬಡಿದೆಬ್ಬಿಸಿವೆ
ಈ ಹಳೆ ಗೀತೆಗಳಿಗೆ ಶಸ್ತ್ರ ಚಿಕತ್ಸೆ ಮಾಡಿ
ಹೊಸ ಭಾವಗಳನ್ನು ತುರುಕಿದ ವ್ಯೆದ್ಯೇ ನೀನು