Sunday, May 27, 2012

ಅರಿಯದೆ ಏನೋ ಕಳೆದು ಕೊಂಡಿರುವೆ

ನನ್ನ ಮುಖ ನೋಡಲಾಗದೆ
ನೀ ಎಷ್ಟೇ ದೂರ ಸರಿದರೂ,
ನನ್ನ ದ್ವನಿ ಕೇಳಲಾರದೆ
ನೀ ಕಿವಿ ಮುಚ್ಚಿ ಕೊಂಡರೂ,
ಅನ್ಯ ಮಾರ್ಗ ಕಾಣದಾಗಿದೆ
ಇಳಿಸಲೆನ್ನ ಹೃದಯ ಭಾರವ,
ನೀನೆ ಪ್ರೀತಿಯಿಂದ ನೀಡಿದ
ಹಸಿ ನೆನಪುಗಳ ಸಾಲವ,
ಇಂದೊಮ್ಮೆ ಸಹಿಸಿಕೋ ಒಲವೆ
ಮತ್ತೆಂದು ಸುಳಿಯನು ನಿನ್ನ ಸನಿಹಕೆ.

ಇಷ್ಟು ದಿನ ಜೊತೆ ನಡೆದ ದಾರಿ
ನಿನಗಿಂದು ಬೇಸರ ತರಿಸಿದೆ,
ಮತ್ತೊಂದು ಸುಂದರ ದಾರಿ
ನಿನ್ನ ಹೃದಯದ ಕಣ್ ಸೆಳೆದಿದೆ,
ಬೇಡವೆನ್ನಲು ಮೂಡ ನಾನ್ಯಾರು?
ನಿನ್ನ ಪ್ರಯಾಣ ಸುಖವಾಗಿರಲಿ
ಎಂಬುದಷ್ಟೇ ನನ್ನಯ ಬಯಕೆ,
ನೀ ತುಂಬಿದ ಸಿಹಿಕ್ಷಣದ ಜೋಳಿಗೆಯ
ನೆನಪುಗಳ ಮೆಲುಕು ಹಾಕಿ ಹಾಡುತ
ಸಾಗಿಸುವೆ ನನ್ನಯ ಒಂಟಿಪಯಣ.

ನಿನ್ನ ಸುಂದರ ಜೀವನ ಕಥೆಯಲಿ
ಮುಗಿದ ಸಣ್ಣ ಅಧ್ಯಾಯ ನನ್ನದು,
ನಿನಗದು ಮುಗಿದ ಸಪ್ಪೆ ಅಧ್ಯಾಯ,
ನನಗದುವೆ ಮುಗಿಯದ ಸ್ವಪ್ನಕಾವ್ಯ,
ಆದರೆ ನನ್ನದೆಲ್ಲ ಪುಟಗಳು ಇಂದೇಕೊ
ಖಾಲಿ ಖಾಲಿ ಹಾಳೆಗಳಂತೆ ತೋರಿವೆ,
ಬರೆಯಬೇಕಾದುದು ಬಹಳ ಉಳಿದಿದೆ,
ಬರೆಯಲು ಈಗ ಕಾಲ ಮೀರಿಹೋಗಿದೆ,
ಅರಿಯದೆ ಏನೋ ಕಳೆದು ಕೊಂಡಿರುವೆ,
ಕಳೆದುದು ಏನೋ ಇನ್ನೂ ತಿಳಿಯದಾಗಿದೆ.

ನಿನ್ನ ಎಲ್ಲ ಕಷ್ಟಸುಖಗಳಿಗೆ
ಇಷ್ಟಪಟ್ಟು ನಾ ಭಾಗಿಯಾದೆ,
ನಿನ್ನ ಒಲವನೆಲ್ಲ ದೋಚಿಕೊಂಡು
ಸಿರಿವಂತನಾಗಿ ಹೋದೆ ನಾನು,
ಇದ್ದಕಿದ್ದ ಹಾಗೆ ನಿನಗೆ ಬೇಡವಾದ
ಬಡತನವ ಹೇಗೆ ತಾನೇ ಸಹಿಸಲಿ?
ನಿನ್ನ ತಿರಸ್ಕಾರದ ಜ್ವಾಲೆಯಲಿ
ಬೆಂದಾದ ಕರಕಲು ನಾನಿಂದು,
ಆದರೇನಂತೆ ನಿನ್ನ ದಂತಶುಚಿಯ
ಕರೆಯ ನೀರಿಕ್ಷೆ ಇನ್ನೂ ನನ್ನಲಿ ಜೀವಂತ.

Friday, May 25, 2012

ಹಾರುತಿರುವ ಹಕ್ಕಿಗೆ...

ನನ್ನ ಪುಟ್ಟ ಎದೆಯ ಗೂಡಿನಿಂದ
ಹಾರುತಿರುವ ನನ್ನ ಮುದ್ದು ಹಕ್ಕಿಯೇ
ನಿನ್ನ ರೆಕ್ಕೆ ಬಿಚ್ಚಿ ಮೇಲೆ ಹಾರಲಿಲ್ಲಿ
ತಾವು ಸಾಲದೆಂದು ನೀನು ತಿಳಿದೆಯ?

ಅಂದು ಹಾಗೆ ಒಳಗೆ ನುಗ್ಗಿ ಬಂದೆ
ನನ್ನನು ಏನು ಕೇಳದೆ
ಇಂದು ಹೀಗೆ ಹೊರಟು ಹೋಗುತಿರುವೆ
ಕೇಳಲು ಏನನು ಉಳಿಸದೆ

ಯಾವ ಮೋಹದ ಗೂಡು ಸೆಳೆಯಿತು
ನಿನ್ನ ಮಾಗದ ಮನಸನು?
ಇನ್ನು ಯಾರಿಗೆ ಕಾದು ಎಣೆಯಲಿ  
ನನ್ನ ಕನಸಿನ ಕವಿತೆಯ?

ಬಣ್ಣಬಣ್ಣದ ನೆನಪಿನ ದೀಪಗಳ
ನನ್ನಯ ಎದೆಗೂಡಿನ ತುಂಬ ಹಚ್ಚಿದ ಹಕ್ಕಿಯೇ
ಇಂದು ಗೂಡನೆ ಬಿರುಗಾಳಿಗೆ ಎಡೆಮಾಡಿ
ತಿರುಗಿ ಕೂಡ ನೋಡದೆ ಹೊರಟಿರುವೆಯ?

ಅಂದು ನನ್ನ ಗೂಡಿನ ಕರಿನೆರಳಿನ ಮರೆಯಲಿ
ಕಾಣದಾದೆನು ನಿನ್ನಯ ರಂಗುರಂಗಿನ ರೆಕ್ಕೆ
ಇಂದು ನೀನು ದೂರ ಹಾರಿ ಹೋಗುವಾಗ
ಕುಕ್ಕುತಿರುವುವು ನನ್ನ ಕುರುಡು ಕಣ್ಣನು ಅದೇ ರೆಕ್ಕೆ

ಹೇಳಬೇಕಾದ ಭಾವನೆಗಳ ಹೆಕ್ಕಿ ತರುವ ಮೊದಲೆ  
ನನ್ನಿಂದ ಬಹುದೂರ ಹೊರಟು ಹೋಗಿರುವೆಯಾ ಒಲವೆ 
ಮೌನವೀಣೆಯ ಈ ಒಂಟಿರಾಗದ ಸದ್ದನು ಮುರಿದು 
ನಿನ್ನ ಚಿಲಿಪಿಲಿಯ ಕಲರವವ ಮತ್ತೆ ಕೇಳ ಬಯಸಿದೆ ಮನವು  

ನೀನಿಲ್ಲದೆ ಈ ಗೂಡು ರವಿಯಿಲ್ಲದ ಬರಿಯೆ ಕರಿಯಾಗಸ
ನನ್ನೆಲ್ಲ ಕನಸಿನ ಚಿತ್ತಾರಗಳು ಆ ಕತ್ತಲಲೆ ಕರಗಿಹೋಗಿವೆ
ಗೂಡನೆಲ್ಲ ಗುಡಿಸಿ ಸಾರಿಸಿ ಕಾದಿರುವೆ ಮತ್ತೆ ಮರಳಬಾರದೆ
ನಿದಿರೆ ನೀಗಿದ  ಮೇಲೆ ಸದ್ದಿಲ್ಲದೆ ಬಂದೇಳಿಸೊ ರವಿಯಂತೆ?

Wednesday, February 15, 2012

ಜಾಣಂಧ ಮನ

ಏನಿದು ಕಾಣೆ ಮೋಹವೋ? ಮರುಳೋ? 
ಎನಿತು ತಡೆದರೂ ಕೇಳದ ಮನವು 
ಇಂದೇಕೋ ಬೆರಗಿನ ಬೆಂಕಿಯೋಡನೆ 
ಸಲ್ಲದ ಸರಸವ ಬಿಡದೆ ಬಯಸುತಲಿದೆ 

ಬಣ್ಣಬಣ್ಣದ ಬೆಂಕಿಜ್ವಾಲೆಯ ರುದ್ರನರ್ತನದಲಿ
ಕಾಣದೊಂದು ಮಾಯಾಸೆಳೆತ ನನ್ನ ಕೆಣಕುತಲಿದೆ 
ಹಿಂದೆ ಸರಿಯಲೆನಿತು ಬಯಸಿದರೂ ಬೆಂಬಿಡದೆ 
ತನ್ನ ರಂಗಿನ ಸೆರಗನರವಿ ಸೆಳೆಯುತಲಿದೆ


ದುರಾಲೋಚನೆಯ ಹಸಿಮೊಳಕೆ ಸುಡುವುದ ಮರೆತು 
ಎದೆಯ ತುಂಬಾ ಬರಿಹೊಗೆಯ ತುಂಬಿಸುತಲಿದೆ 
ಕರಿಹೊಗೆಯ ಕತ್ತಲಿಗೆ ಕುರುಡಾದ ಅವಿವೇಕಿ ಮನ 
ಹಗಲು ಕಂಡ ಬಾವಿಗೆ ಹಗಲೇ ಬಯಸಿ ಬೀಳುತಲಿದೆ


ಅಂದದ ಹಿಂದೆ ಅಂಧಕಾರದ ಕಂದಕವಿದ್ದರೂ 
ಜಾಣಂಧ ಮನವಿಂದು ಮೆರೆಯುತ ಸಾಗುತಲಿದೆ 
ಬೆಂಕಿ ಸುಡುವುದೆಂದು ತಿಳಿದಿದ್ದರೂ ತಿದ್ದಿಕೊಳ್ಳದೆ 
ಅರಿವಿಲ್ಲದ ಯಕಶ್ಚಿತ್ ಕೀಟಕೂ ಕೀಳಾದನೆ ನಾನು? 

ದೇಹದ ತೆವಲಿಗೆ ಮನ ಬಂಧಿಯೋ? 
ಮನದ ಮರುಳಿಗೆ ದೇಹ ಬಲಿಯೋ?
ಒಟ್ನಲ್ಲಿ ಒಬ್ಬರ ಸಹವಾಸ ಮತ್ತೊಬ್ಬರಿಗೆ ಸುರಪಾನ
ಮೂಗುದಾರವಿಲ್ಲದ ಈ ಹೋರಿಗಳ ಹೇಗೆ ನಾ ತಿದ್ದಲಿ? 

Friday, January 6, 2012

ಪಯಣ


ಎಲ್ಲೂ ನಿಲ್ಲದೆ ಸಾಗುವ ಅಲೆಮಾರಿ ಜೀವನ
ಸಾವಿನಾಗಮನದಿಂದಲೆ ಅಂತ್ಯಕಾಣುವ ಪಯಣ
ಪಯಣದುದ್ದಕೂ ಸೆಳೆವ ನೂರಾರು ಕವಲುದಾರಿಗಳು
ಪ್ರತಿಯೊಬ್ಬರೂ ಅವರವರ ಹಾದಿ ಹುಡುಕಾಟದಲಿ ಮಗ್ನ
ಒಬ್ಬೊಬ್ಬರಿಗೆ ಒಂದೊಂದು ತೋರ್ಗಲ್ಲು ಆಧಾರವಿಲ್ಲಿ
ಯಾವುದನ್ನು ನಂಬಿ ನಡೆಯಲಿ ನಾ ಮುಂದೆ?

ಯಾರ ನೆರವಿನ ನೆರಳು ಕಾಣದ ದಾರಿಯಲಿ
ಯಾವ ಧರ್ಮದ ದೇವರ ಸುಳಿವೂ ಇಲ್ಲ
ಮಾಡಿದ ಪೂಜೆಯ ಫಲವೂ ಕಾಣಿಸುತಿಲ್ಲ
ನನ್ನೆದೆಯ ದನಿ ದೂಕುವ ದಾರಿಯಲಿ ನೆಡೆದು
ಮಾಡಬಾರದೇಕೆ ನನ್ನದೇ ಒಂದು ಹೊಸ ದಾರಿ?
ಬಾರಯ್ಯ ವಿವೇಕಗುರುವೆ ಕಾಪಾಡೆನ್ನ ದಿಕ್ಕೆಡದಂತೆ!

ಪಯಣದ ಆದಿಯಲೇ ಸಕಲ ನೋವುಂಡು ಮಾಗಿದರೆ
ಮುಂದಿನ ಹಾದಿಯ ಸವೆಸಲು ಯಾವ ಮೆಟ್ಟೂ ಬೇಡ
ಒಬ್ಬನ ಕೈ ಹಿಡಿದು ಮೇಲೇರಿ, ಮತ್ತೊಬ್ಬನಿಗೆ ಕೈ ನೀಡು
ಕಾಲೆಳೆಯುವವನನ್ನೇ ಮೆಟ್ಟಿಲು ಮಾಡಿ ಮುಂದೆ ಸಾಗು
ಸಾಗುವ ದಾರಿಯಲ್ಲೇ ಅಡಗಿರುವುದೆಲ್ಲ ಜೀವನದ ಭಾಗ್ಯ
ಏನೇ ಆದರೂ, ಯಾರೇ ಬಂದರೂ, ಎಂದೂ ನಿಲ್ಲದಿರಲಿ ಪಯಣ!

Wednesday, January 4, 2012

ಮುನಿಸಿನ ಮನೆ


ಬರೀ ಕಣ್ಣಿಗೆಂದೂ ಕಾಣೋದು ಕಡುಬಿಳಿಯ ಅನುಮಾನ
ಹೃದಯದ ಕಣ್ಣಲಿ ಕಾಣು ನೀ ರಂಗುರಂಗಿನ ಅನುರಾಗ
ನನ್ನೊಲವಿನ ತಿಳಿಬಾವಿಯ ತಳವ ಕಂಡು ಅನುಮಾನಿಸದೆ
ಒಮ್ಮೆ ಬಾವಿಯೋಳಗಿಳಿದು ಅದರ ಆಳ ಕಂಡು ಮುಂದುವರಿ

ಮಾತುಮಾತಿಗೂ ಮುನಿಸಿನ ಮನೆಯೊಳಗೇಕೆ ಓಡುವೆ?
ಪ್ರೀತಿಯ ಸೂರಿಲ್ಲದ ಆ ಮನೆಯಲಿ ಒಂಟಿಯಾಗಿ ಕುಳಿತು
ಅಹಂನ ಬೆಂಕಿಮಳೆಯಲಿ ತೊಯ್ದು ಕೊರಗುವೆ ಏತಕೆ?
ಹೊರಬಂದು ನಂಬಿಕೆಯ ರೆಕ್ಕೆ ಬಡಿಯುತ ಮೇಲೆ ಹಾರು
ಕಾಣದ ಗಾಳಿಯಾಗಿ ನಿನ್ನ ಹಾರಿಸುವೆ ಕೆಳಗೆಂದೂ ಬೀಳಿಸದೆ

ನನ್ನ ಮನದೊಳಗೆ ಬಣ್ಣಬಣ್ಣದ ಕನಸುಗಳ ಬಿತ್ತಿದವಳೆ ನೀನು
ಅದೇ ಕನಸುಗಳು ಮೊಳಕೆಯೊಡೆವಾಗ ಮುರಿವ ಮನಸೇಕೆ?
ಈಗ ಪ್ರೀತಿಯೆರೆದು ಒಲವಸುರಿದು ಕನಸುಗಳ ಬೆಳೆಸಿ ನೋಡು
ಮುಂದೆ ಬಾಳೆಲ್ಲ ಸೊಂಪಾದ ಸಿಹಿ ಫಸಲುಣಿಸುವವು ನಿನಗೆ
ಇದು ಕೇವಲ ಭರವಸೆಯಲ್ಲ ನನ್ನ ಜೀವನದ ಒಂದು ಉದ್ದೇಶ