Thursday, August 23, 2012

ಜಗದೇಕದೇವಿ

ನನ್ನ ಕವಿತೆಗಳ ಕಾರಣ ನೀನು
ನನ್ನ ಕವಿತೆಗಳ ಹೂರಣ ನೀನು 
ನಾನು ಅಟ್ಟು ಎಡೆಯಿಟ್ಟ ಕವಿತೆಗಳ 
ಅರ್ಪಿಸಿಕೊಳ್ಳೋ ಜಗದೇಕದೇವಿ ನೀನು
ನೀನಾಗೆ ನನ್ನಿಂದ ದೂರಾದ ನಂತರ 
ನನ್ನ ಕವಿತೆಗಳೆಲ್ಲ ಶವಾಗಾರದ ತೋರಣ! 

ಕಾಣದ ಕನಸನು ಕಣ್ಣಿಗೆ ತೋರಿಸಿ 
ಬಣ್ಣದ ಭಾವನೆಗಳ ಮಳೆ ಸುರಿಸಿ 
ಬೇಡದ ಬಯಕೆಗಳ ಬಡಿದೆಬ್ಬಿಸಿ 
ಬಿಸಿಯುಸಿರಲೆ ನಶೆಯ ಮೈಗೇರಿಸಿ
ಮದವೇರಿದ ಮನದ ಮದವಡಗಿಸದೆ 
ಬದುಕನೆ ಲೂಟಿ ಮಾಡಲು ಬಿಟ್ಟು ಹೋದೆಯಾ?  

ನನ್ನೆದೆ ಹೊಲವ ಒಪ್ಪ ಮಾಡಿ 
ಹದನೋಡಿ ಒಲವ ಬೀಜ ಬಿತ್ತಿ 
ಒಂದೊಳ್ಳೆ ಪ್ರೀತಿಯ ಹೂವ ಬೆಳೆದು 
ಮುಡಿಗೆ ಮುಡಿಯದೇ ಮರೆಯಾದೆ 
ಅರಳಿ ನಿಂತ ಹೂವ ನಾನೇನ ಮಾಡಲಿ? 
ಯಾವ ಕಲ್ಲು ದೇವರಿಗೆ ಬಲಿಯಾಗಿ ನೀಡಲಿ?

Monday, August 13, 2012

ಕಡುಬೇಸಿಗೆ

ಮರೆವುಗಳ ಮರೆಮಾಚಿ 
ಕಾರಣಗಳ ಕೈಗೆಟುಕದಂತೆ 
ಎದೆಯಾಳದಿ ಅವಿಚಿಟ್ಟಿದ್ದ
ಪ್ರೀತಿಯ ಹಸಿನೆನಪುಗಳು 
ಒಮ್ಮೆಲೆ ಒಣಗಿ ಹೊತ್ತಿ ಉರಿದು 
ಎದೆಯನೇ ಕಿಚ್ಚಿಗೀಡು ಮಾಡಿವೆ!

ಅಂದು ಕನಸಲಿ ತಪ್ಪಿ ಕರೆದರೂ 
ಕಾದು ಓಗೊಟ್ಟು ಓಡಿಬರುತಿದ್ದೆ, 
ಇಂದು ಕೂಗಿ ಕೂಗಿ ಕರೆದರೂ 
ತಿರುಗಿ ನೋಡದೆ ಹೊರಟಿರುವೆ.
ಜೀವಕೆ ಜೀವ ಬೆಸೆದ ಪ್ರೀತಿಯೇ 
ಸವೆದು ನಶಿಸಿದೆ ನಮ್ಮ ತಿಕ್ಕಾಟದಲಿ!

ಅಂದು ಸಮಯ ಸಿಕ್ಕರೆ ಸಾಕು 
ಉಬ್ಬಿ ಮಳೆಯಂತೆ ಸುರಿಯುತಿದ್ದ
ನನ್ನ ಪ್ರೀತಿಯ ಕವಿತೆಗಳು 
ಇಂದು ರಾತ್ರಿಯಿಡೀ ಕಾದು ಕುಳಿತರೂ 
ಯಾವ ಮಿಂಚು ಗುಡುಗಿನ ಸುಳಿವು ನೀಡದೆ 
ಬಾಳಲಿ ಕಡುಬೇಸಿಗೆಯ ನೆನಪಿಸುತಿವೆ!