Monday, October 25, 2010

ಕನ್ನಡಕೃಷಿ

ಕರುನಾಡ ನಲ್ಮೆಯ ಸಹೋದರರೆಲ್ಲ ಬನ್ನಿರಿ
ಕನ್ನಡಕೃಷಿ ಮಾಡಲು ಕಂಕಣ ಕಟ್ಟಿ ನಿಲ್ಲೋಣ!
ನಮ್ ಹಿರಿಯರು ಕೂಡಿಸಿಟ್ಟ ಸಮೃದ್ದ ಫಸಲ್ ಉಂಡು
ಬರುವ ಪೀಳಿಗೆಗಿನ್ನೂ ಆರೋಗ್ಯ ಬೆಳೆ ಬೆಳೆಯೋಣ!

ಫಲವತ್ತತೆಯ ಆಗರವಾದ ಈ ನಾಡ ಮಣ್ಣಲಿ
ಹಗಲಿರುಳು ಒಲವ ಬೆವರ್ ಸುರಿಸಿ ದುಡಿಯೋಣ
ಕರುನಾಡ ಸರ್ವರೂ ಸುಮತಿವಂತರಾಗಿ
ಕನ್ನಡಮ್ಮನ ಸಿರಿಯ ಪಣತವ ತುಂಬಿಸೋಣ

ಜಾತಿ ಮತಗಳೆಂಬ ನಂಜಿಡುವ ಹೆಮ್ಮರಗಳ
ಬುಡಸಮೇತ ಕಿತ್ತು, ಬೆಂಕಿಯಲಿ ದಹಿಸೋಣ
ಕರುನಾಡ ನೆಲವನು ಹಸನಗೊಳಿಸಿ
ಕನ್ನಡಾಭಿಮಾನದ ಗಟ್ಟಿಬೀಜ ಬಿತ್ತೋಣ

ಪ್ರೀತಿ ನೆಚ್ಚಿಕೆಗಳ ಸಾವಯವ ಗೊಬ್ಬರ ಸುರಿದು
ಭಾವೈಕ್ಯತೆ ಸರ್ವೋದಯಗಳ ನೀರು ಹರಿಸೋಣ
ಅಸ್ಪೃಶ್ಯತೆ ಭ್ರಷ್ಟಾಚಾರಗಳೆಂಬ ಕಳೆ ಕಳೆದು
ಅಸೂಯೆ ಅಜ್ಞಾನಗಳೆಂಬ ಕ್ರಿಮಿ ಕೊಲ್ಲೋಣ

ಕನ್ನಡಮ್ಮನ ಎದೆಯ ಸುಧೆಯುಂಡು ಬೆಳೆದು
ಜಾಗತೀಕರಣದ ಬಿರುಗಾಳಿಗೆ ಸಿಕ್ಕಿ ತೂರಿಹೋದರೂ
ಅಲ್ಲಿಯ ಮಣ್ಣಲ್ಲೂ ಕನ್ನಡ ಕೃಷಿ ಮಾಡಿ
ಜಗದಗಲಕ್ಕೂ ಕನ್ನಡದ ಕಂಪನ್ನು ಪಸರಿಸೋಣ!

ಕೊಯ್ಲು ಮಾಡಿದ ಫಸಲ ಕನ್ನಡಮ್ಮನ ಮುಡಿಗರ್ಪಿಸಿ
ಕನ್ನಡದ ಕಲಿಗಳೆಲ್ಲ ಸೇರಿ ಸುಗ್ಗಿ ಜಾತ್ರೆ ಮಾಡೋಣ
ರಂಗುರಂಗಿನ ಕನ್ನಡ ಪುಷ್ಪಗಳ ಮಕರಂದ ಸವಿದು
ಕನ್ನಡಾಂಬೆಯ ತೇರು ಎಳೆಯಲು ಹೆಗಲು ಕೊಡೋಣ!

15 comments:

  1. Math: Good one Gowdre... ಕೃಷಿ is very important. Govt should take necessary steps to solve their problems.

    ReplyDelete
  2. ಪ್ರೀತಿಯ ಗೌಡರೆ... ಬಹಳ ದಿನಗಳ ಬಳಿಕ ನಿಮ್ಮ ಮೂಲ ಶೈಲಿಯನ್ನು ಹೊರತು ಪಡಿಸಿ ಬರೆದಂತಿದೆ ಈ ಕವನ... ಚೆನ್ನಾಗಿ ಬರೆದಿರುವಿರಿ..
    ನಾನು ನಿಮ್ಮ ಹಾಗೆ ಕವಿಯಲ್ಲ.. ಆದರೂ ಒಂದು ಸಣ್ಣ ಅನಿಸಿಕೆ ಅಥವಾ ಒಂದು ಸಣ್ಣ ಸಲಹೆ... ದಯವಿಟ್ಟು ಇದು ನನ್ನ ಉದ್ಧಟತನವೆಂದು ಬಗೆಯಬೇಡಿರಿ.. :)

    ಮೊದಲ ನಾಲ್ಕು ಸಾಲುಗಳಂತೆ ಉಳಿದ ಕವನ ಬರೆದಿದ್ದರೆ ಇನ್ನು ಸುಂದರವಾಗುತ್ತಿತು ಎಂಬ ಅಭಿಪ್ರಾಯ .. ಉದಾಹರಣೆಗೆ...

    ಫಲವತ್ತತೆಯ ಆಗರವಾದ ಈ ನಾಡ ಮಣ್ಣಲಿ
    ಹಗಲಿರುಳು ಒಲವ ಬೆವರ್ ಸುರಿಸಿ ದುಡಿಯೋಣ
    ರಂಗುರಂಗಿನ ಕನ್ನಡ ಪುಷ್ಪಗಳ ಬೆಳೆಸಿ
    ಕರುನಾಡ ಸರ್ವರೂ ಸುಮತಿವಂತರಾಗೋಣ.. ಕನ್ನಡಮ್ಮನ ಸಿರಿಯ ಪಣತವ ತುಂಬಿಸೋಣ

    ಜಾತಿ ಮತಗಳೆಂಬ ನಂಜಿಡುವ ಹೆಮ್ಮರಗಳ
    ಬುಡಸಮೇತ ಕಿತ್ತು, ಬೆಂಕಿಯಲಿ ದಹಿಸೋಣ
    ಸರ್ವಸಮಾನತೆಯ ಉಳುಮೆ ಮಾಡಿ
    ಕರುನಾಡ ನೆಲವನು ಹಸನಗೊಳಿಸೋಣ...ಕನ್ನಡಾಭಿಮಾನದ ಗಟ್ಟಿಬೀಜ ಬಿತ್ತೋಣ

    ವ್ಯತ್ಯಾಸ ಇಷ್ಟೇ.. ಪ್ರತಿಯೊಂದು ಸಾಲಲ್ಲು .. ಗೋಣ .. ಯೋಣ.. ಸೋಣಗಳ ಬದಲು ಮೊದಲ ನಾಲ್ಕು ಸಾಲುಗಳಂತೆ ಬರೆದರೆ ಸುಂದರವಗಿರೋದು... ಎಂದು ನನ್ನ ಚಿಕ್ಕ ಬಾಯಿಯ ದೊಡ್ಡ ಮಾತು.. :)

    ಉಳಿದಂತೆ, ಈ ಕವನದ ಮೂಲ ಅರ್ಥಗಳ ಬಗ್ಗೆ ಹೇಳುವುದಾದರೆ, ಕನ್ನಡಿಗರೇ ಕನ್ನಡವನ್ನ ಕೊಲ್ಲುತ್ತಿರುವ ಈ ಕಾಲದಲ್ಲಿ, ನಮ್ಮ ಭಾಷೆಯ ಬಗ್ಗೆ ನಿಮಗಿರುವ ಕಾಳಜಿ ಮೆಚುವಂತದ್ದು...

    -- ಇಂತಿ
    ಸುನಿಲ್

    ReplyDelete
  3. Nice Kavithe... november first ge prakata mmadlikke vk paper ge kodbodeno...
    -shreelakshmi

    ReplyDelete
  4. @Matt & @Shree : Thanks a lot
    @Sunil: Your change requests are incorporated. Thanks for the valuable suggestion.

    ReplyDelete
  5. ತುಂಬಾ ಸಮಯದ ನಂತರ ತಮ್ಮ ಕವಿತೆಯ ಮೂಲ ವಿಷಯ ಬದಲಾಗಿದೆ.ಇದು ನನಗೆ ಖುಷಿ ತಂದ ವಿಷಯ. ನಿಮಗೆ ವಿವಿದ ವಿಷಯಗಳಲ್ಲಿ ಆಸಕ್ತಿ ಇದೆ. ತಮ್ಮ ಕವಿತೆ ಆ ಎಲ್ಲ ವಿಷಯಗಳಲ್ಲಿ ಮೂಡಿ ಬರಬೇಕು. ಅದು ಇರಲಿ, ನಮ್ಮ ಕನ್ನಡವನ್ನು ನಮ್ಮವರೇ ಮರೆಯುತಿದ್ದಾರೆ . ನಾವು ನಮ್ಮತನ ಕಳೆಯುತಿದ್ದೇವೆ. ಕನ್ನಡಿಗರೆಲ್ಲರೂ ಕನ್ನಡವನ್ನು ಎಲ್ಲಾ ಕಡೆ ಹಬ್ಬಿಸಬೇಕು.

    ಸಿರಿ ಕನ್ನಡಂ ಗೆಲ್ಗೆ ಸಿರಿ ಕನ್ನಡಂ ಬಾಳ್ಗೆ .

    ReplyDelete
  6. @ಕೆಪಿ: ತಮ್ಮ ಅನಿಸಿಕೆಗಳಿಗೆ ದನ್ಯವಾದಗಳು. ನನ್ನಂಥ ಕೇವಲ ಕನ್ನಡ ಬರುವ ಜನಗಳಿಗೆ ಕನ್ನಡ ಮರೆಯಲು ಹೇಗೆ ಸಾಧ್ಯ? :)

    ReplyDelete
  7. ಧನ್ಯವಾದಗಳು ಗೌಡರೆ ನನ್ನ ಕಿಂಚಿತ್ ಅನಿಸಿಕೆಯನ್ನ ಪುರಸ್ಕರಿಸೋದಿಕ್ಕೆ!
    ಹೀಗೆ ನಿಮ್ಮ ವಿಚಾರಧಾರೆ ನಮ್ಮೆಲ್ಲರಲ್ಲಿರುವ ಅಜ್ಞಾನವನ್ನು ತೊಳೆದು
    ಜ್ಞಾನಧಾರೆ ಹರಿಯಲು ನಾಂದಿಯಾಗಲಿ ಎಂದು ಆಶಿಸುತ್ತೇನೆ..

    ಇಂತಿ
    --ಸುನಿಲ್

    ReplyDelete
  8. @ಪಡಿಯಾರ್: ಲೆ ಅಷ್ಟೊಂದು ದೊಡ್ಡ ದೊಡ್ಡ ಪದಗಳನ್ನೆಲ್ಲಾ ಜೀರ್ಣಿಸಲು ಬಲುಕಷ್ಟ ಕಣೋ. ಆದರೂ ದನ್ಯವಾದ ಹೇಳಬಯಸುತ್ತೇನೆ. ;)

    ReplyDelete
  9. Every time I read your kavanas, I am astonished by your versatility.. covering various topics and they are equally good.
    And moreover, it is inspirational and arousing interests in others as well :)

    ReplyDelete
  10. ಬಹಳ ಚೆನ್ನಾಗಿದೆ

    ReplyDelete
  11. ಒಳ್ಳೆಯ ಕವನ ಸಂಕಲನ

    ReplyDelete
  12. ಗೌಡ್ರೆ,
    ಯಾವಗ್ಲಿನ್ ತರಹ ಚೆನ್ನಾಗಿದೆ...!!
    ಕನ್ನಡ ರಾಜ್ಯೋತ್ಸವದ ಹೊತ್ತಿಗೆ ಸರಿಯಾಗಿ ಬರ್ದಿದ್ದೀರ..
    ಎಲ್ಲಕ್ಕಿಂತ ನಂಗೆ ಹೆಚ್ಚು ಹಿಡಿಸಿದ್ದು ನಿಮ್ಮ ನಾಲ್ಕನೆ ಪಂಕ್ತಿ
    ನಾವು ಕನ್ನಡದವರಾಗಿರಲು ಕರ್ನಾಟಕಲೆ ಇರಬೇಕೂನ್ತಿಲ್ಲ.. ಅದನ್ನ ಚೆನ್ನಾಗಿ ಬಣ್ಣಿಸಿದ್ದೀರ..
    ನಾವು ಕಾಲೇಜಲ್ಲಿದ್ದಾಗ ಒಂದು ನೃತ್ಯರೂಪಕದ ಥರ attempt ಮಾಡಿದ್ದಾಗ ಹೀಗೆ ಒಂದು banner ಬರೆಯೋ ಅವಕಾಶ ಸಿಕ್ಕಿತ್ತು
    ಆಗ ಮಾಮೂಲಿ ಥರ ಕನ್ನಡ ಉಳಿಸಿ, ಬೆಳಸಿ ಅನ್ನೋ ಬದಲು..
    ಕನ್ನಡ ಬಳಸಿ, ಉಳಿಸಿ, ಬೆಳಸಿ ಅಂತ ಬರೆದಿದ್ವಿ...
    ಈಗ ನನಗೆ ಅದು ತೀರ ಅವಶ್ಯ ಅನ್ನಿಸ್ತದೆ.. ಯಾಕಂದ್ರೆ ನಾವು ಕನ್ನಡ ಬಳಸೋದೆ ಕಡಿಮೆ ಆಗಿದೆ... :(
    ಹೀಗಿರುವಾಗ ಇಂಥ ಕನ್ನಡದ ಮತ್ತು ಕರ್ನಾಟಕದ ಕಾಳಜಿಯ ಕವನ ಬರೆದ ನಿಮಗೆ ಅಭಿನಂದನೆಗಳು...!!

    ReplyDelete
  13. @ಗಿರೀಶ್: ಥ್ಯಾಂಕ್ಸ್ ಮಗಾ!
    @ನವೀನ: ಥ್ಯಾಂಕ್ಸ್ ಕಣೋ. ಹೌದು, ಈಗಾಗಲೇ "ನಿಮ್ಗೆ ಕನ್ನಡ ಬರುತ್ತ?" ಅಂತ ಕೇಳಿ ಮಾತಾಡಿಸೊ ಪರಿಸ್ಥಿತಿ ಬಂದಿದೆ, ಈಗೇ ಮುಂದುವರಿದರೆ ಕೇವಲ ಕನ್ನಡ ಮಾತ್ರ ಗೊತ್ತಿರೊ ನನ್ನಂತೋರು ಮಾತು ಬಂದರೂ ಬಾಷೆ ಇಲ್ಲದೆ ಮೂಕಿಗಳಾಗಿ ಬಿಡ್ತಿವಿ!

    ReplyDelete